ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..
“ ಪಾಪಾ ಮುಝೆ ಬಚಾ ಲೋ,,,,, ” (ಅಪ್ಪಾ ನನ್ನನ್ನು ಕಾಪಾಡೀ,,,,,) ಇದು ಯಾವುದೋ ಬಾಲಿವುಡ್ ಸಿನಿಮಾದ ಸಂಭಾಷಣೆಯಲ್ಲ. ವಿಕಸಿತ ಭಾರತದಲ್ಲಿ ಈ ಕೂಗು ಮಣಿಪುರದಿಂದ ಬೆಂಗಳೂರಿನವರೆಗೂ ಕೇಳಿಸುತ್ತಲೇ ಇದೆ. ಒಂದು ಬದಿಯಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿ ವಿದ್ಯಾಭ್ಯಾಸ ನೀಡುವ (ಬೇಟಿ ಬಚಾವೋ ಬೇಟಿ ಪಡಾವೋ ) ಘೋಷಣೆಗಳು ಮೊಳಗುತ್ತಿದ್ದರೂ ಮತ್ತೊಂದೆಡೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿ ಎಸೆಯುವ ಸಂಸ್ಕೃತಿಯನ್ನೂ ನವ ಭಾರತ ಅಳವಡಿಸಿಕೊಂಡಿದೆ.
ಕಳೆದ ವರ್ಷ ದಸರಾ ಮುಗಿದ ಕೆಲವೇ ದಿನಗಳ ನಂತರ ಮೈಸೂರಿನ ಅರಮನೆ ಎದುರಿನ ವಸ್ತುಪ್ರದರ್ಶನ ಮೈದಾನದಲ್ಲಿ 9 ವರ್ಷದ ಹಸುಳೆಯೊಂದರ ಇದೇ ಕೂಗು ನೆನಪಿರಲೇಬೇಕು. ಪಾಪಾ ಮುಝೆ ಬಚಾಲೋ ಎಂಬ ಹೃದಯ ವಿದ್ರಾವಕ ಕೂಗು ಧ್ವನಿಸಿದ್ದು ದೆಹಲಿಯ ಪಾದಚಾರಿ ರಸ್ತೆಯಲ್ಲಿ ನಿದ್ರಿಸುತ್ತಿದ್ದ 10 ವರ್ಷದ ಬಾಲಕಿಯ ಕೊರಳಿಂದ. ಸಾವಿರಾರು ಮೈಲುಗಳ ಅಂತರವಿದ್ದರೂ ಎರಡೂ ಕೂಗುಗಳು ಒಂದೇ ಗಾಳಿಯಲ್ಲಿ ತೇಲಿ ಹೋಗಿವೆ. ಇಬ್ಬರೂ ಬಾಲೆಯರು ಅತ್ಯಾಚಾರಕ್ಕೀಡಾಗಿ, ಹತ್ಯೆಗೊಳಗಾಗಿದ್ದಾರೆ.
ಎರಡೂ ಪ್ರಕರಣಗಳ ಸಮಾನ ಎಳೆ ಎಂದರೆ ವಿಶಾಲ ಸಮಾಜದ, ರಾಜಕೀಯ ಅಧಿಕಾರ ಕೇಂದ್ರಗಳ ಹಾಗೂ ಜನಪ್ರತಿನಿಧಿಗಳ ನಿಷ್ಕ್ರಿಯ ಮೌನ. ದೇಶದ ರಾಜಧಾನಿಯಲ್ಲಿ. ಆರು ಜನರ ವಲಸೆ ಕಾರ್ಮಿಕ ಕುಟುಂಬವೊಂದು ಪಾದಚಾರಿ ರಸ್ತೆಯಲ್ಲಿ ರಾತ್ರಿ ಕಳೆಯುವುದೇ ತಲೆತಗ್ಗಿಸುವ ವಿಚಾರ. (ಫಿರ್ ಸುಬಹ್ ಹೋಗೀ ಚಿತ್ರದ ಸಾಹಿರ್ ವಿರಚಿತ ʼಚಿನ್ ಓ ಅರಬ್ ಹಮಾರಾ ,,,,ʼ ಹಾಡು ನೆನಪಾಗುತ್ತದೆ.) ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಲ್ಪನೆಗೆ ನಿಲುಕದವರು ಈ ಅಬ್ಬೇಪಾರಿಗಳು.
ಈ ಹಸುಳೆಯನ್ನು ಕ್ಯಾಬ್ ಚಾಲಕನೊಬ್ಬ ಮುಂಜಾನೆ 4 ಗಂಟೆಯ ವೇಳೆಗೆ ಅಪಹರಿಸಿದ್ದಾನೆ. ಈ ಕೂಸಿನ ಕೂಗು ತಂದೆಯನ್ನು ಎಚ್ಚರಿಸಿದೆ ಆದರೆ ಅಟ್ಟಿಸಿಕೊಂಡು ಹೋಗುವಷ್ಟರಲ್ಲಿ ಆರೋಪಿ ಚಾಲಕ ಮಗುವಿನೊಡನೆ ಪರಾರಿಯಾಗಿದ್ದಾನೆ.
