ಉಡುಪಿ ಜಿಲ್ಲೆಯ ಕಾಪು ಸೌಹಾರ್ದತೆಗೆ ಹೆಸರಾದ ಊರು. ವಿಶ್ವ ಪ್ರಸಿದ್ಧಿ ಪಡೆದ ಶಂಕರಪುರ ಮಲ್ಲಿಗೆಯನ್ನು ಈ ಊರಿನಲ್ಲಿ ಕ್ರಿಶ್ಚಿಯನ್ನರು ಹೆಚ್ಚಾಗಿ ಬೆಳೆಯುತ್ತಾರೆ, ಈ ಮಲ್ಲಿಗೆ ಹೂವನ್ನು ಮುಸ್ಲಿಂಮರು ವ್ಯಾಪಾರ ನಡೆಸುತ್ತಾರೆ, ಹಿಂದೂಗಳು ಖರೀದಿಸಿ ತಾಯಿ ಮಾರಿ ಅಮ್ಮನಿಗೆ ಅರ್ಪಿಸುತ್ತಾರೆ. ಹೀಗಿದ್ದ ಸೌಹಾರ್ದತೆಯ ಕೊಂಡಿ ಇದೇ ಮೊದಲ ಬಾರಿಗೆ ಕಳಚಿದೆ. ಕಾಪು ಮಾರಿಗುಡಿ ಜಾತ್ರೆಯು ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳ ಉಪಸ್ಥಿತಿ ಇಲ್ಲದೇ ಬುಧವಾರ ಮುಕ್ತಾಯವಾಗಿದೆ.
ಕಾಪು ಮಾರಿ ಅಮ್ಮನ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಜಾತ್ರೆ ಆರಂಭವಾಗುವ ಕೊನೆಯ ಕ್ಷಣದವರೆಗೂ ಮುಸ್ಲಿಂ ವ್ಯಾಪಾರಿಗಳ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ ಕಾರಣ ಮುಸ್ಲಿಂ ವ್ಯಾಪಾರಿಗಳ ಉಪಸ್ಥಿತಿ ಇಲ್ಲದೇ ಇಂದು ಜಾತ್ರೆ ಮುಗಿದೇ ಹೋಗಿದೆ.
ದೇವಸ್ಥಾನ ಆವರಣದಲ್ಲಿ ಹೆಚ್ಚಾಗಿ ಇಲ್ಲಿ ಮುಸ್ಲಿಮರು ಕುರಿ-ಕೋಳಿ ಮಾರಾಟ ಮಾಡಲು ಬರುತ್ತಾರೆ. ತಾಯಿಗೆ ಕುರಿ ಮತ್ತು ಕೋಳಿಯನ್ನು ಅರ್ಪಿಸುವುದೇ ಮಾರಿ ಪೂಜೆಯ ಪ್ರಧಾನ ಆಚರಣೆ. ಆದರೆ ಈ ವರ್ಷ ಸಂಪೂರ್ಣ ಬದಲಾಗಿದ್ದು, ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳೇ ಕೋಳಿ ಮಾರಾಟ ಮಳಿಗೆ, ಹೂ ಹಣ್ಣು ಅಂಗಡಿಗಳನ್ನು ತೆರೆದಿದ್ದರು. ಎಲ್ಲ ಮಳಿಗೆಗಳಿಗೂ ಕೇಸರಿ ಧ್ವಜಗಳನ್ನು ಹಾಕಲಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ತಾಯಿಗೆ ಅರ್ಪಿಸುವ ಮಲ್ಲಿಗೆ ಹೂವಿನ ವ್ಯಾಪಾರದಲ್ಲಿ ಮುಸ್ಲಿಮರ ಮುಂಚೂಣಿಯಲ್ಲಿ ಇರುತ್ತಿದ್ದರು. ಆದರೆ ಈ ಬಾರಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.






