ಐಟಿ ದಾಳಿ ನಂತರ ನಟ ಮೋಹನ್ ಲಾಲ್ ಮನೆಯಲ್ಲಿ ಒಂದಷ್ಟು ವಸ್ತುಗಳು ಪತ್ತೆಯಾಗಿದ್ದವು. ಹಲವು ವರ್ಷಗಳ ಕಾನೂನು ಹೋರಾಟದ ನಂತರ ಅಧಿಕೃತವಾಗಿ ಮೋಹನ್ ಲಾಲ್ ಅವರು ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.

ಮೋಹನ್‌ಲಾಲ್ ಅವರು ಘೋಷಣೆ ಮಾಡಿರುವ ಮೂರ್ತಿಗಳಲ್ಲಿ ಶ್ರೀಕೃಷ್ಣ, ಶ್ರೀರಾಮ ಮತ್ತು ತಿರುಪತಿ ಬಾಲಾಜಿಯ ವಿಗ್ರಹಗಳು ಸೇರಿವೆ. ಇವುಗಳ ಒಟ್ಟು ತೂಕ ಸುಮಾರು 46 ಕೆಜಿ ಇದೆ. ತಮ್ಮ ಬಳಿ ಇರುವ ಹೆಚ್ಚಿನ ದಂತಗಳು ವಂಶಪಾರಂಪರ್ಯವಾಗಿ, ಉಡುಗೊರೆಯಾಗಿ ಬಂದಿರುವಂಥದ್ದು ಎಂದು ಮೋಹನ್‌ಲಾಲ್ ಹೇಳಿದ್ದಾರೆ. ಈ ವಸ್ತುಗಳ ಸತ್ಯಾಸತ್ಯತೆ ಪರಿಶೀಲಿಸಲು ಅರಣ್ಯ ಇಲಾಖೆ ಇದೀಗ ಡಿಎನ್‌ಎ ಪರೀಕ್ಷೆ ನಡೆಸಲಿದೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರು ತಮ್ಮ ಬಳಿಯಿರುವ 10 ಆನೆ ದಂತಗಳು ಮತ್ತು ಆನೆದಂತದಿಂದ ಮಾಡಿದ 13 ಮೂರ್ತಿಗಳ ಕುರಿತು ಕೇರಳ ಅರಣ್ಯ ಇಲಾಖೆ ಬಳಿ ಅಧಿಕೃತವಾಗಿ ಘೋಷಿಸಿದ್ದಾರೆ. ಕೇರಳ ಹೈಕೋರ್ಟ್ 2025ರಲ್ಲಿ ಮೋಹನ್‌ಲಾಲ್ ಅವರ ಬಳಿಯಿದ್ದ ಆನೆ ದಂತಗಳ ಮಾಲೀಕತ್ವದ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಪ್ರಕರಣವು 2011
ರ ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಬೆಳಕಿಗೆ ಬಂದಿತ್ತು.

2011ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣಕಾಸಿನ ದಾಖಲೆಗಳು ಮತ್ತು ನಗದು ಹುಡುಕುತ್ತಾ ಕೊಚ್ಚಿಯಲ್ಲಿರುವ ಮೋಹನ್‌ಲಾಲ್ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ, ಅಲ್ಲಿ ಪಾರಂಪರಿಕ ವಸ್ತುಗಳಂತೆ ಪ್ರದರ್ಶನಕ್ಕೆ ಇಡಲಾಗಿದ್ದ ಆನೆ ದಂತಗಳು ಮತ್ತು ಆನೆದಂತದ ಕಲಾಕೃತಿಗಳು ಪತ್ತೆಯಾಗಿದ್ದವು. ಸರ್ಕಾರದ ಸೂಕ್ತ ಪ್ರಮಾಣಪತ್ರವಿಲ್ಲದೆ ಆನೆದಂತವನ್ನು ಹೊಂದುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ‘ವನ್ಯಜೀವಿ (ರಕ್ಷಣೆ) ಕಾಯ್ದೆ, 1972’ರ ಅಡಿಯಲ್ಲಿ ಈ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.

ದಾಖಲೆಗಳ ಪ್ರಕಾರ, ಸ್ವಾಭಾವಿಕವಾಗಿ ಮರಣ ಹೊಂದಿದ ಸಾಕಾನೆಗಳಿಂದ ಈ ದಂತಗಳು ಬಂದಿದ್ದು, ನೆನಪಿಗಾಗಿ ಇಟ್ಟುಕೊಂಡಿರುವುದಾಗಿ ಮೋಹನ್‌ಲಾಲ್ ಅವರು ಹೇಳಿದ್ದರು. ಅಲ್ಲದೆ, ಇದನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂಬುದು ತಮಗೆ ತಿಳಿದಿರಲಿಲ್ಲ ಎಂದಿದ್ದರು. 2015ರಲ್ಲಿ ಸರ್ಕಾರವು ಅವರಿಗೆ ದಂತಗಳ ಬಗ್ಗೆ ಘೋಷಿಸಲು ಅವಕಾಶ ನೀಡಿತ್ತು. ನಂತರ 2016ರಲ್ಲಿ ಮಾಲೀಕತ್ವದ ಪ್ರಮಾಣಪತ್ರ ನೀಡಿದ ಬಳಿಕ ಪ್ರಕರಣವು ತಣ್ಣಗಾಗಿತ್ತು.

ಈ ಪ್ರಕರಣ ಮೊದಲು 2011ರಲ್ಲಿ ಪೆರುಂಬಾವೂರು ನ್ಯಾಯಾಲಯವನ್ನು ತಲುಪಿತ್ತು. ಬಳಿಕ ಮೋಹನ್‌ಲಾಲ್ ಇದನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಪಡೆದಿದ್ದ ಮಧ್ಯಂತರ ತಡೆಯಾಜ್ಞೆಯು 2025ರವರೆಗೆ ಜಾರಿಯಲ್ಲಿತ್ತು. 2016 ಮತ್ತು 2019ರಲ್ಲಿ ಅವರು ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ವಿನಂತಿಸಿದ್ದರು. ಆದರೆ, ಈ ಅರ್ಜಿಯನ್ನು 2023ರಲ್ಲಿ ವಜಾಗೊಳಿಸಲಾಯಿತು.

ನಂತರ ಅಕ್ಟೋಬರ್ 2025ರಲ್ಲಿ, ನಿವೃತ್ತ ಅರಣ್ಯ ಅಧಿಕಾರಿಗಳು ಮತ್ತು ಪರಿಸರವಾದಿಗಳ ಅರ್ಜಿಯನ್ನು ಆಲಿಸಿದ ಹೈಕೋರ್ಟ್, ನಟನಿಗೆ ನೀಡಲಾಗಿದ್ದ ಮಾಲೀಕತ್ವದ ಪ್ರಮಾಣಪತ್ರಗಳು ಕಾನೂನುಬದ್ಧವಾಗಿ ಸಿಂಧುವಲ್ಲ ಎಂದು ತೀರ್ಪು ನೀಡಿ, ಹೊಸ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಆದಾಗ್ಯೂ, ನ್ಯಾಯಾಲಯವು ನಟನ ವಿರುದ್ಧ ಕಾನೂನು ಕ್ರಮ ಜರುಗಿಸಲು ನೇರ ಆದೇಶ ನೀಡಿರಲಿಲ್ಲ.

ಇಷ್ಟು ವರ್ಷಗಳ ಕಾನೂನು ಹೋರಾಟದ ಬಳಿಕ ನಟ ಮೋಹನ್‌ಲಾಲ್ ಈಗ ಅರಣ್ಯ ಇಲಾಖೆಯ ‘ಅಮ್ನೆಸ್ಟಿ ಯೋಜನೆ’ (ಸ್ವಯಂ ಘೋಷಣೆ ಯೋಜನೆ) ಅಡಿಯಲ್ಲಿ ಒಟ್ಟು 10 ಆನೆ ದಂತಗಳು (ಮೊದಲು ಘೋಷಿಸಿದ್ದಕ್ಕಿಂತ 6 ಹೆಚ್ಚು) ಮತ್ತು 13 ಆನೆದಂತದ ಮೂರ್ತಿಗಳನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಬಳಿ ಇರುವ ನೋಂದಣಿಯಾಗದ ವನ್ಯಜೀವಿ ವಸ್ತುಗಳನ್ನು ಸ್ವಯಂಪ್ರೇರಿತವಾಗಿ ಘೋಷಿಸಿ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಅವಕಾಶವಿದೆ.






