ನವದೆಹಲಿ : ದೇಶದಲ್ಲಿ ಬಾಕಿ ಉಳಿದಿರುವ ಸಂಚಾರ ನಿಯಮ (Traffic Challan) ಉಲ್ಲಂಘನೆಯ ದಂಡವನ್ನು ವಸೂಲಿ ಮಾಡಲು ಕೇವಲ ಇ-ಚಲನ್ ನೀಡಿದರೆ ಸಾಲದು, ಅಧಿಕಾರಿಗಳು ಕಠಿಣ ಹಾಗೂ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.

ವಿಚಾರಣೆಯ ಸಂದರ್ಭದಲ್ಲಿ ಜಸ್ಟಿಸ್ ಜೆ.ಬಿ. ಪರ್ದಿವಾಲಾ ಅವರು, ಜನರು ಟ್ರಾಫಿಕ್ ದಂಡವನ್ನು ಕಟ್ಟದಿದ್ದರೆ ಅದನ್ನು ಇತರ ಸರ್ಕಾರಿ ಸೇವಾ ಶುಲ್ಕಗಳೊಂದಿಗೆ, ಮುಖ್ಯವಾಗಿ ವಿದ್ಯುತ್ ಬಿಲ್ ಜೊತೆ ಸೇರಿಸಿ ವಸೂಲಿ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭೀತಿ ಇರುವುದರಿಂದ ಜನ ಅನಿವಾರ್ಯವಾಗಿ ದಂಡ ಪಾವತಿಸುತ್ತಾರೆ, ಇಂತಹ ವ್ಯವಸ್ಥೆಯನ್ನು ರೂಪಿಸುವ ಮಾರ್ಗ ಕಂಡುಕೊಳ್ಳಿ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.
20,000 ಕೋಟಿ ರೂಪಾಯಿ ದಂಡ ಇನ್ನೂ ವಸೂಲಿಯಾಗಿಲ್ಲ
ವಿಚಾರಣೆ ವೇಳೆ ಕೋರ್ಟ್‌ಗೆ ನೀಡಲಾದ ಮಾಹಿತಿಯ ಪ್ರಕಾರ, ದೇಶಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45,000 ಕೋಟಿ ರೂಪಾಯಿ ಮೌಲ್ಯದ ಇ-ಚಲನ್ ದಂಡ ಬಾಕಿ ಉಳಿದಿತ್ತು. ಈ ಪೈಕಿ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಾಗಿದ್ದು, ಇನ್ನೂ ಸುಮಾರು 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತ ಬಾಕಿ ಉಳಿದಿದೆ. ಕೇವಲ ಸಾವಿರಾರು ಅಥವಾ ಲಕ್ಷಾಂತರ ಇ-ಚಲನ್‌ಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ, ದಂಡದ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುವುದೇ ಅಸಲಿ ಸವಾಲು ಎಂದು ಪೀಠವು ಕಳವಳ ವ್ಯಕ್ತಪಡಿಸಿದೆ.

ವಾಹನ ಸೇವೆಗಳ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್ ಪ್ರಸ್ತಾಪ
ದಂಡ ಕಟ್ಟದ ವಾಹನ ಮಾಲೀಕರಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಹಲವು ಪ್ರಮುಖ ಕ್ರಮಗಳನ್ನು ಪ್ರಸ್ತಾಪಿಸಿದೆ. ಬಾಕಿ ಚಲನ್ ಹೊಂದಿರುವ ವಾಹನಗಳ ನೋಂದಣಿ ಪ್ರಮಾಣಪತ್ರದ (RC) ನವೀಕರಣ ತಡೆಹಿಡಿಯುವುದು, ನಕಲಿ ಆರ್‌ಸಿ ನೀಡುವುದನ್ನು ನಿಲ್ಲಿಸುವುದು ಮತ್ತು ವಾಹನ ಮಾಲೀಕತ್ವ ವರ್ಗಾವಣೆಯನ್ನು ನಿರ್ಬಂಧಿಸುವುದನ್ನು ಪರಿಶೀಲಿಸಬಹುದು ಎಂದು ಹೇಳಿದೆ. ಅಲ್ಲದೆ, ದಂಡ ಪಾವತಿಸುವವರೆಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡಬಾರದು, ‘ಪರಿವಾಹನ್’ ಪೋರ್ಟಲ್‌ನಲ್ಲಿ ಅಂತಹ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಚಾಲನಾ ಪರವಾನಗಿ (DL) ನವೀಕರಣವನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.

ಕಠಿಣ ಕ್ರಮಗಳಿಗೆ ನ್ಯಾಯಾಲಯದ ಒಲವು
ದಂಡ ಬಾಕಿ ಇರುವ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ನೀಡುವುದನ್ನು ತಡೆಯುವುದು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಮಾನತುಗೊಳಿಸುವ ಬಗ್ಗೆಯೂ ನ್ಯಾಯಾಲಯ ಚರ್ಚಿಸಿತು. ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ಹೆಚ್ಚಿನ ದಂಡ ಬಾಕಿ ಇರುವ ವಾಹನಗಳನ್ನು ವಶಪಡಿಸಿಕೊಳ್ಳುವ ಹಕ್ಕನ್ನೂ ಬಳಸಿಕೊಳ್ಳಬೇಕು ಎಂದು ಪೀಠವು ಹೇಳಿದೆ. ದೇಶದಲ್ಲಿ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕಾದರೆ ವಾಸ್ತವ ಸ್ಥಿತಿಗೆ ತಕ್ಕಂತಹ ಪರಿಹಾರಗಳನ್ನು ಕಂಡುಕೊಳ್ಳುವುದು ಅಗತ್ಯ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವಿದ್ಯುತ್ ಬಿಲ್ ಜೊತೆ ದಂಡ ಸೇರಿಸುವ ಪ್ರಸ್ತಾಪವು ಕೇವಲ ಮೌಖಿಕ ಸಲಹೆಯಷ್ಟೇ ಹೊರತು ಯಾವುದೇ ಅಂತಿಮ ಆದೇಶವಲ್ಲ ಎಂದು ಸ್ಪಷ್ಟಪಡಿಸಿದೆ.
GOOD NEWS : ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ : ಕೇಂದ್ರ ಸರ್ಕಾರದಿಂದ ಕಬ್ಬಿನ FRP ₹365 ಕ್ಕೆ ಹೆಚ್ಚಳ






