ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ಬಾಹ್ಯಾಕಾಶ ನೌಕೆ ಚಂದ್ರನತ್ತ ಚಿಮ್ಮಿದ ವಾರದ ಬಳಿಕ ರಷ್ಯಾದ ಬಾಹ್ಯಾಕಾಶ ನೌಕೆಯೊಂದು ಚಂದ್ರನತ್ತ ಹೊರಟಿದೆ ಎಂದು ಶುಕ್ರವಾರ (ಆಗಸ್ಟ್ 11) ವರಿಯಾಗಿದೆ.
ಅಲ್ಲದೆ ರಷ್ಯಾ ನೌಕೆಯು ಚಂದ್ರಯಾನ 3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ದಿನವೇ ಅಂದರೆ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ. ಸುಮಾರು 50 ವರ್ಷಗಳ ನಂತರ ರಷ್ಯಾ ಮತ್ತೆ ಚಂದ್ರನ ಅಂಗಳಕ್ಕೆ ಇಳಿಯಲು ಪ್ರಯತ್ನಿಸುತ್ತಿದೆ.
1976 ರ ನಂತರ 50 ವರ್ಷಗಳ ಬಳಿಕ ರಷ್ಯಾ ತನ್ನ ಮೊದಲ ಲೂನಾ 25 ಮೂನ್ ಲ್ಯಾಂಡರ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಸೋಯುಜ್ 2 ರಾಕೆಟ್ ಸಹಾಯದಿಂದ ವೊಸ್ಟೊಚ್ನಿ ಕಾಸ್ಮೊಡ್ರೋಮ್ ಸ್ಥಳದಲ್ಲಿ ಲೂನಾ 25 ನೌಕೆಯನ್ನು ಶುಕ್ರವಾರ ನಡುಗಿನ ಜಾವ 2.10ಕ್ಕೆ (ಸ್ಥಳೀಯ ಕಾಲಮಾನ) ಉಡಾವಣೆ ಮಾಡಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದ್ದು ಇದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ.
ಇಸ್ರೊ ಚಂದ್ರಯಾನ 3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಅದರ ನಂತರ ಈಗ ರಷ್ಯಾ ಕೂಡ ಚಂದ್ರನತ್ತ ಹೊರಟಿದೆ. ಇದು ಉಡಾವಣೆಯಾದ ಸುಮಾರು 564 ಸೆಕೆಂಡುಗಳ ನಂತರ ಫ್ರಿಗೇಟ್ ಬೂಸ್ಟರ್ ರಾಕೆಟ್ನ ಮೂರನೇ ಹಂತದಿಂದ ಬೇರ್ಪಟ್ಟಿತು. ಉಡಾವಣೆಯಾದ ಸುಮಾರು ಒಂದು ಗಂಟೆಯ ನಂತರ ಲೂನಾ 25 ಬಾಹ್ಯಾಕಾಶ ನೌಕೆಯು ಬೂಸ್ಟರ್ನಿಂದ ಬೇರ್ಪಡುತ್ತದೆ.
ಲೂನಾ 25 ಬಾಹ್ಯಾಕಾಶ ನೌಕೆಯು ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಹುಡುಕುತ್ತದೆ. ಅದೇ ಸಮಯದಲ್ಲಿ, ಲ್ಯಾಂಡರ್ನಲ್ಲಿ ಅನೇಕ ಕ್ಯಾಮೆರಾಗಳಿವೆ, ಇದು ಟೈಮ್ಲ್ಯಾಪ್ಸ್ ತುಣುಕನ್ನು ಮತ್ತು ಲ್ಯಾಂಡಿಂಗ್ನ ಅದ್ಭುತ ಚಿತ್ರಗಳನ್ನು ಸೆರೆಹಿಡಿಯುತ್ತದೆ.
ಚಂದ್ರಯಾನ 3 ನೌಕೆಯ ವಿಕ್ರಂ ಲ್ಯಾಂಡರ್ ಮತ್ತೆ ರಷ್ಯಾದ ನೌಕೆ ನಡುವೆ ಘರ್ಷಣೆ ಉಂಟಾಗುವುದಿಲ್ಲ. ಎರಡೂ ಬೇರೆ ಬೇರೆ ಪ್ರದೇಶಗಳಲ್ಲಿ ಇಳಿಯಲಿವೆ ಎನ್ನಲಾಗಿದೆ.
ಚಂದ್ರಯಾನ 3ರ ನೌಕೆಯು ಐದು ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಮೊದಲು ಅದು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು ಮೂರರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ.
ಜುಲೈ 14ರಂದು ಭಾರತದ ಚಂದ್ರಯಾನ 3 ನೌಕೆ ಶ್ರೀಹರಿಕೋಟದಿಂದ ನಭಕ್ಕೆ ಹಾರಿತ್ತು. ಬರೋಬ್ಬರಿ 40 ದಿನಗಳ ಪ್ರಯಾಣ ಮುಗಿಸಿ, ಇದರ ರೋವರ್ ಚಂದ್ರನ ನೆಲದ ಮೇಲೆ ಆಗಸ್ಟ್ 23ರಂದು ಇಳಿಯಲಿದೆ.
ಆದರೆ ಅಚ್ಚರಿ ವಿಷಯವೆಂದರೆ, ನಮಗಿಂತ 29 ದಿನ ತಡವಾಗಿ ಅಂದರೆ ಸೋಮವಾರ (ಆಗಸ್ಟ್ 11) ರಷ್ಯಾ ನೆಲದಿಂದ ಚಂದ್ರನತ್ತ ಜಿಗಿಯುವ ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಅದೇ ಆಗಸ್ಟ್ 23ರಂದೇ ಚಂದ್ರನ ಧರೆಯನ್ನು ಚುಂಬಿಸಲಿದೆ. ಇಸ್ರೊದ ನೌಕೆಗಿಂತ ಕೆಲವು ನಿಮಿಷಗಳ ಮೊದಲೇ ದಕ್ಷಿಣ ಧ್ರುವದಲ್ಲಿ ರಷ್ಯಾದ ಲೂನಾ 25 ನೌಕೆ ಇಳಿಯುವ ಮೂಲಕ ರಷ್ಯಾ ಚೊಚ್ಚಲ ಇತಿಹಾಸವನ್ನು ತನ್ನ ಹೆಸರಿಗೆ ಬರೆಯುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಸ್ರೊ ಚಂದ್ರಯಾನ 3 ನೌಕೆ 40 ದಿನಗಳ ಪ್ರಯಾಣದ ಬಳಿಕ ಚಂದಿರನಲ್ಲಿಳಿದರೆ, ರಷ್ಯಾದ ನೌಕೆ ಕೇವಲ 12 ದಿನಗಳಲ್ಲಿತನ್ನ ಚಂದ್ರಯಾನ ಪೂರ್ಣಗೊಳಿಸಲಿದೆ. ಲೂನಾ 25 ಕೇವಲ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ಮುಟ್ಟಿ, ಆ ಕಕ್ಷೆಯಲ್ಲಿ 7 ದಿನಗಳ ಕಾಲ ಸುತ್ತುವರಿದು ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ದಕ್ಷಿಣ ಧ್ರುವದ ಬಳಿ ಈಗಾಗಲೇ ನಿರ್ಧರಿಸಿರುವ 3 ಸ್ಥಳಗಳಲ್ಲಿ ಯಾವುದಾದರೂ ಒಂದರಲ್ಲಿ ಈ ನೌಕೆ ಇಳಿಯಲಿದೆ. ಇದರ ಲ್ಯಾಂಡಿಂಗ್ ಸಮಯ ಭಾರತದ ಚಂದ್ರಯಾನ 3ರ ಸಮಯಕ್ಕೆ ಸನಿಹವಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ತಿಳಿಸಿದೆ.
ಪರಸ್ಪರ ಘರ್ಷಣೆ ಇಲ್ಲ
ಭಾರತದ ಇಸ್ರೋದ ಕಾರ್ಯಾಚರಣೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು Roscosmos ಈಗಾಗಲೇ ಸ್ಪಷ್ಟಪಡಿಸಿದೆ. ”ಚಂದ್ರನ ಮೇಲೆ ಎಲ್ಲರಿಗೂ ಸಾಕಷ್ಟು ಸ್ಥಳವಿದೆ. ಉಭಯ ರಾಷ್ಟ್ರಗಳೂ ತಮ್ಮ ನೌಕೆಗಳನ್ನು ವಿಭಿನ್ನ ಪ್ರದೇಶಗಳಲ್ಲಿ ಲ್ಯಾಂಡಿಂಗ್ ನಡೆಸಲು ಯೋಜಿಸಿವೆ. ಪರಸ್ಪರ ಅಡ್ಡಿಪಡಿಸುವ ಅಥವಾ ಡಿಕ್ಕಿಯಾಗುವ ಯಾವುದೇ ಅಪಾಯವಿಲ್ಲ,” ಎಂದು ರಷ್ಯಾ ತಿಳಿಸಿದೆ.
ರಷ್ಯಾದ ಲೂನಾ 25 ಚಂದ್ರನ ಮೇಲ್ಮೈಯಲ್ಲಿಆಮ್ಲಜನಕದ ಶೋಧ ನಡೆಸಲಿದೆ. ಚಂದ್ರನ ಆಂತರಿಕ ರಚನೆಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ಇದರ ಲ್ಯಾಂಡರ್ 4 ಕಾಲಿನ ಬೇಸ್ ಹೊಂದಿದೆ. ಲ್ಯಾಂಡಿಂಗ್ ರಾಕೆಟ್ ಮತ್ತು ಪ್ರೊಪೆಲ್ಲಂಟ್ ಟ್ಯಾಂಕ್ನ ಜತೆಗೆ ಸೌರಫಲಕಗಳು, ಸಂವಹನ ಉಪಕರಣಗಳು, ಆನ್ಬೋರ್ಡ್ ಕಂಪ್ಯೂಟರ್ ಒಳಗೊಂಡಿದೆ.
ಚಂದ್ರಯಾನ 3 ನೌಕೆಯು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದು ಲ್ಯಾಂಡಿಂಗ್ ಮಾಡುವುದು ಇಸ್ರೊ ನೌಕೆಯ ಮುಖ್ಯ ಗುರಿ. ಈ ನೌಕೆಯು ದೇಶೀ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ರೋವರನ್ನು ಒಳಗೊಂಡಿದೆ. ಚಂದ್ರನ ಮೇಲ್ಮೈನ ರಾಸಾಯನಿಕ ವಿಶ್ಲೇಷಣೆಗಾಗಿ ರೋವರ್ ವೈಜ್ಞಾನಿಕ ಪೇಲೋಡ್ ಅನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರ ವಂಚಿಸುತ್ತಿದ್ದ ಗ್ಯಾಂಗ್ ಬಂಧನ
ಇಸ್ರೊ ರವಾನಿಸಿರುವ ಚಂದ್ರಯಾನ 3ರ ರೋವರ್ ಚಂದ್ರನ ದಕ್ಷಿಣ ಧ್ರುವದ ನೆಲದಲ್ಲಿ 14 ದಿನ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಇಳಿಸಂಜೆಯ ಕಗ್ಗತ್ತಲಿನಂಥ ವಾತಾವರಣದಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ಇಷ್ಟು ಅವಧಿಯವರೆಗೆ ವಿಕ್ರಮ್ ಓಡಾಡಲಿದೆ.
ಆದರೆ ರಷ್ಯಾ ರೂಪಿಸಿರುವ ಲೂನಾ 25ರ ಲ್ಯಾಂಡರ್ 1 ವರ್ಷದವರೆಗೆ ಚಂದ್ರನ ನೆಲದಲ್ಲಿ ಕಾರ್ಯನಿರ್ವಹಿಸಲಿದೆ. 1976ರಲ್ಲಿ ರಷ್ಯಾ ತನ್ನ ಚೊಚ್ಚಲ ಚಂದ್ರನೌಕೆ ಲೂನಾ 24 ಕಳುಹಿಸಿತ್ತು. ಅದು ಸುಮಾರು 170 ಗ್ರಾಂ. ಚಂದ್ರನ ಧೂಳಿನೊಂದಿಗೆ ಸುರಕ್ಷಿತವಾಗಿ ಭೂಮಿಗೆ ಮರಳಿ ಇತಿಹಾಸ ನಿರ್ಮಿಸಿತ್ತು. ಆ ಯಶಸ್ಸಿನ ಶೇ 50ರಷ್ಟು ಸಾಧ್ಯತೆಯನ್ನು ಲೂನಾ 25 ಮೂಲಕ ರಷ್ಯಾ ನಿರೀಕ್ಷಿಸುತ್ತಿದೆ. ಲೂನಾ 25 ಕೂಡ ಚಂದ್ರನ ಮೇಲ್ಮೈನಲ್ಲಿ6 ಇಂಚುಗಳನ್ನು ಅಗೆದು ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಲಿದೆ. ಹೆಪ್ಪುಗಟ್ಟಿದ ನೀರನ್ನು ಆವಿಷ್ಕರಿಸಲು ಪ್ರಯತ್ನಿಸಲಿದೆ ಎನ್ನಲಾಗಿದೆ.