ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತೆ ಎಂದು ಊಹೆ ಮಾಡುವುದೇ ತಪ್ಪು. ಒಂದು ವೇಳೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದಿದ್ದರೆ ಒಂದು ಮಾತನ್ನು ಕೇಂದ್ರ ಸರ್ಕಾರ ಹೇಳುತ್ತಿತ್ತೋ ಏನೋ..! ಈಗ ಕೇಂದ್ರ ಮಧ್ಯಪ್ರವೇಶ ಮಾಡಿ ಕರ್ನಾಟಕದ ಜನರಿಗೆ ನ್ಯಾಯ ಕೊಡಿಸುತ್ತದೆ ಎಂದು ಹೇಳಲಾಗದು. ಕೇವಲ ರಾಜ್ಯ ಬಿಜೆಪಿ ಸೊಲುಂಡಿದ್ದರಿಂದಲೇ ಮುನಿಸಿಕೊಂಡು ವಿಪಕ್ಷ ನಾಯಕ ಹಾಗು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡದೆ ಸುಮ್ಮನಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕ ಜನರ ಪರವಾಗಿ ನಿಲ್ಲುವುದು ಸಾಧ್ಯವೇ..? ಅಸಾಧ್ಯದ ಮಾತು. ಆದರೂ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಕೇಂದ್ರ ಮಧ್ಯಪ್ರವೇಶ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ.
ತಮಿಳುನಾಡಿಗೆ ನೀರು ಬಿಡಲ್ಲ.. ಕಠಿಣ ನಿರ್ಧಾರ ಮೊಳಗಬೇಕು..
ಈ ಹಿಂದೆ 90ರ ದಶಕದಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯ. ಕರ್ನಾಟಕದಿಂದ ತಮಿಳುನಾಡಿಗೆ ನೀರನ್ನು ಹರಿಸುವಂತೆ ಆದೇಶ ಮಾಡಲಾಗಿತ್ತು. ಆದೇಶಕ್ಕೆ ಸಡ್ಡು ಹೊಡೆದ ಬಂಗಾರಪ್ಪ ನಾವು ಕರ್ನಾಟಕದಿಂದ ನೀರು ಬಿಡುವುದಕ್ಕೆ ಸಾಧ್ಯವೇ ಇಲ್ಲ ಎಂದು ತಿರುಗಿ ಬಿದ್ದಿದ್ದರು. ಅದೇ ಫಾರ್ಮುಲಾವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಸರಿಸಿದ್ದೇ ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೀರ್ತಿ ಪತಾಕೆ ಹಾರುವುದು ಅಷ್ಟೇ ಅಲ್ಲದೆ ಕಾವೇರಿ ವಿವಾದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಅವಕಾಶವಿದೆ. ತಕ್ಷಣವೇ ಸುಪ್ರೀಂಕೋರ್ಟ್ಗೆ ಮರುಪರಿಶೀಲನೆಗೆ ಅರ್ಜಿ ಹಾಕುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ನೀರನ್ನು ಬಿಡುವುದೇ ಇಲ್ಲ. ನೀರಿಲ್ಲ ಎಂದು ನಿರ್ಧಾರ ಮಾಡಿದಾಗ ಇದಕ್ಕೆ ಸೂಕ್ತ ಉತ್ತರ ಸಿಗಲಿದೆ.
ಕರ್ನಾಟಕ ನೀರು ಬಿಡಲ್ಲ ಎಂದು ಪಟ್ಟು ಹಿಡಿದರೆ ಏನಾಗಲಿದೆ..?
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಕೇಂದ್ರ ಸರ್ಕಾರದ ಸಮಿತಿಗಳು ನೀರು ಬಿಡುಗಡೆಗೆ ಸೂಚನೆ ಕೊಡಬಹುದು. ಆಗಲೂ ಕರ್ನಾಟಕ ನೀರು ಬಿಡದೆ ಇದ್ದರೆ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಒಂದು ವೇಳೆ ಕರ್ನಾಟಕ ಸುಪ್ರೀಂಕೋರ್ಟ್ಗೆ ವಸ್ತುಸ್ಥಿತಿ ಬಗ್ಗೆ ಅಧ್ಯಯನ ಮಾಡಿದ ಬಳಿಕ ನೀರು ಎಷ್ಟಿದೆ ಎನ್ನುವುದರ ಮೇಲೆ ನಿರ್ಧಾರ ಮಾಡಿ, ಅಲ್ಲೀವರೆಗೂ ನೀರು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದು ತಿರುಗಿಬಿದ್ದರೆ, ಕೂಡಲೇ ಆದೇಶ ಜಾರಿಗೆ ಕ್ರಮ ವಹಿಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಆದೇಶ ಮಾಡಬಹುದು. ಒಂದು ವೇಳೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಯೂ ಕಾನೂನು ಪಾಲನೆಗೆ ಮುಂದಾಗದೆ ಇದ್ದರೆ ಸ್ವತಃ ಕೇಂದ್ರ ಸರ್ಕಾರವೇ ಈ ಬಗ್ಗೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಿ ಎಂದು ಹೇಳಬಹುದು.
ಕೇಂದ್ರ ಸರ್ಕಾರ ಇಕ್ಕಟ್ಟಿಗೆ.. ವಸ್ತುಸ್ಥಿತಿ ಮನವರಿಕೆ ಆಗಲಿದೆ..
ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದಿರುವ ಕಾರಣಕ್ಕೆ ಮುಖ್ಯಮಂತ್ರಿ ಅಥವಾ ಜಲಸಂಪನ್ಮೂಲ ಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಬರಬಹುದು. ಕೂಡಲೇ ನೀರು ಬಿಡುಗಡೆಗೆ ಒಪ್ಪದ ನಾಯಕರ ಬಂಧನಕ್ಕೆ ಆದೇಶ ಆಗಬಹುದು. ಆದರೆ ಕೇಂದ್ರ ಸರ್ಕಾರ, ಆ ರೀತಿ ಬಂಧನ ಮಾಡಲು ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಪರಿಸ್ಥಿತಿ ಏನಿದೆ..? ಕರ್ನಾಟಕ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಯಾಕೆ ಎನ್ನುವ ವಸ್ಥುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲೇ ಬೇಕಿದೆ. ಆ ಮೂಲಕ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕೇಂದ್ರ ಸರ್ಕಾರವೇ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಆದರೆ ಇಷ್ಟೆಲ್ಲಾ ನಡೆಯಬೇಕಿದ್ದರೆ ಮೊದಲು ಕರ್ನಾಟಕ ಸರ್ಕಾರ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದು ಕೂರಬೇಕಿದೆ ಅಷ್ಟೆ.
ಕೃಷ್ಣಮಣಿ