ನವದೆಹಲಿ : ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಪ್ರೀಪೇಯ್ಡ್ ಮೊಬೈಲ್ (Mobile) ಬಳಕೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹೊಸ ರೀಚಾರ್ಜ್ ನಿಯಮಗಳನ್ನು ಜಾರಿಗೆ ತಂದಿದೆ. ಗ್ರಾಹಕರ ಬಳಕೆ ಮತ್ತು ಬಜೆಟ್‌ಗೆ ಅನುಗುಣವಾಗಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ನೀಡುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

30 ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳು ಕಡ್ಡಾಯ
ಪ್ರಸ್ತುತ ಬಹುತೇಕ ಟೆಲಿಕಾಂ ಕಂಪನಿಗಳು ತಿಂಗಳ ಪ್ಲಾನ್‌ಗೆ 28 ದಿನಗಳ ವ್ಯಾಲಿಡಿಟಿ ನೀಡುತ್ತಿದ್ದು, ಇದರಿಂದಾಗಿ ಗ್ರಾಹಕರು ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇತ್ತು. ಹೊಸ ನಿಯಮದ ಪ್ರಕಾರ ಕಂಪನಿಗಳು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಗ್ರಾಹಕರು ಕ್ಯಾಲೆಂಡರ್ ತಿಂಗಳ ಲೆಕ್ಕಾಚಾರಕ್ಕೆ ತಕ್ಕಂತೆ ವರ್ಷಕ್ಕೆ ಸರಿಯಾಗಿ 12 ಬಾರಿ ಮಾತ್ರ ರೀಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಕೇವಲ ಕರೆ ಮತ್ತು SMS ಬಯಸುವವರಿಗೆ ವಿಶೇಷ ಆಫರ್
ಇಂಟರ್ನೆಟ್ ಅಥವಾ ಡೇಟಾ ಬಳಸದೆ ಕೇವಲ ಕರೆ ಮತ್ತು ಸಂದೇಶಗಳಿಗಾಗಿ ಫೋನ್ ಉಪಯೋಗಿಸುವ ಗ್ರಾಹಕರಿಗೆ ಈ ನಿಯಮ ಭಾರಿ ಅನುಕೂಲವಾಗಲಿದೆ. ಡೇಟಾ ರಹಿತ ಕೇವಲ ವಾಯ್ಸ್ ಮತ್ತು SMS ಸೌಲಭ್ಯವಿರುವ ಸ್ಪೆಷಲ್ ಟ್ಯಾರಿಫ್ ವೋಚರ್‌ಗಳನ್ನು (STV) ಒದಗಿಸುವುದನ್ನು ಟೆಲಿಕಾಂ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯ ಕಾಂಬೋ ಪ್ಲಾನ್‌ಗಳಿಗೆ ಲಭ್ಯವಿರುವ ವ್ಯಾಲಿಡಿಟಿ ಅವಧಿಯಲ್ಲೇ ಇಂತಹ ಪ್ರತ್ಯೇಕ ಪ್ಲಾನ್‌ಗಳೂ ಸಿಗಲಿವೆ.

ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ
ಟೆಲಿಕಾಂ ಗ್ರಾಹಕರ ಸಂರಕ್ಷಣಾ ನಿಯಮಗಳಿಗೆ ತರಲಾಗಿರುವ ಈ ತಿದ್ದುಪಡಿಯನ್ನು ಸಂಸದ ರಾಘವ್ ಚಡ್ಡಾ ಸ್ವಾಗತಿಸಿದ್ದಾರೆ. ಈ ಹಿಂದೆ ಸಂಸತ್ತಿನಲ್ಲಿ ಈ ಕುರಿತು ತಾವು ಧ್ವನಿ ಎತ್ತಿದ್ದನ್ನು ಸ್ಮರಿಸಿರುವ ಅವರು, ನಿಯಂತ್ರಣ ಪ್ರಾಧಿಕಾರದ ಈ ಕ್ರಮದಿಂದ ಸಾಮಾನ್ಯ ಜನರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್ ಯೋಜನೆಗಳನ್ನು ಆರಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ `ಗವಿಸಿದ್ದೇಶ್ವರ ಶ್ರೀಗಳಿಗೆ’ ಅಧಿಕೃತ ಆಹ್ವಾನ | Mysuru Dasara
ರೇಣುಕಾಸ್ವಾಮಿ ಕೊಲೆ ಕೇಸ್ : ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಮಾಫಿ ಸಾಕ್ಷಿ ಪ್ರದೂಷ್ ವಿಚಾರಣೆ ಆರಂಭ | Pradoosh






