ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಬಗ್ಗೆ ಮಾತನಾಡುತ್ತಾ ಶಿವಸೇನೆಯ ಸಂಸದ ಸಂಜಯ್ ರೌತ್ ಅವರು ಬುಡಕಟ್ಟು ಜನರ ಹಕ್ಕುಗಳ ಕಾರ್ಯಕರ್ತರನ್ನು ಜೈಲಿನಲ್ಲಿ “ಕೊಲ್ಲಲಾಯಿತು” ಎಂದು ಹೇಳಿದ್ದಾರೆ. 84 ವರ್ಷದ ವ್ಯಕ್ತಿಯೊಬ್ಬರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಬಲ್ಲಷ್ಟು ದೇಶದ ಅಡಿಪಾಯ ದುರ್ಬಲವಾಗಿದೆಯೆ ಎಂದು ಕೇಳಿದ ಸೇನಾ ಸಂಸದರು, ಕೇಂದ್ರ ಸರ್ಕಾರವನ್ನು ಹಿಟ್ಲರ್ ಮತ್ತು ಮುಸೊಲಿನಿಗೆ ಹೋಲಿಸಿದ್ದಾರೆ.

ಅಕ್ಟೋಬರ್ನಲ್ಲಿ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದ್ದ ಸ್ವಾಮಿ ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ನ್ಯಾಯಾಂಗ ಬಂಧನದಲ್ಲಿ ನಿಧನರಾಗಿದ್ದರು.

ಜಾರ್ಜ್ನ ಫರ್ನಾಂಡಿಸ್ ಅವರು ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ಹೂಡಿದ್ದಾರೆ ಎಂದು ಆರೋಪ ಹೊರಿಸಿದ್ದ ಇಂದಿರಾಗಂಧಿಯವರ ಸರ್ಕಾರಕ್ಕೆ ಪ್ರಸ್ತುತ ಸರ್ಕಾರವನ್ನು ಹೋಲಿಸಿದ ಅವರು “ಇಂದಿರಾ ಗಾಂಧಿ ಜಾರ್ಜ್ ಫರ್ನಾಂಡಿಸ್ಗೆ ಹೆದರುತ್ತಿದ್ದರು. ಜಾರ್ಜ್ ಆಗ ಯುವ ನಾಯಕರಾಗಿದ್ದರು ಮತ್ತು ಫಾದರ್ ಸ್ಟಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಸ್ಟಾನ್ ಸ್ವಾಮಿ ಮತ್ತು ವರ್ವರ ರಾವ್ ಅವರಿಗೆ ಹೆದರುತ್ತಿದೆ ಮತ್ತು ಜೈಲಿನಲ್ಲಿ ಸ್ಟಾನ್ ಸ್ವಾಮಿ ಅವರನ್ನು ಕೊಲ್ಲಲಾಯಿತು ” ಎಂದು ರೌತ್ ಅವರು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿನ ತಮ್ಮ ಸಾಪ್ತಾಹಿಕ ಅಂಕಣದಲ್ಲಿ ಹೇಳಿದ್ದಾರೆ.
“84 ವರ್ಷದ ಮನುಷ್ಯನಿಗೆ ಹೆದರುವ ಸರ್ಕಾರವು ವರ್ತನೆಯಲ್ಲಿ ಸರ್ವಾಧಿಕಾರಿವಾಗಿದೆ ಆದರೆ ಹೃದಯದಲ್ಲಿ ಹಿಟ್ಲರ್ ಮತ್ತು ಮುಸಲೊನಿಯಂತೆ ದುರ್ಬಲವಾಗಿದೆ” ಎಂದು ಹೇಳಿದರು.

ಎಲ್ಗಾರ್ ಪರಿಷತ್ನಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಬೆಂಬಲಿಸಲಾಗುವುದಿಲ್ಲ ಆದರೆ ನಂತರ ನಡೆದದ್ದನ್ನು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪಿತೂರಿ ಎಂದು ಕರೆಯಬೇಕಾಗುತ್ತದೆ ಎಂದು ಅವರು ಹೇಳಿದರು. “ರಾಜ್ಯ, ದೇಶದ್ರೋಹ ಮತ್ತು ರಾಷ್ಟ್ರ ವಿರೋಧಿ ಯುದ್ಧ ಮಾಡುವುದು ಎಂದರೇನು? ಕಾಡುಗಳಲ್ಲಿನ ಬುಡಕಟ್ಟು ಜನರಲ್ಲಿ ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವುದು ದೇಶವನ್ನು ಉರುಳಿಸುವುದೇ? ಜನರಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸುವುದು ಹೇಗೆ ದೇಶದ್ರೋಹವಾಗುತ್ತದೆ?” ಎಂದು ರೌತ್ ಕೇಳಿದರು.
“ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿಂತ ಮಾವೋವಾದಿಗಳು ಮತ್ತು ನಕ್ಸಲರು ಹೆಚ್ಚು ಅಪಾಯಕಾರಿಯಾಗಿದ್ದರೂ 84 ವರ್ಷದ ಅಂಗವಿಕಲ ಮತ್ತು ಅಸಹಾಯಕ ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲಿ ಮರಣ ಹೊಂದಿರುವುದನ್ನು ಸಮರ್ಥಿಸಲಾಗುವುದಿಲ್ಲ ” ಎಂದ ಅವರು

“ಸರ್ಕಾರವನ್ನು ವಿರೋಧ ಮಾಡುವುದಕ್ಕೂ ದೇಶವನ್ನು ವಿರೋಧ ಮಾಡುವುದಕ್ಕೂ ವ್ಯತ್ಯಾಸವಿದೆ. ಸರ್ಕಾರವನ್ನು ವಿರೋಧಿಸುವುದು ದೇಶದ ವಿರುದ್ಧದ ಪಿತೂರಿ ಎಂದು ಯಾರಾದರೂ ಭಾವಿಸಿದರೆ, ಸರ್ವಾಧಿಕಾರದ ಬೀಜಗಳನ್ನು ಅವರ ಮನಸ್ಸಿನಲ್ಲಿ ಬಿತ್ತಲಾಗಿದೆ ಎಂದರ್ಥ ” ಎಂದಿದ್ದಾರೆ.






