• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರಮಿಕ ಜಗತ್ತಿನ ದುರವಸ್ಥೆಯೂ ರಾಜಕೀಯ ನಿರ್ಲಕ್ಷ್ಯವೂ,  ಅಬ್ಬರದ ಚುನಾವಣಾ ಪ್ರಚಾರಗಳು ವ್ಯಕ್ತಿ ಕೇಂದ್ರಿತವಾದಷ್ಟೂ ವಾಸ್ತವ ಕಹಿಸತ್ಯಗಳು ಕಾಣದಾಗುತ್ತವೆ ! 

ನಾ ದಿವಾಕರ by ನಾ ದಿವಾಕರ
April 9, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಶ್ರಮಿಕ ಜಗತ್ತಿನ ದುರವಸ್ಥೆಯೂ ರಾಜಕೀಯ ನಿರ್ಲಕ್ಷ್ಯವೂ,  ಅಬ್ಬರದ ಚುನಾವಣಾ ಪ್ರಚಾರಗಳು ವ್ಯಕ್ತಿ ಕೇಂದ್ರಿತವಾದಷ್ಟೂ ವಾಸ್ತವ ಕಹಿಸತ್ಯಗಳು ಕಾಣದಾಗುತ್ತವೆ ! 
Share on WhatsAppShare on FacebookShare on Telegram



ನಾ ದಿವಾಕರ

ADVERTISEMENT

ಕಾರ್ಪೋರೇಟ್‌ ಮಾರುಕಟ್ಟೆಯ ಕ್ರೌರ್ಯ, ಆರ್ಥಿಕ ನಿರ್ವಹಣೆ ಮಾಡುವವರ ಕಿವುಡುತನ, ಆಳ್ವಿಕೆಯ ಜಾಣ ಕುರುಡು, ಮಾಧ್ಯಮಗಳ ನಿಷ್ಕ್ರಿಯತೆ ಮತ್ತು ಜನಸಾಮಾನ್ಯರ ನಿರುಮ್ಮಳ ಮನಸ್ಥಿತಿ , ಇವೆಲ್ಲವುಗಳ ನಡುವೆಯೇ ಭಾರತ ಮತ್ತೊಂದು ಮಹಾಚುನಾವಣೆಯನ್ನು ಎದುರಿಸುತ್ತಿದೆ. ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಗಳ ನಡುವೆ ನೇರ ಸ್ಪರ್ಧೆಯಂತೆ ಕಾಣುತ್ತಿರುವ ಚುನಾವಣಾ ಕಣದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳೂ ತಮ್ಮ ಸ್ವನಿರ್ಮಿತ ಭದ್ರಕೋಟೆಗಳನ್ನು, ಜಾತಿ ರಾಜಕಾರಣದ ನೆಲೆಗಳನ್ನು ರಕ್ಷಿಸುವ ಸಲುವಾಗಿ ಅಪವಿತ್ರ ಮೈತ್ರಿ ರಾಜಕಾರಣಕ್ಕೂ ಮುಂದಾಗಿವೆ. ತಳಮಟ್ಟದ ಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಬಹುಸಂಖ್ಯಾತ ಜನರನ್ನು ಸೆಳೆಯುವ ಸಲುವಾಗಿ ಎರಡೂ ಒಕ್ಕೂಟಗಳು ಗ್ಯಾರಂಟಿ ಯೋಜನೆಗಳ ಮೊರೆ ಹೊಕ್ಕಿವೆ. ಅಂದರೆ, ದುಡಿಯುವ ಜನತೆಗೆ “ನಿಮ್ಮ ಸಂಕಷ್ಟ ಬವಣೆ ಶಾಶ್ವತವಾಗಿ ನೀಗುವುದಿಲ್ಲವಾದರೂ ನೀವು ಉಸಿರಾಡಲು ಅಗತ್ಯವಾದ ಸವಲತ್ತುಗಳನ್ನು ಒದಗಿಸುತ್ತೇವೆ ” ಎಂಬ ಸಂದೇಶವನ್ನು ರಾಜಕೀಯ ಪಕ್ಷಗಳು ನೀಡುತ್ತಿವೆ.

