ಕೋವಿಡ್ ಎರಡನೆಯ ಅಲೆಯ ಹೊಡೆತಕ್ಕೆ ಭಾರತದ ಆರೋಗ್ಯ ಕ್ಷೇತ್ರ ಸಂಪೂರ್ಣ ತತ್ತರಿಸಿಹೋಗಿದೆ. ಮೂಲಭೂತ ಸೌಕರ್ಯಗಳ ಕೊರತೆಯೇ ಬಹುಮುಖ್ಯ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. ಭಾರತದಲ್ಲಿ ಆಮ್ಲಜನಕ, ಹಾಸಿಗೆ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವಿಗೀಡಾಗುತ್ತಿರುವುದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚಾ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಎಪ್ರಿಲ್ 26 ರಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ ಪ್ರಕಾರ, ಯುನೈಟೆಡ್ ಕಿಂಗ್ಡಮ್ ಮೂಲದ ಲಿಂಡೆ ಹಾಗೂ ಅದಾನಿ ಗ್ರೂಪ್ ಸಹಯೋಗದೊಂದಿಗೆ ಸೌದಿ ಅರೇಬಿಯಾ 80 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಭಾರತಕ್ಕೆ ರವಾನಿಸುತ್ತದೆ.
ಸೌದಿ ಅರೇಬಿಯಾ ಆಮ್ಲಜನಕ ಪೂರೈಸುವ ಸುದ್ದಿ ವರದಿಯಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಟ್ಯಾಂಕರ್ ಒಂದಕ್ಕೆ ಇಬ್ಬರು ವ್ಯಕ್ತಿಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಸ್ಟಿಕರ್ ಅಂಟಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೌದಿಯಿಂದ ರವಾನೆಯಾದ ಆಮ್ಲಜನಕದ ಟ್ಯಾಂಕರ್ ಗೆ ರಿಲಯನ್ಸ್ ಸ್ಟಿಕರ್ ಅಂಟಿಸಲಾಗುತ್ತಿದೆಯೆಂದು ಆರೋಪಿಸಲಾಗಿತ್ತು. ಈ ವಿಡಿಯೋ ವ್ಯಾಪಕ ಹಂಚಿಕೆಯಾಗಿದ್ದು, ಸತ್ಯಾಸತ್ಯತೆಯ ಸಂಪೂರ್ಣ ಅರಿವಿಲ್ಲದೆ ರಿಲಯನ್ಸ್ ವಿರುದ್ಧ ಅಪಪ್ರಚಾರಗಳು ನಡೆದವು.
Fact-check
ಮೇ 1 ರ ದಿ ಹಿಂದೂ ವರದಿ ಪ್ರಕಾರ, ಪೆಟ್ರೋಕೆಮಿಕಲ್ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ವೈದ್ಯಕೀಯ ಬಳಕೆಯ ಆಮ್ಲಜನಕ ಉತ್ಪಾದನೆಯನ್ನು 1000 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಿದೆ. ಇದು ದೇಶದ ಒಟ್ಟು ಮೆಡಿಕಲ್ ದರ್ಜೆಯ ಆಮ್ಲಜನಕ ಉತ್ಪಾದನೆಗಳಿಗಿಂತ 11 ಶೇಕಡಾ ಹೆಚ್ಚು.
ಈ ಬಗ್ಗೆ ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ, ಭಾರತದಾದ್ಯಂತ ಸರಬರಾಜು ಮಾಡಲು ಜಮನಗರದ ನಮ್ಮ ಆಮ್ಲಜನಕ ಸ್ಥಾವರ ಘಟಕದಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲು ಪ್ರಾರಂಭಿಸಿರುವುದಾಗಿ ದಿ ಹಿಂದೂ ಬಳಿ ತಿಳಿಸಿದ್ದಾರೆ.
ಏಪ್ರಿಲ್ 13 ರಂದು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರು ರಿಲಯನ್ಸ್ ಇಂಡಸ್ಟ್ರೀಸ್ ಜಮ್ನಗರ್ ಸ್ಥಾವರದಿಂದ ರಾಜ್ಯಕ್ಕೆ ಸುಮಾರು 100 ಮೆಟ್ರಿಕ್ ಟನ್ ಆಮ್ಲಜನಕವನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಹಾಗಾಗಿ, ರಿಲಯನ್ಸ್ ಕೂಡಾ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಮಾಡುವ ಸುದ್ದಿ ಸುಳ್ಳಲ್ಲ.
ಅದಾಗ್ಯೂ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ವಿಡಿಯೋ ತುಣುಕು ಕುರಿತಂತೆ ಆಲ್ಟ್ ನ್ಯೂಸ್ ನೊಂದಿಗೆ ಮಾತನಾಡಿದ RIL ವಕ್ತಾರರು, “ಸೌದಿ ಅರೇಬಿಯಾ, ಜರ್ಮನಿ, ಬೆಲ್ಜಿಯಂ, ನೆದರ್‌ಲ್ಯಾಂಡ್ಸ್ ಮತ್ತು ಥೈಲ್ಯಾಂಡ್‌ಗಳಿಂದ 24 ಐಎಸ್‌ಒ ಕಂಟೇನರ್‌ಗಳನ್ನು ಭಾರತಕ್ಕೆ ತರಲು ಮಾಡಲು RIL ಆಯೋಜಿಸಿದೆ. ಜಮನಗರದ ಘಟಕಕ್ಕೆ ಈ ಕಂಟೈನರ್ ಗಳು ಕಳೆದ ವಾರ ತಲುಪಿದೆ. ಜಮನಗರದ ಘಟಕದಿಂದ ಆಮ್ಲಜನಕ ಪೂರೈಕೆಯಾಗುವ ಮೊದಲು ಕಂಟೈನರ್ ಗೆ ಸ್ಟಿಕರ್ ಅಂಟಿಸುವ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಮತ್ತು ಆಮ್ಲಜನಕ ಸ್ಥಾವರದಲ್ಲಿರುವ ಟ್ಯಾಂಕರ್ ನಲ್ಲಿ ಅದೇ ಸ್ಟಿಕ್ಕರ್‌ಗಳು ಗೋಚರಿಸುವ ಕೆಲವು ಚಿತ್ರಗಳನ್ನು ವಕ್ತಾರರು ಹಂಚಿಕೊಂಡಿದ್ದಾರೆ.
ಹಾಗಾಗಿ, ಸೌದಿ ಅರೇಬಿಯಾ ಪೂರೈಸಿದ ಆಮ್ಲಜನಕಕ್ಕೆ ರಿಲಯನ್ಸ್ ತನ್ನ ಹೆಸರು ಹಾಕಿಕೊಂಡಿದೆ ಎಂಬ ಆರೋಪಗಳು ಸುಳ್ಳು.