ನವದೆಹಲಿ : ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಗಳನ್ನು ಮಂಡಿಸಿ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಅಲ್ಲದೆ ಕೇಂದ್ರ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಕಿರಣ್ ರಿಜಿಜು ಕೇಂದ್ರ ಸರ್ಕಾರದ ಮಸೂದೆಯನ್ನು ವಿಪಕ್ಷಗಳು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಇನ್ನೂ ಮಧ್ಯಾಹ್ನದ ವೇಳೆಗೆ ಲೋಕಸಭೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ಮಸೂದೆಯ ಮೇಲೆ ಸುದೀರ್ಘವಾದ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅಲ್ಲದೆ ಮಾತಿನಲ್ಲೆ ವಿಪಕ್ಷಗಳ ನಾಯಕರಿಗೆ ಟಾಂಗ್ ಕೊಟ್ಟ ಮೋದಿ, ಮಹಿಳಾ ಮೀಸಲಾತಿ ಬಿಲ್ (Womens Reservation Bill) ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸುವುದಿಲ್ಲ. ಈ ನಿರ್ಧಾರದ ಹಿಂದೆ ಮೋದಿಗೆ ರಾಜಕೀಯ ಸ್ವಾರ್ಥ ಇದೆ ಎಂದು ಇಲ್ಲಿ ಕೆಲವರ ಭಾವನೆಯಿದೆ. ಇದನ್ನ ವಿರೋಧ ಮಾಡಿದರೆ ನಮಗೆ ರಾಜಕೀಯ ಲಾಭ ಸಿಗುತ್ತದೆ ಎಂದುಕೊಂಡಿದ್ದಾರೆ. ಆದರೆ ನಮಗೆ ಈ ವಿಚಾರದಲ್ಲಿ ಕ್ರೆಡಿಟ್ ಬೇಡ, ನಾಳೆ ಜಾಹೀರಾತು ನೀಡುವ ಮೂಲಕ ಪ್ರತಿಯೊಬ್ಬರಿಗೂ ಕ್ರೆಡಿಟ್ ನೀಡಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ಕಾಲೆಳೆದಿದ್ದಾರೆ.
ಈ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವವರು ಸುಧೀರ್ಘ ಕಾಲದವರೆಗೂ ಬೆಲೆ ತೆರಬೇಕಾಗುತ್ತದೆ ಎಂದು ಮಾತಿನಲ್ಲೇ ಪಂಚ್ ಕೊಟ್ಟರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಈ ದಿನವು ಅತ್ಯಂತ ನಿರ್ಣಾಯಕವಾಗಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಅಗತ್ಯವಿದೆ, ಪ್ರಜಾಪ್ರಭುತ್ವದಲ್ಲಿ ಸಮಯಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್ ಎದುರು ಸೋತ ಟ್ರಂಪ್ ಹೊಸ ವರಸೆ..
ವಿಕಸಿತ ಭಾರತ ಅಂದರೆ ನೀತಿ ನಿಯಮಗಳನ್ನ ರೂಪಿಸುವಲ್ಲಿ ಮಹಿಳೆಯರ ಪಾತ್ರವೂ ಅಗತ್ಯವಾಗಿದೆ..
ಈ ನಮ್ಮ ವ್ಯವಸ್ಥೆಯಲ್ಲಿ ಹೊಸ ಆಯಾಮ ತರುವ ಒಳ್ಳೆಯ ಸಮಯ ಈಗ ಬಂದಿದೆ. ನಾವ – ನೀವೆಲ್ಲ ಅದೃಷ್ಟವಂತರು, ಇಂತಹ ಮಹತ್ವದ ಕಾನೂನಿನ ಜಾರಿಯಲ್ಲಿ ಭಾಗಿಯಾಗಿದ್ದೇವೆ. ಎಲ್ಲ ಸಂಸದರು ಒಟ್ಟಾಗಿ ದೇಶಕ್ಕೆ ನೂತನ ದಾರಿ ಹಾಗೂ ದಿಕ್ಕನ್ನು ತೋರಿಸುತ್ತಿದ್ದೇವೆ. ಈ ತೀರ್ಮಾನವು ದೇಶದ ರಾಜಕೀಯ ಸ್ವರೂಪವನ್ನು ಬಿಂಬಿಸಲಿದೆ. ಇದು ದೇಶದ ದಿಕ್ಕು ಬದಲಿಸುವ ತೀರ್ಮಾನವೂ ಆಗಿದೆ. ದೇಶ ಹೊಸ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದೆ, ʻವಿಕಸಿತ ಭಾರತ ಅಂದರೆ ಮೂಲಸೌಕರ್ಯಗಳ ಅಭಿವೃದ್ಧಿ ಅಷ್ಟೇ ಅಲ್ಲದೆ, ವಿಕಸಿತ ಭಾರತ ಅಂದರೆ ನೀತಿ ನಿಯಮಗಳನ್ನ ರೂಪಿಸುವಲ್ಲಿ ಮಹಿಳೆಯರ ಪಾತ್ರವೂ ಅಗತ್ಯವಾಗಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ.
ಈ ವಿಚಾರದಲ್ಲಿ ನಾವು ಈಗಾಗಲೇ ವಿಳಂಬ ಮಾಡಿದ್ದೇವೆ, ಇದಕ್ಕೆ ಕಾರಣ ಯಾರೇ ಆಗಿರಬಹುದು, ಈಗ ನಾವು ಒಟ್ಟಾಗಿ ಈ ಕಾರ್ಯ ಮಾಡಬೇಕು. ಅದಕ್ಕಾಗಿ ನಾವು ಎಲ್ಲ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದೇವೆ. ಮುಖ್ಯವಾಗಿ ಈ ಮಸೂದೆಯನ್ನು ವಿರೋಧಿಸುವವರನ್ನು ನಮ್ಮ ದೇಶದ ಮಹಿಳೆಯರು ಕ್ಷಮಿಸುವುದಿಲ್ಲ. ಇದು ರಾಜಕೀಯ ಹಿತಾಸಕ್ತಿ ವಿಚಾರವಾಗಿಲ್ಲ. ಯಾಕೆಂದರೆ ಕಳೆದ 2023ರ ವೇಳೆಯಲ್ಲಿ ಯಾರು ಇದನ್ನು ವಿರೋಧಿಸಿದ್ದರೋ ಅವರು ಇಂದು ಇಲ್ಲಿ ಇಲ್ಲ. ವಿಪಕ್ಷಗಳಿಗೂ ಇದರಲ್ಲಿ ಲಾಭ ಇದೆ, ಇದನ್ನ ರಾಜಕೀಯಗೊಳಿಸುವುದು ಬೇಡ ಎಂದು ವಿಪಕ್ಷಗಳಿಗೆ ಮಾರ್ಮಿಕ ಸಂದೇಶ ರವಾನಿಸಿದ್ದಾರೆ.
ಈಗ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ..

ಪಂಚಾಯತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಯಾವುದೇ ಆಕ್ಷೇಪ ಇಲ್ಲ. ಯಾಕೆಂದರೆ ನಮ್ಮ ಹುದ್ದೆಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಿದ್ದರು. ಆದರೆ ಲೋಕಸಭೆ ವಿಧಾನಸಭೆಯಲ್ಲಿ ಮೀಸಲಾತಿಗೆ ವಿರೋಧಿಸುತ್ತಿದ್ದರು ಎಂದು ಪರೋಕ್ಷವಾಗಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಗ ಆಗಿದ್ದು ಆಗಿದೆ, ಆದರೆ ಇಂದು ಹಾಗೆ ಯೋಚಿಸಿ ತಪ್ಪು ಮಾಡಬೇಡಿ. ಈಗ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೂ ಅವರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದನ್ನ ಯಾಕೆ ತಡೆಯಲಾಗುತ್ತಿದೆ? ಇದನ್ನು ರಾಜಕೀಯವಾಗಿ ನೋಡಬೇಡಿ, ರಾಜಕೀಯ ಹಿತಕ್ಕಾಗಿ ಇದನ್ನ ಮಾಡಲಾಗುತ್ತಿದೆ. ವಿಕಸಿತ್ ಭಾರತಕ್ಕೆ ಅತ್ಯುತ್ತಮ ನಾರೀ ಶಕ್ತಿ ಅಗತ್ಯವಿದೆ ಪ್ರಧಾನಿ ಮೋದಿ ವಿಪಕ್ಷಗಳಿಗೆ ತಿಳಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಶೇ. 33ರಷ್ಟು ಮೀಸಲಾತಿ ನೀಡುವುದು ಇದು ಪ್ರತಿಯೊಬ್ಬ ಮಹಿಳೆಯರ ಹಕ್ಕಾಗಿದೆ. ನಾವು ಇದನ್ನು ಬಹಳ ವರ್ಷಗಳಿಂದ ತಡೆದಿದ್ದೇವೆ. ಪ್ರಾಯಶ್ಚಿತ್ತದೊಂದಿಗೆ ನಾವು ಅವರಿಗೆ ಅವರ ಹಕ್ಕು ನೀಡುತ್ತಿದ್ದೇವೆ. ಈಗಲೂ ತಾಂತ್ರಿಕ ಅಂಶಗಳನ್ನು ಇಟ್ಟು ತಡೆಯುವ ಯತ್ನ ನಡೆದಿದೆ. 2023 ರಲ್ಲಿ ಸರ್ವಾನುಮತದಿಂದ ಮಹಿಳಾ ಮೀಸಲಾತಿ ಮಸೂದೆಯನ್ನ ಒಪ್ಪಿಕೊಳ್ಳಲಾಗಿತ್ತು. ಅಂದು ಈ ಮಸೂದೆಗೆ ರಾಜಕೀಯ ಬಣ್ಣ ಬಳಿಯಲಿಲ್ಲ. ಈಗ ಜನಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಜನಗಣತಿಗೆ ನಾವೇಲ್ಲ ಏನು ಪ್ರಯತ್ನ ಮಾಡಿದ್ದೇವೆ ಅದನ್ನು ಎಲ್ಲರೆದುರು ತೆರೆದಿಡುತ್ತೇವೆ. 2023ರಲ್ಲೂ ಶೇ. 33ರಷ್ಟು ಮಹಿಳಾ ಮೀಸಲಾತಿ ಕೂಡಲೇ ಜಾರಿಯಾಗಬೇಕು ಎನ್ನುವ ಒತ್ತಾಯ ಅಧಿಕವಾಗಿತ್ತು. ಬಳಿಕ 2024 ರಲ್ಲಿ ಕಡಿಮೆ ಅವಧಿಯಲ್ಲಿ ಇದರ ಜಾರಿ ಸಾಧ್ಯವಿರಲಿಲ್ಲ. ಹೀಗಾಗಿ ಈಗ ಅದನ್ನು ಜಾರಿ ಮಾಡಲಾಗುತ್ತಿದೆ ಮಹಿಳಾ ಮೀಸಲಾತಿ ಮಸೂದೆಯ ವಿಳಂಬಕ್ಕೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರಣ ನೀಡಿದ್ದಾರೆ.






