೨೦೧೪ ರ ತನಕ ಭಾರತದ ಬಹುತೇಕ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುತ್ತಿದ್ದವು. ಆನಂತರ ಆಳುವವರನ್ನು ಪ್ರಶ್ನಿಸುವವರನ್ನೇ ಪ್ರಶ್ನಿಸುವ ಚಾಳಿ ಬೆಳೆಸಿಕೊಂಡವು. ಇದಕ್ಕೆ ಬಹುಮುಖ್ಯ ಕಾರಣಗಳೆಂದರೆ:
೧. ಬಹುತೇಕ ಮಾಧ್ಯಮದ ಮೇಲೆ ಕೋಮುವಾದಿ ಮನಸ್ಥಿತಿಯ ಮೇಲ್ವರ್ಗದ ಜನರ ಹಿಡಿತ.
೨. ಮಾಧ್ಯಮಗಳನ್ನು ನಡೆಸುತ್ತಿರುವವರು ಬಹುತೇಕ ಕೋಮುವಾದಿಗಳನ್ನು ಬೆಂಬಲಿಸುವ ಕಾರ್ಪೋರೇಟ್ ಕಳ್ಳೋದ್ಯಮಿಗಳು.
ಕಳೆದ ಹತ್ತೆಂಟು ವರ್ಷಗಳಿಂದ ಭಾರತೀಯ ಮಾಧ್ಯಮಗಳು ತುಳಿದ ಹಾದಿ ಪ್ರಜಾಪ್ರಭುತ್ವಕ್ಕೆ ಅಪಾಯವನ್ನು ತಂದಿಡುವಂತದ್ದಾಗಿದೆ. ಆಳುವವರ ಮುಖಸ್ತುತಿˌ ಸುಳ್ಳು ಸುದ್ಧಿ ˌಜನಾಂಗೀಯ ದ್ವೇಷ ಹರಡುವುದುˌ ಕೋಮು ಸಾಮರಸ್ಯ ಕದಡುವುದುˌ ವಿರೋಧ ಪಕ್ಷಗಳ ಮತ್ತು ದೇಶದ ಚಿಂತಕರ/ಪ್ರಗತಿಪರರ ಬಗ್ಗೆ ಅಪಪ್ರಚಾರˌ ತೇಜೋವಧೆ ಇವೇ ನಮ್ಮ ಮಾಧ್ಯಮಗಳ ದಿನಚರಿಯಾಗಿದೆ. ಒಂದು ದಿನವು ಕೂಡ ಈ ಮಾಧ್ಯಗಳು ದೇಶದ ಹದಗೆಟ್ಟ ಆರ್ಥಿಕತೆಯ ಬಗ್ಗೆಯಾಗಲಿˌ ಉಲ್ಬಣಿಸಿದ ನಿರುದ್ಯೋಗ ಸಮಸ್ಯೆಯ ಕುರಿತಾಗಲಿˌ ಹದಗೆಟ್ಟ ಸಹಿಷ್ಣತೆ/ಸೌಹಾರ್ದತೆಗಳ ಬಗ್ಗೆಯಾಗಲಿ ಚಕಾರವೆತ್ತುವುದಿಲ್ಲ.
ಇದಿಷ್ಟೇ ಆಗಿದ್ದರೆ ನಾವ್ಯಾರೂ ಅಷ್ಟೊಂದು ಆತಂಕ ಪಡುವ ಅಗತ್ಯವಿರಲಿಲ್ಲವೇನೊ. ಆದರೆ ಬಹುತೇಕ ಮಾಧ್ಯಮಗಳು ಅಕ್ರಮ ದಂಧೆಗಿಳಿದಿರುವುದು ಸ್ಪಷ್ಟವಾಗಿದೆ. ಶ್ರೀಮಂತರನ್ನು ಹೆದರಿಸಿ ಹಣ ವಸೂಲಿ ಮಾಡುವುದುˌ ಹಣಕ್ಕಾಗಿ ದೇಶದ ಗೌಪ್ಯ ಮಾಹಿತಿಗಳನ್ನು ವಿದೇಶಗಳಿಗೆ ಮಾರಿಕೊಳ್ಳುವುದುˌ ರಾಜಕಾರಣಿಗಳನ್ನು ಹಾಗು ಶ್ರೀಮಂತ ವ್ರತ್ತಿಪರರನ್ನು ಹೆದರಿಸಿ ಹಣ ಕೇಳುವುದು ಇಂತ ಅನೇಕ ವರದಿಗಳು ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಈ ಕುರಿತು ಎಲ್ಲ ಮಾಧ್ಯಗಳು ಮೌನವಹಿಸಿದ್ದು ಅವುಗಳ ನೈಜ ಬಣ್ಣವನ್ನು ತೋರಿಸುತ್ತದೆ. ಇದರ ಜೊತೆಗೆ ಮಾಧ್ಯಮಗಳ ನಡುವಿನ ಅನೈತಿಕ ಸ್ಪರ್ಧೆವು ಅನೇಕ ಅವ್ಯವಹಾರಗಳಿಗೆ ನಾಂದಿ ಹಾಡಿದೆ. ಇತ್ತೀಚಿನ ದಿನಗಳಲ್ಲಿ ಬಹುವಾಗಿ ಕೇಳಿಬರುತ್ತಿರುವ ಮಾಧ್ಯಮಗಳು ಎಸಗುತ್ತಿವೆ ಎನ್ನಲಾಗುತ್ತಿರುವ ಒಂದು ಸಾರ್ವತ್ರಿಕ ಅಕ್ರಮ ದಂಧೆ ಎಂದರೆ ಟಿಆರ್ಪಿ ತಿರುಚುವಿಕೆ.
ಏನಿದು ಟಿಆರ್ಪಿ (TRP)?
ಟಿಆರ್ಪಿ ಅಂದರೆ ಟಾರ್ಗೇಟ್ ರೇಟಿಂಗ್ ಪಾಯಿಂಟ್ ಅಥವ ಗುರಿಯಿಟ್ಟ ದರ ನಿರ್ಧರಿಸುವ ಅಂಶ. ಇಂದೊಂದು ಖಾಸಗಿ ವಾಹಿನಿಗಳ ಜನಪ್ರೀಯತೆಯನ್ನು ಅಳೆಯುವ ಮಾನದಂಡ.
ಟಿಆರ್ಪಿಯನ್ನು ಯಾರು ನಿರ್ಧರಿಸುತ್ತಾರೆ ?
ಬ್ರೋಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಎನ್ನುವ ಸರಕಾರಿ ಸ್ವಾಮ್ಯದ ಸ್ವಾಯತ ಸಂಸ್ಥೆಯು ಖಾಸಗಿ ವಾಹಿನಿಗಳ ಟಿಆರ್ಪಿಯನ್ನು ನಿರ್ಧರಿಸುತ್ತದೆ. BARCಯು ತಾನು ನೇರವಾಗಿ ಟಿಆರ್ಪಿ ನಿರ್ಧರಿಸದೆ ಅದನ್ನು ಹನ್ಸಾ ರಿಸರ್ಚ್ ಎನ್ನುವ ಮತ್ತೊಂದು ಖಾಸಗಿ ಸಂಸ್ಥೆಗೆ ಈ ಜವಾಬ್ದಾರಿಯನ್ನು ವಹಿಸುತ್ತದೆ.
ಟಿಆರ್ಪಿ ಹೇಗೆ ನಿರ್ಧರಿಸುತ್ತಾರೆ ?
ಜನರು ತಮ್ಮ ಮನೆಗಳಲ್ಲಿ ಯಾವಯಾವ ಖಾಸಗಿ ವಾಹಿನಿಗಳನ್ನು ಎಷ್ಟು ಸಮಯದ ವರೆಗೆ ವಿಕ್ಷಿಸುತ್ತಾರೆ ಎನ್ನುವ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಇಡೀ ದೇಶದ ಎಲ್ಲ ಮನೆಗಳ ಅಂಕಿ ಅಂಶಗಳನ್ನು ಕ್ರೂಢಿಕರಿಸುವುದು ಸಾಧ್ಯವಿಲ್ಲವಾದ್ದರಿಂದ ಆಯ್ದ ೪೪ˌ೦೦೦ ಮನೆಗಳ ಸೆಟ್ಟಾಪ್ ಬಾಕ್ಸಿನಲ್ಲಿ ಒಂದು ಸಾಧನವನ್ನು (Bor-O-meter) ಗುಪ್ತವಾಗಿ ಅಳವಡಿಸಲಾಗುತ್ತದೆ. ಚುನಾವಣಾ ಸಮಯದಲ್ಲಿ ವಾಹಿನಿಗಳು ನಿರ್ಗಮಿತ ಫಲಿತಾಂಶವನ್ನು ಹೇಗೆ ಆಯ್ದ ಮತದಾರರ ಅಭಿಪ್ರಾಯದ ಆಧಾರದ ಮೇಲೆ ಪ್ರಕಟಿಸುತ್ತಾರೊ ಅದೇ ಮಾದರಿಯಲ್ಲಿ ದೇಶದ ವಿವಿಧ ಭಾಗಗಳ ಗ್ರಾಮೀಣ ಪ್ರದೇಶ ನಗರ ಪ್ರದೇಶ ಮತ್ತು ವಿಭಿನ್ನ ಸಾಮಾಜಿಕˌ ಆರ್ಥಿಕ ಹಿನ್ನೆಲೆಗಳುಳ್ಳ ಕುಟುಂಬದ ಮನೆಗಳನ್ನು ಆಯ್ದುಕೊಳ್ಳಲಾಗುತ್ತದೆ. ಆ ಮನೆಯ ಸದಸ್ಯರು ಎಷ್ಟು ಸಮಯದ ವರೆಗೆ ಯಾವ ಯಾವ ವಾಹಿನಿಗಳನ್ನು ನೋಡುತ್ತಾರೆ ಎನ್ನುವ ಮಾಹಿತಿಯ ಆಧಾರದ ಮೇಲೆ ವಾರದ ಕೊನೆಗೆ ಟಿಆರ್ಪಿಯನ್ನು ಘೋಷಿಸಲಾಗುತ್ತದೆ.
ಖಾಸಗಿ ವಾಹಿನಿಗಳು ಟಿಆರ್ಪಿಯನ್ನು ಹೇಗೆ ತಿರುಚುತ್ತವೆ ?
೧. ಟಿಆರ್ಪಿ ನಿರ್ಧರಿಸಲು ಬಿಎಆರ್ಸಿ ನೇಮಿಸಿರುವ ಹನ್ಸಾ ಎನ್ನುವ ಸಂಸ್ಥೆಯ ನವೃತ್ತ ನೌಕರಿಗೆ ಲಂಚದ ಆಮೀಷವನ್ನು ತೋರಿಸಿ ಸೆಟ್ಟಾಪ್ ಬಾಕ್ಸುಗಳಲ್ಲಿ ಸಾಧನ ಅಳವಡಿಸಲಾದ ಗ್ರಾಹಕರ ಮನೆಗಳನ್ನು ಖಾಸಗಿ ವಾಹಿನಿಗಳು ಪತ್ತೆ ಮಾಡುತ್ತವೆ. ಸ್ಥಳಿಯ ಕೇಬಲ್ ಆಪರೇಟರ್ಸ್ ಗಳನ್ನು ಬುಕ್ ಮಾಡಿಕೊಳ್ಳುವ ಮೂಲಕ ಆ ಮನೆಯ ಗ್ರಾಹಕರಿಗೆ ಪ್ರತಿ ದಿನ ಇಂತಿಷ್ಟು ಎಂದು ಹಣವನ್ನು ಪಾವತಿಸಿ ದಿನಾಲು ತಮ್ಮ ವಾಹಿನಿಯನ್ನು ಮಾತ್ರ ವಿಕ್ಷಿಸಲು ಮತ್ತು ಉಳಿದ ಸಮಯದಲ್ಲೂ ಕೂಡ ಟಿವಿ ಆನ್ ಮಾಡಿ ಇಡಲು ಮನವಿ ಮಾಡಲಾಗುತ್ತದೆ.
೨. ಕೇಬಲ್ ಆಪರೇಟರಗಳ ಸಹಾಯದಿಂದ ತಮಗೆ ಪ್ರತಿಸ್ಪರ್ಧಿಯಾಗಿರುವ ವಾಹಿನಿಯ ಪ್ರಸಾರವನ್ನು ಪ್ರೈಮ್ ಟೈಂನಲ್ಲಿ ಪ್ರಸಾರವಾಗದಂತೆ ತಡೆಯುವುದುˌ ಕೇಬಲ್ ನೆಟ್ ವರ್ಕ್ ಪಟ್ಟಿಯಿಂದ ಅಂತಹ ವಾಹಿನಿಗಳನ್ನು ಕಿತ್ತಿಹಾಕಿಸುವುದುˌ ಅಥವ ಆ ಪ್ರೈಮ್ ಸಮಯದಲ್ಲಿ ಪ್ರತಿಸ್ಪರ್ಧಿ ವಾಹಿನಿಯ ಆಡಿಯೊನಲ್ಲಿ ತೊಂದರೆಯಾಗುವಂತೆ ನೋಡಿಕೊಳ್ಳುವ ಮೂಲಕ ಜನ ಅದನ್ನು ನೋಡದಂತೆ ಮಾಡಲಾಗುತ್ತದೆ.
೩. ಗ್ರಾಹಕರು ಟಿವಿ ಆನ್ ಮಾಡಿದ ತಕ್ಷಣ ಮೊದಲು ತಮ್ಮದೇ ವಾಹಿನಿ ಬರುವಂತೆ ನೋಡಿಕೊಳ್ಳುವುದು. ಅಂದರೆ ಆ ಸೆಟ್ಟಾಪ್ ಬಾಕ್ಸ್ ನಲ್ಲಿ ತಮ್ಮ ವಾಹಿನಿ ಮೊದಲು ಬರುವಂತೆ ಕೇಬಲ್ ಆಪರೇಟರಗಳ ಮೂಲಕ ಡಿಫಾಲ್ಟ್ ಸೆಟ್ಟಿಂಗ್ ಮಾಡಿಸಲಾಗುತ್ತದೆ.
೪. ಮನರಂಜನೆ ವಿಭಾಗˌ ಹಿಂದಿ ಸುದ್ದಿ ವಾಹಿನಿ ವಿಭಾಗˌ ಇಂಗ್ಲೀಷ್ ಸುದ್ಧಿ ವಾಹಿನಿ ವಿಭಾಗ ಹೀಗೆ ಬೇರೆ ಬೇರೆ ಎಲ್ಲ ವಿಭಾಗಗಳಲ್ಲಿ ತಮ್ಮ ವಾಹಿನಿಯ ಸಂಖ್ಯೆಯನ್ನು ಅಳವಡಿಸಲು ಕೇಬಲ್ ಆಪರೇಟರಗಳನ್ನು ಬಳಸುವುದು. ಇದನ್ನು ಡ್ಯುಯಲ್ ಲಾಜಿಕಲ್ ನಂಬರ್ ಅನ್ನಲಾಗುತ್ತದೆ. ಹೀಗೆ ಎಲ್ಲ ಕೆಟೆಗರಿಗಳಲ್ಲಿ ಒಂದು ವಾಹಿನಿಯ ನಂಬರ್ ಪುನರಪಿ ಅಳವಡಿಸುವಂತೆ ಮಾಡಲಾಗುತ್ತದೆ. ಗ್ರಾಹಕರು ಮನೆಗಳಲ್ಲಿ ಟಿವಿ ನೋಡುವಾಗ ತಮ್ಮ ರಿಮೋಟ್ ಓಡಿಸಿದಾಗ ಅಡ್ಡಡ್ಡಲಾಗಿ ಪ್ರತಿ ಸಲ ಅದೇ ವಾಹಿನಿ ಓಪನ್ ಆಗುವಂತೆ ಮಾಡಲಾಗುತ್ತದೆ. ಹಾಗೆ ಮಾಡಿದಾಗ ಒಂದಷ್ಟು ವಾಚ್ ಟೈಂ ಆ ವಾಹಿನಿಯ ಖಾತೆಗೆ ಹೋಗುತ್ತದೆ.
ವಾಹಿನಿಗಳಿಗೆ ಟಿಆರ್ಪಿಯಿಂದ ಏನು ಲಾಭ ?
ಒಂದು ವಾಹಿನಿಯು ಹೆಚ್ಚು ಹೆಚ್ಚು ಜನ ನೋಡುತ್ತಾರೆಂದರೆ ಅದರ ಟಿಆರ್ಪಿ ನಂಬರ್ ಒನ್ ಇದೆ ಎಂದರ್ಥ. ಅಂದರೆ ವಾಹಿನಿಯೊಂದು ಬಹಳಷ್ಟು ಜನರು ವಿಕ್ಷಿಸುತ್ತಾರೆಂದರೆ ಅದು ಬಹಳ ಜನಪ್ರೀಯ ವಾಹಿನಿ ಎಂದು ನಿರ್ಧರಿಸಲಾಗುತ್ತದೆ. ಹೆಚ್ಚು ಜನ ವಿಕ್ಷಿಸುವ ವಾಹಿನಿಗಳು ಸಾಮಾನ್ಯವಾಗಿ ಖಾಸಗಿ ಕಂಪನಿಗಳ ಜಾಹಿರಾತನ್ನು ಆಕರ್ಶಿಸುತ್ತವೆ. ಜಾಹಿರಾತುಗಳು ಹೆಚ್ಚು ಜನರಿಗೆ ಮುಟ್ಟಿದರೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರವಾಗುತ್ತದೆ ಎನ್ನುವ ಉದ್ದೇಶದಿಂದ ಉತ್ಪಾದಕರು ತಮ್ಮ ಉತ್ಪನ್ನಗಳ ಕುರಿತು ಜಾಹಿರಾತುಗಳನ್ನು ವಾಹಿನಿಗಳಿಗೆ ನೀಡುತ್ತಾರೆ. ಅದರಿಂದ ಅಪಾರ ಪ್ರಮಾಣದ ಹಣ ವಾಹಿನಿಗಳಿಗೆ ಹರಿದು ಬರುತ್ತದೆ.
ರಿಪಬ್ಲಿಕ್ ವಾಹಿನಿˌ ಅರಣಬ್ ಗೋಸ್ವಾಮಿ ಮತ್ತು ಟಿಆರ್ಪಿ ತಿರುಚುವಿಕೆ
ಕಳೆದ ಮೂರು ವರ್ಷಗಳ ಹಿಂದೆ ಮುಂಬೈ ಪೋಲಿಸ್ ಆಯುಕ್ತರು ರಿಪಬ್ಲಿಕ್ ವಾಹಿನಿಯ ಮೇಲೆ ಗುಮಾನಿ ವ್ಯಕ್ತಪಡಿಸಿˌ ಟಿಆರ್ಪಿ ತಿರುಚುವಿಕೆ ಪ್ರಕರಣ ದಾಖಲಿಸಿ ಮತ್ತಷ್ಟು ತನಿಖೆ ಮಾಡುವುದಾಗಿ ಘೋಷಿಸಿದ್ದರು. ರಿಪಬ್ಲಿಕ್ ವಾಹಿನಿಯ ಟಿಆರ್ಪಿ ತಿರುಚುವಿಕೆ ಅದೇ ಮೊದಲೇನಲ್ಲ. ಈ ಮೊದಲು ೨೦೧೭ ರಲ್ಲೂ ಕೂಡ ಇಂತದ್ದೇ ವಂಚನೆ ಪ್ರಕರಣ ಈ ವಾಹಿನಿಯ ಮೇಲೆ ದಾಖಲಾಗಿತ್ತು. ಮುಖ್ಯವಾಗಿ ಈ ವಾಹಿನಿಯ ಮುಖ್ಯಸ್ಥ ಅರಣಬ್ ಗೋಸ್ವಾಮಿ ಬಿಜೆಪಿ ಪಕ್ಷ ನಿಷ್ಟೆಯ ಕೌಟುಂಬಿಕ ಹಿನ್ನೆಲೆಯುಳ್ಳವನು. ಈತ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಲ್ಲಿ ಹುಟ್ಟು ಹಾಕಿರುವ ಅನೈತಿಕ ಪರಂಪರೆˌ ಕೂಗುಮಾರಿ ನಡವಳಿಕೆ ಮಾಧ್ಯಮ ಕ್ಷೇತ್ರದಲ್ಲಿ ಈತ ಒಂದು ಕಪ್ಪುಚುಕ್ಕೆ ಎನ್ನುವಂತೆ ಆಗಿದೆ. ಈತನ ಅಸಭ್ಯ ಅರಚಾಟˌ ಪಕ್ಷಪಾತದ ಸುದ್ಧಿ ಪ್ರಸಾರˌ ದ್ವೇಷ ಹರಡುವ ಕಾರ್ಯಕ್ರಮಗಳು ಇಡೀ ಭಾರತೀಯ ಮಾಧ್ಯಮ ರಂಗವನ್ನು ಇನ್ನಿಲ್ಲದಂತೆ ಕುಲಗೆಡಿಸಿದೆ.
