ಬೆಂಗಳೂರು : ರಾಜ್ಯದಲ್ಲಿ ಎಸ್‌ಐಆರ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ಜಟಾಪಟಿ ಮುಂದುವರೆದಿದೆ. ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದೆ ಎನ್ನುವಂತೆ ಈಗಾಗಲೇ ಸರಣಿ ದೂರುಗಳನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಲ್ಲಿಸಿದ್ದಾರೆ. ಬಿಎಲ್‌ಎಗಳು ಮನೆ ಮನೆಗೆ ತೆರಳಿ ಎಸ್‌ಐಆರ್ ನಡೆಸದೆ ಒಂದೇ ಕಡೆ ಕುಳಿತು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಕೆಲಸಕ್ಕೆ ಇಳಿದಿದ್ದಾರೆ ಎಂದು ದೋಸ್ತಿಗಳು ಆರೋಪಿಸಿದ್ದಾರೆ.

ಸರ್ಕಾರದ ಮೊಂಡಾಟ, ಬಿಜೆಪಿ ಜೆಡಿಎಸ್‌ಗೆ ಪೀಕಲಾಟ..!
ರಾಜ್ಯಾದ್ಯಂತ ಜೂನ್ 29 ರಿಂದ ಆರಂಭವಾಗಿರುವ ಮತದಾರರ ತೀವ್ರ ಪರಿಷ್ಕರಣೆಯ ವಿಚಾರದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ತಯಾರಿ ಮಾಡಿಕೊಂಡಿದೆ. ಹೀಗಾಗಿ ಬೂತ್ ಮಟ್ಟದಲ್ಲಿ ಮತದಾರರಿಗೆ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಇತ್ತ ಕಾಂಗ್ರೆಸ್ ಕೂಡ ಯಾವೊಬ್ಬ ಮತದಾರನೂ ಸಹ ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು ಎಂದು ಕಸರತ್ತನ್ನು ನಡೆಸಿದೆ. ಈ ನಡುವೆಯೇ ಮೇಲಾಧಿಕಾರಿಗಳಿಂದ ಒತ್ತಡ ಹಾಕಿ ಬಿಎಲ್‌ಎಗಳಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಸದ್ಯ ಎಸ್‌ಐಆರ್ (Special intensive Reveision) ಪ್ರಕ್ರಿಯೆ ಗೊಂದಲಗಳ ನಡುವೆಯೂ ಚಾಲ್ತಿಯಲ್ಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸುಸೂತ್ರವಾಗಿ ನಡೆದಿರುವ ಈ ಪರಿಷ್ಕರಣೆಗೆ ರಾಜ್ಯದಲ್ಲಿ ಯಾಕೆ ಈ ರೀತಿಯ ವಿಘ್ನಗಳು ಎದುರಾಗುತ್ತಿವೆ? ಯಾವುದೇ ಸರ್ಕಾರವಿರಲಿ ಕೇಂದ್ರ ಚುನಾವಣಾ ಆಯೋಗದ ಆದೇಶ ಪಾಲನೆ ಮಾಡಲೇಬೇಕು. ಆದರೆ ಕಾಂಗ್ರೆಸ್ ಸರ್ಕಾರ ಅವುಗಳನ್ನು ಗಾಳಿಗೆ ತೂರಿ ಯಾವ ಕಾರಣಕ್ಕೆ ಕೆಲಸ ಮಾಡುತ್ತಿದೆ ಎಂಬ ಹಲವಾರು ಪ್ರಶ್ನೆಗಳು ದೋಸ್ತಿ ನಾಯಕರ ನಿದ್ದೆಯನ್ನು ಕಸಿದುಕೊಂಡಿವೆ. ಜೆಡಿಎಸ್ ಹಾಗೂ ಬಿಜೆಪಿ ಜಂಟಿಯಾಗಿ ಎಸ್‌ಐಆರ್ ಯಶಸ್ವಿಯಾಗಿಸಿ ಕೇಂದ್ರದ ಮುಂದೆ ರಿಸಲ್ಟ್ ಕಾರ್ಡ್ ತೋರಿಸುವ ತವಕದಲ್ಲಿದ್ದರೆ, ಅದಕ್ಕೆ ಕಾಂಗ್ರೆಸ್ ಅಡ್ಡಗಾಲಾಗುತ್ತಿದೆ ಎಂಬ ಆಕ್ರೋಶವೂ ಎನ್‌ಡಿಎ ನಾಯಕರಲ್ಲಿದೆ.
ಇದನ್ನೂ ಓದಿ : Mohanlal: ನಟ ಮೋಹನ್ ಲಾಲ್ ಬಳಿ 10 ಆನೆ ದಂತ, 13 ದಂತದ ಮೂರ್ತಿ ಇವೆಯಂತೆ!
ಸಕ್ರಿಯವಾಗಿರಿ, ವಿಜಯೇಂದ್ರ ವಿಜಯ ಸಂದೇಶ..!
ಹೀಗಾಗಿ ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಸ್‍ಐಆರ್ ಅನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಎಸ್‍ಐಆರ್ ವ್ಯವಸ್ಥಿತವಾಗಿ ಆಗಬೇಕು. ನಮ್ಮ ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ ಪ್ರತಿಯೊಬ್ಬ ಕೋರ್ ಕಮಿಟಿ ಸದಸ್ಯರಿಗೆ ಒಂದೊಂದು ವಿಭಾಗವನ್ನ ಹಂಚಲಾಗಿದ್ದು, ಈ ಮೂಲಕ ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಹೆಣೆದಿರುವ ರಣತಂತ್ರಕ್ಕೆ ಹಿನ್ನಡೆಯಾಗುವಂತೆ ನೋಡಿಕೊಳ್ಳಲು ಸನ್ನದ್ಧರಾಗಿ ಎಂಬ ಸಂದೇಶ ರವಾನಿಸಿದ್ದಾರೆ.
ಇನ್ನೂ ಹಲವೆಡೆ ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ ಎಸ್‌ಐಆರ್ ನಡೆಸಲಾಗುತ್ತಿದೆ. ಬಿಎಲ್‌ಒಗಳಿಂದ ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತಿದೆ. ಬಿಎಲ್‌ಒಗಳ ಮೇಲೆ ಸರ್ಕಾರದಿಂದ ಒತ್ತಡ, ಅನರ್ಹರ ಸೇರ್ಪಡೆಗೆ ಒತ್ತಾಯ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಿಯೋಗ ಇಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಲು ಸಾಲು ಆರೋಪ, ಕೈ ಕಟ್ಟಿಹಾಕಲು ವಿಪಕ್ಷಗಳ ತಂತ್ರ..
ಅಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಅನರ್ಹ ಮತದಾರರ ಸೇರ್ಪಡೆ, ವಿರೋಧ ಪಕ್ಷಗಳ ಬಿಎಲ್‌ಎಗಳಿಗೆ ಮಾಹಿತಿ ಕೊಡದೇ ಎಸ್‌ಆರ್ ನಡೆಸಲಾಗುತ್ತಿದೆ. ಪ್ರಮುಖವಾಗಿ ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್, ಪಾವಗಡ ಮುಂತಾದ ಕಡೆ ಅಕ್ರಮವಾಗಿ ಸಾಮೂಹಿಕ ಎಸ್‌ಐಆರ್ ಅಧಿಕವಾಗಿ ನಡೆಯುತ್ತಿದೆ. ಹೀಗೆ ಸಾಮೂಹಿಕವಾಗಿ ನಡೆದ ಎಸ್‌ಐಆರ್ ರದ್ದಾಗಬೇಕು, ಮತ್ತೆ ಹೊಸದಾಗಿ ಎಸ್‌ಐಆರ್ ಪ್ರಕ್ರಿಯೆ ಮಾಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಸಾಧ್ಯವಾದರೆ ಹೊರ ರಾಜ್ಯದ ಅಧಿಕಾರಿಗಳ ಮೂಲಕ ಎಸ್‌ಐಆರ್ ನಡೆಸಬೇಕು. ಸರ್ಕಾರದಿಂದ ಅಧಿಕಾರದ ದುರ್ಬಳಕೆ, ಬಿಎಲ್‌ಒಗಳ ದುರ್ಬಳಕೆ ಎಂಬ ಸಾಲು ಸಾಲು ಆರೋಪಗಳ ಸುರಿಮಳೆಯನ್ನು ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಸಚಿವೆ ಶೋಭಾ ಕರಂದ್ಲಾಜೇ, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ದೂರು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದಾರೆ.
ವಿಪಕ್ಷಗಳಿಗೆ ಭರ್ಜರಿ ಟಾಂಗ್ ಕೊಟ್ಟ ಸಿಎಂ ಡಿಕೆಶಿ..

ಯಾವುದೇ ಕಾರಣಕ್ಕೂ ಎಸ್‌ಐಆರ್ ಪ್ರಕ್ರಿಯೆಗೆ ಹಿನ್ನಡೆಯಾಗಬಾರದು ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗುವ ಸಂಕಲ್ಪವನ್ನು ದೋಸ್ತಿ ನಾಯಕರು ತೊಟ್ಟಿದ್ದಾರೆ. ಆದರೆ ವಿಪಕ್ಷಗಳ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ರಾಜ್ಯ ಕಾಂಗ್ರೆಸ್ ನಾಯಕರು ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಸ್‌ಐಆರ್ ಬಗ್ಗೆ ದೂರುವವರು ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂಬುವುದನ್ನು ಗಮನಿಸಲಿ, ಆಯೋಗವೇನು ಕತ್ತೆ ಕಾಯುತ್ತಿದೆಯಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ನಾವು ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯಲ್ಲಿ ಮಧ್ಯೆ ಪ್ರವೇಶ ಮಾಡಲ್ಲ, ಅಧಿಕಾರಿಗಳು ಎಸ್‌ಐಆರ್ ಮಾಡುತ್ತಿದ್ದಾರೆ ಮಾಡಲಿ. ವಿಪಕ್ಷಗಳು ಇರುವುದೇ ಟೀಕಿಸುವುದಕ್ಕೆ ಎನ್ನುವ ಮೂಲಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ದೋಸ್ತಿಗಳ ಒಗ್ಗಟ್ಟಿನ ಹೋರಾಟ..!
ರಾಜ್ಯದಲ್ಲಿನ ಈ ಎಸ್‌ಐಆರ್ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಲೋಪದ ಬಗ್ಗೆ ವಿಡಿಯೋ ಹಂಚಿಕೊಂಡು ರಾಜ್ಯ ಸರ್ಕಾರವನ್ನು ಕುಟುಕಿದ್ದ ವಿಪಕ್ಷ ನಾಯಕರುಗಳು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸರ್ಕಾರದ ನಡೆಯನ್ನು ಖಂಡಿಸಿದ್ದಲ್ಲದೆ, ದೂರನ್ನು ನೀಡಿರುವುದು ಎಸ್‌ಐಆರ್ ವಿಚಾರಕ್ಕೆ ಇನ್ನೊಂದು ಜಂಗೀ ಕುಸ್ತಿಗೆ ಅಖಾಡ ಸಜ್ಜಾಗುತ್ತಿದ್ದಂತೆ ಕಾಣುತ್ತಿದೆ. ಮೂವರು ಕೇಂದ್ರ ಮಂತ್ರಿಗಳು ಹಾಗೂ ಪಕ್ಷದ ನಾಯಕರು ಸೇರಿ ಕಾಂಗ್ರೆಸ್ ಪ್ಲ್ಯಾನ್ ಪ್ಲಾಫ್ ಮಾಡುವ ದೊಡ್ಡ ಯೋಜನೆ ರೂಪಿಸಿರುವಂತೆ ಕಂಡುಬರುತ್ತಿದ್ದರೂ ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಯಾವ ರೀತಿ ಪ್ರತಿಕ್ರಿಯಿಸಲಿದೆ. ಅಲ್ಲದೆ ಇಡೀ ಎಸ್‌ಐಆರ್ ಲೋಪಗಳನ್ನು ಕೇಂದ್ರ ಸರ್ಕಾರ ಯಾವ ತೆರನಾಗಿ ಸ್ವೀಕರಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಸರ್ಕಾರದ ಮೇಲೆ ಗೂಬೆ ಕೂರಿಸಿ ವಿಪಕ್ಷಗಳ ಬೇಡಿಕೆಗಳಿಗೆ ಮನಿದು ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಮರು ಎಸ್‌ಐಆರ್‌ಗೆ ಮನವಿ ಮಾಡಿಕೊಳ್ಳುತ್ತಾ..? ಅಥವಾ ಇಡೀ ಪ್ರಕ್ರಿಯೆಗಳ ಮೇಲೆ ಖುದ್ದು ಕಣ್ಣಿಟ್ಟು ಕೇಂದ್ರವೇ ಹೆಚ್ಚಿನ ಮುತುವರ್ಜಿವಹಿಸಿ ಅಖಾಡಕ್ಕೆ ಇಳಿದು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸುಸೂತ್ರವಾಗಿ ನಡೆಸುತ್ತಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.






