• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಭಯೋತ್ಪಾದನೆ ಮತ್ತು ಮತೀಯ ಕಾವಲು ಪಡೆಗಳು

ನಾ ದಿವಾಕರ by ನಾ ದಿವಾಕರ
November 11, 2021
in ಅಭಿಮತ
0
ಭಯೋತ್ಪಾದನೆ ಮತ್ತು ಮತೀಯ ಕಾವಲು ಪಡೆಗಳು
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಮತೀಯ ಕಾವಲು ಪಡೆಗಳು ತಮ್ಮದೇ ಆದ ಕಾರಣಗಳಿಗಾಗಿ, ಅಂತರ್ ಮತ ಸಂಬಂಧಗಳ ವಿಚಾರಗಳಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಧಾಳಿ ನಡೆಸುತ್ತಿರುವುದು ಹೆಚ್ಚಾಗುತ್ತಿದೆ. ಇದೇ ವೇಳೆ ಭಯೋತ್ಪಾದನೆ ಇಂದು ನಿತ್ಯ ಸುದ್ದಿಯಾಗಿದೆ. ಈ ಎರಡೂ ವಿಚಾರಗಳು ಪ್ರತಿಯೊಬ್ಬ ನಾಗರಿಕನ ನಿತ್ಯ ಜೀವನದ ಮೇಲೆ ಪರಿಣಾಮ ಬೀರುವಂತಹುದೇ ಆಗಿವೆ. ಹಾಗಾಗಿ ಈ ಕುರಿತ ಒಂದು ಚರ್ಚೆ ಅತ್ಯಗತ್ಯವಾಗಿದೆ.

ADVERTISEMENT

ಮತೀಯ ಕಾವಲು ಪಡೆಗಳ ವ್ಯಾಪ್ತಿ

ಮತೀಯ ಕಾವಲು ಪಡೆ ಅಥವಾ ಮತೀಯ ಕಾವಲುಪಡೆಯ ಕಾಲಾಳುಗಳನ್ನು “ಕಾನೂನು ಪಾಲಕರು ನಿರ್ವಹಿಸಲು ವಿಫಲರಾಗಿರುವುದರಿಂದ, ಯಾವುದೇ ಕಾನೂನು ಸಮ್ಮತಿ ಇಲ್ಲದೆಯೇ ತಮ್ಮ ಸಮುದಾಯದಲ್ಲಿ ತಮ್ಮದೇ ಆದ ಕಾನೂನು/ನಿಯಮಗಳನ್ನು ಜಾರಿಗೊಳಿಸಲು ನೇಮಿಸಲ್ಪಟ್ಟ ಜನರ ಗುಂಪು ಅಥವಾ ಗುಂಪಿನ ಒಬ್ಬ ಸದಸ್ಯ” ಎಂದು ವ್ಯಾಖ್ಯಾನಿಸಬಹುದು. ಈ ಮತೀಯ ಕಾವಲು ಪಡೆಯ ಕಾಲಾಳುಗಳು ಸರ್ಕಾರದ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಚೌಕಟ್ಟುಗಳನ್ನೂ ಮೀರಿ, ಸ್ವಯಂ ಸ್ಥಾಪಿತ ನಿಯಮಗಳ, ರೀತಿ ರಿವಾಜುಗಳ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಲು ಸದಾ ಸಜ್ಜಾಗಿರುತ್ತಾರೆ.