ಪೊಲೀಸರು ಈ ಆರೋಪಿಯನ್ನು ಶೀಘ್ರದಲ್ಲೇ ಗುರುತಿಸಿ 20 ಕಿಲೋಮೀಟರ್ ದೂರದಲ್ಲಿ ಆತನನ್ನು ಬಂಧಿಸಿದ್ದಾರೆ. ಆ ವೇಳೆಗೆ 10 ವರ್ಷದ ಬಾಲೆಯ ಮೇಲೆ ಅತ್ಯಾಚಾರ ಎಸಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಮೃತ ದೇಹವನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ. ಆರೋಪಿ ಬಶುಕುಮಾರ್ ಸಿಂಗ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಏತನ್ಮಧ್ಯೆ ಈ ಕಾರ್ಮಿಕರ ಕುಟುಂಬ ನಾಲ್ಕು ತಿಂಗಳ ಹಿಂದೆ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದು, ಉದ್ಯೋಗ-ಸೂರು ಎರಡೂ ಇಲ್ಲದೆ ರಸ್ತೆಯಲ್ಲೇ ಜೀವನ ಕಳೆದಿದ್ದಾರೆ. ತಮ್ಮ ಹಿರಿಯ ಮಗಳನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳುವ ಶಕ್ತಿ ಯಾರಿಗಿದೆ ? ರಾಜಕೀಯ ಪಕ್ಷಗಳು, ಧಾರ್ಮಿಕ ಧ್ವನಿಗಳು, ಸರ್ಕಾರ, ಸಮಾಜ, ಸಂಸತ್ತು, ಪ್ರಧಾನಿ ???????
ಕ್ರೌರ್ಯ ಹಿಂಸೆಯ ನಡುವೆ ಸಂಬಂಧಗಳು
ಮತ್ತೊಂದು ಘಟನೆಯಲ್ಲಿ ಪೂನಾದ ಬಳಿ ಇರುವ ಲೋಹಾಘಡ ಪ್ರವಾಸಿ ತಾಣದಲ್ಲಿ 20 ವರ್ಷದ ಸಿಯಾ ಗೋಯಲ್, ಚಾರಣದ ನೆಪದಲ್ಲಿ ತನ್ನ ಪ್ರಿಯಕರೊಡನೆ ಬಂದಿದ್ದು, 26 ವರ್ಷದ ಕೇತನ್ ವಿಶಾಲ್ ಅಗರ್ವಾಲ್ ಎಂಬ ಯುವಕನನ್ನು 400 ಅಡಿ ಆಳದ ಕಂದಕಕ್ಕೆ ದೂಡಿ ಕೊಲೆಗೈದಿದ್ದಾಳೆ. ಆಕೆಯ ಮತ್ತೊಬ್ಬ ಪ್ರಿಯಕರನೂ ಈ ಅಪರಾಧದಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಮೂಲಗಳು ಹೇಳುತ್ತವೆ. ಬೆಂಗಳೂರಿನ ಸೀಗೆಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಘಟನೆಯಲ್ಲಿ 25 ವರ್ಷದ ಶ್ರೇತಾ ಎಂಬ ಯುವತಿ ತನ್ನ ತಂದೆ, ತಾಯಿ ಮತ್ತು ಕಿರಿಯ ಸೋದರಿಯನ್ನು ಭೀಕರವಾಗಿ ಹತ್ಯೆ ಮಾಡಿರುವುದು ವರದಿಯಾಗಿದೆ.
ಈ ಪ್ರಕರಣದಲ್ಲೂ ಸಹ ಲಿವಿಂಗ್ ಇನ್ ಸಂಬಂಧ ಬಯಸಿದ್ದ ಶ್ವೇತಾ ತನ್ನ ಪ್ರಿಯಕರನ ಜೊತೆಗೂಡಿ ಹತ್ಯೆ ಮಾಡಿರುವುದಾಗಿ ಪೊಲೀಸ್ ಮೂಲಗಳು ಹೇಳುತ್ತವೆ. ಮೈಸೂರು ಸಮೀಪದ ತಿ ನರಸೀಪುರ ಬಳಿ ಇರುವ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಶಿವಣ್ಣ ಎಂಬ ವ್ಯಕ್ತಿ, ಆತನ ಪತ್ನಿ ನಾಗರತ್ನ ಮತ್ತು ಮಗಳು ರಕ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ತನ್ನ ಮದುವೆಯ ನಿರೀಕ್ಷೆಯಲ್ಲಿದ್ದ ರಕ್ಷಿತಾ ಮತ್ತು ಆಕೆಯ ಕುಟುಂಬದವರಿಗೆ, ನಿಶ್ಚಿತ ಗಂಡು ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ನೊಂದು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಈ ಅತ್ಯಾಚಾರ, ಹತ್ಯೆ, ಆತ್ಮಹತ್ಯೆ ಇವೆಲ್ಲವೂ ಏನನ್ನು ಸೂಚಿಸುತ್ತಿದೆ ? ಜಗತ್ತಿಗೆ ಕಣ್ತೆರೆಯದ, ತೆರೆದರೂ ಲೋಕಜ್ಞಾನ ಪಡೆಯುವ ಸೌಕರ್ಯಗಳನ್ನೇ ಹೊಂದಿರದ 10 ವರ್ಷದ ಹೆಣ್ಣು ಮಕ್ಕಳು, ಪುರುಷರ ಕಾಮತೃಷೆಗೆ ಬಲಿಯಾಗುವುದು, ಭೀಕರ ಹತ್ಯೆಗೊಳಗಾಗುವುದು ನಾಗರಿಕ ಜಗತ್ತಿನಲ್ಲಿ ನಡೆಯುವಂತಹ ಘಟನೆಗಳೇ ಎಂಬ ಪ್ರಶ್ನೆ ಕಾಡುವುದಿಲ್ಲವೇ ? ರಾಜಕೀಯ ಪಕ್ಷಗಳಿಗೆ ಕಾಡುವುದಿಲ್ಲ ಏಕೆಂದರೆ ಎರಡೂ ಘಟನೆಗಳಲ್ಲಿ ಹಿಂದೂ, ಮುಸ್ಲಿಂ , ʼ ಜಿಹಾದ್ ʼ ಇತ್ಯಾದಿ ಕಾಣಲಿಲ್ಲ.
ರಾಜಕೀಯ ಸೋಂಕು ಸಹ ಗೋಚರಿಸಲಿಲ್ಲ. ಮೇಲ್ವರ್ಗದ ಸಮಾಜದಲ್ಲಿ ʼ ಆ ಬಾಲೆ ಪಾದಚಾರಿ ರಸ್ತೆಯಲ್ಲಿ ಏಕೆ ಮಲಗಬೇಕಿತ್ತು ? ʼ ಎಂಬ ಚರ್ಚೆಯೂ ನಡೆಯಬಹುದು. ಮುಖ್ಯವಾಹಿನಿ ಮಾಧ್ಯಮಗಳಿಗೆ ಇದು ಸುದ್ದಿಯೇ ಆಗುವುದಿಲ್ಲ ಏಕೆಂದರೆ ಇದು ಹೊರಜಗತ್ತಿನಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ. ಹಾಗಾಗಿ ಇವೆಲ್ಲವೂ ಕುಟುಂಬದೊಳಗಿನ, ಆಂತರಿಕ ಘಟನೆಗಳಾಗಿಬಿಡುತ್ತವೆ.
ತುಡುಗುಪಡೆಗಳ ಅಟ್ಟಹಾಸ
ಮೈಸೂರಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದ ಕೆಲವು ವಲಸೆ ಕಾರ್ಮಿಕರನ್ನು ʼʼ ಬಾಂಗ್ಲಾ ವಲಸಿಗರು ʼ ಎಂದು ಶಂಕಿಸಿ ಹಿಂದೂ ಜಾಗರಣಾ ವೇದಿಕೆಯ ಕೆಲವು ಸದಸ್ಯರು ಅವರನ್ನು ಸುತ್ತುವರೆದು ರೈಲ್ವೆ ಪೊಲೀಸಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ನಂತರ ಅವರು ಪಶ್ಚಿಮ ಬಂಗಾಲದವರು ಎಂದು ಖಚಿತವಾಗಿದೆ. ವೇದಿಕೆಯ ಕೆಲವರ ಮೇಲೆ ಎಫ್‌ಐಆರ್ ದಾಖಲಿಸಿ, ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಮೈಸೂರಿನ ಸಂಸದರಿಗೆ ಈ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವುದು ಅಪರಾಧವಾಗಿ ಕಾಣುತ್ತದೆ ಆದರೆ, ರೈಲು ಪ್ರಯಾಣಿಕರನ್ನು ʼ ಶಂಕೆಯ ಆಧಾರದ ಮೇಲೆ ʼ ತಪಾಸಣೆ ಮಾಡಿದ ಹಿಂದುತ್ವ ಕಾರ್ಯಕರ್ತರ ಕಾನೂನು ಮೀರಿದ ಕೃತ್ಯ ಹಾಗೆ ಕಾಣುವುದಿಲ್ಲ. ಇಲ್ಲಿ ಎಫ್‌ಐಆರ್ ದಾಖಲಿಸಬೇಕಿರುವುದು ಆ ಕೇವಲ ಆಜ್ಞಾಪಾಲಕರಾದ ಯುವಕರ ಮೇಲಲ್ಲ, ಅವರ ಹಿಂದೆ ಅಮೂರ್ತ ರೂಪದಲ್ಲಿರುವ ಮತದ್ವೇಷದ ಶಕ್ತಿಗಳ ವಿರುದ್ಧ.
ಮೈಸೂರಿಗೆ ಅಥವಾ ಯಾವುದೇ ಊರಿಗೆ ಹೊರಗಿನಿಂದ ಬರುವ ಜನರ ತಪಾಸಣೆ ಮಾಡುವ ಅಥವಾ ಅವರನ್ನು ʼ ಶಂಕಿಸುವ ʼ ಅಧಿಕಾರವನ್ನು ಈ ಕಾರ್ಯಕರ್ತರಿಗೆ ಕೊಟ್ಟವರಾದು ? ಕರ್ನಾಟಕಕ್ಕೆ/ಬೆಂಗಳೂರಿಗೆ 20 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಬಂದುಬಿಟ್ಟಿದ್ದಾರೆ ಎಂಬ ಉತ್ಪಾದಿತ ಸುಳ್ಳು (Manufactured Lie) ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ವಲಸೆ ಬರುವವರು ಸಾಮಾನ್ಯವಾಗಿ ಸಾಧಾರಣ ಕಾರ್ಮಿಕರಾಗಿರುತ್ತಾರೆ.
ಬೆಂಗಳೂರಿಗೆ ಒಮ್ಮೆಲೆ 10 ಲಕ್ಷ ವಲಸಿಗರು ಬಂದಿರುವುದೇ ಆದರೆ ಶ್ರಮ ಮಾರುಕಟ್ಟೆ (Labour Market ) ಕುಸಿದುಹೋಗುತ್ತದೆ. ಅರ್ಥಶಾಸ್ತ್ರದ ಕನಿಷ್ಟ ಪರಿಜ್ಞಾನ ಇರುವ ಯಾರಿಗೇ ಆದರೂ ಇದು ಅರ್ಥವಾಗುತ್ತದೆ. ಬರುವ ವಲಸಿಗರೆಲ್ಲರನ್ನೂ ʼ ಅಕ್ರಮ ʼ ಎಂದು, ಬಂಗಾಲಿ ಭಾಷಿಕರೆಲ್ಲರನ್ನೂ ʼ ಬಾಂಗ್ಲಾ ವಲಸಿಗರು ʼ ಎಂದು ವರ್ಗೀಕರಿಸುವ ವಾಟ್ಸಾಪ್ ವಿಶ್ವವಿದ್ಯಾಲಯದ ಸಂಶೋಧನೆ ಈ ಅನಾಹುತಗಳಿಗೆ ಕಾರಣವಾಗುತ್ತದೆ.
ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹವಾನಿಯಂತ್ರಿತ ಡಬ್ಬಿಗಳಲ್ಲೂ ( AC Coaches) ಪ್ರಯಾಣಿಕರು ಬಂದಿರುತ್ತಾರೆ. ಅಲ್ಲಿಯೂ ಬಂಗಾಲಿ ಭಾಷಿಕರು ಇರಬಹುದು. ಅವರನ್ನು ತಪಾಸಣೆ ಮಾಡಲು ಸಾಧ್ಯವೇ ? ಸೂಟು, ಬೂಟು, ಗಾಲಿಗಳ ಸೂಟ್‌ಕೇಸು, ಚಂದದ ಪೋಷಾಕು ಈ ವರ್ಗಗಳನ್ನು ಅನುಮಾನಿಸದಂತೆ ಮಾಡುತ್ತದೆ.
ತಮ್ಮ ನಿತ್ಯ ಬದುಕಿಗಾಗಿ ಅನ್ನ ಸೂರು ಮಕ್ಕಳ ಬದುಕಿಗಾಗಿ ಸಾವಿರಾರು ಕಿಲೋಮೀಟರ್ ದೂರದಿಂದ ವಲಸೆ ಏಕೆ ಬರುತ್ತಾರೆ ಎನ್ನುವುದು ನಮ್ಮ ಜಿಜ್ಞಾಸೆಯಾಗಬೇಕೋ, ಅವರ ಬಾಂಗ್ಲಾ ಅಸ್ಮಿತೆ ಪ್ರಶ್ನೆಯಾಗಬೇಕೋ ? ಮೆಟ್ರೋಗಳಲ್ಲಿ , ದಶಪಥ ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬರನ್ನೂ ಈ ಪ್ರಶ್ನೆ ಕಾಡಬೇಕು. ಆದರೆ ಕಾಡುವುದಿಲ್ಲ. ಏಕೆಂದರೆ ಸಾಂಪ್ರದಾಯಿಕ ಸಮಾಜ ಈ ವಲಸಿಗರ ಹಣೆಯ ಮೇಲೆ ಅಕ್ಷರಗಳನ್ನು ಹುಡುಕುತ್ತದೆ. ʼ ಹಣೆ ಬರಹ-ವಿಧಿ ಬರಹ ʼ ಈ ಕಾರ್ಮಿಕರನ್ನು ನಿಕೃಷ್ಟ ಎಂದು ವರ್ಗೀಕರಿಸುವ ಮಾಪನಾಗಿಬಿಡುತ್ತದೆ.
ಅಮಾನುಷ ಪದ್ಧತಿಗಳ ನಡುವೆ
ಇದೇ ವೇಳೆ ರಾಜ್ಯದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರು ನಗರದ ವಲಯದಲ್ಲೇ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಮಲದ ಗುಂಡಿಯನ್ನು ಬರಿಗೈಯ್ಯಲ್ಲೇ ಸ್ವಚ್ಛಗೊಳಿಸಿ, ತಲೆಯ ಮೇಲೆ ಹೊತ್ತು ಹಾಕುತ್ತಿರುವ ಘಟನೆ ವರದಿಯಾಗಿದೆ. ಈ ನಾಲ್ವರು ಕಾರ್ಮಿಕರು ದಲಿತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಾವು ಹೊಟ್ಟೆಪಾಡಿಗಾಗಿ ಈ ಕೆಲಸದಲ್ಲಿ ತೊಡಗಿದ್ದೇವೆ, ಈ ನಿರ್ದಿಷ್ಟ ಕೆಲಸ ನಿಷಿದ್ಧ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ಎರಡು ಹೊತ್ತಿನ ಅನ್ನಕ್ಕಾಗಿ ಎಂತಹ ಅಪಾಯಕಾರಿ ಕೆಲಸವನ್ನಾದರೂ ಮಾಡಲು ಸಿದ್ಧವಾಗಿರುವ, ಸಾವಿರಾರು ಮೈಲು ದೂರ ಪ್ರಯಾಣಿಸಲೂ ಹಿಂಜರಿಯದ ಶ್ರಮಜೀವಿಗಳ ಒಂದು ವರ್ಗ ದೇಶದ ಉದ್ದಗಲಕ್ಕೂ ಇರುವುದನ್ನು ಈ ಘಟನೆಗಳು ಬಿಂಬಿಸುತ್ತವೆ. ಇದೇ ಅವಸ್ಥೆಯಲ್ಲೇ ದೆಹಲಿಯ ಪಾದಚಾರಿ ರಸ್ತೆಯಲ್ಲಿ ನಿದ್ರಿಸುವವರೂ ಇರುತ್ತಾರೆ.
ವಿಕಸಿತ ಭಾರತದಲ್ಲಿ ಕಾರ್ಮಿಕ ಹಕ್ಕುಗಳು ಮತ್ತು ಉದ್ಯೋಗ ಖಾತರಿ ಎರಡೂ ಮರೀಚಿಕೆಯಾಗಿರುವ ಈ ಹೊತ್ತಿನಲ್ಲೇ ಮೈಸೂರಿನ ಸಮೀಪ ತಿ ನರಸೀಪುರ ತಾಲ್ಲೂಕಿನ ಬೇವಿನ ಪುರ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ತಮ್ಮ ಸಾಲದ ಹೊರೆ ತೀರಿಸುವ ಸಲುವಾಗಿಯೇ ಜೀತದಾಳುಗಳಾಗಿ ದುಡಿಯುತ್ತಿದ್ದ 27 ಕಾರ್ಮಿಕರಿಗೆ ವಿಮೋಚನೆ ದೊರೆತಿದೆ.
ಇಟ್ಟಿಗೆ ಗೂಡಿನಲ್ಲಿ ದುಡಿಯುತ್ತಿದ್ದ ಈ ಶ್ರಮಜೀವಿಗಳಿಗೆ ದಿಗ್ಬಂಧನ ಹಾಕಲು ಮಾಲೀಕರು ಬಳಸುತ್ತಿದ್ದುದು 25 ವರ್ಷಗಳ ಮುನ್ನ ನೀಡಿದ್ದ 90 ಸಾವಿರ ರೂಗಳ ಮುಂಗಡ ಹಣದ ಋಣಭಾರವನ್ನು. ತಮ್ಮ ಮಾಲೀಕರು ನೀಡಿದ ಮುಂಗಡ ಹಣ ತೀರಿಸಲಾಗದೆ, ತಮಗೆ ದೊರೆಯುವ ಕೂಲಿಯಿಂದ ಬದುಕು ನಿರ್ವಹಿಸಲಾಗದೆ ಈ ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ಬೆವರು ಸುರಿಸುತ್ತಿದ್ದುದು ಇತ್ತೀಚೆಗಷ್ಟೇ ವರದಿಯಾಗಿ, ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಈ ಕಾರ್ಮಿಕರ ಪೈಕಿ ಮಕ್ಕಳೂ ಇದ್ದಾರೆ.
ಅಂದರೆ ನಿಷೇಧಿತ ಮಲಬಾಚುವ/ಮಲ ಹೊರುವ ಪದ್ಧತಿ ಜೀವಂತವಾಗಿದೆ, ನಿರ್ಮೂಲವಾಗಿರುವ ಜೀತ ಪದ್ಧತಿ ಉಸಿರಾಡುತ್ತಿದೆ, ದೂರದ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಗುರುತಿಸುವ ಮತ್ತು ತಪಾಸಣೆ ಮಾಡುವ ಹಕ್ಕನ್ನು ಒಂದು ಖಾಸಗಿ ಮತಾಂಧ ಸಂಘಟನೆಗೆ ನೀಡಲಾಗಿದೆ, ದೇಶದ ರಾಜಧಾನಿಯಲ್ಲೇ ಶ್ರಮಜೀವಿಗಳು ಸೂರಿಲ್ಲದೆ ಪಾದಚಾರಿ ರಸ್ತೆಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ.
3 ರಿಂದ 10 ವರ್ಷದ ಹೆಣ್ಣು ಮಕ್ಕಳೂ ಅತ್ಯಾಚಾರ-ಕೊಲೆಗೀಡಾಗುತ್ತಿದ್ದಾರೆ, ರಾಜಕೀಯ ನಾಯಕರ ತವರೂರುಗಳಲ್ಲೇ, ಸಂಸತ್ತಿಗೆ ಸಮೀಪದಲ್ಲೇ ಸಾಮಾಜಿಕ ಅನಾಹುತಗಳು ನಡೆಯುತ್ತಿವೆ. ಹದಗೆಡುವ ಕೌಟುಂಬಿಕ ಸಂಬಂಧಗಳು, ದಾಂಪತ್ಯ ವಿರಸಗಳು, ಪ್ರೇಮ ಸಂಬಂಧಗಳು ಭೀಕರ ಹತ್ಯೆಗಳಲ್ಲಿ ಕೊನೆಯಾಗುತ್ತಿವೆ. ಪೋಷಕರು ಮಕ್ಕಳಿಂದ, ಮಕ್ಕಳು ಪೋಷಕರಿಂದ ,ಯುವಕ ಯುವತಿಯರು ಪ್ರೇಮಿಗಳಿಂದ ಹತ್ಯೆಗೀಡಾಗುತ್ತಿದ್ದಾರೆ. ಉನ್ನತ ಶಿಕ್ಷಣದ ಮಾಯಾಜಿಂಕೆ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೀವ ಕಂಟಕವಾಗಿ ಪರಿಣಮಿಸಿದೆ.
ನವ ನಾಗರಿಕತೆಯ ಅನಾಗರಿಕ ಲಕ್ಷಣ
ಇವೆಲ್ಲವೂ ಪ್ರತ್ಯೇಕ ಘಟನೆಗಳೇ. ಎಲ್ಲವೂ ಕಾನೂನಿನ ವ್ಯಾಪ್ತಿಗೊಳಪಡುವ, ನ್ಯಾಯಾಲಯಗಳಲ್ಲಿ ಅಂತಿಮ ಅಪರಾಧಿಯನ್ನು ಗುರುತಿಸುವ ಪ್ರಕರಣಗಳೇ. ಯಾರು ಅಪರಾಧಿ, ಯಾರು ಸಂತ್ರಸ್ತರು, ಯಾರು ನೊಂದವರು, ಯಾರು ಕೊಂದವರು (ಕರ್ನಾಟಕದಲ್ಲಿ ಇದು ಧ್ವನಿಸುತ್ತಲೇ ಇದೆ) ? ಸರ್ಕಾರಗಳ ದೃಷ್ಟಿಯಲ್ಲಿ ಇವೆಲ್ಲವೂ ಸಹ ಕಾನೂನು ಸುವ್ಯವಸ್ಥೆಯ ಒಂದು ಭಾಗ. ಅಥವಾ ಬೆಳೆಯುತ್ತಿರುವ ಜನಜೀವನದಲ್ಲಿ ಸ್ವಾಭಾವಿಕವಾಗಿ ಘಟಿಸಬಹುದಾದ ಅನಾಹುತಗಳು. ಈ ಅಮಾನುಷ ಘಟನೆಗಳಿಗೆ ಕಾರಣ ಏನು ? ಅಥವಾ ಸಮಗ್ರ ನೆಲೆಯಲ್ಲಿ ನೋಡಿದಾಗ ಯಾರು ಕಾರಣರು ? ಆಡಳಿತ ವ್ಯವಸ್ಥೆಯೋ, ಸಾಮಾಜಿಕ ವಾತಾವರಣವೋ, ಸಾಂಸ್ಕೃತಿಕ ಪರಿಸರವೋ, ಸಾಮಾಜಿಕ ಸಂಬಂಧಗಳ ತಲ್ಲಣಗಳೋ ? ಈ ಪ್ರಶ್ನೆಗಳನ್ನು ಯಾರ ಬಳಿ ಕೇಳುವುದು ?
ಈ ಎಲ್ಲ ಘಟನೆಗಳಲ್ಲಿ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ , ಮನುಜ ಸಂಬಂಧಗಳನ್ನು ಮಾರುಕಟ್ಟೆ ಸರಕುಗಳಂತೆ ಕಾಣುವ ಮನಸ್ಥಿತಿ ಮತ್ತು ಈ ಮನಸ್ಥಿತಿ ಆಳವಾಗಿ ಬೇರೂರಿದ್ದರೂ ಸಹ ತಮಗೆ ಸಂಬಂಧವೇ ಇಲ್ಲ ಎಂದು ನಿರುಮ್ಮಳವಾಗಿರುವ ರಾಜಕೀಯ ಪ್ರತಿನಿಧಿಗಳ ಧೋರಣೆ. ಇವೆರಡನ್ನೂ ಸಮೀಕರಿಸಿ ನೋಡಿದಾಗ ನಮಗೆ ಕಾಣುವುದು ಸಾಮಾಜಿಕ ಅರಾಜಕತೆ (Social Anarchy) ಮತ್ತು ವಿವಿಧ ಹಂತಗಳಲ್ಲಿ ವಿಸ್ತರಿಸಿರುವ ಅನಾಗರಿಕ (Uncivilised) ಲಕ್ಷಣಗಳು .
ಈ ಸಮಸ್ಯೆಗಳು ಪ್ರಧಾನ ಸಂವಹನ ಮಾಧ್ಯಮಗಳಲ್ಲಿ, ಬೌದ್ಧಿಕ ವಲಯದಲ್ಲಿ ಹಾಗೂ ರಾಜಕೀಯ ವಾತಾವರಣದಲ್ಲಿ (Political Ecosystem) ಗಂಭೀರವಾಗಿ ಚರ್ಚೆಯಾಗುವುದೇ ಇಲ್ಲ. ನಮಗೆ ಎಲ್ಲವೂ ಕೇವಲ ಸುದ್ದಿಗಳಾಗಿ ಕಾಣತೊಡಗಿವೆ, ಯುವ ನೀಟ್ ಆಕಾಂಕ್ಷಿಗಳ ಆತ್ಮಹತ್ಯೆಗಳೂ ಸಹ ರೈತರ ಆತ್ಮಹತ್ಯೆಯ ಹಾಗೆ ಸಹನೀಯವಾಗಿಬಿಟ್ಟಿವೆ.
ಈ ವಿಷಪೂರಿತ ವಾತಾವರಣದಲ್ಲಿ (Venomous Environment) ನಾವು ವಿಕಾಸದ ಹಾದಿಯಲ್ಲಿ, ವಿಕಸಿತರಾಗುವ ಮಹತ್ವಾಕಾಂಕ್ಷೆಯಿಂದ ನಡೆಯುತ್ತಿದ್ದೇವೆ. 80 ವರ್ಷಗಳ ಫಲಾನುಭವಿ ವರ್ಗಗಳ ಬಹುಸಂಖ್ಯೆಯ ವರ್ಗ ಸಾಹಿತ್ಯಿಕವಾಗಿ, ಬೌದ್ಧಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಇದನ್ನು ಸಾಮಾನ್ಯ ಸಂಗತಿಗಳೆಂದೇ ಪರಿಭಾವಿಸಿ, ತಮ್ಮ ಸಂಪತ್ತು, ಐಶ್ವರ್ಯ, ಅನುಕೂಲ, ಐಷಾರಾಮಿ ಜೀವನ ಮತ್ತು ವೈಯುಕ್ತಿಕ ಏಳಿಗೆಯ ಹಾದಿಯಲ್ಲಿ ನಿರ್ಲಿಪ್ತವಾಗಿ ಮುನ್ನಡೆದಿವೆ.
ನಿಷ್ಕ್ರಿಯತೆಯನ್ನು ನಿರ್ಲಿಪ್ತತೆ ಎಂದು ಭಾವಿಸುವ ಒಂದು ಮನೋಭಾವಕ್ಕೆ ಭಾರತ ಒಗ್ಗಿಹೋಗಿದೆ. ಅಯೋಧ್ಯಾ ರಾಮಮಂದಿರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ರಾಮಭಕ್ತ ಸಮಾಜಗಳು ಮೌನವಾಗಿರುವುದು ಇದನ್ನೇ ಸೂಚಿಸುತ್ತದೆ. ಸಹಜವಾಗಿ ಕುರುಡಾಗಿರುವ ಸಮಾಜದಲ್ಲಿ ಕಣ್ತೆರೆಯದ ಮಕ್ಕಳ ಬಲಿದಾನಗಳೂ ನಡೆಯುತ್ತಿದ್ದರೂ, ದೂರದ ಚೀತ್ಕಾರಗಳು ಮಾತ್ರ ಕೇಳಿಸುತ್ತದೆ.
ನಾಗರಿಕ ಪ್ರಜ್ಞೆಯ ಆವರಣದಲ್ಲಿ
ಪ್ರಗತಿಪರರು, ಪ್ರಜ್ಞಾವಂತರು, ನಾಗರಿಕರು, ವಿದ್ವತ್ ವಲಯದ ಪಂಡಿತರು ಎಂದು ಬೆನ್ನುತಟ್ಟಿಕೊಳ್ಳುವ ನಾವು ಏನು ಮಾಡಬಹುದು ಅಥವಾ ಏನು ಮಾಡಬೇಕು ? ಅಧಿಕಾರ ರಾಜಕಾರಣ ಈಗ ಟಾರ್ಪಾಲಿನ್ ಚರ್ಮವನ್ನು ಹೊದ್ದು ಸುರಕ್ಷಿತವಾಗಿದೆ. ಸಾಂಸ್ಕೃತಿಕ ರಾಜಕಾರಣ ದೇವರು, ಧರ್ಮ, ನಂಬಿಕೆ, ಶ್ರದ್ಧೆ, ಮತ್ತು ಕೋಟ್ಯಂತರ ಜನರ ಅಪರಿಮಿತ ವಿಶ್ವಾಸವನ್ನೂ ಮಾರುಕಟ್ಟೆಯ ವಿನಿಯಮ ವಸ್ತುವಿನ ಹಾಗೆ ನಿರ್ವಹಿಸುತ್ತಿದೆ. ಈ ಮೌಲ್ಯಾಂಕಣ ಪ್ರಕ್ರಿಯೆಗೆ ಅಯೋಧ್ಯೆಯ ರಾಮನೂ ಬಲಿಯಾಗಿದ್ದಾನೆ.
ಭ್ರಷ್ಟಾಚಾರ, ಅತ್ಯಾಚಾರ, ಕೊಲೆ, ಆತ್ಮಹತ್ಯೆ ಇದಾವುದೂ ಸಮಾಜದ ಧಾರ್ಮಿಕ/ಸಾಮುದಾಯಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿಲ್ಲ. ಏಕೆಂದರೆ ನವ ಭಾರತದ ಸಮಾಜಗಳು ಭಾವನೆಗಳನ್ನೇ ಯಾವುದೋ ಒಂದು ನಿಷ್ಠೆಗೆ ಒತ್ತೆ ಇಟ್ಟುಬಿಟ್ಟಿವೆ. ಭಾವನೆ, ನೋವು, ಅನುಭೂತಿ, ಅನುಕಂಪ ಇವೆಲ್ಲವೂ ಸಾಪೇಕ್ಷವಾಗುವುದು (Relative) ಸಮಾಜದ ನೈತಿಕ ಅಧಃಪತನದ ಸೂಚನೆ.
ಮೌಲ್ಯಗಳ ಈ ಪಾತಾಳ ಕುಸಿತಕ್ಕೆ ಯಾರು ಹೊಣೆಗಾರರು ಎಂದು ಯೋಚಿಸುತ್ತಾ ಕೂರುವುದು ಬೇಕಿಲ್ಲ. ಏಕೆಂದರೆ ಆ ನ್ಯಾಯಾಂಗಣದಲ್ಲಿ ತೀರ್ಪುಗಾರರೇ ಕಾಣಲಿಕ್ಕಿಲ್ಲ. ಇಡೀ ದೇಶ ಕಟಕಟೆಯಲ್ಲಿರುತ್ತದೆ. ಪ್ರಾಚೀನ ಆಚರಣೆಗಳು, ಅರಾಜಕತೆ, ಅನಾಗರಿಕ ವರ್ತನೆ, ಅಮಾನುಷ ಧೋರಣೆ, ಅಸೂಕ್ಷ್ಮ ಮನೋಭಾವ, ಅಸಂವೇದನೆ ಈ ಅಪಭ್ರಂಶಗಳು ಮಿಲೆನಿಯಲ್ ಜನಾಂಗದ ನರನಾಡಿಗಳಲ್ಲಿ ವ್ಯಾಪಿಸುವ ಮುನ್ನ ತಡೆಗಟ್ಟುವುದು ಹೇಗೆ ಎಂದು ಯೋಚಿಸಬೇಕಿದೆ.
ಇಲ್ಲಿ ಜಾತಿ, ಮತ, ಧರ್ಮ, ಭಾಷೆಯ ಗೋಡೆಗಳಿಗಳನ್ನು ದಾಟಿ ಎತ್ತನೋಡಿದರೂ ಕಾಣುವ ಮನುಷ್ಯ ಜೀವ ಮಾತ್ರ ನಮಗೆ ಗೋಚರಿಸುವುದಾದರೆ ದೆಹಲಿಯ ಪಾದಚಾರಿ ರಸ್ತೆಗಳಲ್ಲಿ ಯಾವ ಎಳೆ ಬಾಲೆಯೂ “ ಅಪ್ಪಾ ನನ್ನನ್ನು ಕಾಪಾಡೀ,,, ” ಎಂದು ಕೂಗುವುದಿಲ್ಲ. ಈ ಕೂಗು ನಮ್ಮನ್ನು ವಿಚಲಿತಗೊಳಿಸಿಲ್ಲ ಎಂದರೆ ಬಹುಶಃ ನಾವು ನಡೆದಾಡುವ ಶಿಲೆಗಳಾಗಿದ್ದೇವೆ ಎಂದೇ ಕಲ್ಪಿಸಿಕೊಳ್ಳಬೇಕಾಗುತ್ತದೆ.
ಭವಿಷ್ಯದ ಭಾರತದ ಮಿಲೆನಿಯಲ್ ಮಕ್ಕಳ ಕೈಯ್ಯಲ್ಲಿದೆ. ಈ ಮಕ್ಕಳ ಭವಿಷ್ಯ ಹಿರಿಯ ತಲೆಮಾರಿನ ಸಾಂವಿಧಾನಿಕ ಫಲಾನುಭವಿಗಳ ಮೇಲಿದೆ. ಏನು ಮಾಡಬೇಕು/ಮಾಡಬಹುದು, ಅಂತಿಮ ನಿರ್ಧಾರ ನಮ್ಮ ಕೈಯ್ಯಲ್ಲೇ ಇದೆ.
-೦-೦-೦-೦-