2024ರ ಚುನಾವಣೆಗಳ ಕಾವು ಏರತೊಡಗಿದ್ದಂತೆಲ್ಲಾ ಪ್ರಚಾರದ ಭರಾಟೆಯೂ ತೀವ್ರವಾಗುತ್ತಿದೆ. ಹತ್ತು ವರ್ಷಗಳ ಆಳ್ವಿಕೆಯ ಅನಂತರವೂ, ದೇಶದ ಸಕಲ ಸಮಸ್ಯೆಗಳಿಗೆ 2014ರ ಪೂರ್ವದ ಆಳ್ವಿಕೆಯನ್ನೇ ದೋಷಿಯನ್ನಾಗಿ ನಿಲ್ಲಿಸುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರ ತನ್ನ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿದೆ. ಮತ್ತೊಂದೆಡೆ ತನ್ನ ಆಡಳಿತಾತ್ಮಕ ತಪ್ಪುಗಳನ್ನು ಅರಿತಂತೆ ಕಾಣುತ್ತಿರುವ ಕಾಂಗ್ರೆಸ್‌ ಪ್ರಣಾಳಿಕೆಯ ಮೂಲಕ ಜನಸಾಮಾನ್ಯರನ್ನು ಆಕರ್ಷಿಸಲು, ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದೆ. ಈ ಅಬ್ಬರದ ಪ್ರಚಾರದಲ್ಲಿ ಕಾಣದಿರುವ ಒಂದು ಪ್ರಮುಖ ಅಂಶ ಎಂದರೆ ಆರ್ಥಿಕತೆಯ ದುಸ್ಥಿತಿ, ನಿರುದ್ಯೋಗದ ಬವಣೆ ಹಾಗೂ ತಳಮಟ್ಟದ ಶ್ರಮಜೀವಿಗಳನ್ನು ಬಾಧಿಸುತ್ತಿರುವ ಜೀವನ-ಜೀವನೋಪಾಯದ ಪ್ರಶ್ನೆಗಳು ಮತ್ತು ದೇಶದ ಯುವ ಸಮೂಹಕ್ಕೆ ಎದುರಾಗಿರುವ ಭವಿಷ್ಯದ ಸವಾಲುಗಳು.

ತನಿಖಾ ಸಂಸ್ಥೆಗಳ ಪಕ್ಷಪಾತದ ಉಪಕ್ರಮಗಳು ಮತ್ತು ಇದರಿಂದ ಬಾಧಿತವಾಗಿರುವ ಪ್ರಮುಖ ರಾಜಕೀಯ ಪಕ್ಷಗಳನ್ನೇ ಕೇಂದ್ರೀಕರಿಸಿರುವ ಚುನಾವಣಾ ಪ್ರಚಾರದ ಸರಕುಗಳು, ವಾಸ್ತವವಾಗಿ ಸಮಾಜದ ತಳಸ್ತರವನ್ನು ಪ್ರತಿನಿಧಿಸುವ ಕೋಟ್ಯಂತರ ಜನತೆಯ ಬದುಕಿನ ಪ್ರಶ್ನೆಯನ್ನು ಬಹುಮಟ್ಟಿಗೆ ನಿರ್ಲಕ್ಷಿಸಿವೆ ಎಂದೇ ಹೇಳಬಹುದು. ಈ ಸಂದರ್ಭದಲ್ಲೇ ಸರ್ಕಾರದ ಪರ ವಹಿಸುವ ಅರ್ಥಶಾಸ್ತ್ರಜ್ಞರ ಕೆಲವು ಅಭಿಪ್ರಾಯಗಳೂ ಸಾರ್ವಜನಿಕ ಚರ್ಚೆಗೊಳಗಾಗುತ್ತಿವೆ.  ಇತ್ತೀಚೆಗೆ 16 ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಮತ್ತು ಮೋದಿ ಆಡಳಿತದೊಂದಿಗೆ ನಿಕಟ ಸಂಬಂಧ ಹೊಂದಿರುವ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರು ಭಾರತದಲ್ಲಿನ ತೀವ್ರ ಆದಾಯ ಅಸಮಾನತೆಯನ್ನು ಸಮರ್ಥಿಸಿದ್ದು ಅಸಮಾನತೆಯ ಬಗ್ಗೆ ನಾವು ಹೆಚ್ಚು ನಿದ್ದೆಗೆಡಬೇಕಿಲ್ಲ  ಎಂದು ಹೇಳಿರುವುದು ಏಪ್ರಿಲ್ 2, 2024 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ. ಇದು ಆಳ್ವಿಕೆಯ ಪರಿಭಾಷೆಯಾಗಿದ್ದು, ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವ್ಯವಸ್ಥೆ ಹೀಗೆಯೇ ನಡೆದುಕೊಳ್ಳುವುದು ಚಾರಿತ್ರಿಕ ವಾಸ್ತವ. ಈ ಹಿನ್ನೆಲೆಯಲ್ಲೇ ಇತ್ತೀಚಿನ ಕೆಲವು ಆರ್ಥಿಕ ಸಮೀಕ್ಷೆ-ವರದಿಗಳತ್ತ ಗಮನಹರಿಸುವುದು ವಿವೇಕಯುತ ಎನಿಸುತ್ತದೆ.

ಅಸಮಾನತೆಯ ಕಂದರಗಳ ನಡುವೆ

ಇತ್ತೀಚೆಗೆ ಬಿಡುಗಡೆಯಾದ ಕೆಲವು ದತ್ತಾಂಶ ಆಧಾರಿತ ಮಾಹಿತಿಯ ಅನುಸಾರ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆಯು ಸ್ವಾತಂತ್ರ್ಯಪೂರ್ವದ ಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ಹೇಳಲಾಗುತ್ತಿದೆ.

2014-15 ಮತ್ತು 2022-23ರ ನಡುವೆ, ಸಂಪತ್ತಿನ ಕೇಂದ್ರೀಕರಣದ ವಿಷಯದಲ್ಲಿ ಉನ್ನತ ಮಟ್ಟದ ಅಸಮಾನತೆಯ ಏರಿಕೆಯು ಸ್ಪಷ್ಟವಾಗಿ ಗುರುತಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2022-23ರ ವೇಳೆಗೆ, ಮೇಲ್ಪದರದ ಶೇ. 1ರಷ್ಟು ಜನರು ಶೇ. 22.6ರಷ್ಟು ಆದಾಯವನ್ನು, ಶೇ. 40.1 ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಅಮೆರಿಕ ಮುಂತಾದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಇದು ಹೆಚ್ಚಿನ ಪ್ರಮಾಣದಲ್ಲಿದೆ ಎನ್ನಲಾಗಿದೆ. ಈ ಹಿಂದೆ ಆಕ್ಸ್‌ಫಾಮ್‌ ಆರ್ಥಿಕ ಸಮೀಕ್ಷೆಯಲ್ಲೂ ಸಹ ಕೆಳಸ್ತರದ ಶೇ. 99 % ಜನರ ಸಂಪತ್ತಿನ ಪ್ರಮಾಣದ ಬಗ್ಗೆ ದತ್ತಾಂಶಗಳನ್ನು ಒದಗಿಸಲಾಗಿತ್ತು.  2017 ರಲ್ಲಿ ಉತ್ಪತ್ತಿಯಾದ ಸಂಪತ್ತಿನ ಶೇ. 73ರಷ್ಟನ್ನು , ಶ್ರೀಮಂತ ವರ್ಗದ ಶೇ.1 ರಷ್ಟು ಜನರ ಪಾಲಾಗಿದ್ದರೆ , ಜನಸಂಖ್ಯೆಯ ಅರ್ಧದಷ್ಟು ಬಡವರಾಗಿರುವ 670 ಮಿಲಿಯನ್ ಭಾರತೀಯರು ತಮ್ಮ ಸಂಪತ್ತಿನಲ್ಲಿ ಕೇವಲ ಶೇ. 1ರಷ್ಟು ಹೆಚ್ಚಳವನ್ನು ಕಂಡಿದ್ದಾರೆ ಎಂದು ಅದು ವರದಿ ಮಾಡಿತ್ತು.  ದೇಶದ ಒಟ್ಟು ಸಂಪತ್ತಿನ ಶೇ.77ರಷ್ಟನ್ನು ಶೇ.10ರಷ್ಟು ಶ್ರೀಮಂತರು ಹೊಂದಿದ್ದಾರೆ ಎಂದೂ ಹೇಳಲಾಗಿತ್ತು.

ಈ ಅಪಾರ ಅಂತರ ಮತ್ತು ಅಸಮಾನತೆಯನ್ನು ಸಂಪತ್ತಿನ ಉತ್ಪಾದನೆಯ ಅಗತ್ಯ ಅಡ್ಡಪರಿಣಾಮವೆಂದು ಪರಿಗಣಿಸಬೇಕು ಎಂದು ಅರವಿಂದ್‌ ಪನಗರಿಯಾ ಹೇಳಿದ್ದಾರೆ. “ಬಡತನವನ್ನು ಕಡಿಮೆ ಮಾಡಲು ಸಂಪತ್ತಿನ ಸೃಷ್ಟಿಯ ಅಗತ್ಯವಿರುತ್ತದೆ, ಇದು ಸಂಪತ್ತನ್ನು ಸೃಷ್ಟಿಸುವವರು ಮತ್ತು ಉಳಿದವರ ನಡುವೆ ಅಸಮಾನತೆಯ ಹೆಚ್ಚಳವಿಲ್ಲದೆ ಸಾಧ್ಯವಾಗುವುದಿಲ್ಲ. ಕೆಲವರು ಅಂತಹ ಅಸಮಾನತೆಯ ಬಗ್ಗೆ ಹುಯಿಲೆಬ್ಬಿಸುತ್ತಾರೆ  ಆದರೆ ಸಾಮಾನ್ಯ ಜನರು ಸಂಪತ್ತು ಸೃಷ್ಟಿಸಿದವರನ್ನು ದ್ವೇಷಿಸುವುದಿಲ್ಲ “ ಎಂದು ಹೇಳಿರುವುದಾಗಿ ವರದಿಯಾಗಿದೆ.

ನವ ಉದಾರವಾದ ಮತ್ತು ಬಂಡವಾಳಶಾಹಿಯ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯನ್ನು ಬೆಂಬಲಿಸುವವರು ಮತ್ತು ಸಮರ್ಥಿಸಿ ಪೋಷಿಸುವವರು, ಸಮಾಜದ ಕೆಳಸ್ತರದಲ್ಲಿರುವ ಶ್ರೀಸಾಮಾನ್ಯರಿಗೆ ಬೃಹದಾರ್ಥಿಕತೆಯ ಅರಿವೇ ಇರುವುದಿಲ್ಲ ಎಂದೇ ಭಾವಿಸಿರುತ್ತಾರೆ. ದೇಶವು ಸಮೃದ್ಧಿಯ ಹಾದಿಯಲ್ಲಿ ಸಾಗುತ್ತಿರುವಾಗ ಅಸಮಾನತೆಯು ಸಹಜವಾಗಿಯೇ ಸೃಷ್ಟಿಯಾಗುತ್ತದೆ, ಜನಸಾಮಾನ್ಯರು ಈ ಬಗ್ಗೆ ಹೆಚ್ಚಾಗಿ ಯೋಚಿಸುವುದಿಲ್ಲ ಎನ್ನುವ ವಿತಂಡವಾದ ಇಲ್ಲಿ ಕಾಣುತ್ತದೆ. Trickle down ಮಾದರಿಯ, ಆರ್ಥಿಕ ಅಭಿವೃದ್ಧಿಯಲ್ಲಿ ಮೇಲಿನಿಂದ ಹರಿದು ಬರುವ ಸಂಪತ್ತು ಮತ್ತು ಆದಾಯ ಕೆಳಸ್ತರದ ಜನತೆಗೆ ತಲುಪುವ ಮೊದಲೇ ಹಲವು ಕವಲುಗಳಲ್ಲಿ ಒಡೆದು, ಸಂಪನ್ಮೂಲಗಳ ಸಮೇತ ಉಳ್ಳವರ ಪಾಲಾಗುವುದು ಬಂಡವಾಳಶಾಹಿ ಆರ್ಥಿಕತೆಯ ಲಕ್ಷಣ. ತಮ್ಮ ನಿಕೃಷ್ಟ ಜೀವನೋಪಾಯದ ಮಾರ್ಗಗಳಿಗಾಗಿ ನಿತ್ಯ ಹೆಣಗಾಡುವ ಸಾಮಾನ್ಯರಿಗೆ ಇದು ಅರಿವಿಗೇ ಬಾರದಂತೆ ಮಾರುಕಟ್ಟೆ ನಿಯಂತ್ರಿತ ಮಾಧ್ಯಮಗಳು ಎಚ್ಚರವಹಿಸುತ್ತವೆ. ಪನಗರಿಯಾ ಅವರು ಹೇಳಿರುವಂತೆ ಈ ರೀತಿ ತಮ್ಮ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಜನರು ಬಂಡವಾಳಶಾಹಿಗಳ ಸಂಪತ್ತಿನ ಹೆಚ್ಚಳದ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ಆದರೆ ಇದರಿಂದ ಸೃಷ್ಟಿಯಾಗುವ ಅಸಮಾನತೆ ಹಾಗೂ ಅದರಿಂದ ಅನುಭವಿಸಬೇಕಾದ ಯಾತನೆ ಅವರನ್ನು ಕಾಡುತ್ತಲೇ ಇರುತ್ತದೆ. ನವ ಉದಾರವಾದ ಇಂತಹ ಜನರ ಧ್ವನಿಗೆ ಕಿವುಡಾಗಿರುತ್ತದೆ.

ILO ವರದಿ ಬಿಚ್ಚಿಡುವ ಸತ್ಯಗಳು

ಈ ನಡುವೆಯೇ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಮಾನವ ಅಭಿವೃದ್ಧಿ ಸಂಸ್ಥೆ (IHD) ಇತ್ತೀಚೆಗೆ ಹೊರತಂದಿರುವ ದತ್ತಾಂಶ ಆಧಾರಿತ ವರದಿಯು ಭಾರತದಲ್ಲಿ ಉದ್ಯೋಗದ ಸ್ಥಿತಿಗತಿಗಳನ್ನು ಸ್ಪಷ್ಟವಾಗಿ ಹೊರಗೆಡಹಿದ್ದು, ಇದು ಜೀವಪರ ಕಾಳಜಿ ಇರುವ ಯಾರಿಗೇ ಆದರೂ ಆತಂಕ ಮೂಡಿಸುವಂತಿದೆ. ಮಾರ್ಚ್‌ 26ರಂದು ಬಿಡುಗಡೆಯಾದ ಈ ವರದಿಯನ್ನು ಚುನಾವಣೆಗಳ ಮಸೂರ ತೊಟ್ಟು ನೋಡಿದಷ್ಟೂ ವಾಸ್ತವವನ್ನು ನಿರ್ಲಕ್ಷಿಸದಂತಾಗುತ್ತದೆ. ಏಕೆಂದರೆ ಭಾರತದ ಚುನಾವಣೆಗಳನ್ನು ,ಫಲಿತಾಂಶಗಳನ್ನು ಈ ವರದಿಗಳು ಯಾವುದೇ ರೀತಿಯಲ್ಲೂ ಪ್ರಭಾವಿಸುವುದಿಲ್ಲ. ಇಲ್ಲಿ ನೀಡಲಾಗುವ ಕಳವಳಕಾರಿ ಚಿತ್ರಣ ತಳಮಟ್ಟದ ಸಮಾಜಕ್ಕೆ ತಲುಪದಂತೆ ಮುಖ್ಯವಾಹಿನಿ ಮಾಧ್ಯಮಗಳು ಎಚ್ಚರವಹಿಸುತ್ತವೆ.

ILO ವರದಿಯ ಅನುಸಾರ ಭಾರತದಲ್ಲಿ ಶೇ. 83ರಷ್ಟು ಯುವ ಸಮೂಹ ನಿರುದ್ಯೋಗಿಯಾಗಿದೆ. ಶೇ. 65.7ರಷ್ಟು ವಿದ್ಯಾವಂತರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅಂಕಿಅಂಶಗಳನ್ನು ಬದಿಗಿಟ್ಟು ನೋಡಿದಾಗಲೂ ದೇಶದಲ್ಲಿ ಉದ್ಯೋಗಾವಕಾಶಗಳು ಬೆಳೆಯುತ್ತಿಲ್ಲ ಎನ್ನುವುದು ಸ್ಪಷ್ಟ. 2022ರ ಎರಡನೆ ತ್ರೈಮಾಸಿಕದಲ್ಲಿ ನಗರದ ಯುವ ಸಮೂಹದ ನಡುವೆ ಕಾರ್ಮಿಕ-ಜನಸಂಖ್ಯೆಯ ಅನುಪಾತವು ಶೇ. 34.9ರಷ್ಟಿದೆ. ಇದು 2019ರ ನಾಲ್ಕನೆ ತ್ರೈಮಾಸಿಕದಲ್ಲಿ , ಅಂದರೆ ಕೋವಿದ್‌ ಪೂರ್ವದಲ್ಲಿ ಶೇ. 32.5ರಷ್ಟಿತ್ತು. ವಿದ್ಯಾವಂತ ಯುವ ಸಮೂಹದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ಮಾಧ್ಯಮಿಕ ಅಥವಾ ಉನ್ನತ ಶಿಕ್ಷಣ ಪಡೆದಿರುವವರಲ್ಲಿ ನಿರುದ್ಯೋಗ ಶೇ. 18.4ರಷ್ಟು, ಅಂದರೆ ಆರು ಪಟ್ಟು ಹೆಚ್ಚಾಗಿದೆ. ಪದವೀಧರರಲ್ಲಿ ಶೇ. 29.1ರಷ್ಟು ಅಂದರೆ ಒಂಬತ್ತು ಪಟ್ಟು ಹೆಚ್ಚಾಗಿದೆ. ಇದರತ್ಥ ಶೇಕಡಾ 30ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

2019 ರ ನಂತರದ ಉದ್ಯೋಗ ಕುಸಿತಕ್ಕೆ ಮುಖ್ಯ ಕಾರಣವೆಂದರೆ ಕೃಷಿಯೇತರ ಕ್ಷೇತ್ರಗಳು, ಉತ್ಪಾದನಾ ವಲಯಗಳು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಕೃಷಿಯೇತರ ಉದ್ಯೋಗದಲ್ಲಿ ಯಾವುದೇ ಹೆಚ್ಚಳವಾಗಿದ್ದರೂ ಅದನ್ನು ಮುಖ್ಯವಾಗಿ ಸೇವಾ ವಲಯ ಮತ್ತು ನಿರ್ಮಾಣ ಕ್ಷೇತ್ರದ ಚಟುವಟಿಕೆಗಳಿಂದ ಲೆಕ್ಕಹಾಕಲಾಗುತ್ತದೆ. ಉತ್ಪಾದನಾ ಕ್ಷೇತ್ರದ ಉದ್ಯೋಗದ ಪಾಲು ಶೇ.12-14 ರಷ್ಟಿದೆ. ಎರಡನೆಯದಾಗಿ, ಯಾಂತ್ರೀಕರಣದಿಂದಾಗಿ ಉತ್ಪಾದನಾ ಪ್ರಕ್ರಿಯೆಯು ಹೆಚ್ಚು ಬಂಡವಾಳ ತೀವ್ರತೆಯನ್ನು ಪಡೆದುಕೊಂಡಿದ್ದು, ಕಡಿಮೆ ಪ್ರಮಾಣದ ಶ್ರಮಿಕರನ್ನು ಬಳಸುತ್ತಿದೆ.  1990 ರ ದಶಕದ ನಂತರದಲ್ಲಿ ಅಧಿಕ ಬೆಳವಣಿಗೆಯ ಹಂತಗಳನ್ನು ತುಲನಾತ್ಮಕವಾಗಿ ನೋಡಿದಾಗ,  2000 ಮತ್ತು 2019 ರ ನಡುವಿನ ಬೆಳವಣಿಗೆಯ ವರ್ಷಗಳಲ್ಲಿ ಕಡಿಮೆ ಕಾರ್ಮಿಕರು ಕೆಲಸ ಮಾಡಿರುವುದು ಕಂಡುಬರುತ್ತದೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಂತೆ, ಉದ್ಯೋಗ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಹೆಚ್ಚಾಗಿದ್ದರೂ, ಈ  ಹೆಚ್ಚಳವು ಮುಖ್ಯವಾಗಿ ಕಡಿಮೆ ಆದಾಯದ ಸ್ವಯಂ ಉದ್ಯೋಗದ ಕ್ಷೇತ್ರದಲ್ಲಿ ಕಂಡುಬರುತ್ತದೆ. ILO ವರದಿಯ ಪ್ರಕಾರ, 2018 ರ ನಂತರ ಮಹಿಳೆಯರ ಪಾಲಿಗೆ ನಿಯಮಿತ ಉದ್ಯೋಗಾವಕಾಶಗಳು ಕುಸಿದಿದೆ. ಒಟ್ಟಾರೆಯಾಗಿ ಶ್ರಮಿಕರ ವೇತನ ಪ್ರಮಾಣವು ಕಡಿಮೆಯಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಕೌಶಲ್ಯರಹಿತ ದಿನಗೂಲಿ ಕೃಷಿ ಕಾರ್ಮಿಕರಲ್ಲಿ ಶೇ. 62 ರಷ್ಟು ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಶೇ. 70 ರಷ್ಟು ಕಾರ್ಮಿಕರು 2022 ರಲ್ಲಿ ನಿಗದಿತ ದೈನಂದಿನ ಕನಿಷ್ಠ ವೇತನವನ್ನು ಪಡೆದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.  2019 ರ ಅನಂತರ ಸ್ವಯಂ ಉದ್ಯೋಗಿಗಳ ನೈಜ ಗಳಿಕೆಯ ಪ್ರಮಾಣವೂ ಕುಸಿದಿದೆ.

ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ವಲಯವನ್ನು ಹೊರತುಪಡಿಸಿ ತ್ವರಿತ ವಿಸ್ತರಣೆಗೆ ತೆರೆದುಕೊಂಡಿರುವ ಏಕೈಕ ವಲಯವೆಂದರೆ ವಿತರಣಾ ಕಾರ್ಮಿಕರು ಮತ್ತು ಸ್ವಿಗಿ, ಜಮೋಟೋ, ಓಲಾ-ಉಬರ್ ಚಾಲಕರಂತಹ ಗಿಗ್ ಉದ್ಯೋಗಗಳು. ILO ವರದಿಯ ಅನುಸಾರ ಇದು ಕೇವಲ ಅನೌಪಚಾರಿಕ ಉದ್ಯೋಗದ ವಿಸ್ತರಣೆಯಾಗಿದ್ದು ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತಾ ನಿಬಂಧನೆಗಳಿರುವುದಿಲ್ಲ. ಯಾವುದೇ ಕ್ಷೇತ್ರದಲ್ಲಾದರೂ ಗಿಗ್‌ ಉದ್ಯೋಗವು ಗುಣಮಟ್ಟದ ಕೆಲಸ ಆಗುವುದಿಲ್ಲ. ಗಿಗ್‌ ನೌಕರಿಯನ್ನು ಅವಲಂಬಿಸುವವರಲ್ಲಿ ಹೆಚ್ಚಿನ ಪಾಲು ಗ್ರಾಮೀಣ ಪ್ರದೇಶದಿಂದ ಉದ್ಯೋಗ ಅರಸಿ ಬರುವ ವಿದ್ಯಾವಂತರೇ ಇರುತ್ತಾರೆ. ಒಂದು ಅಂದಾಜಿನ ಪ್ರಕಾರ 2030 ರ ವೇಳೆಗೆ ವಲಸೆ ಪ್ರಮಾಣವು ಕಾರ್ಮಿಕ ಶಕ್ತಿಯ ಶೇಕಡಾ 40 ಕ್ಕೆ ತಲುಪುವ ನಿರೀಕ್ಷೆಯಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರ ಯಾತನೆಗೆ ಭಾರತ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕೇಂದ್ರದಲ್ಲಾಗಲೀ ರಾಜ್ಯಮಟ್ಟದಲ್ಲಾಗಲೀ ಒಂದು ನಿರ್ದಿಷ್ಟ “ವಲಸೆ ಕಾರ್ಮಿಕ ನೀತಿ” ಇಲ್ಲದಿರುವುದರಿಂದ, ವಲಸೆ ಕಾರ್ಮಿಕರ ಪ್ರಮಾಣ ಮತ್ತು ಪ್ರಾದೇಶಿಕತೆಯ ಬಗ್ಗೆಯೂ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ.

ರೇಟಿಂಗ್‌ ಏಜೆನ್ಸಿ Mckinsey ಒದಗಿಸಿರುವ ಮಾಹಿತಿಯ ಅನುಸಾರ ಭಾರತದ ಆರ್ಥಿಕತೆಯು 2030ರವರೆಗೆ ಶೇ. 8 ಅಥವಾ 8.5ರಷ್ಟು ಪ್ರಗತಿ ಸಾಧಿಸಿದರೆ 12 ದಶಲಕ್ಷ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. 2013-18ರ ಅವಧಿಯಲ್ಲಿ ಕೇವಲ ಆರು ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಹಿನ್ನೆಲೆಯಲ್ಲೇ ಹಣಕಾಸು ಆಯೋಗದ ನೂತನ ಅಧ್ಯಕ್ಷ ಅರವಿಂದ್‌ ಪನಗರಿಯಾ ಅವರು ಶೇ. 8ರಷ್ಟು ಅಭಿವೃದ್ಧಿಯ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಬ್ಲೂಮ್‌ಬರ್ಗ್‌ ರೇಟಿಂಗ್‌ ಏಜೆನ್ಸಿಯು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಶೇ. 6ರಷ್ಟು ಅಭಿವೃದ್ಧಿ ದರವನ್ನು ಅಂದಾಜು ಮಾಡಿದೆ. ಈ ರೇಟಿಂಗ್‌ ಏಜೆನ್ಸಿಗಳ ಊಹೆ ಅಂದಾಜುಗಳು ಏನೇ ಇದ್ದರೂ, ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಿನ ಪ್ರಗತಿ ಉಂಟಾಗುತ್ತದೆ ಎಂದು ಸೂಚಿಸುವ ಯಾವುದೇ ಅಧ್ಯಯನಗಳು ಕಂಡುಬರುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಭವಿಷ್ಯದ ಆತಂಕಗಳ ನಡುವೆ

ಮೂಲತಃ ಡಿಜಿಟಲೀಕರಣದ ಪರಿಣಾಮವಾಗಿ ಕಾರ್ಮಿಕರ ಸ್ಥಳಾಂತರವು ತೀವ್ರಗೊಳ್ಳುವುದು ಜಾಗತಿಕ ಮಟ್ಟದಲ್ಲೂ ಸ್ಪಷ್ಟವಾಗುತ್ತಿರುವುದರಿಂದ, ಹೊಸ ತಂತ್ರಜ್ಞಾನಗಳು ಶ್ರಮಿಕರ ಪಾಲಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಸುಸ್ಥಿರ ಬೆಳವಣಿಗೆಗೆ ಅಗತ್ಯವಾದ ಸರಿಯಾದ ಕೌಶಲ್ಯಗಳು ಮತ್ತು ಸೂಕ್ತ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ವರದಿ ಒತ್ತಿ ಹೇಳುತ್ತದೆಯಾದರೂ, ತಾಂತ್ರಿಕವಾಗಿ ನುರಿತವರು ಸೇರಿದಂತೆ ಹೆಚ್ಚು ವಿದ್ಯಾವಂತರು ಮತ್ತು ಹೆಚ್ಚು ಕೌಶಲ್ಯ ಹೊಂದಿರುವವರಲ್ಲಿ ಹೆಚ್ಚಿನ ನಿರುದ್ಯೋಗ ಇರುವುದನ್ನು ಗಮನಿಸುತ್ತಿದ್ದೇವೆ.  ಪ್ರಸ್ತುತ ಸಂದರ್ಭದಲ್ಲಿ ಯುವ ಸಮೂಹದಲ್ಲಿ ಕೌಶಲದ ಕೊರತೆ ಇರುವುದು ಮತ್ತು ಶಿಕ್ಷಣ ಮಟ್ಟ ಕಳಪೆಯಾಗಿರುವುದು ಆತಂಕಕಾರಿಯಾಗಿದೆ ಎಂದು ಹೇಳಲಾಗುತ್ತದೆ.

ಉತ್ಪಾದನೆ ಮತ್ತು ಬೆಳವಣಿಗೆಯನ್ನು ಹೆಚ್ಚು ಉದ್ಯೋಗ-ಕೇಂದ್ರಿತವಾಗಿಸುವುದು, ಕಾರ್ಮಿಕ-ಕೇಂದ್ರಿತ ಕ್ಷೇತ್ರಗಳನ್ನು ಪ್ರೋತ್ಸಾಹಿಸುವುದು, MSMEಗಳ ಮೇಲೆ ಹೆಚ್ಚಿನ ಗಮನ ಹರಿಸುವುದು, ಉದ್ಯೋಗದ ಗುಣಮಟ್ಟವನ್ನು ಸುಧಾರಿಸುವುದು, ವಲಸಿಗರ ಅಗತ್ಯಗಳನ್ನು ಪರಿಹರಿಸುವುದು, ಕಾರ್ಮಿಕ ಮಾರುಕಟ್ಟೆ ಅಸಮಾನತೆಗಳನ್ನು ನಿವಾರಿಸುವುದು, ಕೌಶಲ್ಯ ತರಬೇತಿ ಮತ್ತು ಕಾರ್ಮಿಕ ಮಾರುಕಟ್ಟೆ ಹಸ್ತಕ್ಷೇಪದ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಮತ್ತು ಕಾರ್ಮಿಕ ಮಾರುಕಟ್ಟೆ ಮಾದರಿಗಳು ಮತ್ತು ಯುವ ಉದ್ಯೋಗದ ಬಗ್ಗೆ ಜ್ಞಾನದ ಕೊರತೆಯನ್ನು ನೀಗಿಸುವುದು ಸೇರಿದಂತೆ ILO ವರದಿಯು ಬಹಳ ವಿಸ್ತಾರವಾದ ಶಿಫಾರಸುಗಳನ್ನು ಮಾಡುತ್ತದೆ.

ಈ ವರದಿಯನ್ನೇ ಅಲ್ಲಗಳೆಯುವ ಸಂಕುಚಿತ ಮನೋಭಾವದಿಂದ ಹೊರಬಂದು, ವರದಿಯಲ್ಲಿ ಢಾಳಾಗಿ ಗೋಚರಿಸುವ ಅಸಮಾನತೆಯ ನೆಲೆಗಳನ್ನು ಪರಾಮರ್ಶಿಸಿ , ತಳಮಟ್ಟದಿಂದಲೇ ಸರಿಪಡಿಸುವತ್ತ ಗಮನಹರಿಸುವುದು ರಾಜಕೀಯ ಪಕ್ಷಗಳ, ಆಡಳಿತಾರೂಢ ಪಕ್ಷಗಳ ಆದ್ಯತೆಯಾಗಬೇಕಿದೆ. ಚುನಾವಣಾ ಪ್ರಚಾರವನ್ನು ಸಂಪೂರ್ಣವಾಗಿ ಆವರಿಸಿರುವ ಸಂವಿಧಾನ ರಕ್ಷಣೆ-ತನಿಖಾ ಸಂಸ್ಥೆಗಳ ಪಕ್ಷಪಾತಿ ಧೋರಣೆ-ಕೇಂದ್ರ ಸರ್ಕಾರದ ಸರ್ವಾಧಿಕಾರಿ ವರ್ತನೆ ಇತ್ಯಾದಿ ವಿಚಾರಗಳನ್ನೂ ದಾಟಿ, ರಾಜಕೀಯ ಪಕ್ಷಗಳು ಭಾರತದ ಶ್ರಮಿಕ ವರ್ಗಗಳ ನಿತ್ಯ ಜೀವನೋಪಾಯ ಮಾರ್ಗಗಳತ್ತ ಹಾಗೂ ಇಡೀ ಆರ್ಥಿಕತೆಯ ಕಾರ್ಪೋರೇಟೀಕರಣದತ್ತ ಗಮನಹರಿಸಬೇಕಿದೆ. ನವ ಉದಾರವಾದ ಸೃಷ್ಟಿಸುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆಯ ಜಗತ್ತಿನಲ್ಲಿ ಕಳೆದುಹೋಗಬಹುದಾದ ಕೋಟ್ಯಂತರ ಶ್ರಮಜೀವಿಗಳ ಬದುಕಿನ ಕಡೆಗೆ ರಾಜಕೀಯ ಹೊರಳು ನೋಟ ಈ ಕ್ಷಣದ ಆದ್ಯತೆಯಾಗಬೇಕಿದೆ.

( ಈ ಲೇಖನದ ದತ್ತಾಂಶ-ಮಾಹಿತಿಗಳಿಗೆ ಆಧಾರ ಬಿ. ಶಿವರಾಮನ್‌ ಅವರ ಲೇಖನ The Federal 29 ಮಾರ್ಚ್‌ 2024 ಹಾಗೂ The Wire ಪತ್ರಿಕೆಯ ವಿಶ್ಲೇಷಣೆ 3 ಏಪ್ರಿಲ್‌ 2024)

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪ್ರಹ್ಲಾದ ಜೋಶಿ ಗೆ ರಾಜಕೀಯ ಗುನ್ನಾ.. ಲಿಂಗಾಯತ ಸ್ವಾಮೀಜಿ ಎದುರಾಳಿ

Next Post

ರಾಜ್ಯದಲ್ಲಿ ಹೊಲಸು ರಾಜಕೀಯ.. ಕುಟುಂಬ ರಾಜಕಾರಣ ಧಿಕ್ಕರಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ : ಹೋರಾಟಗಾರ ವಾಟಾಳ್ ನಾಗರಾಜ್

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ರಾಜ್ಯದಲ್ಲಿ ಹೊಲಸು ರಾಜಕೀಯ.. ಕುಟುಂಬ ರಾಜಕಾರಣ ಧಿಕ್ಕರಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ : ಹೋರಾಟಗಾರ ವಾಟಾಳ್ ನಾಗರಾಜ್

ರಾಜ್ಯದಲ್ಲಿ ಹೊಲಸು ರಾಜಕೀಯ.. ಕುಟುಂಬ ರಾಜಕಾರಣ ಧಿಕ್ಕರಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ : ಹೋರಾಟಗಾರ ವಾಟಾಳ್ ನಾಗರಾಜ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada