ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಈ ವಿಚಾರ ತಿಳಿಸಿದ್ದು, ಇದಕ್ಕಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿ, ‘ಪಾರಂಪರಿಕ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಒಟ್ಟು 94 ಬಗೆಬಗೆಯ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಹೊಂದಿರುವ ಕೆ.ಎಸ್.ಡಿ.ಎಲ್.ನ ವಸ್ತುಗಳಿಗೆ ಉತ್ತರ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ವಿಜಯಪುರದ ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ 50 ಎಕರೆ ಜಾಗದಲ್ಲಿ ಸಾಬೂನು ಕಾರ್ಖಾನೆಯ ನೂತನ ಉತ್ಪಾದನಾ ಘಟಕ ಆರಂಭಿಸಲಾಗುವುದು. ಇದರಿಂದ ಆ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ಉದ್ಯೋಗಸೃಷ್ಟಿ ಮತ್ತು ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ : ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್
227.91 ಕೋಟಿ ರೂ.ಗಳಲ್ಲಿ ಭೂಮಿ ಖರೀದಿಗೆ 30 ಕೋಟಿ ರೂ, ಉತ್ಪಾದನಾ ಸ್ಥಾವರ ನಿರ್ಮಾಣಕ್ಕೆ 77.88 ಕೋಟಿ ರೂ, ಮೂಲಸೌಕರ್ಯ ವ್ಯವಸ್ಥೆಗೆ 24 ಕೋಟಿ ರೂ, ಯಂತ್ರೋಪಕರಣಗಳ ಖರೀದಿಗೆ 70.80 ಕೋಟಿ ರೂ, ಟೆಂಡರ್ ಪ್ರೀಮಿಯಂಗೆ 8.63 ಕೋಟಿ ರೂ, ಸಾದಿಲ್ವಾರು ವೆಚ್ಚಕ್ಕೆ 8.63 ಕೋಟಿ ರೂ, ಮತ್ತು ಇತರೆ ವೆಚ್ಚಗಳಿಗೆಂದು 7.97 ಕೋಟಿ ರೂ ಮೀಸಲಿಡಲಾಗಿದೆ. ಇಲ್ಲಿ ಎಕರೆಗೆ 59.30 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕೆ.ಎಸ್.ಡಿ.ಎಲ್.ನ ಒಂದು ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಚಿಂತನೆ ಕಳೆದ ಒಂದು ವರ್ಷದಿಂದಲೂ ಇತ್ತು. 110 ವರ್ಷಗಳ ಇತಿಹಾಸವಿರುವ ಕಾರ್ಖಾನೆಯು ಇದೇ ಮೊದಲ ಬಾರಿಗೆ 2025-26ರಲ್ಲಿ 47,494 ಟನ್ ಉತ್ಪಾದನೆ ಮತ್ತು 2,016 ಕೋಟಿ ರೂ.ಗಳ ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿದ್ದು, 507 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ನೂತನ ಘಟಕದ ಆರಂಭವು ಸಂಸ್ಥೆಗೆ ಮತ್ತಷ್ಟು ಬಲ ತರಲಿದೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಉತ್ಕರ್ಷಕ್ಕೆ ಕಳೆದ ಮೂರು ವರ್ಷಗಳಿಂದ ಬ್ರ್ಯಾಂಡಿಂಗ್, ಪ್ರಚಾರ, ಮಾರುಕಟ್ಟೆ, ಗುಣಮಟ್ಟ ನಿರ್ವಹಣೆ, ರಫ್ತು ವಹಿವಾಟು, ಇ-ಕಾಮರ್ಸ್ ಸೇರಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಾಟೀಲ ನುಡಿದಿದ್ದಾರೆ.





