ನಾಗರಿಕರ ಮೇಲೆ ಭಯೋತ್ಪಾದಕರ ದಾಳಿ: ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ
ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಲವು ದಾಳಿಗಳ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯನ್ನು ನಿವಾರಿಸಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಕಳೆದ 15 ದಿನಗಳ ಅವಧಿಯಲ್ಲಿ ಸುಮಾರು 9 ಜನ ನಾಗರಿಕರು ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಶ್ರೀನಗರ ಜಿಲ್ಲೆಯ ಆಂಚಾರ್, ಈದ್ಗಾ, ಕಮರ್ ವಾರಿ, ಸೌರಾ, ಮಹಾರಾಜ್ ಗಂಜ್, ನೌಹಟ್ಟಾ, ಸಫಾ ಕಡಲ್ ಹಾಗೂ ಬಾಗ್ಯಾಸ್ ಪ್ರದೇಶದಲ್ಲಿ ಅಂತರ್ಜಾಲ ಸೇವೆ ಬಂದ್ ಆಗಿದೆ. ಕುಲ್ಗಾಂ ಜಿಲ್ಲೆಯ ವಾಂಪೋಹ್, ಕೈಮೋಹ್ ಮತ್ತು ಪುಲ್ವಾಮದ ಲಿಟ್ಟರ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆ ತಡೆಹಿಡಿಯಲಾಗಿದೆ. ಅಕ್ಟೋಬರ್ 12ರಂದು, ಈದ್ಗಾ ಪ್ರದೇಶದಲ್ಲಿ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಸ್ಥ ವಿರೇಂದರ್ ಪಾಸ್ವಾನ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದರು. ಅದೇ ದಿನ, ಕಾಶ್ಮೀರಿ ಪಂಡಿತ ಹಾಗು ರಾಜ್ಯದ ಹೆಸರಾಂತ ಉದ್ಯಮಿ ಎಂ ಎಲ್ ಬಿಂದ್ರೂ ಮತ್ತು ಓರ್ವ ಟ್ಯಾಕ್ಸಿ ಚಾಲಕನ ಹತ್ಯೆಯೂ ಆಗಿತ್ತು. ಅಕ್ಟೋಬರ್ 14ರಂದು ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕ ಗುಂಡಿನ ದಾಳಿಯಲ್ಲಿ ಮೃತರಾಗಿದ್ದರು. ಕಳೆದ ಶನಿವಾರ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಹಾಗೂ ಉತ್ತರ ಪ್ರದೇಶ ಮೂಲದ ಬಡಗಿಯೊಬ್ಬನ ಸಾವಾಗಿತ್ತು. ಭಾನುವಾರದಂದು ಕುಲ್ಗಾಂ ಜಿಲ್ಲೆಯಲ್ಲಿ ಮತ್ತೆ ಬಿಹಾರ ಮೂಲದ ಇಬ್ಬರು ದಿನಗೂಲಿ ಕಾರ್ಮಿಕರು ಹತ್ಯೆಗೀಡಾಗಿದ್ದರು. ಈ ಘಟನೆಗಳ ಬಳಿಕ ಕನಿವೆ ರಾಜ್ಯದಲ್ಲಿ ಆತಂಕ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಈ ಕಾರಣಕ್ಕಾಗಿ ಜಮ್ಮು ಆಡಳಿತವು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಈ ರೀತಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ, ನೂರಾರು ಬಾರಿ ಅಂತರ್ಜಾಲ ಸೇವೆ ಬಂದ್ ಮಾಡಲಾಗಿದೆ. 2021ರಲ್ಲಿಯೇ ಹಲವಾರ ಬಾರಿ ಈ ರೀತಿಯ ಘಟನೆಗಳು ಮರುಕಳಿಸಿವೆ. ಜನವರಿ 26ರಂದು ಗಣರಾಜ್ಯೊತ್ಸವ ಆಚರಣೆ ಸುಗಮವಾಗಿ ಸಾಗಲು ಅಂತರ್ಜಾಲ ಸೇವೆಗೆ ಕತ್ತರಿ ಹಾಕಲಾಗಿತ್ತು. ಈ ಪದ್ದತಿ 2005ರಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ಬಾಂಬ್ ದಾಳಿ ನಡೆದ ಕಾರಣ, ಅಂದಿನಿಂದ ಇಂದಿನವರೆಗೂ ಗಣರಾಜ್ಯೊತ್ಸವ ಹಾಗು ಸ್ವಾತಂತ್ರ್ಯ ದಿನಾಚರಣೆಯಂದು ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಸಾವನ್ನಪ್ಪಿದ ಕಾರಣ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿತ್ತು. 91 ವರ್ಷ ವಯಸ್ಸಿನ ಗಿಲಾನಿ, ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜಾಗೃತಗೊಂಡ ಸರ್ಕಾರ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿತ್ತು. ಸುಮಾರು ಒಂದು ವಾರಗಳ ಕಾಲ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಲು ಬಾಧಿಸಲ್ಪಟ್ಟಿದ್ದವು. ಸೆಪ್ಟೆಂಬರ್ 24ರಂದು ಗಡಿ ಜಿಲ್ಲೆ ಬಾರಾಮುಲ್ಲಾದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯ ಉರಿ ಪ್ರದೇಶದಲ್ಲಿ ಅಕ್ರಮ ಒಳನುಸುಳುವಿಕೆಯ ಮುನ್ಸೂಚನೆ ಸಿಕ್ಕ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇಷ್ಟು ಮಾತ್ರವಲ್ಲದೇ, 2019 ಮತ್ತು 2020ರಲ್ಲಿಯೂ ಐವತ್ತಕ್ಕೂ ಹೆಚ್ಚು ಬಾರಿ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
Read moreDetails