ಈತನನ್ನು ನಕಲು ಮಾಡಲು ಪ್ರಯತ್ನಿಸುವ ಅದೆಷ್ಟೊ ಪ್ರಾದೇಶಿಕ ವಾಹಿನಿಗಳ ಸುದ್ಧಿವಾಚಕರು ಆತ ತುಳಿದ ಅನೈತಿಕ ಮತ್ತು ಆತ್ಮಹತ್ಯಾಕರ ಹಾದಿಯನ್ನೇ ತುಳಿದಿವೆ. ಕನ್ನಡದಲ್ಲೂ ಕೂಡ ಒಂದಿಬ್ಬರು ಸುದ್ದಿವಾಚಕರು ಈತನನ್ನು ನಕಲು ಮಾಡುತ್ತ ತಮ್ಮನ್ನು ತಾವು ರಾಷ್ಟ್ರೀಯವಾದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತ ಮತಿಗೇಡಿˌ ಕೋಮುವಾದಿˌ ಪಕ್ಷಪಾತಿ ಪತ್ರಕರ್ತರ ವೇಷದ ವಿದ್ವಂಸಕರನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್ಫುಕ್ˌ ವಾಟ್ಸಪ್ ಮತ್ತು ಟ್ವೀಟರಗಳಲ್ಲಿ ಏಜೆಂಟ್ ಎಂದು ಟ್ರೋಲ್ ಮಾಡುವುದು ಇತ್ತೀಚಿಗೆ ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಬಹುಶಃ ಈ ದಶಕದಲ್ಲಿ ರಾಜಕಾರಣಿಗಳಿಂತ ಅತ್ಯಂತ ಹೆಚ್ಚು ಸಾರ್ವಜನಿಕ ಟ್ರೋಲ್ಗೆ ಒಳಗಾಗಿದ್ದು ಮಾಧ್ಯಮಗಳು ಮತ್ತು ಅಲ್ಲಿನ ಕೋಮುವಾದಿ ವಿಕ್ರತಿಗಳು.

ರಿಪಬ್ಲಿಕ್ ಮತ್ತು ಎನ್ಡಿಟಿವಿಗಳ ಅಂಕಿ ಅಂಶಗಳು
ಖಾಸಗಿ ವಾಹಿನಿಗಳ ಜನಪ್ರೀಯತೆ ಅಳೆಯುವ ಬಿಎಆರ್ಸಿಯ ಈಗಿನ ಮಾನದಂಡದಲ್ಲಿನ ನ್ಯೂನ್ಯತೆ ಬಳಸಿಕೊಂಡು ಟಿಆರ್ಪಿಯನ್ನು ಘಾತಕಕಾರಿ ಮಾಧ್ಯಮಗಳಿಂದ ತಿರುಚಲಾಗುತ್ತಿದೆ. ಆದರೆ ಒಂದು ವಾಹಿನಿಯ ಜನಪ್ರೀಯತೆ ಅಳೆಯಲು ಅನೇಕ ಮಾನದಂಡಗಳಿವೆ. ನಾನು ಇಲ್ಲಿ ಎರಡು ವಾಹಿನಿಗಳನ್ನು ಉದಾಹರಣೆಗೆ ತೆಗೆದುಕೊಂಡು ಪರಿಗಣಿಸಬಹುದಾದ ಪರ್ಯಾಯ ಮಾರ್ಗದ ಕುರಿತು ಒಂದಷ್ಟು ಮಾಹಿತಿಗಳನ್ನು ನಿಮಗೆ ನೀಡುತ್ತಿದ್ದೇನೆ. ಖಾಸಗಿ ವಾಹಿನಿಗಳ ಜನಪ್ರೀಯತೆ ಈ ಕೆಳಗಿನ ಮಾನದಂಡ ಬಳಸಿಯೂ ನಿರ್ಧರಿಸಬಹುದಲ್ಲ ಎನ್ನುವ ಚಿಂತನೆಯಷ್ಟೆ:
೧. ಸುದ್ದಿ ವಾಹಿನಿಗಳ ಯು ಟ್ಯೂಬ್ ಖಾತೆಯ ಸಬ್ಸ್ಕ್ರೈಬರ್ ಗಳ ಸಂಖ್ಯೆ.
