ತಜ್ಞರ ಸಲಹೆ ಬದಿಗೊತ್ತಿ ರ‍್ಯಾಲಿ ನಡೆಸಿ ಗಂಡಾಂತರ ತಂದ ಸರ್ಕಾರ..!

[Sassy_Social_Share]

ಅಪಾರ ಸಾವು ನೋವಿಗೆ ಕಾರಣವಾಗಿರುವ ಕರೋನಾ ಎರಡನೇ ಅಲೆಯ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಆಡಳಿತದ ಲೋಪವನ್ನು ಪ್ರಶ್ನಿಸುವವರಿಗೆ, ಈಗ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳ ಮೂಲಕ 137 ಕೋಟಿ ಜನರಿರುವ ದೇಶದಲ್ಲಿ ಕರೋನಾ ನಿಯಂತ್ರಣ ಸುಲಭವಲ್ಲ ಎಂದು ಮನವರಿಕೆ ಮಾಡಲು ಇನ್ನಿಲ್ಲದ ಯತ್ನಗಳನ್ನು ನಡೆಸುತ್ತಿದ್ದಾರೆ.

ಬಿಜೆಪಿ ಐಟಿ ಸೆಲ್ ಮತ್ತು ಟ್ರೋಲ್ ಆರ್ಮಿಗಳ ತಥಾಕಥಿತ ಕಟ್ಟುಕತೆಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಯುರೋಪ್ ದೇಶಗಳ ಜನಸಂಖ್ಯೆಗೂ, ಭಾರತದ ಜನಸಂಖ್ಯೆಗೂ ಹೋಲಿಸಿ ನೀವೇ ಹೇಳಿ ಇಂತಹ ದೇಶವನ್ನು ಒಂದೂ ಸಾವು ನೋವಾಗದಂತೆ ನಿಭಾಯಿಸುವುದು ಸಾಧ್ಯವೇ ಎಂಬ ಪ್ರಶ್ನೆ ತೇಲಿಬಿಡಲಾಗುತ್ತಿದೆ. ನವೆಂಬರಿನ ಹೊತ್ತಿಗೆ ದೇಶದಲ್ಲಿ ಕರೋನಾ ಪ್ರಕರಣಗಳು ತಗ್ಗಿ, ಕರೋನಾ ಗ್ರಾಫ್ ಫ್ಲಾಟ್ ಆಗಿತ್ತು. ಹಾಗಾಗಿ ಮೋದಿಯವರು ಚುನಾವಣಾ ರ‍್ಯಾಲಿಗಳಿಗೆ, ಕುಂಭಮೇಳಕ್ಕೆ ಮುಂದಾದರು. ಅವರ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಇದನ್ನೇ ಮಾಡುತ್ತಿದ್ದರಲ್ಲವೇ? ಎಂಬ ಪ್ರಶ್ನೆಯನ್ನೂ ಎತ್ತಲಾಗುತ್ತಿದೆ.

ಆದರೆ, ಇಂತಹ ಜಾಣ ಕುರುಡು ಕಟ್ಟುಕಥೆಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಹ ಒಂದೇ ಒಂದು ಮಹತ್ವದ ಸಂಗತಿಯೊಂದನ್ನು ಈ ಕಟ್ಟುಕಥೆಗಾರರು ಮತ್ತು ಟ್ರೋಲ್ ಪಡೆಗಳು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿವೆ. ಹಾಗೆ ಭಕ್ತರು ಮತ್ತು ಭಕ್ತ ಮಾಧ್ಯಮಗಳು ಮರೆಮಾಚುತ್ತಿರುವ ಮಹತ್ವದ ಸಂಗತಿ ಎಂದರೆ; ಇಂಡಿಯನ್ ಸಾರ್ಸ್- ಕೋವ್-2 ಜೆನೆಟಿಕ್ಸ್ ಕನ್ಸೋರ್ಟಿಯಮ್(ಐಎನ್ ಎಸ್ ಎಸಿಒಜಿ) ಎಂಬ ಮೋದಿ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯೇ ನೀಡಿದ್ದ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಬೃಹತ್ ಚುನಾವಣಾ ರ‍್ಯಾಲಿಗಳು, ಕುಂಭಮೇಳ, ಕ್ರಿಕೆಟ್, ಜಾತ್ರೆ-ಹಬ್ಬಗಳನ್ನು ನಡೆಸಿದ ಮತಿಗೇಡಿ ಕ್ರಮಗಳು ದೇಶದ ಜನರ ಜೀವಕ್ಕೆ ಸಂಚಕಾರ ತಂದಿರುವುದು.

ಕೋವಿಡ್ ರೋಗದ ಕುರಿತ ತಜ್ಞರನ್ನೊಳಗೊಂಡ ವೈಜ್ಞಾನಿಕ ಸಲಹೆಗಾರರ ಈ ಐಎನ್ಎಸ್ ಎಸಿಒಜಿ ಸಮಿತಿ, ಕಳೆದ ಮಾರ್ಚ್ ಆರಂಭದಲ್ಲಿಯೇ ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವ್ಯವಹರಿಸುವ ಉನ್ನತ ಅಧಿಕಾರಿಗಳಿಗೆ ತನ್ನ ವರದಿಯನ್ನು ಸಲ್ಲಿಸಿ, ದೇಶದದಲ್ಲಿ ಅಪಾಯಕಾರಿ ಎರಡನೇ ಅಲೆ ಶುರುವಾಗಿದೆ. ಅಪಾರ ಪ್ರಮಾಣದ ಸಾವು ನೋವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆಯಂತಹ ಕೋವಿಡ್ ಮಾರ್ಗಸೂಚಿಗಳ ಪಾಲನೆಯ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು. ಜೊತೆಗೆ ಹೆಚ್ಚು ಜನ ಸೇರುವಂತಹ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ಸಲಹೆ ನೀಡಿತ್ತು.

ಆದರೆ, ಕರೋನಾ ರೂಪಾಂತರಿ ವೈರಾಣು ದೇಶದಲ್ಲಿ ಹರಡಿದಿಯೇ? ಹರಡಿದ್ದರೆ, ಅದು ಎಷ್ಟು ಅಪಾಯಕಾರಿ, ಅದನ್ನು ನಿಯಂತ್ರಿಸುವುದು ಹೇಗೆ? ಎಂಬ ಕುರಿತ ಅಧ್ಯಯನ ನಡೆಸಿ ವರದಿ ನೀಡಲೆಂದೇ ಮೋದಿ ಸರ್ಕಾರ ರಚಿಸಿದ್ದ ಸಲಹೆಗಾರರ ತಂಡ ನೀಡಿದ ಸಲಹೆಯನ್ನು ಕಸದ ಬುಟ್ಟಿಗೆ ಎಸೆದು, ಪಶ್ಚಿಮಬಂಗಾಳ ಸೇರಿದಂತೆ ಐದು ರಾಜ್ಯಗಳ ಅಧಿಕಾರ ಹಪಾಹಪಿಗಾಗಿ ಚುನಾವಣಾ ರ್ಯಾಲಿಗಳು,  ಧರ್ಮರಾಜಕಾರಣದ ಲಾಭಕ್ಕಾಗಿ ಕುಂಭಮೇಳ,  ದಂಧೆಗಾಗಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲಾಯಿತು ಮತ್ತು ಜಗತ್ತಿಗೇ ಮುಂಚೆ ಕರೋನಾ ಜಯಿಸಿದ ಅವತಾರ ಪುರುಷ ಎಂಬ ಬಿರುದಿಗಾಗಿ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಯಿತು. ನಾಯಕರೇ ಲಕ್ಷಾಂತರ ಜನರನ್ನು ಸೇರಿಸಿ ಚುನಾವಣಾ ಭಾಷಣ ಬಿಗಿದು ಸಂಭ್ರಮಿಸುವುದನ್ನು ಕಂಡು ಜನ ಕೂಡ ಎಲ್ಲಾ ಮಾರ್ಗಸೂಚಿ ಮರೆತು ಮೈಮರೆತರು.

ಒಂದು ವೇಳೆ, ತಮ್ಮ ಸ್ವಪತ್ರಿಷ್ಠೆ, ವರ್ಚಸ್ಸು, ಅಧಿಕಾರದ ದಾಹವನ್ನು ಬದಿಗಿಟ್ಟು ನಿಜವಾಗಿಯೂ ದೇಶದ ಜನರ ಜೀವ ಮತ್ತು ಜೀವನವೇ ಮುಖ್ಯವೆಂದು ಪ್ರಧಾನಿ ಮೋದಿ ಯೋಚಿಸಿ, ತಜ್ಞರ ಸಮಿತಿ ನೀಡಿದ ಆ ವರದಿಯ ಅಂಶಗಳೇನು ಎಂದು ಕನಿಷ್ಟ ಕಣ್ಣಾಡಿಸಿದ್ದರೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿ, ತಮಗೆ ಅಧಿಕಾರ ಮತ್ತು ಪ್ರತಿಷ್ಠೆಗಿಂತ ದೇಶ ಮುಖ್ಯ, ದೇಶದ ಜನತೆ ಮುಖ್ಯ ಎಂದು ಯೋಚಿಸಿದ್ದರೆ ಬಹುಶಃ ಪರಿಸ್ಥಿತಿ ಇಷ್ಟು ಭೀಕರವಾಗಿರುತ್ತಿರಲಿಲ್ಲ. ಏಕೆಂದರೆ, ತಜ್ಞರ ಸಮಿತಿ ತನ್ನ ವರದಿಯಲ್ಲಿ, ಸದ್ಯ ಭಾರತದಲ್ಲಿ ಹರಡುತ್ತಿರುವುದು ಅಪಾಯಕಾರಿ ರೂಪಾಂತರಿ ಕರೋನಾ ವೈರಸ್ ಮತ್ತು ಅದು ಅತಿ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು.

ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ರೋಗಗಳ ನಿಯಂತ್ರಣ ಕೇಂದ್ರ(ಎನ್ ಎಸ್ ಡಿಸಿ)ಕ್ಕೂ ಮಾರ್ಚ್ 10ಕ್ಕೆ ಮುಂಚೆಯೇ ತಜ್ಞರ ಸಮಿತಿ ತನ್ನ ವರದಿಯ ಅಂಶಗಳನ್ನು ಹಂಚಿಕೊಂಡಿತ್ತು. ದೇಶದ ಹಲವು ಭಾಗಗಳಲ್ಲಿ ಅದಾಗಲೇ ಸೋಂಕು ವ್ಯಾಪಕವಾಗಿ ಅತಿವೇಗದಲ್ಲಿ ಹರಡುತ್ತಿರುವ ಬಗ್ಗೆಯೂ ಎಚ್ಚರಿಸಲಾಗಿತ್ತು. ಆ ಮೂಲಕ ಆರೋಗ್ಯ ಸಚಿವಾಲಯಕ್ಕೂ ಈ ಎಲ್ಲಾ ಮಾಹಿತಿಯನ್ನು ನೀಡಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿತ್ತು. ಆದರೆ ಸರ್ಕಾರ ಮತ್ತು ಪ್ರಧಾನಿ ಮೋದಿ, ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರುಗಳು ಆ ಯಾವ ವಿಷಯವನ್ನೂ ಗಂಭೀರವಾಗಿ ಪರಿಣಿಸದೇ ನಿರ್ಲಕ್ಷಿಸಿದರು ಎಂದು ಸಮಿತಿಯಲ್ಲಿದ್ದ ತಜ್ಞರೇ ಈಗ ಬಹಿರಂಗಪಡಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿಯೇ ದೇಶದಲ್ಲಿ ಬಿ.1.617 ಎಂದು ಹೆಸರಿಸಲಾಗಿರುವ ಕರೋನಾದ ರೂಪಾಂತರಿ ತಳಿಯನ್ನು ಪತ್ತೆ ಮಾಡಲಾಗಿತ್ತು. ಈಗ ಅದನ್ನು ಜಗತ್ತಿನಾದ್ಯಂತ ಕರೋನಾದ ಭಾರತೀಯ ರೂಪಾಂತರಿ ತಳಿ ಎಂದು ಗುರುತಿಸಲಾಗುತ್ತಿದೆ. ಅದರ ಅತಿವೇಗದ ಹರಡುವಿಕೆ ಮತ್ತು ಅಪಾಯಕಾರಿ ದಾಳಿಯ ಬಗ್ಗೆಯೂ ಸಂಶೋಧನೆ ನಡೆಸಿ ವರದಿಯಲ್ಲಿ ಮಾಹಿತಿ ನೀಡಲಾಗಿತ್ತು. ಆದರೆ, ಐವರು ವಿಜ್ಞಾನಿಗಳನ್ನೊಳಗೊಂಡ ಆ ವೈಜ್ಞಾನಿಕ ಸಲಹೆಗಾರರ ತಂಡ ನೀಡಿದ ವರದಿಯನ್ನು ಕಡೆಗಣಿಸಿ ದೇಶಾದ್ಯಂತ ಚುನಾವಣಾ ರ್ಯಾಲಿಗಳು, ಕುಂಭಮೇಳ, ಜಾತ್ರೆ, ಹಬ್ಬ, ಕ್ರಿಕೆಟ್  ಕೂಟಗಳನ್ನು ನಡೆಸಿದ ಪರಿಣಾಮವನ್ನು ಇಂದು ಇಡೀ ದೇಶ ಅನುಭವಿಸುತ್ತಿದೆ ಎಂದು ತಂಡದ ವಿಜ್ಞಾನಿಗಳಲ್ಲಿ ಒಬ್ಬರಾದ ಅಜಯ್ ಪರಿದಾ ಎಂಬುವವರು ಬಹಿರಂಗಪಡಿಸಿದ್ದಾರೆ.

ಈ ಸಮಿತಿಯ ಇತರೆ ಸದಸ್ಯರು ಕೂಡ, ‘ದ ರಾಯಿಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಮಾಹಿತಿಯಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ತಮ್ಮ ಹೆಸರುಗಳನ್ನು ಬಹಿರಂಗಪಡಿಸದಂತೆ ವಿನಂತಿಸಿಕೊಂಡಿದ್ದಾರೆ ಎಂದು ರಾಯಿಟರ್ಸ್ ಹೇಳಿದೆ.

ಅಂದರೆ, ತಾವೇ ರಚಿಸಿದ ವಿಜ್ಞಾನಿಗಳ ಸಮಿತಿಯ ವರದಿಯನ್ನು ಕಸದಬುಟ್ಟಿಗೆ ಎಸೆದು ಇಡೀ ದೇಶಕ್ಕೇ ಗಂಡಾಂತರ ತಂದಿರುವ ಸರ್ಕಾರ, ಆ ಕಟು ವಾಸ್ತವ ಬಹಿರಂಗಗೊಳ್ಳದಂತೆ ವಿಜ್ಞಾನಿಗಳ ಮೇಲೆಯೇ ಒತ್ತಡ ಹೇರುತ್ತಿದೆ. ಸುಳ್ಳು ಮತ್ತು ಸತ್ಯದ ಮರೆಮಾಚುವ ಪ್ರಧಾನಿ ಮೋದಿ ಅವರ ಎಂದಿನ ವರಸೆ ಈ ವಿಷಯದಲ್ಲಿ ಕೂಡ ಮುಂದುವರಿದಿದೆ! ಇಂತಹ ವಾಸ್ತವಾಂಶಗಳನ್ನು ಮರೆಮಾಚಲು ಬಿಜೆಪಿ ಐಟಿ ಸೆಲ್ ಮತ್ತು ಟ್ರೋಲ್ ಪಡೆಗಳು ಕೂಡ ಈಗ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ತಿಪ್ಪರಲಾಗ ಹಾಕಲಾರಂಭಿಸಿವೆ!

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...