ನಾ ದಿವಾಕರ
ಭಾರತದ ಪ್ರಜಾಪ್ರಭುತ್ವ ಹೊಸ ರಂಗು ಪಡೆದುಕೊಳ್ಳುತ್ತಿದೆ. ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿರುವ ದೇಶದ ಪ್ರಜಾಸತ್ತಾತ್ಮಕ ಹೆಜ್ಜೆಗಳು ಹೊಸ ಹಾದಿಗಳನ್ನು ಅರಸಿಕೊಳ್ಳುತ್ತಿವೆ. ಮೇ 28ರಂದು ಉದ್ಘಾಟನೆಯಾದ ಹೊಸ ಸಂಸತ್ ಭವನದ ಕಟ್ಟಡವು ಈ ನವ ಭಾರತವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ಭವನವನ್ನು ದೇಶದ ಪ್ರಜೆಗಳ ಮಹತ್ವಾಕಾಂಕ್ಷೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ಭಾರತದ ಸಾರ್ವಭೌಮ ಪ್ರಜೆಗಳು ಆರಾಧಿಸುವ ಸಂವಿಧಾನ ಮತ್ತು ಅನುಸರಿಸುವ ಸಾಂವಿಧಾನಿಕ ಮಾರ್ಗಗಳು ಜಂಗಮ ಸ್ವರೂಪಿಯಾಗಿ ತನ್ನ ಇರುವಿಕೆಯನ್ನು ಪ್ರದರ್ಶಿಸಬೇಕೋ ಅಥವಾ ಸ್ಥಾವರ ರೂಪಿಯಾಗಿ ಕೆಲವು ಸಂಕೇತಗಳಲ್ಲಿ ಕೊನೆಗೊಳ್ಳಬೇಕೋ ಎಂಬ ಜಿಜ್ಞಾಸೆಯ ನಡುವೆಯೇ ಹೊಸ ಸಂಸತ್ ಭವನ, ದೇಶದ ಪ್ರಥಮ ಪ್ರಜೆಯ ಅನುಪಸ್ಥಿತಿಯಲ್ಲಿ ನಡೆದಿದೆ. ಈ ಸಂದರ್ಭದಲ್ಲೇ ರಾಜಪ್ರಭುತ್ವವನ್ನು ಕೊನೆಗಾಣಿಸಿ ಪ್ರಜಾಪ್ರಭುತ್ವವನ್ನು ಆಲಂಗಿಸಿಕೊಂಡ ಭಾರತದ ಗಣತಂತ್ರವು ರಾಜತ್ವವನ್ನು ಪ್ರತಿಪಾದಿಸುವ ಚಿಹ್ನೆಯೊಂದನ್ನು ಸೆಂಗೋಲ್ (Sengol) ಎಂಬ ರಾಜದಂಡದ ಮೂಲಕ ಅನಮೋದಿಸಿದೆ.
ಸಂಕೇತಗಳ ನಡುವೆ ಪ್ರಜಾಸತ್ತೆ
ಪ್ರಜಾಪ್ರಭುತ್ವವನ್ನು(democratic system) ಪೋಷಿಸಿ, ರಕ್ಷಿಸಿ ಮುನ್ನಡೆಸಬೇಕಾದ ಸಂಸತ್ ಭವನದ ಕೇಂದ್ರ ಆವಾಸ ಸ್ಥಾನವಾದ ಲೋಕಸಭೆಯಲ್ಲಿ (Lok Sabha) ಇನ್ನು ಮುಂದೆ ಸಭಾಧ್ಯಕ್ಷರ ಪಕ್ಕದಲ್ಲೇ ರಾಜಪ್ರಭುತ್ವದ ಲಾಂಛನವೂ ಕಂಗೊಳಿಸಲಿದೆ. ಇತ್ತೀಚಿನ ದಿನಗಳಲ್ಲಿ ಕಿರಿದಾಗುತ್ತಿರುವ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ವ್ಯಾಖ್ಯಾನಗಳ ನಡುವೆ ಪ್ರಜಾತಂತ್ರ ವ್ಯವಸ್ಥೆಯ ಸಂರಕ್ಷಕರು ರಾಜಪ್ರಭುತ್ವದ ಒಂದು ಸಂಕೇತವನ್ನು ತಮ್ಮದಾಗಿಸಿಕೊಂಡಿರುವುದು ಚಾರಿತ್ರಿಕ ವಿಡಂಬನೆ ಎಂದೇ ಹೇಳಬಹುದು. ಖಂಡಿತವಾಗಿಯೂ ನೂತನ ಸಂಸತ್ ಭವನ ನವ ಭಾರತದ ಸಾಂಕೇತಿಕ ಸ್ಥಾವರವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲಿದೆ. ಆದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಕೇವಲ ಸ್ಥಾವರ ಅಥವಾ ಚಿಹ್ನೆ-ಲಾಂಛನಗಳಲ್ಲಿ ಕಾಣುವ ಮೂಲಕ ನವ ಭಾರತದ ಹರಿಕಾರರು ನೆಲಮಟ್ಟದ ವಾಸ್ತವಗಳನ್ನು ಕಡೆಗಣಿಸುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಸಂವಿಧಾನವನ್ನು ಗ್ರಾಂಥಿಕವಾಗಿ ನೋಡುವಂತೆಯೇ ಸಂಸತ್ತು ಎಂಬ ಆಡಳಿತ ಕೇಂದ್ರವನ್ನು ಸ್ಥಾವರದಲ್ಲಿ ಗುರುತಿಸುವ ಮೂಲಕ, ನಾವು ಜಂಗಮ ಸ್ವರೂಪಿ ಆಶಯ ಮತ್ತು ಆಶೋತ್ತರಗಳನ್ನು ಹಿಂದಕ್ಕೆ ತಳ್ಳುತ್ತಿದ್ದೇವೆಯೇ ಎಂದು ಯೋಚಿಸಬೇಕಿದೆ.

