ವಿಶ್ವಕಪ್ ಸರಣಿಯ ಫೈನಲ್‌ನಲ್ಲಿ ಭಾರತವನ್ನು ಅನಾಯಾಸವಾಗಿ ಮಣಿಸಿರುವ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ವಿಶ್ವಕಪ್ ಅನ್ನು ಎತ್ತಿದೆ. ಆದರೆ, ಪಂದ್ಯದ ವಿಜಯದ ಬಳಿಕ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಚಿತ್ರ ವೈರಲ್ ಆಗಿದ್ದು, ಭಾರತೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತೀಯ ನಂಬಿಕೆಗಳಲ್ಲಿ ನಿರ್ಜೀವ ವಸ್ತುಗಳಿಗೂ ಗೌರವ ಕೊಡುವ ಸಂಪ್ರದಾಯವಿದ್ದು, ಕಾಲಿನಿಂದ ಒದೆಯುವುದು ಮತ್ತು ಮೆಟ್ಟಿ ನಿಲ್ಲುವುದನ್ನೆಲ್ಲಾ ಅಗೌರವ ಎಂದೇ ಪರಿಗಣಿಸಲಾಗುತ್ತದೆ. ಅದೇ ದೃಷ್ಟಿ ಕೋನದ ಆಧಾರದ ಮೇಲೆ ಮಿಚೆಲ್ ಮಾರ್ಷ್ ನಡೆಗೆ ತೀವ್ರ ವಿಮರ್ಷೆಗಳು ಬರುತ್ತಿವೆ. ಕೆಲವರು ಮಿಚೆಲ್ ನಡೆ ಅಹಂಕಾರದ್ದು ಎಂದು ಪ್ರತಿಪಾದಿಸಿದ್ದರೆ, ಇನ್ನು ಕೆಲವರು ಟ್ರೋಫಿಗೆ ನೀಡಿದ ಅಗೌರವ ಎಂದು ಹೇಳಿದ್ದಾರೆ.
ಟ್ರೋಫಿಗಳಿಗೆ ಪೂಜೆ ಮಾಡುವ ಸಂಪ್ರದಾಯವೂ ನಮ್ಮಲ್ಲಿದೆ, ಆದರೆ, ಗೆದ್ದ ತಂಡದವರು ಅದರ ಮೇಲೆ ಕಾಲಿಟ್ಟು ಅಗೌರವ ತೋರಿಸಿದ್ದು ಸರಿಯಲ್ಲ ಎನ್ನುವುದು ಹಲವರ ಅಂಬೋಣ.
ಇದನ್ನ "ತಿ. ಧಿಮಾಕು" ಅನ್ನಬೇಕೋ,
— avahgar (@_avahgar_) November 20, 2023
ಗೆಲುವಿನ ಗರ್ವ ಅನ್ನಬೇಕೋ? pic.twitter.com/5dOr0HXaAP
ಆದರೆ, ಇನ್ನು ಕೆಲವರು ಆಸಿಸ್ ಆಟಗಾರರದ್ದು ಅಗೌರವದ ನಡೆಯಲ್ಲ ಎಂದು ಹೇಳಿದ್ದಾರೆ. ಭಾರತೀಯರಿಗೆ ಮಾತ್ರ ಕಾಲು ಕನಿಷ್ಠ, ತಲೆ ಶ್ರೇಷ್ಠ, ಕಣ್ಣು-ಎದೆಗೆ ಒತ್ತಿಕೊಂಡರೆ ಪಾವನ ಎಂಬ ಮೂಢ ನಂಬಿಕೆಗಳಿವೆ. ಬೇರೆ ದೇಶದವರಿಗೂ ಇಂತಹದ್ದೇ ಭಾವನೆ ಇರಬೇಕಾಗಿಲ್ಲ. ನಮ್ಮ ನಂಬಿಕೆಗಳನ್ನು ಅವರ ಮೇಳೆ ಹೇರಬಾರದು ಎಂದು ಹೇಳಿದ್ದಾರೆ.
ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಅವರು ಈ ಬಗ್ಗೆ ಬರೆದಿದ್ದು, “ಬೆಳಿಗ್ಗೆಯಿಂದ ಈ ಫೋಟೋ ನೋಡಿ ನೋಡಿ ತಲೆ ಸುತ್ತು ಬಂತು…”ಆಸ್ಟ್ರೇಲಿಯಾ ಆಟಗಾರನ ಅಹಂಕಾರ” – ಹಾಗೆ ಹೀಗೆ ಎಂದೆಲ್ಲ ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿರುವ ಜನರನ್ನು ನೋಡಿ ನಗುವೂ ಬಂತು…ಇದು ಎಡಿಟೆಡ್ ಫೋಟೋವೋ, ಅಸಲಿ ಫೋಟೋವೋ ಎಂಬುದು ಬೇರೆಯೇ ಪ್ರಶ್ನೆ. ಆದರೆ ಆಸ್ಟ್ರೇಲಿಯಾ ಆಟಗಾರನೊಬ್ಬ ಟ್ರೋಫಿಯ ಮೇಲೆ ಕಾಲಿಟ್ಟರೆ ಇಲ್ಲಿನ ಜನರು ಉರ್ಕೊಳ್ಳುತ್ತಿರುವುದು ಏಕೆ? ಭಾರತದಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯು ತಲೆ, ಭುಜ, ಹೊಟ್ಟೆ, ಕಾಲು- ಇವುಗಳನ್ನು ಜನನಾಂಗಗಳನ್ನಾಗಿ ಮಾಡಿತು. ತಲೆ ಶ್ರೇಷ್ಠ, ಕಾಲು ಕನಿಷ್ಠ ಎಂಬ ಅಜ್ಞಾನವನ್ನು ತುಂಬಲಾಯಿತು. ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ ಎಂದು ತಾರತಮ್ಯ ಬೆಳೆಸಲಾಯಿತು. ಹೀಗಾಗಿ ಕಾಲು ತಾಕಿದರೆ ಅಸ್ಪೃಶ್ಯತೆಯನ್ನು ಆಚರಿಸುವ ಸಮಾಜವಿದು. ಕಾಲು ಮೇಲೆ ಕಾಲು ಹಾಕಿದರೆ ಅಹಂಕಾರದ ಸಂಕೇತವಾಗಿ ಇಲ್ಲಿ ಕಾಣುತ್ತದೆ. ಆದರೆ ಕಾಲು ದೇಹದ ಒಂದು ಭಾಗ ಅಷ್ಟೇ. ಅದನ್ನು ಟ್ರೋಫಿಯ ಮೇಲೆ ಇಟ್ಟು ಸಂಭ್ರಮಿಸಿದರೆ ಆಸ್ಟ್ರೇಲಿಯನ್ನರನ್ನು ಬೈಯುವುದರಲ್ಲಿ ಅರ್ಥವಿಲ್ಲ. ನಿಮ್ಮ ಅಜ್ಞಾನವನ್ನು ಇನ್ನೊಂದು ಪರಿಸರದ ಜನರ ಮೇಲೆ ಹೇರುವುದು ತಪ್ಪಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕಾಲು ಕನಿಷ್ಠ ತಲೆ ಮಾತ್ರ ಶ್ರೇಷ್ಠ ಎಂಬ ಧಾರ್ಮಿಕ ವ್ಯಸನಿಗಳು ನಾವು. ‘ದೇಹವೇ ದೇಗುಲ’ ಎಂದು ಬಸವಣ್ಣ ಹೇಳಿರುವಾಗ ನಮ್ಮ ದೇಹದ ಯಾವ ಅಂಗವೂ ಕನಿಷ್ಠವಲ್ಲ ಎಂದು ಹಿರಿಯ ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಮಿಚೆಲ್ ಟ್ರೋಫಿ ಮೇಲೆ ಕಾಲಿಟ್ಟಿರುವ ಚಿತ್ರಗಳು ಭಾರತದಲ್ಲಿ ಹೊಸ ಚರ್ಚೆಯನ್ನು ಸೃಷ್ಟಿಸಿದ್ದು, ಕಾಲು ಕನಿಷ್ಠ, ತಲೆ ಶ್ರೇಷ್ಠ ಎಂಬ ನಂಬಿಕೆಯನ್ನು ಮರುಪರಿಶೀಲಿಸುವ, ವಿಮರ್ಷೆಗಳು ನಡೆಯಲಾರಂಭಿಸಿವೆ.
