• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಸಂಘಟಿತ ಕಾರ್ಮಿಕರ ದೃಷ್ಟಿಕೋನ ಬದಲಾಗಬೇಕಿದೆ – ಭಾಗ 1

ನಾ ದಿವಾಕರ by ನಾ ದಿವಾಕರ
April 30, 2022
in ಅಭಿಮತ
0
ಸಂಘಟಿತ ಕಾರ್ಮಿಕರ ದೃಷ್ಟಿಕೋನ ಬದಲಾಗಬೇಕಿದೆ – ಭಾಗ 1
Share on WhatsAppShare on FacebookShare on Telegram

ನರೇಂದ್ರ ಮೋದಿ ಸರ್ಕಾರ 2022-23ರ ಆಯವ್ಯಯ ಪತ್ರ ಮಂಡಿಸುವ ವೇಳೆ ಘೋಷಿಸಿರುವ ಉತ್ಪಾದನೆ ಪ್ರೇರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ದೇಶದಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈ 60 ಲಕ್ಷ ಹೊಸ ಉದ್ಯೋಗಗಳು ಆತ್ಮನಿರ್ಭರ ಭಾರತದ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.  ಡಿಸೆಂಬರ 2021ರ ವೇಳೆಗೆ ಭಾರತದಲ್ಲಿ 53 ದಶಲಕ್ಷ ನಿರುದ್ಯೋಗಿಗಳಿರುವುದಾಗಿ ಸಿಎಂಐಇ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಹೇಳಿದೆ. ಇವರ ಪೈಕಿ 35 ದಶಲಕ್ಷ ಜನರು, ಅಂದಾಜು ಎಂಟು ದಶಲಕ್ಷ ಮಹಿಳೆಯರನ್ನೂ ಸೇರಿದಂತೆ, ಉದ್ಯೋಗವನ್ನು ಅರಸುತ್ತಿರುವುದಾಗಿ ಸಮೀಕ್ಷೆಯಲ್ಲಿ ಹೇಳಲಾಗಿದೆ. ಏತನ್ಮಧ್ಯೆ ಮಾರ್ಚ್‌ 2021ಕ್ಕೆ ಹೋಲಿಸಿದರೆ ನಿರುದ್ಯೋಗ ದರ ಶೇ 6.57ಕ್ಕೆ ಕುಸಿದಿದೆ.  ಇದರ ನಡುವೆಯೇ ಲಕ್ಷಾಂತರ ಜನರ ಜೀವನೋಪಾಯದ ಆಧಾರವಾಗಿರುವ ಸಾರ್ವಜನಿಕ ಉದ್ದಿಮೆಗಳನ್ನು ನಗದೀಕರಣಕ್ಕೊಳಪಡಿಸುವ (ಕಾರ್ಪೋರೇಟೀಕರಣದ ಮತ್ತೊಂದು ಹೆಸರು) ಮೂಲಕ ಕೇಂದ್ರ ಸರ್ಕಾರ ಆರು ಲಕ್ಷ ಕೋಟಿ ರೂ ಸಂಗ್ರಹ ಮಾಡಲು ಸಜ್ಜಾಗಿದೆ.

ADVERTISEMENT

ಎನ್‌ಎಸ್‌ಎಸ್‌ಒ 2019ರ ಸಮೀಕ್ಷೆಯ ಪ್ರಕಾರ 2017-18ರಲ್ಲಿ ನಿರುದ್ಯೋಗ ದರ ಶೇ 6.1ರಷ್ಟಿತ್ತು. ಇದು ಹಿಂದಿನ ನಾಲ್ಕು ದಶಕಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿತ್ತು. ಕಳೆದ ಹಲವು ವರ್ಷಗಳ ಸಮೀಕ್ಷೆಗಳನ್ನು ಗಮನಿಸಿದರೆ, ಭಾರತದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ದುಡಿಮೆಯ ಕ್ಷೇತ್ರದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಕುಸಿದೆ. ಮಾರ್ಚ್‌ 2020ರಲ್ಲಿ ಮೊದಲ ಲಾಕ್‌ಡೌನ್‌ ಹೇರಿದಾಗ ಅನೌಪಚಾರಿಕ ವಲಯದಿಂದ ಕೋಟ್ಯಂತರ ವಲಸೆ ಕಾರ್ಮಿಕರು ಹಲವು ನಿರ್ಬಂಧಗಳಿಗೊಳಪಟ್ಟು, ಅತ್ತಿತ್ತ ಚಲಿಸದಂತಾದರು. ಈ ಸಂದರ್ಭದಲ್ಲಿ ಉಂಟಾದ ಕಾರ್ಮಿಕರ ವಲಸೆ ಚಾರಿತ್ರಿಕವಷ್ಟೇ ಅಲ್ಲದೆ, ಕಾರ್ಮಿಕರಿಗೆ ಆದಾಯ ಅಲಭ್ಯತೆ, ಆಹಾರದ ಕೊರತೆ ಮತ್ತು ಅನಿಶ್ಚಿತ ಭವಿಷ್ಯದ ಆತಂಕಗಳನ್ನು ಎದುರಿಸಬೇಕಾಯಿತು. ಸಂಸತ್ತಿನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ನೀಡಿದ ಮಾಹಿತಿಯ ಅನುಸಾರ ವಿವಿಧ ರಾಜ್ಯಗಳಿಂದ ಕನಿಷ್ಟ ಒಂದು ಕೋಟಿ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿದ್ದರು. ಆದರೆ ಈ ಸಮಯದಲ್ಲಿ ಉದ್ಯೋಗ ಮತ್ತು ಜೀವ ಕಳೆದುಕೊಂಡ ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇರಲಿಲ್ಲ.

ಈ ವರ್ಷದ ಫೆಬ್ರವರಿಯಲ್ಲಿ ಸಿಎಂಐಇ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ನಿರುದ್ಯೋಗ ದರ ಶೇ 8.10ರಷ್ಟಿದ್ದು, ಮೇ 2021ರಲ್ಲಿ ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕಂಡುಬಂದಿದ್ದ ಶೇ 12ಕ್ಕೆ ಹೋಲಿಸಿದರೆ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಬಹುದು. ಜಾಗತಿಕ ಮಟ್ಟದಲ್ಲಿ  ಶೇ 60ರಷ್ಟು ಉದ್ಯೋಗಾಕಾಂಕ್ಷಿಗಳು ಅಥವಾ ಉದ್ಯೋಗಿಗಳಿದ್ದರೆ ಭಾರತದಲ್ಲಿ ಇದು ಶೇ 40ರಷ್ಟಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. 20 ರಿಂದ 30 ವಯೋಮಾನದವರಲ್ಲಿ ಕನಿಷ್ಟ ಹತ್ತು ವರ್ಷದ ಶಿಕ್ಷಣ ಪಡೆದವರ ಪೈಕಿ ಶೇ 26ರಷ್ಟು ಜನರು ಉದ್ಯೋಗರಹಿತರಾಗಿದ್ದಾರೆ. ಸಿಎಂಐಇ ಮಾಹಿತಿಯ ಅನುಸಾರ ಭಾರತದ ಅನೌಪಚಾರಿಕ ವಲಯದಲ್ಲಿ, ಗುತ್ತಿಗೆ ಕಾರ್ಮಿಕ ಕ್ಷೇತ್ರದಲ್ಲಿ  ಮಿಲಿಯಾಂತರ ಉದ್ಯೋಗಗಳ ಲಭ್ಯತೆ ಇದ್ದರೂ ಕೇವಲ ಶೇ 5ರಷ್ಟು ಮಾತ್ರ ಕೌಶಲ್ಯವುಳ್ಳವರಾಗಿದ್ದಾರೆ. ಜರ್ಮನಿಯಲ್ಲಿ ಈ ಕೌಶಲ್ಯದ ಪ್ರಮಾಣ ಶೇ 75ರಷ್ಟಿದ್ದರೆ, ದಕ್ಷಿಣ ಕೊರಿಯಾದಲ್ಲಿ ಶೇ 96ರಷ್ಟಿದೆ. ಕೋವಿದ್‌ ನಂತರದ ಮತ್ತೊಂದು ಬೆಳವಣಿಗೆ ಎಂದರೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ 2005ರಲ್ಲಿ ಶೇ 35ರಷ್ಟಿದ್ದುದು 2022ರಲ್ಲಿ ಶೇ 21ಕ್ಕೆ ಕುಸಿದಿದೆ. ಕೋವಿದ್‌ ನಂತರದ ಆರ್ಥಿಕ ಚೇತರಿಕೆಯ ಫಲಾನುಭವಿಗಳು ಪುರುಷ ಕಾರ್ಮಿಕರೇ ಹೆಚ್ಚಾಗಿದ್ದಾರೆ.

ಔಪಚಾರಿಕ ವಲಯದಲ್ಲಿನ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಹಮ್ಮಿಕೊಂಡರೂ, ಒಟ್ಟು ಉದ್ಯೋಗದಲ್ಲಿ ಶೇ 15ರಷ್ಟನ್ನು ಮಾತ್ರ ಈ ವಲಯದಲ್ಲಿ ಕಾಣಬಹುದಾಗಿದೆ. ಶೇ 85ರಷ್ಟು ಅನೌಪಚಾರಿಕ ವಲಯದ ಉದ್ಯೋಗಗಳ ಪೈಕಿ ಕೃಷಿ ಆಧಾರಿತ ದುಡಿಮೆ, ಚಿಲ್ಲರೆ ವ್ಯಾಪಾರ ಮತ್ತು ಕೆಲವೇ ಸಹಾಯಕರನ್ನೊಳಗೊಂಡ ಸಣ್ಣಪುಟ್ಟ ಅಂಗಡಿ ಮುಗ್ಗಟ್ಟುಗಳು ಹೆಚ್ಚಿನ ಪ್ರಮಾಣದಲ್ಲಿವೆ.  ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳು ಈ ವ್ಯಾಪ್ತಿಗೊಳಪಡುತ್ತಾರೆ. ಹಾಗಾಗಿಯೇ ಭಾರತದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಕಡಿಮೆ ಇದೆ. ಕಡಿಮೆ ಉತ್ಪಾದಕೀಯತೆಯ ಕ್ಷೇತ್ರಗಳಿಂದ ಕಾರ್ಮಿಕರು ಹೆಚ್ಚಿನ ಉತ್ಪಾದಕೀಯತೆಯ ವಲಯಗಳಿಗೆ ಚಲನೆ ಪಡೆಯುವುದು ಯಾವುದೇ ದೇಶದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ಅಳೆಯುವ ಒಂದು ಪ್ರಧಾನ ಮಾನದಂಡವಾಗಿರುತ್ತದೆ. ಭಾರತದ ಕೃಷಿ ವಲಯದಲ್ಲಿ 12 ಕೋಟಿ ಕಾರ್ಮಿಕರು ಈ ಕೆಳಹಂತದಲ್ಲಿದ್ದಾರೆ. ಕೋವಿದ್‌ ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆಯ ಅನ್ಯ ಆಯ್ಕೆಗಳಿಲ್ಲದೆ ಕೋಟ್ಯಂತರ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗಿದರೇ ಹೊರತು, ತಮ್ಮ ಸ್ವಗ್ರಾಮಗಳಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಭರವಸೆಯಿಂದಲ್ಲ. ಹೀಗೆ ಹಿಂದಿರುಗಿದ ಕಾರ್ಮಿಕರ ಪೈಕಿ ಕನಿಷ್ಠ ಒಂದು ಕೋಟಿ ಜನರು ನಗರಗಳಿಗೆ ಮರಳಿ ಬಂದಿಲ್ಲ, ಹೊರತಾಗಿ ಕೃಷಿ ಉದ್ಯೋಗಗಳಲ್ಲೇ ತೊಡಗಿದ್ದಾರೆ. ಹಾಗಾಗಿಯೇ ಈಗ ಭಾರತದಲ್ಲಿ ಕೃಷಿ ವಲಯದಲ್ಲಿ ಕಡಿಮೆ ಉತ್ಪಾದಕೀಯತೆ ಇದ್ದರೂ ಹೆಚ್ಚಿನ ಉದ್ಯೋಗಗಳು ಕಂಡುಬರುತ್ತಿವೆ. ಈ ಜನತೆಗೆ ನಗರಗಳಲ್ಲಿ ಲಭ್ಯವಿರುವ ಉದ್ಯೋಗಗಳು ಅನೌಪಚಾರಿಕ ವಲಯದಲ್ಲೇ ಆದರೂ, ಹೆಚ್ಚು ಆದಾಯದ ಒದಗಿಸುವುದರಿಂದ ಆಕರ್ಷಣೀಯವಾಗಿರುತ್ತವೆ.

ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಯುಗದಲ್ಲಿ, ಡಿಜಿಟಲೀಕರಣದ ಮೂಲಕ ಸರ್ಕಾರಗಳು ಉದ್ಯೋಗ ಸೃಷ್ಟಿಯಲ್ಲಿ ತೊಡಗುವುದಿಲ್ಲ. ಬದಲಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿರುವ ಔದ್ಯಮಿಕ ಮತ್ತು ಔದ್ಯೋಗಿಕ ವಲಯಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಅನೌಪಚಾರಿಕ ವಲಯದ ಉದ್ಯೋಗಗಳನ್ನು ಹೆಚ್ಚಿಸುವ ಸಲುವಾಗಿ ಸೇವಾ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುತ್ತವೆ. ತನ್ಮೂಲಕ ನಗರೀಕರಣ ಪ್ರಕ್ರಿಯೆ ಹೆಚ್ಚಾಗಿ, ಸಾರಿಗೆ, ಸಂಚಾರ, ಆಧುನಿಕ ಮಾರುಕಟ್ಟೆ ಸಾಧನಗಳು, ರಿಯಲ್‌ ಎಸ್ಟೇಟ್‌ ವಸತಿ ಸಮುಚ್ಚಯಗಳು ಹೆಚ್ಚಾಗತೊಡಗುತ್ತವೆ. ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಅನೌಪಚಾರಿಕ ಕಾರ್ಯಕ್ಷೇತ್ರಗಳನ್ನು ಗುರುತಿಸಬಹುದು. ಇಂದಿಗೂ ಸಹ ವಲಸೆ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ವಸತಿ ಸಮುಚ್ಚಯಗಳಲ್ಲಿ, ಷಾಪಿಂಗ್‌ ಮಾಲ್‌ಗಳಲ್ಲಿ, ಆಧುನಿಕ ಕಾರ್ಯಕ್ಷೇತ್ರಗಳಲ್ಲಿ ಮತ್ತು ಕಚೇರಿಗಳಲ್ಲಿ ಭದ್ರತಾ ಸಿಬ್ಬಂದಿಯ ರೂಪದಲ್ಲೇ ದೊರೆಯುತ್ತವೆ. ಇವೆಲ್ಲವೂ ಹೊರಗುತ್ತಿಗೆ ನೌಕರಿಯಾಗಿದ್ದು, ಅನಿಶ್ಚಿತತೆಯಿಂದ ಕೂಡಿರುತ್ತವೆ. ಅನೇಕ ಪದವೀಧರರೂ ಈ ನೌಕರಿಯಲ್ಲಿರುವುದನ್ನು ಗಮನಿಸಿದರೆ, ಉದ್ಯೋಗ ಮಾರುಕಟ್ಟೆಯ ನೈಜ ಸ್ಥಿತಿ ಅರಿವಾಗುತ್ತದೆ.

ಇದೇ ವೇಳೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ವಲಯಗಳನ್ನು ಸರ್ಕಾರದ ನಿರ್ವಹಣೆಯಿಂದ ಮುಕ್ತಗೊಳಿಸಿ ಖಾಸಗಿ ಬಂಡವಳಿಗರಿಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಕೇಂದ್ರ ಸರ್ಕಾರ ರೂಪಿಸಿರುವ ಮತ್ತು ರಾಜ್ಯ ಸರ್ಕಾರ ಅತಿ ಅವಸರದಲ್ಲಿ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶವೇ ಇದಾಗಿದೆ. ಇದರ ನೇರ ಪರಿಣಾಮವನ್ನು ಬೋಧಕ ಮತ್ತು ಬೋಧಕೇತರ ಉದ್ಯೋಗ ನಷ್ಟದಲ್ಲಿ ಗುರುತಿಸಬಹುದಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಅಧ್ಯಯನ ಕ್ಷೇತ್ರದವರೆಗಿನ ಶೈಕ್ಷಣಿಕ ವಲಯವನ್ನು ವಾಣಿಜ್ಯೀಕರಣಗೊಳಿಸಿ, ಕಾರ್ಪೋರೇಟ್‌ ಬಂಡವಾಳಿಗರಿಗೆ ಒಪ್ಪಿಸುವ ಮೂಲಕ ಶೈಕ್ಷಣಿಕ ಮಾರುಕಟ್ಟೆಯಲ್ಲಿ ಹೆಚ್ಚು ತಾತ್ಕಾಲಿಕ ಹುದ್ದೆಗಳನ್ನು, ಹೊರಗುತ್ತಿಗೆ ನೌಕರಿಗಳನ್ನು ಮತ್ತು ಮಾರುಕಟ್ಟೆಗೆ ಹೊರೆಯಾಗದಂತಹ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದರೊಟ್ಟಿಗೆ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಬೋಧಕ ಸಿಬ್ಬಂದಿಯ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲೂ ಖಾಸಗಿ ಬಂಡವಾಳ ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಮತ್ತು ಪಟ್ಟಣಗಳ ಮೂಲ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಪೋಷಣೆ, ಶುಶ್ರೂಷಣೆ, ಕ್ಷೇತ್ರೀಯ ಕಾರ್ಯಗಳು, ಸರ್ಕಾರದ ಯೋಜನೆಗಳ ಅನುಷ್ಟಾನ ಇವೆಲ್ಲವನ್ನೂ ಹೊರಗುತ್ತಿಗೆಯ ಮೂಲಕ ಅಥವಾ ತಾತ್ಕಾಲಿಕ ನೇಮಕಾತಿಯ ಮೂಲಕ ನಿರ್ವಹಿಸಲಾಗುತ್ತದೆ.

ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ, ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಖಾಯಂಗೊಳಿಸಲು, ವೇತನ ಹೆಚ್ಚಿಸಲು ಬೀದಿಗಿಳಿದು ಹೋರಾಡುತ್ತಿದ್ದಾರೆ. 1980ರಿಂದಲೇ ಆರಂಭವಾದ ಗುತ್ತಿಗೆ ಆಧಾರಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಈ ಹೊಸ ಆಯಾಮ ನೀಡಲಾಗುತ್ತಿದ್ದು, ಹಲವು ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಇಲಾಖೆಯಲ್ಲಿ ಕಾರ್ಪೋರೇಟ್‌ ನಿಯಂತ್ರಣದಲ್ಲಿರುವ ಹೊರಗುತ್ತಿಗೆ ಕಂಪನಿಗಳ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಖಾಯಂ ಮತ್ತು ತಾತ್ಕಾಲಿಕ/ಗುತ್ತಿಗೆ ಸಿಬ್ಬಂದಿಯ ನಡುವೆ ವೇತನ ತಾರತಮ್ಯ ಹೆಚ್ಚಾಗುವುದೇ ಅಲ್ಲದೆ ಹೊರಗುತ್ತಿಗೆ ಕಂಪನಿಗಳು ಸೂಕ್ತ  ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಅನುಸರಿಸಿದೆಯೇ ನೌಕರಿ ನೀಡುವ ಸಾಧ್ಯತೆಗಳೂ ಇರುತ್ತವೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 27 ಸಾವಿರ ಬೋಧಕ ಹುದ್ದೆಗಳಿಗೆ, ಇನ್ನೂ 3000 ಹೆಚ್ಚುವರಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆಯ ಮೇಲೆ ನೇಮಿಸಿಕೊಳ್ಳುವುದಾಗಿ ರಾಜ್ಯ ಶಿಕ್ಷಣ ಸಚಿವರು ಇತ್ತೀಚೆಗೆ ಹೇಳಿದ್ದಾರೆ.  ಪೂರ್ಣಾವಧಿ ಬೋಧನೆಯ ಕೆಲಸ ನಿರ್ವಹಿಸುವ ಪ್ರಾಥಮಿಕ ಶಿಕ್ಷಕರಿಗೆ ಮಾಸಿಕ 7500 ಅಥವ ಪ್ರೌಢಶಾಲಾ ಶಿಕ್ಷಕರಿಗೆ 8000 ವೇತನ ನೀಡುವುದಾಗಿ ಹೇಳಿದ್ದಾರೆ. 

ಬಡವರು, ಕೆಳಮಧ್ಯಮ ವರ್ಗಗಳು ಮತ್ತು ಗ್ರಾಮೀಣ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಾರೆ. 15 ಸಾವಿರ ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳುತ್ತಲೇ ಹೊರಗುತ್ತಿಗೆಯ ಮೇಲೆ ಶಿಕ್ಷಕರನ್ನು ನೇಮಿಸುವುದು ಸರ್ಕಾರದ ಜನವಿರೋಧಿ ಧೋರಣೆಯ ಸಂಕೇತವೇ ಆಗಿದೆ. ಈಗಿರುವ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಖಾಯಂಗೊಳಿಸಬೇಕೇಂಬ ಕೂಗು ಗಟ್ಟಿಯಾಗುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಮತ್ತು ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸ್ಪಷ್ಟ. ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಖಾಸಗಿ ಶಾಲೆಗಳಿಗೆ ಮತ್ತು ಟ್ಯೂಷನ್‌ಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಾಲಾಕಾಲೇಜು ಕೊಠಡಿಯ ಪ್ರಾಮುಖ್ಯತೆಯನ್ನೇ ಕಡಿಮೆ ಮಾಡುವ ಒಂದು ಹುನ್ನಾರವನ್ನೂ ಈ ಆಡಳಿತ ನೀತಿಗಳಲ್ಲಿ ಮತ್ತು ಹೊಸ ಶಿಕ್ಷಣ ನೀತಿಯಲ್ಲಿ ಗುರುತಿಸಬಹುದು. ಅಷ್ಟೇ ಅಲ್ಲದೆ ಹೊಸ ಶಿಕ್ಷಣ ನೀತಿಯ ನೂತನ ಪದವಿ ವ್ಯಾಸಂಗ ಪದ್ಧತಿಯಿಂದ ಹೆಚ್ಚಿನ ಶಿಕ್ಷಣಾರ್ಥಿಗಳು ತಮ್ಮ ಮೂಲ ಕೌಟುಂಬಿಕ ಕಸುಬುಗಳಿಗೆ, ಗ್ರಾಮೀಣ ಉದ್ಯೋಗಗಳಿಗೆ ಮರಳುವ ಸಾಧ್ಯತೆಗಳೂ, ತಳಸಮುದಾಯದ ಶಿಕ್ಷಣಾರ್ಥಿಗಳು ಮತ್ತು ಹೆಚ್ಚಾಗಿ ಮಹಿಳೆಯರು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.

ಹೊಸ ಶಿಕ್ಷಣ ನೀತಿಯ ಅನುಷ್ಟಾನದಿಂದ ಒಂದರಿಂದ ಆರು ವರ್ಷದವರೆಗಿನ ಮಕ್ಕಳ ಪೋಷಣೆಯ ಜವಾಬ್ದಾರಿ ಹೊತ್ತಿರುವ, ದೇಶಾದ್ಯಂತ ಇರುವ, 13 ಲಕ್ಷ 77 ಸಾವಿರ ಅಂಗನವಾಡಿ ಶಿಕ್ಷಕಿಯರು, ಸಹಾಯಕ ಸಿಬ್ಬಂದಿ ಹೊಸ ಶಿಕ್ಷಣ ನೀತಿಯಿಂದ ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಗೌರವಧನದ ರೂಪದಲ್ಲಿ ವೇತನ ಪಡೆಯುತ್ತಿರುವ ಈ ಸಿಬ್ಬಂದಿಯ ಕಾರ್ಯವ್ಯಾಪ್ತಿಯಿಂದ ಮೂರು ವರ್ಷದ ಮೇಲ್ಪಟ್ಟ ಮಕ್ಕಳು ಹೊರಗುಳಿಯುತ್ತಾರೆ. ಏಕೆಂದರೆ ಹೊಸ ಶಿಕ್ಷಣ ನೀತಿಯನ್ವಯ 3ನೆಯ ವರ್ಷದಿಂದೇ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತದೆ. ತಮ್ಮ ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಹೋರಾಟಗಳಲ್ಲಿ ತೊಡಗಿದ್ದಾರೆ. ಇವರೊಂದಿಗೆ ಕೋವಿದ್‌ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸಿದ ಆರು ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು, ಪೂರ್ಣ ವೇತನವನ್ನೂ ನೀಡದೆ, ಕರ್ನಾಟಕ ಸರ್ಕಾರ ವಜಾ ಮಾಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೌಕರಿ ಪಡೆದಿದ್ದ ಈ ಕಾರ್ಯಕರ್ತೆಯರು ಈಗ ತಮ್ಮ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಬಿಸಿಯೂಟ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿದ್ದ, 60 ವರ್ಷಕ್ಕೂ ಮೇಲ್ಪಟ್ಟ 12 ಸಾವಿರ ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರ ಯಾವುದೇ ನಿವೃತ್ತಿ ಸೌಲಭ್ಯಗಳನ್ನು ನೀಡದೆಯೇ ಏಕಾಏಕಿ ವಜಾ ಮಾಡಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿಯಾಗಿರುವ ಮತ್ತು ಉದ್ಯೋಗಾವಕಾಶಗಳಿಲ್ಲದ ಲಕ್ಷಾಂತರ ಜನರು ನಗರ ಪ್ರದೇಶಗಳಿಗೆ ವಲಸೆ ಬರುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಈ ಸಂಖ್ಯೆಯಲ್ಲಿ ಇಂತಹ ಗುತ್ತಿಗೆ ನೌಕರರೂ ಸೇರುತ್ತಾರೆ. ಇವರೊಂದಿಗೆ ನಗರ ಪ್ರದೇಶಗಳಲ್ಲಿ ವ್ಯಾಸಂಗ ಮುಗಿಸಿ ನೌಕರಿ ಅರಸುವ ಲಕ್ಷಾಂತರ ಯುವಕ ಯುವತಿಯರು ತಮ್ಮ ಜೀವನೋಪಾಯದ ಮಾರ್ಗಗಳನ್ನು ಹುಡುಕುವಂತಾಗುತ್ತದೆ. ಡಿಜಿಟಲ್‌ ವೇದಿಕೆಗಳಲ್ಲಿ, ಸಾಫ್ಟ್‌ ವೇರ್‌ ಉದ್ಯಮಗಳ ಮೂಲಕ ಸೃಷ್ಟಿಯಾಗುವ ಲಕ್ಷಾಂತರ ಉದ್ಯೋಗಗಳು ಸುಶಿಕ್ಷಿತ ಹಿತವಲಯದವರ ಪಾಲಾಗುತ್ತದೆ. ನವ ಉದ್ಯಮ ಮತ್ತು ಕೌಶಲ್ಯಾಭಿವೃದ್ಧಿಯ ಯೋಜನೆಗಳ ಫಲಾನುಭವಿಗಳೂ ಬಹುಪಾಲು ಇವರೇ ಆಗಿರುತ್ತಾರೆ. ಇಲ್ಲಿ ಗ್ರಾಮೀಣ ಬಡಜನತೆ, ದಲಿತರು ಮತ್ತು ತಳಸಮುದಾಯದ ಬಡವರು, ಮಹಿಳೆಯರು ಉದ್ಯೋಗ ವಂಚಿತರಾಗುತ್ತಾರೆ. ಹತ್ತಾರು ವರ್ಷಗಳ ಕಾಲ ಒಂದು ನೌಕರಿಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನರು ಮಾರುಕಟ್ಟೆ ನೀತಿಗಳಿಗೆ ಬಲಿಯಾಗಿ ಏಕಾಏಕಿ ನಿರ್ಗಗತಿಕರೋ, ನಿರ್ವಸತಿಕರೋ ಆಗಿಬಿಡುತ್ತಾರೆ. ಈ ಬೃಹತ್‌ ಜನಸಂಖ್ಯೆಯ ಶ್ರಮಜೀವಿಗಳು  ಕಟ್ಟಡ ಕಾಮಗಾರಿ, ಸಾರ್ವಜನಿಕ ಕಾಮಗಾರಿ, ಮನೆಗೆಲಸ ಮತ್ತಿತರ ಅನಿಶ್ಚಿತ ನೌಕರಿಗಳನ್ನೇ ಅವಲಂಬಿಸಿ ಬದುಕುವುದು ಅನಿವಾರ್ಯವಾಗುತ್ತದೆ. ಶೇ 95ರಷ್ಟು ಅಸಂಘಟತರಾಗಿರುವ ಈ ಶ್ರಮಜೀವಿಗಳ ಕಾಳಜಿ ಬಂಡವಾಳಶಾಹಿ ಆಡಳಿತ ವ್ಯವಸ್ಥೆ ಇರುವುದಿಲ್ಲ ಆದರೆ ಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳಲ್ಲಿ ಈ ಶ್ರಮಜೀವಿಗಳ ಬಗ್ಗೆ ಕಾಳಜಿ ಮತ್ತು ಕಳಕಳಿ ಇರಲೇಬೇಕಲ್ಲವೇ ?

ಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳಲ್ಲಿ ಮತ್ತು ಕಾರ್ಮಿಕರಲ್ಲಿ ವರ್ಗಪ್ರಜ್ಞೆ ಮೂಡದ ಹೊರತು ಇದನ್ನು ಅಪೇಕ್ಸಿಸಲಾಗುವುದಿಲ್ಲ.  ಮೇ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?

(ಮುಂದುವರೆಯುತ್ತದೆ)

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕಾರ್ಮಿಕರ ದೃಷ್ಟಿಕೋನಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

1000 ಕೋಟಿ ಕ್ಲಬ್‌ ಸೇರಿದ ರಾಕಿ ಬಾಯ್‌ | KGF 2 1000 Crores Collections | Yash | KGF2 | Prashanthneel

Next Post

ಐಪಿಎಲ್: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ ಇಂಡಿಯನ್ಸ್!

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ `ಸೊನ್ನೆ’ ದಾಖಲೆ ಬರೆದ ರೋಹಿತ್ ಶರ್ಮ!

ಐಪಿಎಲ್: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ ಇಂಡಿಯನ್ಸ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada