ಭಾರತೀಯ ರೈಲ್ವೇಯು ಉತ್ತರಾಖಂಡದ ಹಲ್ದ್ವಾನಿ ಪ್ರದೇಶದಲ್ಲಿ ವಾಸಿಸುತ್ತಿರುವ 4,000 ಕುಟುಂಬಗಳಿಗೆ ಪರಿಹಾರ ಒದಗಿಸಿ ಅಲ್ಲಿಂದ ಹೊರಹಾಕಲು ಅನುಮತಿ ನೀಡಿದ್ದ ಉತ್ತರಾಖಂಡ್‌ನ ಹೈಕೋರ್ಟಿನ ಆದೇಶಕ್ಕೆ ಜನವರಿ ಐದರಂದು ಸುಪ್ರಿಈಂ ಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್. ಓಕಾ ಅವರನ್ನೊಳಗೊಂಡ ಪೀಠವು ಈ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ’ ವನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರ ಮತ್ತು ರೈಲ್ವೇಯನ್ನು ಕೇಳಿಕೊಂಡಿದೆ.
“ಈ ಕುಟುಂಬಗಳು ಬಹಳ ವರ್ಷಗಳಿಂದಲೂ ಅಲ್ಲಿಯೇ ವಾಸಿಸುತ್ತಿವೆ. ಒಂದಿಷ್ಟು ಪುನರ್ವಸತಿ ನೀಡಬೇಕು. ಏಳೇ ದಿನಗಳಲ್ಲಿ ಅವರನ್ನು ತೆರವುಗೊಳಿಸಿ ಎಂದು ನೀವು ಹೇಗೆ ಹೇಳುತ್ತೀರಿ?” ಎಂದು ನ್ಯಾಯಮೂರ್ತಿ ಕೌಲ್ ಪ್ರಶ್ನಿಸಿದ್ದಾರೆ. ನ್ಯಾಯಮೂರ್ತಿ ಓಕಾ ಅವರು “50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು. ಯಾಕೆಂದರೆ ಇದು ಮಾನವ ಹಕ್ಕುಗಳ ಸಮಸ್ಯೆಯೂ ಹೌದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಸುಪ್ರೀಂ ಕೋರ್ಟ್‌ನ ಈ ಆದೇಶಕ್ಕೆ ಸರಿಯಾಗಿ ಒಂದು ವಾರದ ಮೊದಲು ಅಂದರೆ ಡಿಸೆಂಬರ್ 28, 2022 ರಂದು, ರೈಲ್ವೇಯು ರಾಂಚಿಯ ಬಸ್ತಿಯನ್ನು ನೆಲಸಮಗೊಳಿಸಿತ್ತು. ಈ ಘಟನೆಯಲ್ಲಿ ಅಲ್ಲಿ ವಾಸಿಸುತ್ತಿದ್ದ ಸುಮಾರು 40 ಕುಟುಂಬಗಳು ನಿರಾಶ್ರಿತವಾದವು. ಅಂದಿನಿಂದ, ಅವರಲ್ಲಿ ಹೆಚ್ಚಿನವರು ಸೂರಿಲ್ಲದೆ ಅಲ್ಲಿ ಬದುಕುತ್ತಿದ್ದಾರೆ. ಜಾರ್ಖಂಡ್ ‘ಜನಾಧಿಕಾರ ಮಹಾಸಭಾ’ದ ಪ್ರಕಾರ, ಇವುಗಳಲ್ಲಿ ಹೆಚ್ಚಿನ ಕುಟುಂಬಗಳು ದಲಿತ ಅಥವಾ ಆದಿವಾಸಿ ಸಮುದಾಯಗಳಿಗೆ ಸೇರಿವೆ. ಮತ್ತು ಆ ಕುಟುಂಬಗಳು ಮೂರು ತಲೆಮಾರುಗಳಿಂದ ಅಲ್ಲಿಯೇ ವಾಸಿಸುತ್ತಿವೆ.

“ಸುಮಾರು 50-60 ವರ್ಷಗಳ ಹಿಂದೆ, ಕೆಲಸ ಹುಡುಕಿಕೊಂಡು ರಾಂಚಿಗೆ ಬಂದ ಜನರು ರೈಲು ಮಾರ್ಗದ ಪಕ್ಕದಲ್ಲಿರುವ ಈ ಪುಟ್ಟ ಭೂಮಿಯಲ್ಲಿ ನೆಲೆಸಲಾರಂಭಿಸಿದರು” ಎಂದು ಮಹಾಸಭಾ ಟ್ವೀಟ್ ಮಾಡಿದೆ. ಈ ಕುಟುಂಬಗಳನ್ನು ಭೇಟಿ ಮಾಡಿದ ಮಹಾಸಭಾದ ಸದಸ್ಯರೊಬ್ಬರು ದಿ ವೈರ್ ಜೊತೆ ಮಾತಾನಾಡುತ್ತಾ “ಹೆಚ್ಚಿನ ಕುಟುಂಬಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಅವರು ಹೊರಹಾಕಲ್ಪಟ್ಟ ವಿಳಾಸದಲ್ಲೇ ನೋಂದಾಯಿಸಿದ್ದಾರೆ. ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವಿತ್ತು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ನೀರು ಸರಬರಾಜು ಟ್ಯಾಂಕ್ ಅನ್ನು ಸಹ ನಿರ್ಮಿಸಿದೆ. ಚುನಾಯಿತ ಪ್ರತಿನಿಧಿಗಳು ಕುಟುಂಬಗಳನ್ನು ಹೊರಹಾಕುವುದಿಲ್ಲ ಎಂದು ಭರವಸೆ ನೀಡಿದ್ದರು, ಆದರೆ ಈಗ ಈ ಪ್ರತಿನಿಧಿಗಳು ಕಾಣೆಯಾಗಿದ್ದಾರೆ” ಎಂದು ಹೇಳಿರುವುದಾಗಿ ಪತ್ರಿಕೆಯು ವರದಿ ಮಾಡಿದೆ.
