ಗುಜರಾತಿನ ಸೂರತ್ ಜಿಲ್ಲೆಯಲ್ಲಿ ಜನವರಿ 19 ಮಧ್ಯರಾತ್ರಿಯಂದು ನಡೆದ ಲಾರಿ ಅಪಘಾತದಲ್ಲಿ ರಸ್ತೆ ಬದಿ ಮಲಗಿದ್ದ ರಾಜಸ್ಥಾನ ಮೂಲದ 15 ಜನ ವಲಸೆ ಕಾರ್ಮಿಕರು ಅಘಾತಕ್ಕೆ ತುತ್ತಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಸೂರತ್ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಕೋಸಂಬ ಹಳ್ಳಿಯಲ್ಲಿ ಈ ದುರಂತ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಎದುರಿನಿಂದ ಬರುತ್ತಿದ್ದ ಟ್ಯಾಕ್ಟರ್ ಅಪಘಾತ ತಪ್ಪಿಸಲು ಹೋಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಫುಟ್ಪಾತ್ ಮೇಲೇರಿದೆ ಎಂದು ತಿಳಿದು ಬಂದಿದೆ.
ಜನವರಿ 19 ರ ಮಧ್ಯರಾತ್ರಿ ಕಿಮ್ ಮತ್ತು ಮಂಡ್ವಿ ರಸ್ತೆ ಮಧ್ಯೆಯಲ್ಲಿ ಈ ದುರಂತ ಸಂಭವಿಸಿದ್ದು, ಟ್ರಕರ್ ಕಿಮ್ ನಿಂದ ಮಂಡ್ವಿಗೆ ಹೋಗುತ್ತಿತ್ತು, ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಬ್ಬು ತುಂಬಿದ ಟ್ಯಾಕ್ಟರ್ ನಲ್ಲಿ ಕಬ್ಬು ಹೊರಗೆ ನೇತಾಡುವುದು ನೋಡಿದ ಲಾರಿ ಚಾಲಕ ವಾಹನವನ್ನು ಬದಿಗೆ ಸರಿಸಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದಿದೆ ಎಂದು ಸೂರತ್ ಎಸ್ ಪಿ ಉಷಾರಾಧ ತಿಳಿಸಿದ್ದಾರೆ.

ದುರ್ಘಟನೆಯಲ್ಲಿ 15 ಜನ ಸಾವನ್ನಪ್ಪಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ದುರಂತ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಯೋಜನೆ ಅಡಿ ಸಾವನ್ನಪ್ಪಿದ ಕುಟುಂಬದವರಿಗೆ ತಲಾ 2 ಲಕ್ಷ ಪರಿಹಾರ ಹಣ ನೀಡಲಾಗುತ್ತದೆ ಜೊತೆಗೆ ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡಲಾಗುತ್ತದೆ ಎಂದಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಭಗವಂತ ದುಃಖ ಭರೆಸುವ ಶಕ್ತಿನೀಡಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂಬ ಸಂದೇಶವನ್ನು ಟ್ವಿಟರ್ ಮೂಲಕ ರವಾನಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಅಫಘಾತದಲ್ಲಿ ಗಾಯಗೊಂಡವರು ಬಹುಬೇಗನೆ ಗುಣಮುಖರಾಗಲಿ ಜೊತೆಗೆ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ, ಅವರುಗಳ ಕುಟುಂಬದ ಸದಸ್ಯರು ನೋವು ಮರೆಯುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದಾರೆ.