ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಅಂತ್ಯಕ್ರಿಯೆ ವೇಳೆ ಭಾರತ ಸರ್ಕಾರ ಮತ್ತು ಭಾರತದ ಜನತೆ ತೋರಿದ ಬೆಂಬಲ ಹಾಗೂ ಭಾಗಿಯಾಗಿದ್ದಕ್ಕೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಧನ್ಯವಾದ ಸಲ್ಲಿಸಿದೆ. ಭಾರತದ ರಾಜಕೀಯ ನಾಯಕರು, ಸಂಸದರು, ಬುದ್ಧಿಜೀವಿಗಳು ಮತ್ತು ವಿವಿಧ ಧರ್ಮಗಳ ಪ್ರತಿನಿಧಿಗಳು ಈ ಶೋಕಾಚರಣೆ ಅಂತ್ಯಕ್ರಿಯೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಉಭಯ ದೇಶಗಳ ನಡುವಿನ ಐತಿಹಾಸಿಕ ಮಾನವೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದು ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಭಾರತ ತೋರಿದ ಈ ಸ್ನೇಹ, ಸಹಾನುಭೂತಿ ಮತ್ತು ಹೃತ್ಪೂರ್ವಕ ಗೌರವದ ನಡೆಯನ್ನು ಇರಾನ್ ಜನತೆ ಎಂದಿಗೂ ಮರೆಯೋದಿಲ್ಲ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ನಡುವಿನ ಶಾಶ್ವತ ಬಾಂಧವ್ಯಕ್ಕೆ ಇದು ಅಮೂಲ್ಯ ಸಾಕ್ಷಿ ಎಂದು ಕೃತಜ್ಞತೆ ಸಲ್ಲಿಸಿದೆ. ಭಾರತ ಪರವಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಅವರು ತೆಹ್ರಾನ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಭಾರತವನ್ನು ಪ್ರತಿನಿಧಿಸಿದ್ದರು. ಇವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮತ್ತು ಜೆಕೆಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡ ತೆಹ್ರಾನ್‌ಗೆ ಭೇಟಿ ನೀಡಿ ಇರಾನ್ ದೇಶಕ್ಕೆ ಸಾಂತ್ವನ ಹೇಳಿದ್ದರು.