೨. ಸುದ್ದಿ ವಾಹಿನಿಗಳ ವೆಬ್ ಸೈಟ್ ಗೆ ಭೇಟಿ ಕೊಡುವ ವಿಜಿಟರ್ಸ್ ಗಳ ಸಂಖ್ಯೆ.
೩. ಸುದ್ದಿ ವಾಹಿನಿಗಳ ಆ್ಯಪ್ ಡೌನ್ಲೋಡ್ ಮಾಡಿರುವವರ ಸಂಖ್ಯೆ.
ಈ ಅಂಕಿ ಅಂಶಗಳು ಸಂಪೂರ್ಣ ಪಾರದರ್ಶಕ ಎಂದೇನು ಹೇಳಲಾಗದು. ಆದರೂ ಕೂಡ ಇಲ್ಲಿ ಒಳನುಸುಳುವಿಕೆ ಮತ್ತು ತಿರುಚುವಿಕೆಗಳಿಗೆ ಇತಿಮಿತಿಗಳು ಇರುವುದಿರಿಂದ ಇವುಗಳನ್ನು ಮಾನದಂಡವಾಗಿ ಬಳಸಿ ಟಿಆರ್ಪಿಯನ್ನು ನಿರ್ಧರಿಸಬಹುದಾಗಿದೆ. ರಿಪಬ್ಲಿಕ್ ಮತ್ತು NDTV ಗಳ ಈ ಅಂಕಿ ಅಂಶಗಳು ನೋಡಿದಾಗ ಬಹಳ ಆಶ್ಚರ್ಯ ಆಗುವುದಂತೂ ನಿಜ.
NDTV :
ಯು ಟ್ಯೂಬ್ ಸಬ್ಸ್ಕ್ರೈಬರ್ ಸಂಖ್ಯೆ: ೯೦ ಲಕ್ಷ ಪ್ಲಸ್.
ರಿಪಬ್ಲಿಕ್:
ಯು ಟ್ಯೂಬ್ ಸಬ್ಸ್ಕ್ರೈಬರ್ ಸಂಖ್ಯೆ: ೩೮ ಲಕ್ಷ ಪ್ಲಸ್.
NDTV:
ವೆಬ್ಸೈಟ್ ವಿಜಿಟರ್ಸ್ ಸಂಖ್ಯೆ: ೮೦ ಮಿಲಿಯನ್ ಪ್ಲಸ್.
ರಿಪಬ್ಲಿಕ್:
ವೆಬ್ಸೈಟ್ ವಿಜಿಟರ್ಸ್ ಸಂಖ್ಯೆ: ೧೫ ಮಿಲಿಯನ್ ಪ್ಲಸ್.
NDTV :
ಆ್ಯಪ್ ಡೌನ್ಲೋಡ್ ಮಾಡಿರುವವರ ಸಂಖ್ಯೆ: ೫೦ ಲಕ್ಷ ಪ್ಲಸ್.
ರಿಪಬ್ಲಿಕ್:
ಆ್ಯಪ್ ಡೌನ್ಲೋಡ್ ಮಾಡಿರುವವರ ಸಂಖ್ಯೆ: ೧೦ ಲಕ್ಷ ಪ್ಲಸ್.
ಬಿಎಆರ್ಸಿ ಈ ಎರಡೂ ವಾಹಿನಿಗಳಿಗೆ ಘೋಷಿಸಿದ ಟಿಆರ್ಪಿ:
NDTV: ೧. ೩೦ %
ರಿಪಬ್ಲಿಕ್ : ೭೭.೧೮%
(ಈ ಅಂಕಿ ಅಂಶಗಳು ಇಂದಿಗೆ ಮೂರು ವರ್ಷ ಹಳೆಯವಾಗಿದ್ದು ಆಗ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿತ್ತು).
ಈ ಮೇಲಿನ ಮೂರು ಮಾನದಂಡಗಳನ್ನು ಅವಲೋಕಿಸಿದಾಗ ಎನ್ಡಿಟಿವಿ ರಿಪಬ್ಲಿಕ್ ಟಿವಿಗಿಂತ ಎಲ್ಲ ರೀತಿಯಿಂದಲೂ ಜನಪ್ರೀಯವಾಗಿರುವುದು ಗೋಚರಿಸುತ್ತದೆ. ಆದರೆ ಬಿಎಆರ್ಸಿಯ ಮಾನದಂಡವನ್ನು ವ್ಯವಸ್ಥಿತವಾಗಿ ತಿರುಚುವ ಮೂಲಕ ರಿಪಬ್ಲಿಕ್ ವಾಹಿನಿ ಖೋಟಾ ಟಿಆರ್ಪಿಯನ್ನು ತನ್ನದಾಗಿಸಿಕೊಳ್ಳುತ್ತಿದೆ ಎನ್ನುವ ಗುಮಾನಿಗಳ ಆಧಾರದ ಮೇಲೆ ಅದರ ವಿರುದ್ಧ ಮುಂಬೈ ಪೋಲಿಸ್ ಪ್ರಕರಣ ದಾಖಲಿಸಿಕೊಂಡಿತ್ತು. ಇಷ್ಟಿದ್ದಾಗ್ಯೂ ಕೂಡ ಅರಣಬ್ ಗೋಸ್ವಾಮಿ ಮುಂಬೈ ಪೋಲಿಸರ ಈ ಕ್ರಮ ಇದೊಂದು ದುರುದ್ದೇಶಪೂರಿತ ಎಂದು ಆರೋಪಿಸಿದ್ದ. ಈ ಪ್ರಕರಣ ದಾಖಲಾದಾಗಿಂದ ಬಿಎಆರ್ಸಿ ವಾರದ ಕೊನೆಗೆ ಟಿಆರ್ಪಿ ಘೋಷಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.
ಖಾಸಗಿ ವಾಹಿನಿಗಳನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ ಮತ್ತು ಅದರ ಮೂಲಕ ತಮ್ಮ ಉತ್ಪನ್ನಗಳ ಜಾಹಿರಾತು ಜನರಿಗೆ ಮುಟ್ಟುತ್ತವೆ ಎಂದು ಭ್ರಮಿಸಿ ಜಾಹಿರಾತಿಗೆ ಅಪಾರ ಪ್ರಮಾಣದ ಹಣ ವ್ಯಯಿಸುವ ಉತ್ಪಾದಕರು ಈ ಖೊಟ್ಟಿ ಟಿಆರ್ಪಿ ಪ್ರಕರಣದಿಂದ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಯಾರೂ ನೋಡದ ವಾಹಿನಿಗಳಿಗೆ ಹಣ ತೆತ್ತು ಜಾಹಿರಾತು ನೀಡಿ ಮಂಗ ಆಗುವುದು ನಿಶ್ಟಿತ. ಈ ತಿರುಚುವಿಕೆಯಿಂದ ಅತ್ಯಂತ ಹೆಚ್ಚು ಮೋಸವಾಗುವುದು ವಾಹಿನಿಗಳಿಗೆ ಜಾಹಿರಾತು ನೀಡುವ ಖಾಸಗಿ ಕಂಪನಿಗಳು. ಈಗ ವಾಹಿನಿಗಳಿಗೆ ಜಾಹಿರಾತು ನೀಡುವ ಖಾಸಗಿ ಉತ್ಪಾದಕರು ಮೊದಲು ಜಾಗೃತರಾಗಬೇಕಾದ ಅಗತ್ಯವಿದೆ.
~ ಡಾ. ಜೆ ಎಸ್ ಪಾಟೀಲ