ಈ ಚಟುವಟಿಕೆಗಳು ಬಹಳಷ್ಟು ಸಂದರ್ಭಗಳಲ್ಲಿ ಕಾನೂನು ಜಾರಿಗೊಳಿಸಲು ಇರುವ ಸ್ಥಾಪಿತ ನಿಯಮಗಳನ್ನೂ ಮೀರಿ, ಸ್ವ ಘೋಷಿತ ಕಾನೂನುಗಳನ್ನು ಜಾರಿಗೊಳಿಸುವುದರಲ್ಲಿ ತೊಡಗುತ್ತವೆ. ತಾವು ಪವಿತ್ರ ಎಂದು ಭಾವಿಸುವ ಸಂಪ್ರದಾಯ ಮತ್ತು ಸ್ಥಾಪಿತ ರೀತಿ ರಿವಾಜುಗಳನ್ನು ಉಲ್ಲಂಘಿಸುವ ಜನರನ್ನು ಶಿಕ್ಷಿಸಲು, ತಾವು ನಂಬಿರುವ ಚಿಂತನೆಗಳು ಮತ್ತು ವ್ಯಕ್ತಿಗಳಿಗೆ ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಇದಕ್ಕೆ ಕಾರಣರಾದವರನ್ನು, ಕಾನೂನು ಕಟ್ಟಲೆಗಳ ವ್ಯಾಪ್ತಿಯನ್ನು ಮೀರಿ ತಾವೇ ಶಿಕ್ಷಿಸಲು ಮುಂದಾಗುವುದು ಈ ಹಂತಕ ಪಡೆಗಳ ಆದ್ಯತೆಯಾಗಿರುತ್ತದೆ. ಸಾಮಾನ್ಯವಾಗಿ ಬಹುಸಂಖ್ಯಾತ ಸಮುದಾಯಗಳಲ್ಲಿ ಇಂತಹ ಸ್ವ ಘೋಷಿತ ನೀತಿ ಸಂಹಿತೆಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತವೆ.
ಒಂದು ನಿರ್ದಿಷ್ಟ ಆಲೋಚನೆ ಅಥವಾ ಚಿಂತನೆಯನ್ನು ಪ್ರತಿಪಾದಿಸುವ ಅಥವಾ ಒಂದು ಸಾಂಸ್ಥಿಕ ನೆಲೆಯನ್ನು ರಕ್ಷಿಸಲು ಮುಂದಾಗಿರುವ ವ್ಯಕ್ತಿಗಳು ಅಥವಾ ಗುಂಪುಗಳು ಕಾನೂನು ಮತ್ತು ನ್ಯಾಯ ವ್ಯವಸ್ಥೆಯನ್ನೂ ಮೀರಿ, ತಮ್ಮದೇ ಆದ ಸೈದ್ದಾಂತಿಕ ನೆಲೆಗಳನ್ನು ಮತ್ತು ಬೌದ್ಧಿಕ ಚಿಂತನೆಗಳನ್ನು ವಿರೋಧಿಸುವವರ ವಿರುದ್ಧ ಧಾಳಿ ನಡೆಸಲು ಸಜ್ಜಾಗಿರುವುದನ್ನೂ ಮತೀಯ ಕಾವಲು ಪಡೆಗಳ ವ್ಯಾಖ್ಯಾನಕ್ಕೊಳಪಡಿಸಬಹುದು. ಈ ಮತೀಯ ಕಾವಲು ಪಡೆಗಳು ಗುರಿಯಾಗಿಸುವುದು ಮುಖ್ಯವಾಗಿ ತಮಗಿಂತಲೂ ಕೀಳು ಎಂದು ಪರಿಭಾವಿಸಲಾಗುವ ಜನರನ್ನು ಅಥವಾ ತಾವೇ ಕಲ್ಪಿಸುವ ‘ ಅನ್ಯ ’ಸಮುದಾಯಗಳನ್ನು. ಈ ಜನರು ಅಥವಾ ಸಮುದಾಯಗಳು ದ್ವೇಷಕ್ಕೆ ಅಥವಾ ಹತ್ಯೆಗೆ ಅರ್ಹರು ಎಂದೇ ಭಾವಿಸಲಾಗುತ್ತದೆ.

ತಮ್ಮ ಉದ್ದೇಶಿತ ಸಮುದಾಯ ಅಥವಾ ಗುಂಪುಗಳ ನಡುವೆ ಭೀತಿಯನ್ನು ಹರಡುವ ಈ ಮತೀಯ ಕಾವಲು ಪಡೆಗಳು, ತಮ್ಮ ಕೃತ್ಯಗಳು ಕಾನೂನು ಬಾಹಿರವಾದರೂ ಲೆಕ್ಕಿಸದೆ ಕಾರ್ಯಪ್ರವೃತ್ತರಾಗಿರುತ್ತವೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾದ ಅಥವಾ ನಿಯಂತ್ರಣಕ್ಕೆ ಮುಂದಾಗದ ಸಂದರ್ಭಗಳಲ್ಲಿ ಈ ಮತೀಯ ಕಾವಲು ಪಡೆಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ಮುಕ್ತ ಅವಕಾಶ ಪಡೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಒಂದು ಸರ್ಕಾರ ಅಥವಾ ಪ್ರಬಲವಾದ ಸಾಮಾಜಿಕ-ರಾಜಕೀಯ ಒತ್ತಡಗಳು ಸಹ ಇಂತಹ ಮತೀಯ ಕಾವಲು ಪಡೆಗಳಿಗೆ ಒತ್ತಾಸೆಯಾಗಿ ನಿಲ್ಲುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಈ ಚಟುವಟಿಕೆಗಳೇ ಸರ್ಕಾರಗಳಿಗೆ ಅನುಕೂಲಕರವಾಗಿರುತ್ತವೆ, ತಮ್ಮ ರಾಜಕೀಯ ಹಿತಾಸಕ್ತಿಯನ್ನು ವೃದ್ಧಿಸಿಕೊಳ್ಳಲು ನೆರವಾಗುವಂತಿರುತ್ತವೆ.

ಮತೀಯ ಕಾವಲು ಪಡೆಗಳ ಬೆಳವಣಿಗೆ ಇತ್ತೀಚಿನದಲ್ಲ. ಇಲ್ಲಿ ಎರಡು ಉದಾಹರಣೆಗಳು ಸ್ಪಷ್ಟನೆ ನೀಡುತ್ತವೆ, ಫ್ರಾನ್ಸ್ನಲ್ಲಿ ೧೨ನೆಯ ಶತಮಾನದಲ್ಲಿ ಕ್ಯಾಥೊಲಿಕ್ ಚರ್ಚ್ಗಳು ತಮ್ಮ ಮತಭೋಧನೆಯಿಂದ ವಿಮುಖವಾಗುವವರ ವಿರುದ್ಧ, ಪಾಷಂಡಿಗಳ ವಿರುದ್ಧ ಒಂದು ಒಳಸಂಚನ್ನು ರೂಪಿಸುತ್ತವೆ. ಈ ಸಂದರ್ಭದಲ್ಲಿ ಸಂಪ್ರದಾಯವಾದಿಗಳನ್ನು, ಮಾಂತ್ರಿಕರನ್ನು ಜೀವಂತವಾಗಿ ದಹನ ಮಾಡಲಾಗುತ್ತದೆ. ೧೭ನೆಯ ಶತಮಾನದಲ್ಲಿ ಸೂರ್ಯನೇ ಸೌರಮಂಡಲದ ಕೇಂದ್ರವಾಗಿದ್ದು ಭೂಮಿ ಮತ್ತಿತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ ಎಂದು ಹೇಳಿದ ಗೆಲಿಲಿಯೋಗೆ ಶಿಕ್ಷೆ ವಿಧಿಸಲಾಗುತ್ತದೆ.

ಅಮೆರಿಕೆಯಲ್ಲಿ ಕು ಕ್ಲುಕ್ಸ್ ಪಂಥವು ಬಿಳಿಯರ ಪರಮಾಧಿಕಾರವನ್ನು ಪ್ರತಿಪಾದಿಸುವ ಒಂದು ಭಯೋತ್ಪಾದಕ ಗುಂಪು ಆಗಿತ್ತು. ಈ ಪಂಥದ ಸದಸ್ಯರು ಅಮೆರಿಕದಲ್ಲಿನ ಆಫ್ರಿಕರನ್ನು, ಯಹೂದಿಗಳನ್ನು, ವಲಸೆಗಾರರನ್ನು, ಎಡಪಂಥೀಯರನ್ನು, ಸಲಿಂಗಿಗಳನ್ನು, ಕ್ಯಾಥೊಲಿಕ್ಗಳನ್ನು, ಮುಸಲ್ಮಾನರನ್ನು ಮತ್ತು ನಾಸ್ತಿಕರನ್ನು ಗುರಿಯಾಗಿಟ್ಟುಕೊಂಡು ಧಾಳಿ ನಡೆಸುತ್ತಿದ್ದರು. ಈ ಪಂಥದ ಸದಸ್ಯರು ದೈಹಿಕ ಹಲ್ಲೆ ಮಾಡುವುದೇ ಅಲ್ಲದೆ, ಗುಂಪು ಥಳಿತವನ್ನು ಸಾಮಾನ್ಯವಾಗಿ ರಾಜಕೀಯ ಸಕ್ರಿಯವಾಗಿದ್ದ ಕರಿಯರ ಮೇಲೆ ಮತ್ತು ಬಿಳಿಯರೇ ಆಗಿದ್ದರೂ ಅವರ ಸಹವರ್ತಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಮತದಾರರನ್ನೂ ಹೆದರಿಸುತ್ತಿದ್ದರು. ಅಮೆರಿಕದಲ್ಲಿದ್ದ ಆಫ್ರಿಕನ್ ನಾಯಕರನ್ನು ಬೆದರಿಸುತ್ತಿದ್ದರು. ನಾಗರಿಕ ಹಕ್ಕುಗಳ ಚಳುವಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಮಾನವ ಹಕ್ಕು ಕಾರ್ಯಕರ್ತರನ್ನೂ ದಮನಿಸುತ್ತಿದ್ದ ಈ ಪಂಥಕ್ಕೆ ಕಾರ್ಯಪಡೆಗಳನ್ನು ಸೃಷ್ಟಿಸಲು ಸದಸ್ಯರನ್ನು ನೇಮಕ ಮಾಡಲಾಗುತ್ತಿತ್ತು ಮತ್ತು ಸದಸ್ಯರ ನಡುವೆ ಭ್ರಾತೃತ್ವದ ಭಾವನೆ ಮೂಡಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿದ್ದವು.

ಮತೀಯ ಕಾವಲು ಪಡೆಗಳು ಮೂಲತಃ ಸಂಘಟಿತ ಹಿಂಸೆಯ ಒಂದು ಸಾಧನವಾಗಿ ರೂಪುಗೊಂಡು ಒಂದು ಗುಂಪು ಅಥವಾ ಸಂಘಟನೆ ತನ್ನ ನಂಬಿಕೆಗಳನ್ನು , ಸಿದ್ಧಾಂತವನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ಬೆಳೆಸಲು ಉಪಯೋಗಿಸಲ್ಪಡುತ್ತವೆ. ಈ ಪ್ರಕ್ರಿಯೆಯಲ್ಲಿ ಕೆಲವು ಉದ್ದೇಶಿತ ಗುಂಪುಗಳನ್ನು ಅಥವಾ ವ್ಯಕ್ತಿಗಳನ್ನು ಭೀತಿಗೊಳಪಡಿಸುವುದು, ಘಾಸಿಗೊಳಿಸುವುದು, ಹತ್ಯೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತವೆ. ವಿರೋಧಿಗಳನ್ನು ಬಗ್ಗುಬಡಿಯುವ ಒಂದು ತಂತ್ರವಾಗಿಯೂ ಈ ಮತೀಯ ಕಾವಲು ಪಡೆಗಳನ್ನು ಬಳಸಲಾಗುತ್ತದೆ. ಈ ಮತೀಯ ಕಾವಲುಪಡೆಗಳ ಮೂಲ ಉದ್ದೇಶ ನಿಸ್ಸಂದೇಹವಾಗಿ ರಾಜಕೀಯ ಗುರಿ ಅಥವಾ ಕಾರ್ಯಸೂಚಿಯೇ ಆಗಿರುತ್ತದೆ.

ಭೀತಿ, ಭಯೋತ್ಪಾದಕ ಮತ್ತು ಭಯೋತ್ಪಾದನೆ

ಭಯದಿಂದ ಅಥವಾ ಹಿಂಸೆಯ ಪ್ರಯೋಗದಿಂದ ಅಥವಾ ಅಪಾಯದ ಮುನ್ಸೂಚನೆಯಿಂದ ಉಂಟಾಗುವ ವಿಪರೀತ ಆತಂಕವನ್ನು , ದುಗುಡವನ್ನು ಭೀತಿ ಎಂದು ಬಣ್ಣಿಸಬಹುದು. ಭೀತಿ ಎನ್ನುವುದು ಒಂದು ಸಾಧನವಾಗಿಯೂ ಬಳಸಲ್ಪಟ್ಟು ಉದ್ದೇಶಿತ ವ್ಯಕ್ತಿಗಳಲ್ಲಿ ಅಥವಾ ಗುಂಪುಗಳಲ್ಲಿ ವಿಪರೀತ ಭಯವನ್ನು ಹುಟ್ಟಿಸಬಹುದು. ರಾಜಕೀಯ ಉದ್ದೇಶಗಳಿಗಾಗಿ ಭೀತಿ ಹರಡುವುದನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವುದು ಇತಿಹಾಸ ಕಾಲದಿಂದಲೂ ಕಾಣುತ್ತಾ ಬಂದಿರುವ ವಿದ್ಯಮಾನ. ಈ ರಾಜಕೀಯ ಉದ್ದೇಶಗಳ ಗುರಿ ಸಾಧನೆಗೆ ಹಿಂಸೆ ಮತ್ತು ಬೆದರಿಕೆಯ ತಂತ್ರಗಳನ್ನು ಬಳಸುವುದನ್ನು ಭಯೋತ್ಪಾದನೆ ಎಂದು ಕರೆಯಲಾಗುತ್ತದೆ.

ಈ ಭೀತಿಯ ಸಾಧನವನ್ನು ಬಳಸುವ ವ್ಯಕ್ತಿ ತನ್ನ ವ್ಯಕ್ತಿಗತ ಕಾರಣಕ್ಕಾಗಿ ಅಥವಾ ರಾಜಕೀಯ ಉದ್ದೇಶಕ್ಕಾಗಿ ಅಥವಾ ಮತ್ತಾವುದೇ ಉದ್ದೇಶಗಳಿಗಾಗಿ ಬಳಸುವಾಗ ಅಂತಹ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಬಣ್ಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಒಂದು ನಿರ್ದಿಷ್ಟ ಜನಾಂಗೀಯ, ಮತೀಯ, ಸೈದ್ಧಾಂತಿಕ ಅಥವಾ ರಾಜಕೀಯ ಗುಂಪುಗಳನ್ನು ಪ್ರತಿನಿಧಿಸುವುದಾಗಿ ಬಿಂಬಿಸಿಕೊAಡರೂ, ಅನೇಕ ಸಂದರ್ಭಗಳಲ್ಲಿ ಈ ಜನಾಂಗ, ಮತ, ಸಿದ್ದಾಂತ ಅಥವಾ ರಾಜಕೀಯ ಗುಂಪುಗಳು ಈ ಪ್ರಾತಿನಿಧಿತ್ವವನ್ನು ಸಮ್ಮತಿಸುವುದೂ ಇಲ್ಲ. ಆದರೆ ಈ ಅಸಮ್ಮತಿ ವ್ಯಕ್ತಿ ಅಥವಾ ಗುಂಪಿನ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ಭಯೋತ್ಪಾದನೆ ಎನ್ನುವುದು ಉಗ್ರವಾದ ಎನ್ನುವುದಕ್ಕಿಂತಲೂ ಭಿನ್ನವಾದರೂ, ಒಬ್ಬ ಭಯೋತ್ಪಾದಕ ಎಲ್ಲ ರೀತಿಯಿಂದಲೂ ಭಯೋತ್ಪಾದಕನೇ ಆಗಿರುತ್ತಾನೆ.

ಜನಸಾಮಾನ್ಯರ ನಡುವೆ, ಸಾರ್ವಜನಿಕ ವಲಯದಲ್ಲಿ ಭೀತಿಯನ್ನು ಉಂಟುಮಾಡಲು, ಕೆಲವು ವ್ಯಕ್ತಿ ಅಥವಾ ಗುಂಪುಗಳನ್ನು ಧಾಳಿ ಮಾಡಲು, ತಯಾರು ಮಾಡಲು ಈ ಭಯೋತ್ಪಾದಕರಿಗೆ ಅವರ ಪೋಷಕರು, ಮಾರ್ಗದರ್ಶಕರು ಮತ್ತು ಹಣಕಾಸು ಪೂರೈಸುವವರು ತರಬೇತಿ ನೀಡುವುದೇ ಅಲ್ಲದೆ, ಸೈದ್ಧಾಂತಿಕವಾಗಿ ಬೋಧನೆ ಮಾಡಲಾಗುತ್ತದೆ. ಇಂಥವರು ಉದ್ದೇಶಿತ ಜನರ ಮೇಲೆ ಧಾಳಿ ನಡೆಸಿ, ಹತ್ಯೆ ಮಾಡುವುದೇ ಅಲ್ಲದೆ ಆಸ್ತಿಪಾಸ್ತಿಯನ್ನೂ ನಾಶಪಡಿಸುತ್ತಾರೆ. ಈ ಕೃತ್ಯಗಳ ಉದ್ದೇಶ ಹೆಚ್ಚಿನ ಅನಾಹುತ ಉಂಟುಮಾಡಿ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವುದೇ ಆಗಿರುತ್ತದೆ. ಭಯೋತ್ಪಾದನೆ ಎನ್ನುವುದು ಒಂದು ಸಂಕೀರ್ಣ ಜಾಗತಿಕ ವಿದ್ಯಮಾನವಾಗಿದ್ದು, ಇದಕ್ಕೆ ಸಾಮಾಜಿಕ, ಮತೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳೂ ಇರುತ್ತವೆ. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅಣ್ಣಾನ್ ಹೇಳುವಂತೆ “ ಯಾವುದೇ ಸ್ವರೂಪದಲ್ಲಿರಲಿ, ಯಾವುದೇ ರೀತಿಯಲ್ಲಿ ವ್ಯಕ್ತವಾಗಿರಲಿ, ಅದರ ಉದ್ದೇಶಗಳು ಏನೇ ಆಗಿರಲಿ, ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ಮತ್ತು ಅದನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗುವುದಿಲ್ಲ. ”

ಭಯೋತ್ಪಾದನೆಯಂತೆಯೇ ನೈತಿಕ ಮತೀಯ ಕಾವಲುಪಡೆಗಳೂ ತಿರಸ್ಕಾರಾರ್ಹವೇ

ಕಾನೂನು ಬಾಹಿರವಾದ ಅಥವಾ ಸಂವಿಧಾನ ವಿರೋಧಿಯಾದ ಚಟುವಟಿಕೆಗಳ ಮೂಲಕ ಭೀತಿ ಉಂಟುಮಾಡುವುದು, ಶಿಕ್ಷೆಗೊಳಪಡಿಸಲು ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಅನುಸರಿಸುವುದು ಅಥವಾ ಜನರಲ್ಲಿ ಭೀತಿ ಮತ್ತು ದ್ವೇಷವನ್ನು ಉಂಟುಮಾಡುವುದು, ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ತಾಣಗಳ ಮೂಲಕ ಸುಳ್ಳು ಸುದ್ದಿಗಳ ಮೂಲಕ ದ್ವೇಷ ಹರಡುವುದು, ಈ ಚಟುವಟಿಕೆಗಳನ್ನು ಮತೀಯ ಕಾವಲುಪಡೆಗಳ ಕೃತ್ಯಗಳಂತೆಯೇ ಭಯೋತ್ಪಾದನೆಗೂ ಸಮೀಕರಿಸಬಹುದು. ಈ ಎರಡಕ್ಕೂ ಸಮಾನವಾದ ಮತ್ತೊಂದು ಅಂಶವೆAದರೆ ರಾಜಕೀಯ-ಮತೀಯ ಕಾರ್ಯಸೂಚಿಗಳು. ತಮ್ಮದೇ ಆದ ನೈತಿಕ ಸಂಹಿತೆಯನ್ನು ಹೇರಲು ಅಥವಾ ಒಂದು ನಿರ್ದಿಷ್ಟ ಆಲೋಚನೆ, ಸಂಪ್ರದಾಯ ಮತ್ತು ಸಾಂಸ್ಥಿಕ ನೆಲೆಗಳನ್ನು ರಕ್ಷಿಸಲು ಕಾವಲುಪಡೆಗಳು ತಾವು ಹೇರುವ ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ಶಿಕ್ಷಿಸಲು ಮುಂದಾಗುತ್ತವೆ. ಈ ಘಟನೆಗಳ ಸಂದರ್ಭದಲ್ಲಿ ಕೆಲವೊಮ್ಮೆ ಪೊಲೀಸರೂ ಸಹ ನಿರ್ಲಿಪ್ತರಾಗಿರುವುದನ್ನು ಗಮನಿಸಬಹುದು. ರಾಜಕಾರಣಿಗಳು ಮತ್ತು ಸರ್ಕಾರದ ಅಂಗ ಸಂಸ್ಥೆಗಳು ತಮ್ಮ ರಾಜಕೀಯ ಅನುಕೂಲಗಳಿಗಾಗಿ ಇಂತಹ ಕಾವಲು ಪಡೆಗಳ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರೋತ್ಸಾಹಿಸುವ ಅಥವಾ ಬೆಂಬಲಿಸುವ ಆರೋಪಗಳೂ ಕೆಲವೊಮ್ಮೆ ಕೇಳಿಬರುತ್ತವೆ. ಆದರೆ ಇಂತಹ ಆರೋಪಗಳನ್ನು ಸರ್ಕಾರದ ಬೆಂಬಲಿಗರು ಸ್ಪಷ್ಟವಾಗಿ ನಿರಾಕರಿಸುತ್ತಲೇ ಇರುತ್ತಾರೆ. ಈ ಆರೋಪ ಪ್ರತ್ಯಾರೋಪಗಳನ್ನು “ ಇಸ್ಲಾಮಿಕ್ ಭಯೋತ್ಪಾದನೆ ” ಮತ್ತು “ ಹಿಂದೂ ಭಯೋತ್ಪಾದನೆ ” ಮುಂತಾದ ಹಣೆ ಪಟ್ಟಿಗಳನ್ನು ನೀಡುವ ಮೂಲಕ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ಸಹಜವಾಗಿಯೇ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳು ಇದನ್ನು ನಿರಾಕರಿಸುತ್ತವೆ ಮತ್ತು ಈ ತರಹದ ಹಣೆಪಟ್ಟಿಗಳು ತಮ್ಮ ನಿರ್ದಿಷ್ಟ ಮತಗಳ ಮೂಲ ತತ್ವಗಳಿಗೆ ವಿರುದ್ಧವಾದದ್ದು ಎಂದು ವಾದಿಸುತ್ತವೆ. ಅಷ್ಟೇ ಅಲ್ಲದೆ ಭಯೋತ್ಪಾದಕರು ಎಂದರೆ ಭಯೋತ್ಪಾದಕರಷ್ಟೇ ಅವರು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಸಾಮಾಜಿಕ, ಮತೀಯ ಹಿನ್ನೆಲೆಯನ್ನು ಮಾನ್ಯ ಮಾಡುವುದು ತರವಲ್ಲ ಎಂದೇ ವಾದಿಸುತ್ತಾರೆ. ಸರ್ಕಾರಗಳೂ ಸಹ ಅಕ್ಬರ್ ಖಾನ್ (ಜೈಪುರ ರಾಜಸ್ಥಾನ ೨೦೧೮), ಅಲಿಮುದ್ದಿನ್ (ರಾಮಘಡ್ ಜಾರ್ಖಂಡ್ ೨೦೧೭), ಮೊಹಮ್ಮದ್ ಅಕ್ಲಾಖ್ (ದಾದ್ರಿ, ಉತ್ತರಪ್ರದೇಶ ೨೦೧೫) ಮುಂತಾದವರ ಹತ್ಯೆಯ ಸಂದರ್ಭದಲ್ಲಿ ಹಂತಕರ ಮತೀಯ ಅಸ್ಮಿತೆಯನ್ನು ಗುರುತಿಸಲು ನಿರಾಕರಿಸುತ್ತದೆ.

೨೦೧೯ರ ಲೋಕಸಭಾ ಚುನಾವಣೆಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ “ ನಮ್ಮ ಸಂಸ್ಕೃತಿಯಲ್ಲಿ ಮತ್ತು ನನಗೆ ತಿಳಿದಿರುವಷ್ಟು ಮಟ್ಟಿಗೆ, ಯಾವುದೇ ಹಿಂದೂ ಭಯೋತ್ಪಾದಕನಾಗಲಾರ, ಒಂದು ವೇಳೆ ಭಯೋತ್ಪಾದಕನಾಗಿದ್ದರೆ ಅಂಥವನು ಹಿಂದೂ ಆಗಿರುವುದಿಲ್ಲ ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಧಾನಿ ನರೇಂದ್ರ ಮೋದಿಯ ಈ ಸುಸ್ಪಷ್ಟ ಪ್ರತಿಪಾದನೆಯ ಹೊರತಾಗಿಯೂ ಕಾವಲುಪಡೆಯ ಕಾಲಾಳುಗಳು ಭಯೋತ್ಪಾದಕರೋ ಇಲ್ಲವೋ ಎನ್ನುವುದನ್ನು ಜನರೇ ನಿರ್ಧರಿಸಬಹುದು. ಏಕೆಂದರೆ ಎರಡೂ ತರಹದ ವ್ಯಕ್ತಿಗಳು, ಗುಂಪುಗಳೂ ಸಹ ದ್ವೇಷ ರಾಜಕಾರಣ ಮತ್ತು ಭೀತಿ ಸೃಷ್ಟಿಸುವ ರಾಜಕಾರಣದ ಫಲವಾಗಿಯೇ ಸೃಷ್ಟಿಯಾಗುವುದು ಸ್ಪಷ್ಟ.

(ಲೇಖಕರು ನವದೆಹಲಿಯ ಸೇನಾ ಮುಖ್ಯ ಕಚೇರಿಯಲ್ಲಿ ಸಾಮಾನ್ಯ ಶಿಸ್ತುಪಾಲನೆ ಮತ್ತು ಜಾಗ್ರತೆ ವಿಭಾಗದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಎನ್ಎಪಿಎಂ ಮತ್ತು ಪಿಯುಸಿಎಲ್ ಸದಸ್ಯರೂ ಆಗಿರುತ್ತಾರೆ)

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಭಯೋತ್ಪಾದನೆಮತೀಯ ಕಾವಲು
Previous Post

ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದಲ್ಲಿ ಸುರಂಗ ಕೊರೆಯಲು ಪ್ರಾರಂಭಿಸಿದ – TBM ರುದ್ರ

Next Post

ಏನಿದು ಬಿಟ್ ಕಾಯಿನ್? ಈ ಕೇಸ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ತಂದೊಡ್ಡಲಿದೆಯಾ ಸಂಕಷ್ಟ?

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
Next Post
ಏನಿದು ಬಿಟ್ ಕಾಯಿನ್? ಈ ಕೇಸ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ತಂದೊಡ್ಡಲಿದೆಯಾ ಸಂಕಷ್ಟ?

ಏನಿದು ಬಿಟ್ ಕಾಯಿನ್? ಈ ಕೇಸ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ತಂದೊಡ್ಡಲಿದೆಯಾ ಸಂಕಷ್ಟ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada