ಭಾರತೀಯ ದಂಡ ಸಂಹಿತೆಯ ಕಾನೂನುಗಳ ಕೂಲಂಕಷ ತಿದ್ದುಪಡಿ ಸೂಚಿಸುವ ಭಾರತೀಯ ಸುರಕ್ಷಾ ಸಂಹಿತೆ 2023 ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ (ಆಗಸ್ಟ್ 11) ಲೋಕಸಭೆಯಲ್ಲಿ ಮಂಡಿಸಿದರು.
ಮಸೂದೆಯು ಬ್ರಿಟಿಷರು 1860ರಲ್ಲಿ ರೂಪಿಸಿರುವ ಹಾಗೂ 2023ರವರೆಗೆ ಅನುಸರಿಸುತ್ತಿರುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪರಿಶೀಲನಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತೀಯ ಸುರಕ್ಷಾ ಸಂಹಿತೆ ಮಸೂದೆ ಮೂಲಕ ಕೇಂದ್ರ ಸರ್ಕಾರ ಬ್ರಿಟಿಷರು ರೂಪಿಸಿರುವ ಮೂರು ಪ್ರಮುಖ ಕಾನೂನು ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುತ್ತಿದೆ.
1860ರಲ್ಲಿ ರೂಪಿಸಿರುವ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ, 2023., 1973ರ ಕ್ರಿಮಿನಲ್ ಕಾರ್ಯವಿಧಾನ ಸಂಹಿತೆಯನ್ನು (ಸಿಆರ್‌ಪಿಸಿ) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಭಾರತೀಯ ಸಾಕ್ಷ್ಯ ಮಸೂದೆ, 2023 ಎಂದು ಬದಲಾವಣೆ ಮಾಡುವುದನ್ನು ಮಸೂದೆ ಹೇಳುತ್ತದೆ.
ಬ್ರಿಟಿಷರು ತಮಗೆ ಅನುಕೂಲವಾಗುವಂತೆ ಕಾನೂನುಗಳನ್ನು ರೂಪಿಸಿಕೊಂಡಿದ್ದರು. ಈಗ ಸಿದ್ಧಪಡಿಸಿರುವ ಭಾರತೀಯ ಸುರಕ್ಷಾ ಸಂಹಿತೆ ಮಸೂದೆಯಲ್ಲಿ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅಮಿತ್ ಶಾ ಹೇಳಿದರು.
ಬೆಳಿಗ್ಗೆ 11 ಗಂಟೆಗೆ ಅರಂಭವಾದ ಸಂಸತ್ತು ಮುಂಗಾರು ಅಧಿವೇಶನದ ಲೋಕಸಭೆ ಕಲಾಪ ಪ್ರತಿಪಕ್ಷಗಳ ಗದ್ದಲದಿಂದ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆಯಾಗಿತ್ತು.
ಮತ್ತೆ ಆರಂಭವಾದ ಲೋಕಸಭೆ ಕಲಾಪದ ವೇಳೆ ಇಂಡಿಯಾ ಮೈತ್ರಿಕೂಟದ ನಾಯಕರು ಅಧೀರ್ ರಂಜನ್ ಚೌಧರಿಯವರ ಅಮಾನತನ್ನು ವಿರೋಧಿಸಿ ಲೋಕಸಭೆ ಕಲಾಪವನ್ನು ಬಹಿಷ್ಕರಿಸಿದರು. ಬಳಿಕ ಸಂಸತ್ತಿನಲ್ಲಿ ಅಂಬೇಡ್ಕರ್ ಪ್ರತಿಮೆವರೆಗೂ ಮೆರವಣಿಗೆ ನಡೆಸಿದರು.
ಇತ್ತ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಮಣಿಪುರದ ವಿಚಾರವಾಗಿ ತೀವ್ರ ಗದ್ದಲ ಸೃಷ್ಟಿಸಿದ ಕಾರಣ ಮಧ್ಯಾಹ್ನ 2ರ ವರೆಗೆ ಕಲಾಪ ಮುಂದೂಡಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 ಹಾರಿದ ವಾರದ ಬಳಿಕ ಚಂದ್ರನತ್ತ ಜಿಗಿದ ರಷ್ಯಾದ ನೌಕೆ
ಈ ನಡುವೆ ಪ್ರತಿಪಕ್ಷಗಳು ರಾಜ್ಯಸಭೆಯ ಪ್ರತಿಪಕ್ಷಗಳ ನಾಯಕನ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿವೆ.
ಭಾರತೀಯ ಸುರಕ್ಷಾ ಸಂಹಿತೆ ಮಸೂದೆ 2023 ಅನ್ನು ತರುವುದಾಗಿ ಈ ಮುನ್ನ ಕೇಂದ್ರ ಬಿಜೆಪಿ ಸರ್ಕಾರ ಹೇಳಿತ್ತು. ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.