ಸಾವಿರಾರು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಜಾಪ್ರಭುತ್ವದ ದಿವ್ಯ ಸಂಕೇತವಾಗಿ ನೂತನ ಸಂಸತ್ ಭವನ ತನ್ನ ಪಾರಂಪರಿಕ ರಾಜಪ್ರಭುತ್ವದ ಪಳೆಯುಳಿಕೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದು ನಿಲ್ಲಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಭಾರತ ಪ್ರಜಾಪ್ರಭುತ್ವದ ತಾಯಿ ಎಂದೂ ಸಹ ಹೆಸರು ಗಳಿಸಿರುವುದು ಭಾರತೀಯರ ಹೆಮ್ಮೆಯೇ ಸರಿ. ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆ ಸಂವಿಧಾನದಂತೆ ಗ್ರಾಂಥಿಕವಾಗಿ ಬಂಧಿಯಾಗಿಲ್ಲ. ಸಾಂವಿಧಾನಿಕ ಆಶಯಗಳನ್ನು ಈಡೇರಿಸಲು ಆ ಗ್ರಾಂಥಿಕ ಆಕರವು ನೆರವಾಗುವಂತೆ ಪ್ರಜಾಪ್ರಭುತ್ವವನ್ನು ಮುನ್ನಡೆಸಲು ಯಾವುದೇ ಗ್ರಾಂಥಿಕ ಆಕರಗಳನ್ನು ಶೋಧಿಸಲಾಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವ ದೇಶದ ಕೋಟ್ಯಂತರ ಜನತೆಯ ನಡುವೆ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ನೂತನ ಸಂಸತ್ ಭವನ ದೇಶದ ಜನಕೋಟಿಯ ಮಹತ್ವಾಕಾಂಕ್ಷೆ ಆಗಿರುವಂತೆಯೇ ಭಾರತದ ಪ್ರಜಾತಂತ್ರ ವ್ಯವಸ್ಥೆಯೂ ಇದೇ ಜನಕೋಟಿಯ ಮನದಾಳದ ಆಶಯವೂ, ಆಕಾಂಕ್ಷೆಯೂ, ನಿರೀಕ್ಷೆಯೂ ಆಗಿರುತ್ತದೆ. ಇದನ್ನು ಪ್ರತಿಮೆ, ಚಿಹ್ನೆ, ಲಾಂಛನ ಮತ್ತು ಸ್ಥಾವರಗಳಲ್ಲಿ ಕಾಣುವುದಕ್ಕಿಂತಲೂ ಹೆಚ್ಚಾಗಿ ದೇಶದ ಕಟ್ಟಕಡೆಯ ಮನುಷ್ಯನ ಜೀವನ, ಜೀವನೋಪಾಯ ಹಾಗೂ ಜೀವನಮಟ್ಟದ ನೆಲೆಗಳಲ್ಲಿ ಕಾಣಬೇಕಾಗುತ್ತದೆ.