ರಾಂಚಿಯಲ್ಲಿ ಬೀಸುತ್ತಿರುವ ಶೀತ ಗಾಳಿಯು ಅವರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದ್ದು ಕೇಂದ್ರದಲ್ಲಾಗಲೀ, ರಾಜ್ಯದಲ್ಲಿಯಾಗಲೀ ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರಿದ ಯಾವ ನಾಯಕರೂ ತಮ್ಮ ಬಗ್ಗೆ ವಿಚಾರಿಸಿಲ್ಲ ಎಂದು ಉಚ್ಚಾಟಿತ ಕುಟುಂಬಗಳು ಆರೋಪಿಸುತ್ತಿವೆ.
ಹಲ್ದ್ವಾನಿ ಪ್ರಕರಣದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್‌ಗೆ ತೆರಳಿದ ನಂತರ ಸುಪ್ರೀಂ ಕೋರ್ಟ್ ಕುಟುಂಬಗಳಿಗೆ ಪರಿಹಾರವನ್ನು ನೀಡಿದರೆ, ರಾಂಚಿ ಉಚ್ಚಾಟನೆಯ ಪ್ರಕರಣದಲ್ಲಿ ಅವರ ದುಃಸ್ಥಿತಿಯ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಗಮನ ಹರಿಸಿಲ್ಲ ಎಂದೇ ಹೇಳಬಹುದು. ಎರಡೂ ಪ್ರಕರಣಗಳ ಉಚ್ಚಾಟನೆಯ ಸ್ವರೂಪ ಮತ್ತು ಪ್ರಮಾಣ ಒಂದೇ ಆಗಿಲ್ಲ ಎಂಬುದು ನಿಜವೇ ಆಗಿದ್ದರೂ ಎರಡೂ ಪ್ರಕರಣಗಳಲ್ಲಿ ಅಪಾಯಕ್ಕೆ ಸಿಲುಕಿರುವುದು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳ ಜೀವನ. ಅದೂ ಉತ್ತರ ಭಾರತವನ್ನು ಭಾದಿಸುತ್ತಿರುವ ಈ ಕೊರೆಯುವ ಚಳಿಯಲ್ಲಿ. ಅದಕ್ಕಾಗಿಯೇ ಹಲ್ದ್ವಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯದ ಎರಡೂ ಸಂಸ್ಥೆಗಳನ್ನು ಮಾನವ ದೃಷ್ಟಿಕೋನದಿಂದ ಪರಿಶೀಲಿಸುವಂತೆ ಕೇಳಿಕೊಂಡಿದೆ. ಈಗ ಸುಪ್ರೀಂ ಕೋರ್ಟ್‌ನ ಅವಲೋಕನ ಮತ್ತು ಕಾಳಜಿ ರಾಂಚಿ ಪ್ರಕರಣಕ್ಕೂ ಅನ್ವಯಿಸಬೇಕಾಗುತ್ತದೆ.

ಸರ್ಕಾರಿ ಸಂಸ್ಥೆಗಳು, ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಸಹಾನುಭೂತಿಯಿಂದ ನೋಡಬೇಕು. ಮಹಾಸಭಾದ ಬೇಡಿಕೆಯಂತೆ ಮೊದಲು, ಸಂತ್ರಸ್ತ ಕುಟುಂಬಗಳಿಗೆ ಚಳಿಯನ್ನು ನಿಭಾಯಿಸಲು ಟೆಂಟ್‌ಗಳು, ಬೆಚ್ಚಗಿನ ಬಟ್ಟೆಗಳು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆನಂತರ, ಅವರಿಗೆ ಸರಿಯಾದ ಮತ್ತು ಸಮಯೋಚಿತ ಪುನರ್ವಸತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.
ಡಿಸೆಂಬರ್ 28ರಂದು ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸುವ, ಎಲ್ಲಾ ರೀತಿಯ ದಾಖಲೆಗಳೂ ಇರುವ ಬಡ, ದಲಿತ, ಆದಿವಾಸಿ ಜನರ ಬದುಕು ಬೀದಿಗೆ ಬಿದ್ದಿದೆ. ಅದನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿಯನ್ನು ಬುಡಕಟ್ಟು ಸಮುದಾಯಗಳು, ಬಡವರು ಮತ್ತು ತುಳಿತಕ್ಕೊಳಗಾದ ವರ್ಗದವರ ನಾಯಕ ತಾನು ಎಂದೇ ಹೇಳಿಕೊಳ್ಳುವ ಹೇಮಂತ್ ಸೊರೇನ್ ವಹಿಸಿಕೊಳ್ಳಲೇಬೇಕು.