• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ

ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಮೆ ರೂಪಕಗಳಲ್ಲಿ ಹಿಡಿದಿಡುವ ಪ್ರಯತ್ನ

ಪ್ರತಿಧ್ವನಿ by ಪ್ರತಿಧ್ವನಿ
May 3, 2026
in ಅಂಕಣ
0
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಮಾನವ ಸಮಾಜ ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಸಮಾಜದ ನಿತ್ಯ ಬದುಕಿನಲ್ಲಿ ಮನುಜ ಸಂಬಂಧಗಳನ್ನು ನಿರ್ದೇಶಿಸುವುದು ಆಯಾ ಸಮಾಜಗಳ ಸಾಂಸ್ಕೃತಿಕ ಮೌಲ್ಯಗಳು. ಸಂಸ್ಕೃತಿ ಎಂದ ಕೂಡಲೇ ನಿರ್ದಿಷ್ಟ ಧಾರ್ಮಿಕ ನಡವಳಿಕೆ ಅಥವಾ ಆಚರಣೆಗಳ ಕಡೆಗೆ ಹೊರಳುವ ವಿಕಸಿತ ಭಾರತದ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಮೌಲ್ಯಗಳನ್ನು ಶೋಧಿಸಬೇಕಾದರೆ ಅನಿವಾರ್ಯವಾಗಿ ಜನಪದೀಯ ಸಾಹಿತ್ಯ, ಕಥನ ಮತ್ತು ಕೆಲವು ಮಿಥ್ಯೆಗಳನ್ನೂ ಆಶ್ರಯಿಸಬೇಕಾಗುತ್ತದೆ. ತಂತ್ರಜ್ಞಾನಾಧಾರಿತ ಸಮಾಜವೊಂದು ನಾಗರಿಕತೆಯ ಬೇರುಗಳನ್ನೇ ಪಲ್ಲಟಗೊಳಿಸಿ, ಜೀವ ಸಂಬಂಧಗಳನ್ನು ವ್ಯಾವಹಾರಿಕಗೊಳಿಸಿರುವ ಸಂದಿಗ್ಧತೆಯಲ್ಲಿ ಭಾರತೀಯ ಸಮಾಜ ಸಾಗುತ್ತಿದೆ. ಹಾಗಾಗಿ ಮನುಜ ಸಂಬಂಧಗಳು ತನ್ನ ಆಂತರಿಕ ಮೌಲ್ಯಗಳನ್ನು (Intrinsic Values) ಕಳೆದುಕೊಂಡು ಮಾರುಕಟ್ಟೆಯ ಸರಕುಗಳಂತಾಗುತ್ತಿವೆ.

ಇಲ್ಲಿ ಅಪಾಯಕ್ಕೊಳಗಾಗಿರುವುದು ಲಿಂಗ ಸಂಬಂಧಗಳು ಮತ್ತು ಎಲ್ಲ ಆಯಾಮಗಳಲ್ಲೂ ಸಿಕ್ಕುಗಳಲ್ಲಿ ಸಿಲುಕುತ್ತಿರುವುದು ಮಹಿಳೆಯರು. ಮನುಷ್ಯ ಸಮಾಜದ ವ್ಯಕ್ತಿ ಸಂಬಂಧಗಳನ್ನು ಲಿಂಗತ್ವದ ಆಧಾರದಲ್ಲಿ ನಿರ್ವಚಿಸಿದಾಗ ಸಹಜವಾಗಿ ವರ್ತಮಾನದ ಸಾಂಸ್ಕೃತಿಕ ಮೌಲ್ಯಗಳು ವ್ಯಕ್ತಿ ಕೇಂದ್ರಿತವಾಗಿಯೇ ಸ್ಥಾನಮಾನಗಳನ್ನು, ಅವಕಾಶಗಳನ್ನು, ಗೌರವ ಸಮ್ಮಾನಗಳನ್ನೂ ನಿರ್ದೇಶಿಸುತ್ತವೆ. ಸಮಕಾಲೀನ ಸಮಾಜಗಳಲ್ಲಿ ಈ ಮೌಲ್ಯಗಳನ್ನು ನಿರ್ಧರಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಅಧಿಪತಿಗಳು. ಈ ವ್ಯವಸ್ಥೆಯನ್ನು ಬೌದ್ಧಿಕ ನೆಲೆಯಲ್ಲಿ ಸಮರ್ಥಿಸಿ ಮುಂದೊಯ್ಯುವ ಪ್ರಯತ್ನಗಳು ಸಮಾಜದ ಎಲ್ಲ ವಲಯಗಳಿಂದಲೂ ನಡೆಯುತ್ತಿರುತ್ತದೆ. ಒಂದು ಮಟ್ಟಿಗೆ ಸಾಹಿತ್ಯವೂ ಇದಕ್ಕೆ ಹೊರತಾಗುವುದಿಲ್ಲ.

 

ಡಿಜಿಟಲ್‌ ಯುಗದ ವೈರುಧ್ಯಗಳು

ಡಿಜಿಟಲ್‌ ಯುಗದಲ್ಲಿ ಈ ಪ್ರತಿಗಾಮಿ ಸಾಂಸ್ಕೃತಿಕ ಹೆಜ್ಜೆಗಳಿಗೆ ಜೊತೆಗೂಡುವುದು ಸಂವಹನ ತಂತ್ರಜ್ಞಾನ ಮತ್ತು ಅದರ ಮೂಲಕವೇ ಜಗತ್ತಿನ ಮೂಲೆಮೂಲೆಗೂ, ಕಟ್ಟಕಡೆಯ ವ್ಯಕ್ತಿಗೂ ಕ್ಷಣ ಮಾತ್ರದಲ್ಲಿ ತಲುಪುವ ವಿದ್ಯುನ್ಮಾನ ವಾಹಿನಿಗಳು (Electronin Channels) ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು (Social Media Platforms)̤ .ಹೆಣ್ಣಿನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಬಿಂಬಿಸುವ ಟಿವಿ ಧಾರಾವಾಹಿ/ಚಲನಚಿತ್ರಗಳಲ್ಲಿ ಈ ಸ್ವಾಭಾವಿಕ ಹಕ್ಕುಗಳನ್ನು ಭಂಗಗೊಳಿಸುವ ಅಥವಾ ದಮನಿಸುವ ಕೆಲಸವನ್ನು ಮತ್ತೊಬ್ಬ ಮಹಿಳೆಗೇ (ಅತ್ತೆ-ಸೋದರಿ-ಸವತಿ ಇತ್ಯಾದಿ) ವಹಿಸಲಾಗಿರುತ್ತದೆ. ಮಹಿಳೆಯ ಒಂದು ಚಹರೆಯನ್ನು ದುಷ್ಟತನದ ಸಂಕೇತವಾಗಿ (Villanise) ಬಿಂಬಿಸುವ ಈ ಕತೆಗಳಲ್ಲಿ ಪುರುಷನಾದವನು ಸೌಮ್ಯ, ಅಸಹಾಯಕ, ಸಹೃದಯತೆಯ ಮೌನಿಯಾಗಿರುತ್ತಾನೆ.

ಈ ಸಿದ್ಧಮಾದರಿಗಳಿಂದಲೇ ʼಮಹಿಳೆಗೆ ಮಹಿಳೆಯೇ ಶತ್ರುʼ ಎಂಬ ಮಿಥ್ಯೆಯನ್ನೂ ಸೃಷ್ಟಿಸಲಾಗಿದೆ. ಈ ಮಿಥ್ಯೆಯನ್ನು ಮುರಿಯವ ಜವಾಬ್ದಾರಿ ಇರುವುದು ಸಾಹಿತ್ಯ ಮತ್ತು ರಂಗಭೂಮಿಯ ಮೇಲೆ. ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಈ ಪ್ರಯತ್ನಗಳನ್ನು ಗುರುತಿಸಬಹುದಾದರೂ, ಜಾತಿ ಪ್ರಶ್ನೆಗೆ ನೀಡುವಷ್ಟು ಪ್ರಾಶಸ್ತ್ಯವನ್ನು ಲಿಂಗಸೂಕ್ಷ್ಮತೆಗಳಿಗೆ ನೀಡುವುದರಲ್ಲಿ ಯುವ ಸಾಹಿತಿಗಳು ಹಿಂದೆ ಬಿದ್ದಿದ್ದಾರೆ. ಹಾಗಾಗಿ ಈ ಜವಾಬ್ದಾರಿಯ ನೊಗವನ್ನು ಪರಿಣಾಮಕಾರಿಯಾಗಿ ಹೊರಲು ರಂಗಭೂಮಿ ಸಜ್ಜಾಗಬೇಕಿದೆ. ಕನ್ನಡ ರಂಗಭೂಮಿ ಪ್ರಾಯೋಗಿಕ ನೆಲೆಯಲ್ಲಿ ಈ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯುತ್ತಿರುವುದು ಪ್ರಶಂಸನೀಯ. ಶರ್ಮಿಷ್ಠೆ, ದೋಪ್ದಿ ಮೊದಲಾದ ಪ್ರಯೋಗಗಳು ಈ ದಾರಿಯಲ್ಲಿ ಹೊಸ ಮೈಲಿಗಲ್ಲುಗಳನ್ನು ನೆಟ್ಟಿವೆ.

ಇದರ ಮತ್ತೊಂದು ಆಯಾಮವನ್ನು ಸರಳ ಕಥಾ ಹಂದರದ ಮೂಲಕ, ಜನಪದೀಯ ಕತೆಯೊಂದಕ್ಕೆ ನಾಟಕ ರೂಪ ನೀಡಿರುವುದನ್ನು ಕೆ. ವೈ. ನಾರಾಯಣಸ್ವಾಮಿ ಅವರ ʼ ನೀರಗನ್ನಡಿ ʼ ಯಲ್ಲಿ ಗುರುತಿಸಬಹುದು. ಈ ಗದ್ಯ ನಾಟಕಕ್ಕೆ ರಂಗ ರೂಪ ಕೊಡುವಲ್ಲಿ ರಂಗಕರ್ಮಿ, ನಿರ್ದೇಶಕ ಬಿ ಸುರೇಶ್‌ ಯಶಸ್ವಿಯಾಗಿದ್ದಾರೆ. ಈ ಜನಪದ ಕತೆ ಮಹಿಳಾ ಕೇಂದ್ರಿತ ಅಲ್ಲದಿದ್ದರೂ, ಗಂಡು-ಹೆಣ್ಣಿನ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ಸರಳರೂಪದಲ್ಲಿ ತೆರೆದಿಡುತ್ತದೆ. ಗಂಡು-ಹೆಣ್ಣಿನ ನಡುವೆ ಇಂದಿಗೂ ಇರುವ, ಒಂದು ಹಂತದಲ್ಲಿ ಹೆಚ್ಚಾಗುತ್ತಿರುವ ಅಸ್ತಿತ್ವ ಮತ್ತು ಅಸ್ಮಿತೆಯ ಅಂತರವನ್ನು ಪಿತೃಪ್ರಧಾನ ವ್ಯವಸ್ಥೆಯ ದುಷ್ಟ ಪ್ರವೃತ್ತಿಗಳಲ್ಲಿ ಶೋಧಿಸುವ ಈ ನಾಟಕ ಹೆಣ್ಣಿನ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಎತ್ತಿಹಿಡಿಯುವ ಸಾಂಕೇತಿಕ ಅಭಿವ್ಯಕ್ತಿಯೊಂದಿಗೆ ಸಮಾಪ್ತಿಯಾಗುತ್ತದೆ.

ಸಮಕಾಲೀನವೂ ಆಗುವ ಕಥಾಹಂದರ

ಜ್ಯೋತಮ್ಮ ಎಂಬ ಜನಪದೀಯ ಪರಂಪರೆಯನ್ನು ಮಂಟೆಸ್ವಾಮಿ, ಸಿದ್ದಪ್ಪಾಜಿ ಮುಂತಾದ ಆರಾಧನಾ ಸಂಪ್ರದಾಯಗಳ ನಡುವೆ ಗುರುತಿಸಬಹುದು. ದೀಪ ಅಥವಾ ಬೆಳಗುವ ಜ್ಯೋತಿಯನ್ನು ಪ್ರತಿನಿಧಿಸುವ ಜ್ಯೋತಮ್ಮಗಳ ಮಹತ್ವವನ್ನು ಸಾಮಾನ್ಯವಾಗಿ ನೀಲಗಾರರ ಗಾಯನದಲ್ಲಿ ಕಾಣಬಹುದು. ಭಕ್ತಿ ಮಾರ್ಗದಲ್ಲಿ ಇದು ದೈವೀಕ ಬೆಳಕನ್ನು ಸೂಚಿಸಿದರೆ, ಸಾಂಸ್ಕೃತಿಕವಾಗಿ ಇದು ಕತ್ತಲಾವರಿಸಿರುವ ಸಮಾಜದಲ್ಲಿ ಬೆಳಕು ಚೆಲ್ಲುವ, ತನ್ಮೂಲಕ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಂಕೇತಗಳಾಗಿ ಕಾಣುತ್ತವೆ. ಕೆ. ವೈ. ನಾರಾಯಣಸ್ವಾಮಿ ಅವರ ಈ ನಾಟಕದ ಆಕರವನ್ನು ಕೋಲಾರ ಪ್ರದೇಶದಲ್ಲಿ ಪ್ರಚಲಿತವಾಗಿರುವ ಇದೇ ಪರಂಪರೆಯ ಜನಪದ ಕತೆಯೊಂದರಲ್ಲಿ ಕಾಣಬಹುದು.

ನಾಟಕದ ಆರಂಭದಲ್ಲೇ ಬರುವ ಜ್ಯೋತಿಗಳನ್ನು ನಿರೂಪಕರಾಗಿಯೂ, ಕಥನಕಾರರಾಗಿಯೂ ಬಳಸಿಕೊಳ್ಳುವ ಮೂಲಕ ಇಲ್ಲಿ ಜ್ಯೋತಮ್ಮಗಳನ್ನು ರೂಪಕಗಳನ್ನಾಗಿ ಬಿಂಬಿಸಲಾಗಿದೆ. ಈ ರೂಪಕಗಳೇ ಕಟ್ಟುವ ಒಂದು ಕತೆಯಲ್ಲಿ ಕೇಂದ್ರ ವ್ಯಕ್ತಿ ವಿವಾಹದ ಹೊಸ್ತಿಲಲ್ಲಿರುವ ಯುವ ವಧು ಆಗಿರುತ್ತಾಳೆ. ಎರಡು ಗ್ರಾಮಗಳ ಕುಟುಂಬಗಳೊಡನೆ ಏರ್ಪಡುವ ವಿವಾಹ ಸಂಬಂಧವು, ಹೆಣ್ಣಿನ ದಿಬ್ಬಣ ಗಂಡಿನ ಊರಿಗೆ ಬರುವ ಮುನ್ನವೇ ಮುರಿದು ಬೀಳುತ್ತದೆ. ಇದಕ್ಕೆ ಕಾರಣ ಮದುವೆಯಾಗಬೇಕಾದ ಗಂಡು, ಪ್ರಾಂತ್ಯದ ದಂಡನಾಯಕನ ಆಜ್ಞೆಗೆ ಮಣಿದು ಯುದ್ಧಭೂಮಿಗೆ ತೆರಳಬೇಕಾಗುತ್ತದೆ. ದಿಬ್ಬಣದ ಆಗಮನ ಅಥವಾ ಪೂರ್ವಭಾವಿ ಮಾತುಕತೆಗಳೇ ವಿವಾಹ ಸಂಬಂಧಕ್ಕೆ ಸಾಕ್ಷಿಯಾಗುವುದಿಲ್ಲ ಎಂದು ಗಂಡಿನ ತಾಯಿ ನಿರ್ದಾಕ್ಷೀಣ್ಯವಾಗಿ ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ನಿರಾಕರಿಸುತ್ತಾಳೆ. ಇತ್ತ ಮುರಿದು ಬಿದ್ದ ಮದುವೆ ಕುಟುಂಬದ ಗೌರವವನ್ನು ಹಾಳುಮಾಡುತ್ತದೆ ಎಂದು ಕಾರಣ ಒಡ್ಡಿ, ಹೆಣ್ಣಿನ ತಂದೆ-ಮಲತಾಯಿಯೂ ಸಹ ವಧುವನ್ನು ಏಕಾಂಗಿಯಾಗಿ ಬಿಟ್ಟು ಹೊರಟುಬಿಡುತ್ತಾರೆ.

ಈ ಘಟನೆಯಿಂದ ಹತಾಶಳಾಗುವ ಯುವತಿ ತಿರಸ್ಕೃತ ಭಾವದಿಂದ, ಅಪಮಾನದಿಂದ ದಿಕ್ಕುಗಾಣದೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆಗ ಕಾಣಿಸಿಕೊಳ್ಳುವ ಜ್ಯೋತಿಗಳು (ಜ್ಯೋತಮ್ಮಗಳ ಸಂಕೇತವಾಗಿ), ಯುವ ವಧುವನ್ನು ಹುರಿದುಂಬಿಸಿ ಸಾಯುವುದರ ಬದಲು, ತನ್ನ ನ್ಯಾಯಯುತವಾದ ಹಕ್ಕನ್ನು ಪ್ರತಿಪಾದಿಸುವಂತೆ ಪ್ರಚೋದಿಸುತ್ತವೆ. ಗಂಡಿನ ಊರಿಗೆ ಹೋಗಿ ನ್ಯಾಯ ಪಂಚಾಯತಿಯ ಮೂಲಕ ತನ್ನ ಪತ್ನಿತ್ವದ ಹಕ್ಕನ್ನು ಪ್ರತಿಪಾದಿಸುವಂತೆ ಸಲಹೆ ನೀಡುತ್ತವೆ. ಗಂಡಿನ ತಾಯಿ ಅಂದರೆ ಅತ್ತೆಯಾದವಳು ತಿರಸ್ಕೃತಳಾದ ಹೆಣ್ಣನ್ನು ಅಪಶಕುನ , ಅನಿಷ್ಠ ಎಂದೆಲ್ಲಾ ಮೂದಲಿಸಿ ತಿರಸ್ಕರಿಸಿದರೂ, ಯುವತಿ ದಿಟ್ಟತನದಿಂದ ತನ್ನ ವಿವಾಹ ಸಂಬಂಧದ ಪಾವಿತ್ರ್ಯತೆ ಮತ್ತು ಅಸ್ತಿತ್ವವನ್ನು ಪಂಚಾಯತಿಗೆ ಮನದಟ್ಟು ಮಾಡುತ್ತಾಳೆ. ಕೊನೆಗೆ ನ್ಯಾಯ ಪಂಚಾಯತಿಯಲ್ಲಿ ಈಕೆಯ ವಾದ ಗೆಲ್ಲುತ್ತದೆ, ಗಂಡಿನ ಸ್ಥಾನದಲ್ಲಿ ಅವನ ವೀರಗತ್ತಿಯನ್ನಿರಿಸಿ, ಸಾಂಕೇತಿಕವಾಗಿ ವಿವಾಹವನ್ನು ನೆರವೇರಿಸಲಾಗುತ್ತದೆ.

ಆದರೆ ಸಾಂಕೇತಿಕ ವಿವಾಹವಾದರೂ ಸಹ ತನ್ನ ಗಂಡನ ಮನೆಯಲ್ಲಿ ಯುವತಿ ಚಿತ್ರಹಿಂಸೆ, ಕಿರುಕುಳ, ಅವಮಾನ ಮತ್ತು ನಿಂದನೆಗಳನ್ನೇ ಎದುರಿಸಬೇಕಾಗುತ್ತದೆ. ತನ್ನ ಗಂಡನ ಬರುವಿಕೆಯನ್ನೇ ಕಾಯುತ್ತಾ, ಅವನೊಡನೆ ಸರಸ ಸಂವಾದಗಳನ್ನು ಭ್ರಮಿಸುತ್ತಾ ಎಲ್ಲ ಹಿಂಸೆಗಳನ್ನೂ ಅರಗಿಸಿಕೊಂಡು ಸಾಗುವ ಯುವತಿ, ಕೊನೆಗೊಮ್ಮೆ ತನ್ನ ಗಂಡ ಯುದ್ಧಭೂಮಿಯಿಂದ ಹಿಂದಿರುಗುತ್ತಾನೆ ಎಂದಾಗ ಸಂಭ್ರಮಿಸುತ್ತಾಳೆ. ಆದರೆ ಅತ್ತೆಯಾದವಳು ಸೊಸೆಯನ್ನು ಸಂಶಯಿಸಿ, ಈಕೆಯ ಚಾರಿತ್ರ್ಯವನ್ನೇ ಅನುಮಾನಾಸ್ಪದವಾಗಿಸಿ, ಸುಳ್ಳು ಕತೆ ಕಟ್ಟಿ ವಾಪಸ್ಸಾದ ಮಗ ತನ್ನ ಪತ್ನಿಯನ್ನೇ ಹತ್ಯೆಮಾಡಲು ಪ್ರಚೋದಿಸುತ್ತಾಳೆ. ಗಂಡನಿಂದ ತನ್ನ ಬಲಿ ನಿಶ್ಚಿತ ಎಂದು ಅರಿತ ಯುವತಿ, ತದನಂತರ ಗಂಡನ ಪಶ್ಚಾತ್ತಾಪದ ಹೊರತಾಗಿಯೂ, ತಲೆಬಾಗದೆ, ಈ ಅನುಮಾನ-ಅವಮಾನಗಳನ್ನು ಸಹಿಸುವುದಕ್ಕಿಂತಲೂ ಸ್ವಾಭಿಮಾನಿ ಬದುಕು ಮುಖ್ಯ ಎಂದು ನಿರ್ಧರಿಸಿ , ಹೊರಟುಬಿಡುತ್ತಾಳೆ.

ಸರಳ ಸುಂದರ ರಂಗರೂಪ

ಪ್ರತಿಮೆ-ರೂಪಕ ಹಾಗೂ ಸಮಕಾಲೀನ ಸಮಾಜದ ವಾಸ್ತವಗಳನ್ನು ಮೇಳೈಸಿ ನಿರ್ದೇಶಕ ಬಿ ಸುರೇಶ್‌ ʼ ನೀರಗನ್ನಡಿ ʼಯನ್ನು ಸುಂದರ ರಂಗಪ್ರಯೋಗವಾಗಿ ಪ್ರೇಕ್ಷಕರ ಮುಂದಿರಿಸುತ್ತಾರೆ. ಜ್ಯೋತಮ್ಮಗಳನ್ನು ಚಿತ್ರಿಸಿರುವ ರೀತಿ ವಿನೂತನವಾಗಿದೆ. ಹಣತೆಯನ್ನು ಹಿಡಿದು ಬರುವ ಬದಲು, ದೀಪಗಳ ಸರಪಳಿಯನ್ನು ಹೊಯ್ದಾಡಿಸುತ್ತಾ ಬರುವ ದೃಶ್ಯ, ಬೆಳಕಿನ ವೈಶಾಲ್ಯವನ್ನೂ, ವ್ಯಾಪ್ತಿಯನ್ನು ಮತ್ತು ಕತ್ತಲಲ್ಲಿರುವವರಿಗೆ ಪ್ರಖರ ಬೆಳಕಿನ ಅಗತ್ಯತೆಯನ್ನೂ ಬಿಂಬಿಸುವಂತಿದೆ. ಜ್ಯೋತಿಗಳಾಗಿ ಅಭಿನಯಿಸಿರುವ ಕಲಾವಿದರ ನೃತ್ಯ ಶೈಲಿ ಮತ್ತು ಹತಾಶ ಯುವತಿಗೆ ಆತ್ಮಸ್ಥೈರ್ಯ ತುಂಬುವ ಸಂಭಾಷಣೆಗಳ ವೈಖರಿ ಮನಮುಟ್ಟುವಂತಿದೆ. ಈ ಸಂವಾದದ ಚೌಕಟ್ಟಿನಲ್ಲೇ ನಿರ್ದೇಶಕರು ಸಮಕಾಲೀನ ಸಮಾಜದ ಕಟು ವಾಸ್ತವಗಳನ್ನೂ ಸೂಕ್ಷ್ಮವಾಗಿ ಪರಿಚಯಿಸುವುದು, ಮೆಚ್ಚತಕ್ಕ ಅಂಶ.

ಮದುವೆ ಗಂಡಿನ ಗೈರುಹಾಜರಿಯಲ್ಲಿ ಯುವತಿಯೊಡನೆ ವಿವಾಹ ಬಂಧಕ್ಕೊಳಗಾಗುವ ವೀರಗತ್ತಿ ಪಿತೃಪ್ರಧಾನತೆಯ ಅಹಂಕಾರ, ದರ್ಪ, ದಬ್ಬಾಳಿಕೆ ಮತ್ತು ಕ್ರೌರ್ಯವನ್ನು ಬಿಂಬಿಸುವ ಪ್ರತಿಮೆಯಾಗಿ ನಾಟಕದುದ್ದಕ್ಕೂ ಕಾಣುತ್ತದೆ. ಕೊನೆಯಲ್ಲಿ ಅದೇ ವೀರಗತ್ತಿಯಿಂದಲೇ ಹೆಂಡತಿಯನ್ನು ಹತ್ಯೆ ಮಾಡುವ ಗಂಡಿನ ವರ್ತನೆ ಪುರುಷ ಸಮಾಜದಲ್ಲಿ ಸುಪ್ತವಾಗಿದ್ದು, ಅಲ್ಪ ಪ್ರಚೋದನೆಯಿಂದ ಭುಗಿಲೇಳುವ ಕ್ರೌರ್ಯವನ್ನು ಬಿಂಬಿಸುತ್ತದೆ. ಅನುಮಾನಾಸ್ಪದ ಸನ್ನಿವೇಶದಲ್ಲಿ ವಿವೇಕ-ವಿವೇಚನೆ ಕಳೆದುಕೊಳ್ಳುವ ಗಂಡು ತನ್ನ ತಾಯಿಯ ಸುಳ್ಳನ್ನು ವೇದವಾಕ್ಯದಂತೆ ನಂಬುವುದು ವರ್ತಮಾನದ ಸಮಾಜದಲ್ಲೂ ವರದಕ್ಷಿಣೆ ಸಾವುಗಳಲ್ಲಿ ಕಾಣಬಹುದಾದ ವಿದ್ಯಮಾನ. ನೀರಗನ್ನಡಿ ಇದನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತದೆ.

ಹಾಗೆಯೇ ಗಂಡಿನ ಈ ಆಕ್ರೋಶ ಮತ್ತು ಕ್ರೌರ್ಯಕ್ಕೆ ಅವನ ತಾಯಿಯೇ ಪ್ರಚೋದಕಳಾಗುವ ಸನ್ನಿವೇಶ, ಮಹಿಳೆಯಲ್ಲಿ ಹುದುಗಿರಬಹುದಾದ ಪಿತೃಪ್ರಧಾನ ಮೌಲ್ಯಗಳನ್ನು ಬಿಂಬಿಸುತ್ತದೆ. ಇದನ್ನೂ ಮೀರಿದಂತೆ, ನಮ್ಮ ಸಮಾಜದಲ್ಲಿ ಗಂಡಿನ ಅವಿವೇಕ ಮತ್ತು ವಿವೇಚನಾರಹಿತ ವರ್ತನೆಗಿಂತಲೂ ಒಂದು ಹೆಣ್ಣಿನ ವೈಮನಸ್ಯ-ದ್ವೇಷವನ್ನೇ ಪ್ರಧಾನವಾಗಿ ಕಾಣುವ ಮನೋಭಾವವನ್ನೂ ಸಹ ಬಿಂಬಿಸುತ್ತದೆ. ತನ್ನ ಪರಿತಾಪದ ನುಡಿಗಳಿಂದ ಗಂಡು ನಿರಪರಾಧಿತ್ವದೆಡೆಗೆ ಸಾಗುತ್ತಿರುತ್ತಾನೆ, ಮಗ ಸೇಡು ತೀರಿಸಿಕೊಂಡು ಸೊಸೆಯನ್ನು ಹತ್ಯೆ ಮಾಡುವ ಕನಸು ಕಾಣುವ ಆತನ ತಾಯಿ, ಪಶ್ಚಾತ್ತಾಪದ ಭಾವನೆಯೇ ಇಲ್ಲದೆ ಅಪರಾಧಿಯಾಗಿಬಿಡುತ್ತಾಳೆ. ನಾಟಕದಲ್ಲಿ ಈ ಅಂಶ ಸೂಚ್ಯವಾಗಿದ್ದರೂ, ನಾವು ದಿನನಿತ್ಯ ಎದುರಾಗುತ್ತಿರುವ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

ಕೊನೆಯಲ್ಲಿ ತನ್ನ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನವೇ ಮನುಜ ಸಂಬಂಧಗಳಿಗಿಂತಲೂ ಮುಖ್ಯ ಎಂದು ಪ್ರತಿಪಾದಿಸುವ ಆಧುನಿಕ ಸ್ತ್ರೀವಾದದ ಮನಸ್ಥಿತಿಯನ್ನು ನಾಟಕದಲ್ಲಿ ಬಿಂಬಿಸಲಾಗುತ್ತದೆ.

ಎಳೆಯ ಪ್ರತಿಭೆಗಳ ಅನಾವರಣ

ನಿರ್ದೇಶಕ ಬಿ ಸುರೇಶ್‌ ತಮ್ಮದೇ ಆದ ಶೈಲಿಯಲ್ಲಿ ಈ ಜನಪದೀಯ ಕಥನವನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ. ದೃಶ್ಯರೂಪಕ, ಅಭಿನಯ ಮತ್ತು ನಾಟಕದ ಓಘಕ್ಕೆ ಸದಾ ಪ್ರಾಶಸ್ತ್ಯ ನೀಡುವ ಸುರೇಶ್‌ ಈ ರಂಗಪ್ರಯೋಗದಲ್ಲೂ ಅದೇ ಮಾದರಿಯನ್ನು ಅನುಸರಿಸಿದ್ದಾರೆ. ಪ್ರಶಂಸನೀಯ ಅಂಶ ಎಂದರೆ ಈ ನಾಟಕದಲ್ಲಿ ಅಭಿನಯಿಸಿರುವ ಬಹಳಷ್ಟು ಕಲಾವಿದರು ಸುರಾನಾ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು. ರಂಗಾಭಿವ್ಯಕ್ತಿ, ಅಭಿನಯ ಮತ್ತು ತನ್ಮಯತೆಯಲ್ಲಿ ಇನ್ನೂ ಪಳಗಬೇಕಿರುವ ಈ ಯುವ ಕಲಾವಿದರು ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ ಎನ್ನುವುದೇ ಮೆಚ್ಚುವಂತಹ ಅಂಶ. ಅತ್ತೆಯ ಪಾತ್ರಧಾರಿ ಚಂದನ ಹರ್ಷ ಮತ್ತು ಶಕುನದವನ ಪಾತ್ರಧಾರಿ ಸಚಿನ್‌ ಭದ್ರಾವತಿ ತಮ್ಮ ಆಂಗಿಕ, ಮೌಖಿಕ ಹಾಗೂ ಭಾವನಾತ್ಮಕ ನಟನೆಯಿಂದ ಎದ್ದು ಕಾಣುತ್ತಾರೆ.

ಹಾಗೆಂದ ಮಾತ್ರಕ್ಕೆ ಉಳಿದ ಯಾರನ್ನೂ ತೆಗೆದುಹಾಕುವಂತಿಲ್ಲ. ಪ್ರಥಮ ರಂಗ ಪ್ರಯೋಗವಾಗಿ ಎಲ್ಲ ಕಲಾವಿದರೂ ತನ್ಮಯತೆಯಿಂದ ಅಭಿನಯಿಸಿದ್ದಾರೆ. ಸುಧಾರಣೆಯ ಅವಕಾಶಗಳೂ ವಿಪುಲವಾಗಿವೆ. ನಿರ್ದೇಶಕರ ಜಾಣ್ಮೆಯ ನಿರೂಪಣೆ ಮತ್ತು ಎಲ್ಲಿಯೂ ನೀರಸ ಎನಿಸದ ನಾಟಕದ ಓಘ ಪ್ರೇಕ್ಷಕರನ್ನು 90 ನಿಮಿಷಗಳ ಕಾಲ ಹಿಡಿದಿಡುತ್ತದೆ. ಪ್ರವೇಶಿಕೆಯಲ್ಲಿ ಜ್ಯೋತಮ್ಮಗಳ ದೃಶ್ಯವನ್ನು ಮತ್ತಷ್ಟು ಚುರುಕಾಗಿಸುವ ಸಾಧ್ಯತೆಗಳಿವೆ. ಈ ದೃಶ್ಯದ ದೀರ್ಘ ಸಂಭಾಷಣೆ-ಚರ್ಚೆಗಳು ತೆಳು ಹಾಸ್ಯದ ಲೇಪನ ಹೊಂದಿದ್ದರೂ ಕೆಲ ಕ್ಷಣ ನೀರಸ ಎನಿಸುವಂತಿದೆ. ಇದನ್ನು ನಿರ್ದೇಶಕರು ಸರಿಪಡಿಸಬಹುದು. ಪ್ರತ್ಯೇಕವಾಗಿರುವ ದಂಪತಿಗಳು ಭ್ರಮಿಸುವ ಸರಸ ಸನ್ನಿವೇಶಗಳಲ್ಲಿ ಮತ್ತಷ್ಟು ಲವಲವಿಕೆ ಮೂಡಿಸುವ ಸಾಧ್ಯತೆಗಳಿವೆ.

ಅನುಕರಣೀಯ ಪ್ರಯೋಗ

ಕಾಲೇಜು ಶಿಕ್ಷಣಾರ್ಥಿಗಳಲ್ಲಿ ರಂಗಕಲೆಯನ್ನು ಬೆಳೆಸುವ ಒಂದು ಪ್ರಯೋಗಶೀಲತೆಯನ್ನು ʼ ನೀರಗನ್ನಡಿʼಯಲ್ಲಿ ಕಾಣಬಹುದು. ಇದು ವರ್ತಮಾನದ ತುರ್ತು. ಸಮಾಜದ ದುಷ್ಟ ಪ್ರವೃತ್ತಿಗಳನ್ನು ಅನಾವರಣಗೊಳಿಸಿ, ಸಮನ್ವಯದ ಸಮಾಜವನ್ನು ಸೃಷ್ಟಿಸುವ ಹಾದಿಯಲ್ಲಿ ಯುವ ಪೀಳಿಗೆ ಕಂಡುಕೊಳ್ಳಬೇಕಾದ ವಾಸ್ತವಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಜನಾಂಗಕ್ಕೆ ತಲುಪಿಸುವ ರಂಗಭೂಮಿಯ ಶಕ್ತಿಯನ್ನು ನಿರ್ದೇಶಕ ಬಿ ಸುರೇಶ್‌ ʼ ನೀರಗನ್ನಡಿ ʼಯಲ್ಲಿ ಪ್ರತಿಬಿಂಬಿಸಿದ್ದಾರೆ. ಕೆ. ವೈ. ನಾರಾಯಣ ಸ್ವಾಮಿ ಅವರ ರಚನೆಗೆ ಚ್ಯುತಿ ಬಾರದಂತೆ ರಂಗರೂಪಕ್ಕೆ ಅಳವಡಿಸಿರುವ ಸುರೇಶ್‌ ಅವರ ಪ್ರಯೋಗ ಪ್ರಶಂಸನಾರ್ಹ..

ಸಂಗೀತ, ವಸ್ತ್ರವಿನ್ಯಾಸವನ್ನೂ ಒಳಗೊಂಡಂತೆ ನೇಪಥ್ಯ ಕಲಾವಿದರು ನಾಟಕಕ್ಕೆ ನ್ಯಾಯ ಒದಗಿಸಿದ್ದಾರೆ. ಈ ರಂಗಪ್ರಯೋಗದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿರುವ ಶಿಕ್ಷಣಾರ್ಥಿಗಳು ಮುಂಬರುವ ದಿನಗಳಲ್ಲಿ ಇನ್ನೂ ಹೊಸಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಾ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸುವ ಸಾಧ್ಯತೆಗಳಿವೆ. ಸೃಜನಶೀಲ ನಿರ್ದೇಶಕ ಬಿ ಸುರೇಶ್‌ ಮತ್ತು ಅವರ ನಟರಂಗ ಸಂಸ್ಥೆಯಿಂದ ಇಂತಹ ಪ್ರಯತ್ನಗಳನ್ನು ನಿರೀಕ್ಷಿಸುತ್ತಲೇ ಇಡೀ ನಾಟಕ ತಂಡಕ್ಕೆ ಪ್ರಶಂಸಾರ್ಹ ಅಭಿನಂದನೆಗಳನ್ನು ಸಲ್ಲಿಸಲಿಚ್ಛಿಸುತ್ತೇನೆ.

( ಮೈಸೂರಿನಲ್ಲಿರುವ ಮಂಡ್ಯ ರಮೇಶ್‌ ಅವರ ನಟನ ರಂಗಮಂದಿರಲ್ಲಿ ʼ ನೀರಗನ್ನಡಿ ʼ ಕಳೆದ ಶನಿವಾರ ಏಪ್ರಿಲ್‌ 25ರಂದು ಪ್ರದರ್ಶನಗೊಂಡಿತ್ತು. )

 

ndv1961@yahoo.co.in 9448685755 divin2007@gmail.com
ನಾ ದಿವಾಕರ N DIVAKAR
ಮನೆ ಸಂಖ್ಯೆ 2 No 2 Block 2
ಬ್ಲಾಕ್‌ ನಂ 2 ಎಸ್‌ಬಿಎಂ ಕಾಲೋನಿ SBM Colony
2ನೆಯ ಹಂತ ಶ್ರೀರಾಂಪುರ ̳2md Stage Sri Ŗaampua
ಮೈಸೂರು 570023 MYSURU 570023

Tags: #ArtAndCulture#BSuresh#CulturalValues#DramaReview#ExperimentalTheatre#Feminism#FolkStory#KannadaTheatre#KYNarayanaswamy#ModernSociety#Mysuru#NaDivakar#Neeragannadi#Rangabhoomi#SocialIssues#TheatreReviewGenderEqualitypatriarchyWomenempowerment
Previous Post

ಅಗ್ನಿ ನರ್ತನಕ್ಕೆ 9 ಜನರ ಬಲಿ : ರಾತ್ರಿ ಕಣ್ಣು ಮುಚ್ಚಿದವರು ಬೆಳಿಗ್ಗೆ ಕಣ್ಣು ತೆರೆಯಲೇ ಇಲ್ಲ..!

Next Post

2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

Related Posts

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ
ಅಂಕಣ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

by ಪ್ರತಿಧ್ವನಿ
May 13, 2026
0

ಮೂಲ : ಝಿಯಾ ಉಸ್‌ ಸಲಾಂ ಕನ್ನಡಕ್ಕೆ : ನಾ ದಿವಾಕರ (ಆಧಾರ The insidious return of separate electorates Zia us Salam ದ...

Read moreDetails
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

May 9, 2026
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

May 4, 2026
Next Post
2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada