ಮಣಿಪುರ ಸತತ ಎರಡು ತಿಂಗಳು ಹೊತ್ತಿ ಉರಿದಿತ್ತು. ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಮಾತ್ರ ಆ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ಮಣಿಪುರದಲ್ಲಿ ಇರುವ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ಆದರೂ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟ ಮಾಡಲಿಲ್ಲ. ಯುವತಿಯರನ್ನು ಸಾಮೂಹಿಲ ಅತ್ಯಾಚಾರ ಮಾಡಿ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದಾಗಲೂ ಪ್ರಧಾನಿ ನರೇಂದ್ರ ಮೋದಿ ಮೌನದಿಂದ ಹೊರಬರಲಿಲ್ಲ. ಅಂತಿಮವಾಗಿ ಸಂಸತ್ನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಪ್ರಧಾನಿ ಮೋದಿ ಬಾಯಿ ಬಿಚ್ಚುವಂತೆ ಮಾಡುವಲ್ಲಿ ಯಶಸ್ವಿ ಆಗಿವೆ. ಆದರೆ ಮಣಿಪುರ ವಿಚಾರದಲ್ಲಿ ಮೋದಿ ಮಾಡಿದ್ದು ಅದೇ ಹಳೇ ಡ್ರಾಮಾ.

ಅವಿಶ್ವಾಸ ಮಂಡಿಸಿದ್ದನ್ನು ವ್ಯಂಗ್ಯ ಮಾಡೋದ್ರಲ್ಲೇ ಬ್ಯುಸಿ..!
ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಬಗ್ಗೆ ಮಾತನಾಡಲೇಬೇಕು ಅನ್ನೋ ಹಠದಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ರೆ, ಪ್ರಧಾನಿ ಮೋದಿ ಮಾತ್ರ ಅವಿಶ್ವಾಸ ಗೆಲ್ಲುವ ಸಂಭ್ರಮದಲ್ಲಿ ಇದ್ದಂತೆ ಕಾಣಿಸಿತು. ಬರೋಬ್ಬರಿ 2 ಗಂಟೆ 10 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ತನ್ನದೇ ಬೆನ್ನು ತಟ್ಟಿಕೊಳ್ಳುವಲ್ಲಿ ನಿರತರಾದರು. ಸರ್ಕಾರದ ಮೇಲೆ ದೇಶದ ಜನರ ವಿಶ್ವಾಸವಿದೆ. ಇದು ನನ್ನ ಸರ್ಕಾರದ ಅವಿಶ್ವಾಸ ಅಲ್ಲ, ಪ್ರತಿಪಕ್ಷಗಳ ಅವಿಶ್ವಾಸದ ಚರ್ಚೆ. ಎಲ್ಲಾ ಚುನಾವಣೆಗಳಲ್ಲೂ NDA ಹೆಚ್ಚು ಸ್ಥಾನ ಗಳಿಸಿದೆ, ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುತ್ತಿದೆ. ಜನಾಶೀರ್ವಾದದಿಂದ 2ನೇ ಬಾರಿ ಅಧಿಕಾರ ನಡೆಸುತ್ತಿದ್ದೇನೆ. ಅವಿಶ್ವಾಸ ಮಂಡಿಸಿ ನೋಬೆಲ್ ಪ್ರಶಸ್ತಿ ಗೆದ್ದಿದ್ದೀವಿ ಎಂದುಕೊಂಡಿದ್ದಾರೆ. ನಿಮ್ಮೆಲ್ಲರ ಒಂದೊಂದು ಮಾತನ್ನೂ ಈ ದೇಶ ಕೇಳಿಸಿಕೊಂಡಿದೆ ಎಂದೆಲ್ಲಾ ಮಾತನಾಡಿದ್ರು. ಭಾಷಣದ ತುಂಬಾ ಮಣಿಪುರದಲ್ಲಿ ತೆಗೆದುಕೊಂಡ ಕ್ರಮಗಳೇನು..? ಈಗ ಆಗಿರುವ ಕ್ರಮಗಳು ಎಷ್ಟು ಎಂದು ಮಾಹಿತಿ ಕೊಡಬೇಕಿದ್ದ ಕೇಂದ್ರ, ಕೇವಲ ಅಣಕ ಮಾಡೋದ್ರಲ್ಲಿ ಭಾಷಣ ಬರಿದಾಯ್ತು.

ಬ್ಯಾಂಕಿಂಗ್ ಕ್ಷೇತ್ರ ಮುಳುಗಿ ಹೋಯ್ತು ಎಂದಿರಲ್ಲ ಏನಾಯ್ತು..?
ವಿರೋಧ ಪಕ್ಷಗಳ ಪ್ರತಿಯೊಂದು ಮಾತನ್ನು ನೆನಪಿಸಿ ನೆನಪಿಸಿ ಅಣಕ ಮಾಡಿದ ಪ್ರಧಾನಿ ಮೋದಿ, ಬ್ಯಾಂಕಿಂಗ್ ಕ್ಷೇತ್ರ ಮುಳುಗಿ ಹೋಗುತ್ತೆ ಎಂದವರು ವಿರೋಧ ಪಕ್ಷಗಳ ನಾಯಕರು. ಆದರೆ ಇಂದು ಏನಾಗಿದೆ ಎನ್ನುವುದು ಜಗತ್ತಿಗೇ ಗೊತ್ತು. ಬ್ಯಾಂಕಿಂಗ್ ಕ್ಷೇತ್ರದ ನಿವ್ಳಳ ಲಾಭ ದ್ವಿಗುಣವಾಗಿದೆ. ರಕ್ಷಣಾ ಕ್ಷೇತ್ರದ HAL ಬಂದ್ ಆಗುತ್ತೆ ಅಂದ್ರು. HAL ಬಗ್ಗೆ ಏನೇನೆಲ್ಲ ಮಾತಾಡೋಕೆ ಸಾಧ್ಯ ಎಲ್ಲವನ್ನೂ ಮಾತಾಡಿದ್ರು. HAL ಫ್ಯಾಕ್ಟರಿ ನೌಕರರ ಆತ್ಮಸ್ಥೈರ್ಯ ಕಂಗೆಡಿಸುವ ಕೆಲಸ ಮಾಡಿದ್ದರು. ಇಂದು HAL ಸಫಲತೆಯ ಹಾದಿಯಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ಇಷ್ಟೇ ಅಲ್ಲದೆ HAL ಸಾರ್ವಕಾಲಿಕ ದಾಖಲೆಯ ಆದಾಯ ದಾಖಲಿಸಿದೆ. LIC ಬಗ್ಗೆ ಏನೆನೆಲ್ಲ ಮಾತಾಡಿದ್ರು..? ಬಡಜನರ ಹಣ ಮುಳುಗುತ್ತಿದೆ, LIC ಹಾಳಾಗ್ತಿದೆ ಅಂದ್ರು. ಏನೆನೆಲ್ಲ ಕಲ್ಪನೆ ಮಾಡಿಕೊಳ್ಳೋಕೆ ಸಾಧ್ಯ ಅಷ್ಟೆಲ್ಲ ಮಾತಾಡಿದ್ರು. ಆದ್ರೆ ಇಂದು LIC ಯಾವ ಮಟ್ಟದಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ದೇಶದ ಯಾವ ಸಂಸ್ಥೆಗಳ ಬಗ್ಗೆ ವಿರೋಧ ಪಕ್ಷಗಳು ಮಾತಾಡ್ತಾರೋ ಆ ಸಂಸ್ಥೆಗಳು ಇನ್ನಷ್ಟು ಉದ್ಧಾರ ಆಗುತ್ತಿದೆ ಎಂದಿದ್ದಾರೆ.
ಮಣಿಪುರದ ಬಗ್ಗೆ ಮಾತನಾಡದ್ದಕ್ಕೆ ವಿಪಕ್ಷಗಳ ಸಭಾತ್ಯಾಗ..!
1 ಗಂಟೆ 30 ನಿಮಿಷಗಳ ಕಾಲ ಪ್ರಧಾನಿ ಏನೇ ಅಣಕ ಮಾಡಿದರು ವಿರೋಧ ಪಕ್ಷಗಳು ತಾಳ್ಮೆಯಿಂದಲೇ ಕೇಲಿಸಿಕೊಳ್ಳುತ್ತಿದ್ದರು. ಆದರೆ ಮನಿಪುರದ ಬಗ್ಗೆ ಮಾತನಾಡುವಂತೆ ಒತ್ತಡ ಹೇರಿದರೂ ಮಾತನಾಡದ ಪ್ರಧಾನಿ ಮೋದಿ ಕ್ರಮ ವಿರೋಧಿಸಿ, ವಿಪಕ್ಷಗಳು ಸಭಾತ್ಯಾಗ ಮಾಡಿದವು. ಆ ಬಳಿಕ ಮಣಿಪುರದ ಬಗ್ಗೆ ಮಾತನಾಡಲು ಮೋದಿ ಶುರು ಮಾಡಿದರು. ಮತ್ತೆ ಮಣಿಪುರ ಬಗ್ಗೆ ಹಾಗುಹೋಗುಗಳ ಬಗ್ಗೆ ದೇಶದ ಜನರ ಎದುರು ಸತ್ಯ ತೆರೆದಿಡಬೇಕಿದ್ದ ಪ್ರಧಾನಿ, ಮಣಿಪುರದ ಬಗ್ಗೆ ಚರ್ಚೆ ಮಾಡೋರು ಇಲ್ಲಿ ಕೂರೋದೇ ಇಲ್ಲ, ಮಣಿಪುರ ಹಿಂಸಾಚಾರ ಅನ್ನೋರಿಗೆ ವಿಶ್ವಾಸವೇ ಇಲ್ಲ. ಹೊಟ್ಟೆ ತುಂಬಾ ಪಾಪ ತುಂಬಿಕೊಂಡೋರು ಎದ್ದು ಹೋದ್ರು. ಮಣಿಪುರ ಹಿಂಸಾಚಾರದ ಬಗ್ಗೆ ಗೃಹ ಸಚಿವರು ವಿಸ್ತಾರವಾಗಿ ಮಾತನಾಡಿದ್ರು. ಇಡೀ ಸದನದ ಸಂದೇಶ ಮಣಿಪುರಕ್ಕೆ ತಲುಪಬೇಕಿತ್ತು. ಮಣಿಪುರದಲ್ಲಿ ತುಂಬಾ ಕುಟುಂಬಗಳಿಗೆ ಅನ್ಯಾಯವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳಾಗಿವೆ. ಮಣಿಪುರ ಹಿಂಸಾಚಾರ ಸಹಿಸಲು ಅಸಾಧ್ಯ. ಕೇಂದ್ರ, ಮಣಿಪುರ ಸರ್ಕಾರಗಳಿಂದ ಶಾಂತಿ ನೆಲೆಸೋ ಕೆಲಸ ಆಗಿದೆ. ಶೀಘ್ರವೇ ಮಣಿಪುರದಲ್ಲಿ ಶಾಂತಿ ವಾತಾವರಣ ನೆಲೆಸಲಿದೆ ಎಂದವರು ಶಾಂತಿ ಕಾಪಾಡುವಂತೆ ಮಣಿಪುರ ಜನರಲ್ಲಿ ವಿನಂತಿ ಮಾಡ್ತೇನೆ ಎಂದು ಮಣಿಪುರದಲ್ಲಿನ ಈ ಹಿಂಸಾಚಾರಕ್ಕೆ ಕಾರಣ ಕಾಂಗ್ರೆಸ್ ಎಂದು ಬೆಂಕಿ ಹಚ್ಚುವ ಕೆಲಸವನ್ನೂ ಮಾಡಿದ್ರು.
ಟೀಕಿಸುವುದೇ ಅಜೆಂಡಾ.. ಸಭ್ಯತೆ ಮರೆತ ಬಿಜೆಪಿ ಸಂಸದರು..!
ವಿರೋಧ ಪಕ್ಷಗಳ ಒಕ್ಕೂಟವನ್ನು ದುರಹಂಕಾರಿಗಳ ಕೂಟ ಎಂದು ಛೇಡಿಸಿದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಱಲಿಯಲ್ಲಿ ಇದ್ದೇನೆ ಎಂದುಕೊಂಡವರಂತೆ ಭಾಷಣ ಮಾಡಿದರು. ಕಾಂಗ್ರೆಸ್ ಸೇರಿದಂತೆ INDIA ಒಕ್ಕೂಟವನ್ನು ಟೀಕಿಸುತ್ತ ಪ್ರಧಾನಿಯಾಗಿ ದೇಶಕ್ಕೆ ಸಂಸತ್ನಲ್ಲಿ ನಿಂತು ಕೊಡಬೇಕಿದ್ದ ಸಂದೇಶವನ್ನು ಕೊಡುವುದನ್ನು ಮರೆತರು. ಆದರೆ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಏನು ಮಾಡುತ್ತಿದೆ ಎನ್ನುವುದನ್ನು ಕಾರ್ಯಕರ್ತರ ಎದುರು ಹೇಳಿಕೊಂಡಂತಿತ್ತು. ಸಂಸದರೂ ಎನ್ನುವುದನ್ನೂ ಮರೆತಿದ್ದ ಬಿಜೆಪಿ ಸಂಸದರು, ಪಕ್ಷದ ಕಚೇರಿ ಎನ್ನುವಂತೆ ಮೋದಿ ಮೋದಿ ಎಂದು ಜೈಕಾರ ಕೂಗಿದರು. ಆದರೆ ಅಂತಿಮವಾಗಿ ಮಣಿಪುರದಲ್ಲಿ ಶಾಂತಿ ನೆಲಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಮೋದಿ ತುಟಿ ಬಿಚ್ಚಲಿಲ್ಲ. ವಿರೋಧ ಪಕ್ಷಗಳ ಸಭಾತ್ಯಾಗ ಮಾಡಿದ್ದರಿಂದ ಅವಿಶ್ವಾಸಕ್ಕೆ ಸೊಲಾಯ್ತು. ಆದರೆ ಮೋದಿಯನ್ನು ಮಣಿಪುರ ವಿಚಾರದಲ್ಲಿ ಎಳೆದುತಂದು ಬಾಯಿ ಬಿಡಿಸುವಲ್ಲಿ ವಿರೋಧ ಪಕ್ಷಗಳು ಯಶಸ್ಸು ಸಾಧಿಸಿದವರು ಎನ್ನಬಹುದು.

ಕೃಷ್ಣಮಣಿ