2014 ಹಾಗು 2019ರಲ್ಲಿ ಭರ್ಜರಿಯಾಗಿ ಜಯ ದಾಖಲಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ದೇಶದ ಚುಕ್ಕಾಣಿ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ ಖ್ಯಾತಿ ಹೊಂದಿದ್ದರೂ ಶೇಕಡ 50ಕ್ಕಿಂತ ಹೆಚ್ಚು ಮಂದಿ ಮೋದಿ ನೇತೃತ್ವದ ಸರ್ಕಾವರನ್ನು ವಿರೋಧಿಸಿದ್ದಾರೆ ಎನ್ನುವುದು ಚುನಾವಣಾ ಆಯೋಗದ ಮತ ಅಂಕಿಸಂಖ್ಯೆ ಸಾಬೀತು ಮಾಡಿದೆ. ಇದೀಗ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಜೀವನ ನಿರ್ವಹಣೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಹೆಚ್ಚಳವಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ನೀಡಿದ್ದ ಭರವಸೆಗಳು ಹುಸಿಯಾಗಿವೆ ಎನ್ನುವುದು ವಿಪಕ್ಷಗಳ ಆರೋಪ ಆಗಿದೆ. ಹಾಗಾಗಿ ಈ ಬಾರಿ ದೇಶದ ಜನರು ಮೋದಿಯನ್ನು ಸೋಲಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಸಮಯದಲ್ಲಿ ಗ್ಯಾರಂಟಿ ಕೂಡ ಮೋದಿ ಕೈ ಹಿಡಿಯುವುದಿಲ್ಲ ಎನ್ನಬಹುದಾಗಿದೆ.

ಕರ್ನಾಟಕದಲ್ಲಿ ಗ್ಯಾರಂಟಿಗೆ ಜೈಕಾರ.. ತೆಲಂಗಾಣದಲ್ಲೂ ಗ್ಯಾರಂಟಿ..
ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಏರಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಒಟ್ಟು 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದೆ. ಇನ್ನುಳಿದ ಪಧವೀಧರರಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗು ಡಿಪ್ಲೋಮಾ ಪಧವೀಧರಿಗೆ ಒಂದೂವರೆ ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಮುಂಬರುವ ಡಿಸೆಂಬರ್ನಿಂದ ಜಾರಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಈ ಯೋಜನೆಗಳು ಕರ್ನಾಟಕದಲ್ಲಿ ಮೆಚ್ಚುಗೆ ಪಡೆದು ಮತಗಳನ್ನು ಸೆಳೆಯುವಲ್ಲಿ ಯಶಸ್ವಿ ಆಗಿದ್ದರಿಂದ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಅಸ್ತ್ರವನ್ನೇ ಪ್ರಯೋಗ ಮಾಡಿದೆ. 5 ಗ್ಯಾರಂಟಿ ಜೊತೆಗೆ ಇನ್ನೂ ಒಂದು ಗ್ಯಾರಂಟಿ ಸೇರಿ ಒಟ್ಟು 6 ಗ್ಯಾರಂಟಿ ನೀಡಲಾಗಿದೆ.
ಗ್ಯಾರಂಟಿಗಳನ್ನು ವಿರೋಧ ಮಾಡಿದೆ ಮೋದಿ ನೇತೃತ್ವದ ಸರ್ಕಾರ..!
ಗ್ಯಾರಂಟಿಗಳಿಂದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ಬಡ ಜನರ ಕೈಗೆ ಹಣ ನೀಡಿದರೆ ಆ ಹಣ ಮತ್ತೆ ಮಾರುಕಟ್ಟೆಗೆ ಬರುತ್ತದೆ. ಈ ಮೂಲಕ ಮಾರುಕಟ್ಟೆ ಕೂಡ ಅಭಿವೃದ್ಧಿ ಆಗುತ್ತದೆ. ಹಣ ಚಲಾವಣೆ ಹೆಚ್ಚಳ ಆಗಿ ರಾಜ್ಯ ದೇಶದ ಅಭಿವೃದ್ಧಿ ಸಾಧ್ಯ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಅತ್ತ ಮೋದಿ ನೇತೃತ್ವದ ಬಿಜೆಪಿ ಹಾಗು ಎನ್ಡಿಎ ಮೈತ್ರಿಕೂಟ ಮಾತ್ರ ಇದೊಂದು ದೇಶದ ಆರ್ಥಿಕತೆಗೆ ಮಾರಕವಾಗಿರುವ ಗ್ಯಾರಂಟಿ ಯೋಜನೆ. ದೇಶದ ಸಂತಪ್ಪು ಭರಿದಾಗುತ್ತದೆ. ಈ ಮೂಲಕ ದೇಶದ ಅಭಿವೃದ್ಧಿ ಕುಂಠಿತ ಆಗುತ್ತದೆ. ಮತ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಈ ಕುತಂತ್ರ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದೆ. ಇದೀಗ ಲೋಕಸಭೆಗೂ ಕಾಂಗ್ರೆಸ್ ಕೊಂಡೊಯ್ಯುವ ಸಾಧ್ಯತೆ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಮೋದಿ ಯಾವ ಅಸ್ತ್ರ ಬಿಡುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.
‘ಗ್ಯಾರಂಟಿ’ಗೆ ಎದುರಾಗಿ ಮೋದಿ ಯಾವ ಅಸ್ತ್ರ ಬಿಡುತ್ತಾರೆ..?
ರಾಜ್ಯ ಹಾಗು ಇಡೀ ದೇಶದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಒಂದು ಕಡೆ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದೆ. ಅದೇ ಬಿಜೆಪಿ ಮತ್ತೊಂದು ಕಡೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ನೀಡಿದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮಹಿಳೆಯರಿಗೆ ಮಾಸಿಕ 1 ಸಾವಿರ ರೂಪಾಯಿ ಧನಸಹಾಯ ನೀಡುವ ಯೋಜನೆ ಚಾಲ್ತಿಯಲ್ಲಿದೆ. ಇದೀಗ ಗ್ಯಾರಂಟಿ ಯೋಜನೆಗೆ ಕಾಂಗ್ರೆಸ್ ಪಕ್ಷ ಬ್ಯಾಂಡ್ ಅಂಬಾಸಿಟರ್ ಆಗಿರುವ ಕಾರಣಕ್ಕೆ ಗ್ಯಾರಂಟಿ ಕೊಡುವುದಕ್ಕೆ ಕಾಂಗ್ರೆಸ್ ಅರ್ಹವಾಗಿದೆ. ಇದು ದೇಶದ ಜನರನ್ನು ಸೆಳೆದರೂ ಅಚ್ಚರಿಯಿಲ್ಲ. ಆದರೆ ಇದೇ ಗ್ಯಾರಂಟಿ ಕೊಡುವುದಕ್ಕೆ ಬಿಜೆಪಿ ಪಕ್ಷ ಸಿದ್ಧವಾಗಿದ್ದರೂ ಗ್ಯಾರಂಟಿ ಅವಕಾಶವಿಲ್ಲ ಎನ್ನಬಹುದು.
ಕೃಷ್ಣಮಣಿ