ಹೀಗೆ ಕಾಣುತ್ತಲೇ ನಾವು ನಮ್ಮ ನಡುವಿನ ವಿಶಾಲ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬೇರುಗಳನ್ನು ಸದಾ ಗಮನಿಸುತ್ತಲೇ ಇರಬೇಕಾಗುತ್ತದೆ. ಈ ಬೇರುಗಳು ಎಷ್ಟೇ ಟಿಸಿಲೊಡೆದರೂ, ಎಷ್ಟೇ ಕವಲುಗಳನ್ನು ಕಂಡರೂ ಅಂತಿಮವಾಗಿ ಇದರ ಪಯಣವು ಸಂವಿಧಾನದಲ್ಲೇ ಪರಿಸಮಾಪ್ತಿಯಾಗಬೇಕಾಗುತ್ತದೆ. ದುರದೃಷ್ಟವಶಾತ್ ಭಾರತದ ಪ್ರಜಾಸತ್ತೆಯ ಬೇರುಗಳು ಕವಲುಹಾದಿಗಳನ್ನೂ ತೊರೆದು ಅನ್ಯ ಮಾರ್ಗದಲ್ಲಿ ಕ್ರಮಿಸುತ್ತಿವೆ. ಪ್ರಜಾಪ್ರಭುತ್ವದ ಅಂತಃಸತ್ವ ಎನ್ನಬಹುದಾದ ಜನಸಾಮಾನ್ಯರ ಕ್ಷೀಣ ಧ್ವನಿ ವಿಶಾಲ ಸಮಾಜದ ನಾಡಿಮಿಡಿತದಂತೆ ಸದಾ ಆಳುವವರ ಸ್ಪಂದನೆಯನ್ನು ಬಯಸುತ್ತಿರುತ್ತದೆ. ಈ ಧ್ವನಿಯಲ್ಲಿ ಅಡಗಿರಬಹುದಾದ ನೋವು, ವೇದನೆ, ಯಾತನೆ ಮತ್ತು ಹತಾಶೆಗಳನ್ನು ಗುರುತಿಸುವ ಮೂಲಕವೇ ಆಳುವ ಸರ್ಕಾರಗಳು ಜನಸ್ಪಂದನೆಯ ಬಾಗಿಲುಗಳನ್ನು ಸದಾ ತೆರೆದಿರಬೇಕಾಗುತ್ತದೆ. ತಳಮಟ್ಟದ ನಾಡಿಮಿಡಿತವನ್ನು ಗ್ರಹಿಸದೆ ಇರುವ ಮತ್ತು ಸೂಕ್ತ ಸಮಯದಲ್ಲಿ ಸ್ಪಂದಿಸಲು ಹಿಂಜರಿಯುವ ಒಂದು ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದ ಬೇರುಗಳನ್ನು ಶಿಥಿಲಗೊಳಿಸುವ ಶಕ್ತಿಗಳಿಗೆ ಬಾಗಿಲು ತೆರೆದಿರುತ್ತದೆ. ಭಾರತ ಇಂತಹ ಒಂದು ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.

ತಾಯ್ಮಡಿಲ ಮಕ್ಕಳ ಕೂಗು
ಈ ಸಾಕ್ಷಿಯನ್ನು ನಾವು ಅಂತಾರಾಷ್ಟ್ರೀಯ ಖ್ಯಾತಿಯ, ಒಲಂಪಿಕ್ ಪದಕ ವಿಜೇತೆ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಮತ್ತು ಅವರ ಸಹವರ್ತಿಗಳ ಹೋರಾಟದಲ್ಲಿ ಕಾಣುತ್ತಿದ್ದೇವೆ. ನೂತನ ಸಂಸತ್ ಭವನವನ್ನು ಪ್ರಜಾತಂತ್ರದ ಮಡಿಲು ಎನ್ನಬಹುದಾದರೆ, ಈ ಮಡಿಲನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿಜೃಂಭಿಸುತ್ತಿರುವಾಗಲೇ, ತುಸು ದೂರದಲ್ಲೇ ಇದೇ ಮಡಿಲ ಮಕ್ಕಳು ಪೊಲೀಸರ ಪ್ರಹಾರಕ್ಕೆ ನಲುಗಿಹೋಗುತ್ತಿದ್ದುದು ಶತಮಾನದ ವಿಡಂಬನೆ ಎನ್ನಲಡ್ಡಿಯಿಲ್ಲ. ವಾಸ್ತವವಾಗಿ ಭಾರತದ ಗೌರವ ಮತ್ತು ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದ ಈ ಕುಸ್ತಿಪಟುಗಳು ಮಡಿಲ ಮಕ್ಕಳಾಗಿ ಸಂಭ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ಈ ಹೆಣ್ಣು ಮಕ್ಕಳಲ್ಲಿ ಮಡುಗಟ್ಟಿದ ನೋವಿದೆ. ಅಂತರಂಗದ ವೇದನೆ ಇದೆ. ಎದೆಯಾಳದ ಯಾತನೆ ಇದೆ. ಕಳೆದ 35 ದಿನಗಳಿಂದಲೂ ರಾಜಧಾನಿಯ ಜಂತರ್‌ಮಂತರ್‌ನಲ್ಲಿ ತಮ್ಮ ಮೂಕ ವೇದನೆಯನ್ನು ವ್ಯಕ್ತಪಡಿಸುತ್ತಲೇ ಇರುವ ಈ ಮಡಿಲ ಮಕ್ಕಳಿಗೆ ಕಿವಿಗೊಡುವುದು ಆಳುವ ವರ್ಗಗಳ ಪ್ರಥಮ ಆದ್ಯತೆಯಾಗಬೇಕಿತ್ತು. ಭಾರತಮಾತೆಯ ಈ ಕಂದಮ್ಮಗಳ ಯಾತನೆಗೆ ಕಾರಣಗಳಾದರೂ ಏನು ಎಂದು ಆಲಿಸುವ ಸಂಯಮ ಆಡಳಿತಾರೂಢ ಪಕ್ಷದಲ್ಲಿ ಇರಬೇಕಿತ್ತು. ಆ ಎದೆಯಾಳದ ನೋವನ್ನು ಶಮನ ಮಾಡಲು ತಾಯಿ ಸ್ವರೂಪದ ಒಂದು ಅಪ್ಪುಗೆ ಸಾಕಾಗಿತ್ತು. ಪ್ರಜಾಪ್ರಭುತ್ವದ ತಾಯಿ ಎನಿಸಿಕೊಂಡಿರುವ ಭಾರತ ಈ ಅಪ್ಪುಗೆಗೆ ಸ್ವಇಚ್ಚೆಯಿಂದ ಮುಂದಾಗಬೇಕಿತ್ತು.

ಇಷ್ಟಕ್ಕೂ ಜಂತರ್ ಮಂತರ್‌ನಲ್ಲಿ ಕೇಳಿಬರುತ್ತಿರುವ ಅರಣ್ಯ ರೋದನಕ್ಕೆ ಕಾರಣವಾದರೂ ಏನು ? ಇಲ್ಲಿ ಧರಣಿ ಕುಳಿತವರು ತುಕಡೇ ತುಕಡೇ ಗುಂಪಿನವರಲ್ಲ, ನಗರ ನಕ್ಸಲರೂ ಅಲ್ಲ ಅಥವಾ ಯಾವುದೋ ಟೂಲ್‌ಕಿಟ್ ಹಿಡಿದು ವಾತಾವರಣವನ್ನು ಹದಗೆಡಿಸುವ ಗುಂಪಿನವರೂ ಅಲ್ಲ. ಭಾರತ ಮಾತೆಯ ಮುಕುಟದಲ್ಲಿ ಒಂದೆರಡು ಹೊಳೆವ ಹರಳುಗಳನ್ನು ಜೋಡಿಸಿದ ಕ್ರೀಡಾಪಟುಗಳು. ಕಾಮನ್ ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗಳಿಸಿದ ಪ್ರಪ್ರಥಮ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಮತ್ತು ಆಕೆಯ ಸಂಗಡಿಗರು. ಆಕೆಯೊಡನೆ ಒಲಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್ ಮತ್ತು ಬಜರಂಗ್ ಪೂನಿಯಾ ಸಹ ಇದ್ದಾರೆ. ಭಾರತ ಮಾತೆಯ ಈ ಹೆಮ್ಮೆಯ ಮಕ್ಕಳ ಅಳಲಾದರೂ ಏನು ? ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕುಸ್ತಿ ಫೆಡರೇಷನ್‌ಗೆ ಸೇರಿದ ಏಳು ಹೆಣ್ಣು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇವರ ಪೈಕಿ ಅಪ್ರಾಪ್ತ ಬಾಲಕಿಯೂ ಇದ್ದಾಳೆ. ಈ ಆರೋಪ ಇಂದು ನೆನ್ನೆಯದೂ ಅಲ್ಲ. ಈ ವರ್ಷದ ಜನವರಿಯಲ್ಲೇ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ (Brij Bhushan) ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ರೀತಿಯ ಅಪರಾಧದ ದೂರು ದಾಖಲಾದರೂ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಒಂದು ನೈತಿಕ ಪರಂಪರೆ ಭಾರತದ ರಾಜಕಾರಣದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಇತ್ತು. ಆದರೆ ಬದಲಾದ ನವ ಭಾರತದಲ್ಲಿ ಈ ಪರಂಪರೆಯ ಅವಶೇಷಗಳನ್ನೂ ಕಾಣಲು ಸಾಧ್ಯವಾಗುವುದಿಲ್ಲ. ಈ ಹೊಸ ಸಂಸ್ಕೃತಿಯ ಪ್ರಾತ್ಯಕ್ಷಿಕೆಯನ್ನು ದೆಹಲಿಯಲ್ಲಿ ಕಾಣುತ್ತಿದ್ದೇವೆ. ಆರು ಬಾರಿ ಸಂಸದರಾಗಿರುವ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ಉತ್ತರ ಪ್ರದೇಶದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವುದೇ ಅಲ್ಲದೆ, ಪೋಸ್ಕೋ ಕಾಯ್ದೆಯ ದುರುಪಯೋಗವಾಗುತ್ತಿದೆ ಎಂದು ಸಹ ಆರೋಪಿಸಿದ್ದಾರೆ. ಮುಷ್ಕರ ನಿರತ ಸಂತ್ರಸ್ತ ಮಹಿಳೆಯರ ಪೈಕಿ ಅಪ್ರಾಪ್ತ ಯುವತಿಯೂ ಇದ್ದಾರೆ. ಈಕೆಯ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ವ್ಯವಸ್ಥೆ ಸಾಕ್ಷಿ ಕೇಳುತ್ತದೆ. ಪೋಸ್ಕೋ ಕಾಯ್ದೆಯಡಿ ಅಪರಾಧ ದಾಖಲಾದ ಕೂಡಲೇ 24 ಗಂಟೆಗಳೊಳಗಾಗಿ ಆರೋಪಿಯನ್ನು ಬಂಧಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವೂ ಜಾರಿಯಲ್ಲಿದೆ. ಆದರೆ ಸುಪ್ರೀಂಕೋರ್ಟ್ ಆದೇಶದ ನಂತರ ಎಫ್‌ಐಆರ್ ದಾಖಲಾಗಿದ್ದರೂ, ಆರೋಪಿಯನ್ನು ಬಂಧಿಸಲು ಸರ್ಕಾರ ನಿರಾಕರಿಸುತ್ತಿದೆ. ವಿಡಂಬನೆ ಎಂದರೆ ನೂತನ ಸಂಸತ್ ಭವನದ ಉದ್ಘಾಟನೆಯ ಸಂಭ್ರಮದಲ್ಲಿ ಈ ಆರೋಪಿ ಭಾಗಿಯಾಗಿರುವಾಗಲೇ ಕಟ್ಟಡದ ಹೊರಗೆ ಸಂತ್ರಸ್ತೆಯರು ಪೊಲೀಸರ ಲಾಠಿ ಪ್ರಹಾರಕ್ಕೆ ತುತ್ತಾಗಿ, ಬಂಧನಕ್ಕೊಳಗಾಗಿದ್ದಾರೆ. ಈಗ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸ್ತ್ರೀ ಸಂವೇದನೆಯ ಕೊರತೆ

ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನೇ ಅಪರಾಧಿಗಳಂತೆ ನೋಡುವ ಒಂದು ವಿಶಿಷ್ಟ/ವಿಕೃತ ಪರಂಪರೆಗೂ ನವ ಭಾರತ ಸಾಕ್ಷಿಯಾಗುತ್ತಿದೆ. ಈ ರೀತಿಯ ತಾರತಮ್ಯಕ್ಕೊಳಗಾಗುವ ಮಹಿಳೆಯರು ಎರಡು ದಿಕ್ಕುಗಳಿಂದ ದಾಳಿ ಎದುರಿಸಬೇಕಾಗುತ್ತದೆ. ಮೊಟ್ಟಮೊದಲು ಅವರು ಒಬ್ಬ ಪುರುಷನಿಂದ ಅಥವಾ ಗುಂಪಿನಿಂದ ಅಥವಾ ಪಿತೃಪ್ರಧಾನ ವ್ಯವಸ್ಥೆಯ ವಾರಸುದಾರ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾಗಿರುತ್ತಾರೆ. ಒಬ್ಬನಿಂದಲೋ ಹಲವರಿಂದಲೋ ಅತ್ಯಾಚಾರಕ್ಕೊಳಗಾಗಿರುತ್ತಾರೆ. ಈ ದುರಾಕ್ರಮಣ ಮಹಿಳೆಯಲ್ಲಿ ಸೃಷ್ಟಿಸುವ ಆಂತರಿಕ ತುಮುಲ, ವೇದನೆ, ಯಾತನೆ ಮತ್ತು ಹತಾಶೆಯನ್ನು ಶಮನ ಮಾಡುವ ಜವಾಬ್ದಾರಿ ಒಂದು ಪ್ರಜ್ಞಾವಂತ ಸಮಾಜದ ಮೇಲೆ, ಈ ಸಮಾಜವನ್ನು ಪ್ರತಿನಿಧಿಸುವ ಆಡಳಿತ ವ್ಯವಸ್ಥೆಯ ಮೇಲೆ ಇರುತ್ತದೆ. ನ್ಯಾಯ ವ್ಯವಸ್ಥೆಯಿಂದಾಚೆಗೂ ಮಹಿಳೆಯರು ಎದುರಿಸುವ ಈ ಸಿಕ್ಕುಗಳನ್ನು ಬಗೆಹರಿಸುವ ಸಂಯಮ ಮತ್ತು ವ್ಯವಧಾನ ಒಂದು ಸಮಾಜಕ್ಕೆ ಇದ್ದರೆ ಅದನ್ನು ಪ್ರಬುದ್ಧ ಅಥವಾ ಪ್ರಜ್ಞಾವಂತ ಸಮಾಜ ಎನ್ನಬಹುದು. ದುರಂತ ಎಂದರೆ ಭಾರತ ಇನ್ನೂ ಈ ಮಟ್ಟಕ್ಕೆ ತಲುಪಿಲ್ಲ.
ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತೊಂದು ದಿಕ್ಕಿನಿಂದಲೂ ದಾಳಿ ಎದುರಿಸುತ್ತಾಳೆ. ಸಾಂಪ್ರದಾಯಿಕ ಸಮಾಜ ಆಕೆ ಧರಿಸುವ ಉಡುಪು, ಉಡುಪಿನ ವಿನ್ಯಾಸ, ಆಧುನಿಕತೆ, ಹಾವಭಾವಗಳು ಮತ್ತು ಚಟುವಟಿಕೆಗಳ ಮೂಲಕವೇ ಆಕೆಯ ಮೇಲೆ ನಡೆಯುವ ದೌರ್ಜನ್ಯಗಳನ್ನು ಪರಾಮರ್ಶೆ ಮಾಡುತ್ತದೆ. ಮಥುರಾದಿಂದ ಇತ್ತೀಚಿನ ಹಾಥ್ರಸ್‌ವರೆಗೆ ಭಾರತದ ಮಹಿಳಾ ಸಂಕುಲದ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ಈ ಸಂಕುಚಿತ ದೃಷ್ಟಿಕೋನದ ಛಾಯೆಯನ್ನು ಗುರುತಿಸಬಹುದು. “ ಹೆಣ್ಣು ಹೆಣ್ಣಿನ ಹಾಗಿದ್ದರೆ ಚೆನ್ನ ” ಎನ್ನುವ ಒಂದು ಪಾರಂಪರಿಕ ಗ್ರಹಿಕೆಗೆ ಭಾರತೀಯ ಸಮಾಜ ಇಂದಿಗೂ ಜೋತುಬಿದ್ದಿದೆ. ಆದರೆ ಮತ್ತೊಂದೆಡೆ ಮೂರು ವರ್ಷದ ಹಸುಳೆಯಿಂದ ಎಂಬತ್ತರ ವೃದ್ಧೆಯವರೆಗೂ ಮಹಿಳೆಯರು ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುತ್ತಿರುವ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಹೀಗೆ ದೌರ್ಜನ್ಯಕ್ಕೊಳಗಾಗುವ ಮಹಿಳೆಯರ ಕೂಗು ಭಾರತೀಯ ಸಮಾಜದಲ್ಲಿ ಎಂದಿಗೂ ಸಹ ಸಾರ್ವತ್ರಿಕತೆಯನ್ನು ಪಡೆದುಕೊಂಡಿಲ್ಲ. ಏಕೆಂದರೆ ಪಿತೃಪ್ರಧಾನತೆ ಉನ್ನತ ಮಟ್ಟದ ನಾಗರಿಕ ಸಮಾಜವನ್ನೂ ಇಂದಿಗೂ ಆವರಿಸಿದೆ. ಈ ವಿಶಾಲ ಸಮಾಜದ ನಿಷ್ಕ್ರಿಯ ಮೌನ ಪುರುಷ ಸಮಾಜದ ಸ್ತ್ರೀದ್ವೇಷದ ದಾಳಿಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟದ ಬಗ್ಗೆಯೂ ಇದೇ ರೀತಿಯ ನಿರ್ಲಿಪ್ತತೆ ಕಂಡುಬರುತ್ತಿದೆ.
ಮಹಿಳಾ ದೌರ್ಜನ್ಯಗಳ ಪ್ರಕರಣಗಳಲ್ಲಿ ಎಂತಹುದೇ ಹೀನ ಕೃತ್ಯವನ್ನು ಎಸಗಿದ್ದರೂ ಆರೋಪಿಗಳು ಸಾಮಾಜಿಕ ಪ್ರಾಬಲ್ಯ, ಜಾತಿ, ರಾಜಕೀಯ ಪ್ರಭಾವ, ಸಾಮಾಜಿಕ ಸ್ಥಾನಮಾನದ ಕಾರಣದಿಂದ ಸಮಾಜದಿಂದಲೇ ರಕ್ಷಣೆ ಪಡೆಯುತ್ತಾರೆ. ಸಾಕ್ಷ್ಯಾಧಾರಗಳನ್ನೇ ಅವಲಂಬಿಸುವ ನ್ಯಾಯ ವ್ಯವಸ್ಥೆಯೂ ಹಲವಾರು ಸಂದರ್ಭಗಳಲ್ಲಿ ಅಸಹಾಯಕವಾಗುತ್ತದೆ. ಭಾವ್ರಿ ದೇವಿಯಿಂದ ಬಿಲ್ಕಿಸ್ ಬಾನೋವರೆಗೆ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ಕಾರಣದಿಂದಲೇ ಅತ್ಯಂತ ಕಠಿಣ ಕಾನೂನುಗಳೂ ಸಹ ಮಹಿಳೆಯರಿಗೆ ನ್ಯಾಯ ಒದಗಿಸುವುದರಲ್ಲಿ ವಿಫಲವಾಗುತ್ತಿವೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ೨೦೧೨ ಇಂತಹ ಕಾಯ್ದೆಗಳಲ್ಲೊಂದಾಗಿದೆ. ದೆಹಲಿಯಲ್ಲಿ ಮುಷ್ಕರ ಹೂಡಿರುವ ಮಹಿಳಾ ಕುಸ್ತಿಪಟುಗಳ ಪೈಕಿ ಓರ್ವ ಅಪ್ರಾಪ್ತೆಯೂ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಲೈಂಗಿಕ ದೌರ್ಜನ್ಯಕೀಡಾಗಿರುವುದರಿಂದ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಮುಷ್ಕರನಿರತ ಕ್ರೀಡಾಪಟುಗಳು ಆರೋಪಿಯ ಬಂಧನಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಆರೋಪಿಯನ್ನು ಬಂಧಿಸುವುದಿರಲಿ, ಎಫ್‌ಐಆರ್ ದಾಖಲಾದ ನಂತರ ಕೇಂದ್ರ ಸರ್ಕಾರ ಈತನನ್ನು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲೂ ಹಿಂಜರಿಯುತ್ತಿದೆ. ಆದರೆ ಪೋಕ್ಸೋ ಕಾಯ್ದೆಯಲ್ಲಿ ಯಾವುದೇ ಆರೋಪಿ ವ್ಯಕ್ತಿಗೂ ಬಂಧನದಿಂದ ವಿನಾಯಿತಿ ನೀಡಿಲ್ಲ ಎನ್ನುವುದನ್ನು ಸರ್ಕಾರ ಗಮನಿಸಬೇಕಿದೆ.

ನೂತನ ಸಂಸತ್ ಭವನದ ಉದ್ಘಾಟನೆಯ ನಡುವೆಯೇ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಇದೇ ಸಂದರ್ಭದಲ್ಲೇ ರಾಜಧಾನಿಯಲ್ಲಿ ಅಪ್ರಾಪ್ತ ಯುವತಿಯೊಬ್ಬಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಸಾರ್ವಜನಿಕರ ನಡುವೆಯೇ ತನ್ನ ಪ್ರಿಯತಮೆಯನ್ನು ಸಾಹಿಲ್ ಎಂಬ ಯುವಕ 20 ಬಾರಿ ಚೂರಿಯಿಂದ ಇರಿಯುವುದೇ ಅಲ್ಲದೆ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ. ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಇದನ್ನು ನೋಡಿಯೂ ನೋಡದವರಂತೆ ನಿರ್ಲಿಪ್ತರಾಗಿ ಮುಂದಕ್ಕೆ ಹೋಗಿರುವುದಾಗಿ ವರದಿಯಾಗಿದೆ. ಹತ್ಯೆ, ಅತ್ಯಾಚಾರ ಮತ್ತು ದೌರ್ಜನ್ಯಗಳಿಗಿಂತಲೂ ಸಾಮಾಜಿಕವಾಗಿ ಹೆಚ್ಚು ಆಘಾತಕಾರಿಯಾಗಿ ಕಾಣುವುದು ನಮ್ಮ ಸಮಾಜದ ಈ ನಿರ್ಲಿಪ್ತತೆ/ನಿಷ್ಕ್ರಿಯತೆ. ಇದೇ ನಿಷ್ಕ್ರಿಯತೆಯೇ ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆಯೂ ಕಾಣುತ್ತಿದೆ. ಮಹಿಳೆಯರಿಗೆ ರಕ್ಷಣೆ ನೀಡುವುದರಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗುತ್ತಿದೆ ಎಂಬ ಕೂಗು ಪ್ರತಿಯೊಂದು ಪ್ರಕರಣದ ಹಿಂದೆಯೂ ಕೇಳಿಬರುತ್ತದೆ. ಕಠಿಣ ಕಾನೂನುಗಳೂ ಸಹ ದಾಳಿಗೊಳಗಾದ ಮಹಿಳೆಯರ ರಕ್ಷಣೆಗೆ ಧಾವಿಸದಿರುವುದು ಇನ್ನೂ ಆಘಾತಕಾರಿ ಅಂಶವಾಗಿದೆ

ಇದಕ್ಕಿಂತಲೂ ಬಾಧಿಸುವ ವಿದ್ಯಮಾನ ಎಂದರೆ ನಮ್ಮ ವಿಶಾಲ ಸಮಾಜದಲ್ಲಿರುವ ಸುಶಿಕ್ಷಿತ ನಾಗರಿಕರ ನಿರ್ಲಿಪ್ತ ಮೌನ. ಒಬ್ಬ ಮಹಿಳೆ, ಅಪ್ರಾಪ್ತ ಯುವತಿ ತನ್ನ ಮೇಲೆ ಅತ್ಯಾಚಾರ/ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕೂಗಿಕೊಂಡರೆ ಈ ಸಮಾಜ ಸಾಕ್ಷ್ಯಾಧಾರಗಳನ್ನು ಅಪೇಕ್ಷಿಸುತ್ತದೆ. ಇಂತಹ ಹೀನ/ಅಮಾನುಷ ಕೃತ್ಯಗಳನ್ನು ಸಂತ್ರಸ್ತೆಯ ನೆಲೆಯಲ್ಲಿ ನಿಂತು ನೋಡುವುದರ ಬದಲು, ಆರೋಪಿಯ ಬಗಲಲ್ಲಿ ಕುಳಿತು ಜಾತಿ, ಧರ್ಮ, ಸಾಮಾಜಿಕ ಅಂತಸ್ತು-ಸ್ಥಾನಮಾನ ಮತ್ತು ರಾಜಕೀಯ ಪ್ರಭಾವಳಿಗಳ ಮಸೂರ ತೊಟ್ಟು ನೋಡುತ್ತದೆ. ಹೀಗೆ ದಾಳಿಗೊಳಗಾದ ಮಹಿಳೆಯರ ಪರ ನಿಲ್ಲುವ ನಾಗರಿಕ ಸಮಾಜದ ಕೆಲವೇ ಮನಸ್ಸುಗಳನ್ನೂ ಸಹ ಸಂದೇಹಿಸುವಷ್ಟು ಮಟ್ಟಿಗೆ ಭಾರತೀಯ ಸಮಾಜ ತನ್ನ ಮಾನವೀಯತೆಯ ಹೊದಿಕೆಯನ್ನು ಕಳಚಿಕೊಂಡು ಬೆತ್ತಲಾದಂತೆ ತೋರುತ್ತದೆ. ಮಹಿಳಾ ಕುಸ್ತಿಪಟುಗಳಿಗೆ ಸಾಂತ್ವನ ಹೇಳುವುದಕ್ಕೂ ಹಿಂಜರಿಯುತ್ತಿರುವ ಭಾರತದ ಸಮಸ್ತ ಕ್ರೀಡಾಲೋಕ ( ಮಹಿಳಾ ಕ್ರೀಡಾಪಟುಗಳನ್ನೂ ಸೇರಿದಂತೆ) ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಮಹಿಳೆಯರಿಗೆ ಸಂಬಂಧಿಸಿದಂತೆ ಮಾತ್ರ ಈ ಧೋರಣೆ ವ್ಯಕ್ತವಾಗುವುದು ಭಾರತೀಯ ಸಮಾಜದಲ್ಲಿ ಪಿತೃಪ್ರಧಾನತೆ ಇನ್ನೂ ಸಹ ಗಟ್ಟಿಯಾಗಿ ಬೇರೂರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಕಾಣುತ್ತದೆ.
ಕೊನೆಯದಾಗಿ ಆಸ್ಕರ್ ವೈಲ್ಡ್ ಅವರ “ We are all in the gutter, but some of us are looking at the stars “ ಎಂಬ ಮಾತುಗಳು ನೆನಪಾಗುತ್ತವೆ. ಕನ್ನಡದಲ್ಲಿ ಹೇಳುವುದಾದರೆ “ ನಾವೆಲ್ಲರೂ ಪ್ರಪಾತಕ್ಕೆ ಬಿದ್ದಿದ್ದೇವೆ ನಕ್ಷತ್ರ ಎಣಿಸುವ ಸಮಯ ಇದಲ್ಲ ”