ಕರೋನಾ ಸೋಂಕು: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ‘ಕೊವ್ಯಾಕ್ಸಿನ್’ ಪರಿಣಾಮಕಾರಿ- ಅಧ್ಯಯನ ವರದಿ
ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿದ ‘ಕೊವ್ಯಾಕ್ಸಿನ್’ ಲಸಿಕೆ ಕರೋನಾ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ICMR ಅಧ್ಯಯನ ವರದಿ ತಿಳಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಪ್ರಮುಖ ಕಾರಣವಾಗಿದ್ದ ಈ ರೂಪಾಂತರಿ, ಅತೀ ಶೀಘ್ರದಲ್ಲಿ ಹರಡುತ್ತದೆ. ಇದರಿಂದಾಗಿ, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. “BBV152 ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ, IgG ರೋಗನಿರೋಧಕ ಶಕ್ತಿ ಉತ್ಪಾದನೆಯಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಲಸಿಕೆಯು ಕರೋನಾ ರೂಪಾಂತರಿಯಾದ ಡೆಲ್ಟಾ, ಡೆಲ್ಟಾ AY.1 ಮತ್ತು B.1.617.3. ವಿರುದ್ದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ದಿಪಡಿಸಿಕೊಂಡಿರುವುದು ಕಂಡು ಬಂದಿದೆ,” ಎಂದು ವರದಿ ಹೇಳಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್’ನಲ್ಲಿ ಡೆಲ್ಟಾ ರೂಪಾಂತರಿಯ ವಿರುದ್ದ 65.2 ಶೇಕಡದಷ್ಟು ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ಈಗಾಗಲೇ ಈ ಲಸಿಕೆಯು ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಒಂದಾಗಿದೆ. ಆತಂಕದ ವಿಚಾರವೇನೆಂದರೆ, ಈಗಾಗಲೇ ಡೆಲ್ಟಾ ರೂಪಾಂತರಿಯ ಹಲವು ಮಾದರಿಗಳು ಭಾರತದಲ್ಲಿ ಪತ್ತೆಯಾಗಿವೆ.ಪ್ರಮುಖವಾಗಿ AY.1, AY.2, ಮತ್ತು AY.3 ಮಾದರಿಯ ಡೆಲ್ಟಾ ರೂಪಾಂತರಿ ಸೋಂಕು, ಮೂರನೇ ಅಲೆಯ ವೇಳೆ ಹೆಚ್ಚಾಗಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಇವುಗಳಲ್ಲಿ AY.1 ಮಾದರಿಯ ಡೆಲ್ಟಾ ರೂಪಾಂತರಿ ಏಪ್ರಿಲ್ 2021ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆ ನಂತರ ಇತರ 20 ರಾಷ್ಟ್ರಗಳಲ್ಲಿಯೂ ಪತ್ತೆಯಾಗಿತ್ತು. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಹೊತ್ತಿಗೆ, ಸಾಮಾನ್ಯ COVID19 ವಿರುದ್ದ ಕೊವ್ಯಾಕ್ಸಿನ್ 77.8 ಶೇಕಡಾ ಪರಿಣಾಮಕಾರಿ ಹಾಗೂ ಡೆಲ್ಟಾ ಮಾದರಿಯ ವಿರುದ್ದ 65.2 ಶೆಕಡಾದಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತನ್ನ ವರದಿಯಲ್ಲಿ ಹೇಳಿತ್ತು.
Read moreDetails