ನವದೆಹಲಿ : ರಿಯಾಯಿತಿ ಎಲ್ ಪಿಜಿ ಸಿಲಿಂಡರ್ ದರದ (LPG) ಅಡುಗೆ ಅನಿಲ ಪಡೆಯುವ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (BAA) ಕಡ್ಡಾಯಗೊಳಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30 ರ ನಾಳೆಯೇ ಕೊನೆಯ ದಿನವಾಗಿದೆ.

ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಮುಗಿಸದ ಗ್ರಾಹಕರು ಸಿಲಿಂಡರ್‌ಗೆ ಪೂರ್ಣ ಮಾರುಕಟ್ಟೆ ಬೆಲೆ ಪಾವತಿಸಬೇಕಾಗುತ್ತದೆ.
ಸಿಲಿಂಡರ್ ಪೂರೈಕೆ ಸ್ಥಗಿತವಿಲ್ಲ, ಮಾರುಕಟ್ಟೆ ದರ ಅನ್ವಯ
ಗಡುವನ್ನು ಮೀರಿದ ತಕ್ಷಣವೇ ಗ್ಯಾಸ್ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಿಲ್ಲ. ಬದಲಾಗಿ, ಸಬ್ಸಿಡಿ ದರದಲ್ಲಿ ಸಿಲಿಂಡರ್ ಪಡೆಯುವ ಅರ್ಹತೆ ರದ್ದಾಗಲಿದ್ದು, ಸಾಮಾನ್ಯ ಮಾರುಕಟ್ಟೆ ದರದಲ್ಲಿಯೇ ಸಿಲಿಂಡರ್ ಖರೀದಿಸಬೇಕಾಗುತ್ತದೆ. ಸೀಮಿತ ಮಾಸಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಈ ಹೆಚ್ಚುವರಿ ದರವು ವರ್ಷಪೂರ್ತಿ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಹೀಗಾಗಿ, ಮುಂದಿನ ರೀಫಿಲ್ ಬುಕ್ ಮಾಡುವ ಮುನ್ನವೇ ಗ್ರಾಹಕರು ತಮ್ಮ ದೃಢೀಕರಣದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

ಬಯೋಮೆಟ್ರಿಕ್ ಪರಿಶೀಲನೆ ಏಕೆ ಮತ್ತು ಹೇಗೆ?
ಸರ್ಕಾರ ನೀಡುವ ಸಬ್ಸಿಡಿ ಸೌಲಭ್ಯವು ಅರ್ಹ ಹಾಗೂ ನೈಜ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಬಯೋಮೆಟ್ರಿಕ್ ಪರಿಶೀಲನೆಗಾಗಿ ಗ್ರಾಹಕರ ಬೆರಳಚ್ಚು ಅಥವಾ ಇತರ ಶಾರೀರಿಕ ಗುರುತುಗಳನ್ನು ಆಧಾರ್ ದಾಖಲೆಗಳೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಸಮೀಪದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಅಥವಾ ವಿತರಕರ ಅನುಮೋದಿತ ಸಾಧನಗಳ ನೆರವಿನಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ವಿತರಕರೊಂದಿಗೆ ಸಂಪರ್ಕದಲ್ಲಿರಲು ಸೂಚನೆ
ಈಗಾಗಲೇ ದೃಢೀಕರಣ ಪ್ರಕ್ರಿಯೆ ಮುಗಿದಿದೆಯೇ ಅಥವಾ ಬಾಕಿ ಇದೆಯೇ ಎಂಬ ಬಗ್ಗೆ ಗೊಂದಲವಿದ್ದಲ್ಲಿ, ಗ್ರಾಹಕರು ತಕ್ಷಣವೇ ತಮ್ಮ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು. ಗಡುವಿನ ಕೊನೆಯ ದಿನಗಳಲ್ಲಿ ಗಡುವು ವಿಸ್ತರಣೆ ಅಥವಾ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಕುರಿತು ತೈಲ ಮಾರಾಟ ಕಂಪನಿಗಳು ಹೊರಡಿಸುವ ಅಧಿಕೃತ ಸೂಚನೆಗಳನ್ನು ಗಮನಿಸುವುದು ಸೂಕ್ತವಾಗಿದೆ.
ಅಕ್ಟೋಬರ್ 1ರಿಂದ 10 ಪ್ರಮುಖ ಬದಲಾವಣೆಗಳು: ನಿಮ್ಮ ಜೇಬಿನ ಮೇಲೂ ಪರಿಣಾಮ | Rules Change






