SIR ತೀರ್ಪಿನ ವಿಶ್ಲೇಷಣೆಗಳು ಸಾಮೂಹಿಕ ಹಕ್ಕು ನಿರಾಕರಣೆ ಮತ್ತು ಅನಿಶ್ಚಿತತೆಯ ಮೇಲೆ – ಕೇಂದ್ರೀಕರಿಸಿವೆ. ಈ ಕಾನೂನು ಪ್ರಕ್ರಿಯೆಗಳು ಇಂದಿನ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ತೀರ್ಪಿನ ವಿಧಾನದ ಹಲವು ಅಂಶಗಳನ್ನು ಸಹ ಕ್ರೋಢೀಕರಿಸುತ್ತವೆ ನ್ಯಾಯಾಲಯವು ರಾಜ್ಯ ಕ್ರಮಕ್ಕೆ ತಡೆಯಾಜ್ಞೆ ನೀಡದ ಸಂದರ್ಭಗಳಲ್ಲಿ ಕಾರ್ಯಾಂಗದ ಪರವಾಗಿ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಸುಪ್ರೀಂ ಕೋರ್ಟ್ನ ಮುಂದೆ ಅತ್ಯಂತ ಮಹತ್ವದ ಸಾಂವಿಧಾನಿಕ ಸವಾಲುಗಳನ್ನು ನ್ಯಾಯಾಂಗ ತಪ್ಪಿಸಿಕೊಳ್ಳುವ ರೀತಿಯಲ್ಲೇ ಪರಿಗಣಿಸಿದೆ. ಅತ್ಯಂತ ಪ್ರಸಿದ್ಧ ಉದಾಹರಣೆಯೆಂದರೆ ಆಧಾರ್ ಸವಾಲು. 1980 ರ ದಶಕದಲ್ಲಿ ಸಾರ್ವಜನಿಕ ಹಿತಾಸಕ್ತಿ ರಾಜ್ಯದ ನಿಷ್ಕ್ರಿಯತೆಯ ವಿರುದ್ಧ ನ್ಯಾಯಾಂಗ ಹಸ್ತಕ್ಷೇಪವನ್ನು ಕೋರಲು ಒಂದು ಆಧಾರ ಮತ್ತು ಪ್ರಚೋದಕವಾಗಿತ್ತು. ಆಡಳಿತದಲ್ಲಿನ ನಿರ್ವಾತವನ್ನು ಸರಿದೂಗಿಸಲು ಈ ಕ್ರಮಗಳನ್ನು ನ್ಯಾಯಾಲಯ ಮತ್ತು ಸಂವಿಧಾನ ತಜ್ಞರು “ಅಗತ್ಯ” ಎಂದು ಸಮರ್ಥಿಸಿಕೊಳ್ಳುತ್ತಾರೆ.

ಇನ್ನೂ ಮುಖ್ಯವಾಗಿ, ಲಾಲ್ ಬಾಬು ಹುಸೇನ್ & ಇತರರು vs ಚುನಾವಣಾ ನೋಂದಣಿ ಅಧಿಕಾರಿ & ಇತರರು ಎಂಬ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಈ ಹಿಂದೆ ಒಂದು ಸಂಪೂರ್ಣ ಪ್ರದೇಶದ ಪೌರತ್ವ ಸ್ಥಾನಮಾನ ಅಥವಾ ಮತದಾರರ ಸ್ಥಾನಮಾನವು ಅನುಮಾನಾಸ್ಪದವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು ಈ ನ್ಯಾಯಾಂಗದ ಅಭಿಪ್ರಾಯವನ್ನೇ SIR ನಿಖರವಾಗಿ ಪ್ರತಿನಿಧಿಸುತ್ತದೆ. ಸಂಭವನೀಯ ಕಾರಣವಿಲ್ಲದೆ – ಮತ್ತು ಅದು ತೃಪ್ತಿಕರವಾಗಿ ವಿವರಿಸಬಹುದಾದ ಯಾವುದೇ ಕಾರಣವಿಲ್ಲದೆ – ಚುನಾವಣಾ ಆಯೋಗವು ಇಡೀ ರಾಜ್ಯಗಳನ್ನು SIR ಗೆ ಒಳಗಾಗುವಂತೆ ಒತ್ತಾಯಿಸಿದೆ. ಈಗ ರಾಜ್ಯಗಳ ಪ್ರತಿಯೊಬ್ಬ ವ್ಯಕ್ತಿಯು ಪೂರ್ವನಿಯೋಜಿತವಾಗಿ, ಅವರು ಸೇರಿದ್ದಾರೆ ಎಂದು ಹೊಸದಾಗಿ ಸಾಬೀತುಪಡಿಸಲು ಸಾಧ್ಯವಾಗದ ಹೊರತು ಮತದಾರರ ಪಟ್ಟಿಯಿಂದ ಹೊರಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ನಾವು SIR ಬಗ್ಗೆ ಯೋಚಿಸಿದಾಗ, ನಾವು ಅದನ್ನು ಪ್ರತ್ಯೇಕವಾಗಿ ಯೋಚಿಸಲು ಸಾಧ್ಯವಿಲ್ಲ. ರಚನಾತ್ಮಕವಾಗಿ ಕಾರ್ಯಾಂಗ ನಿಯಂತ್ರಣದಲ್ಲಿರುವ ಒಂದು ಸಂಸ್ಥೆಯಿಂದ ಹೊರಹೊಮ್ಮುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು ಈ ಸಾಂವಿಧಾನಿಕ ನಿಯಮಗಳನ್ನು ಮೀರಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಬೇಕಿತ್ತು. ಆದರೆ ಬಹುತೇಕ ಹೋರಾಟಗಳು ಎಸ್ಐಆರ್ ವಿರೋಧಿ ಎಂದೇ ಮುಂದುವರೆದಿದ್ದು ಬಹುಶಃ ವ್ಯರ್ಥಾಲಾಪವಾಯಿತು ಎನ್ನಬಹುದು. ಪ್ರಕ್ರಿಯೆಯನ್ನು Democratise ಮಾಡಲು ಇದೇ ಹೋರಾಟ ಮತ್ತು ಸಂಘಟನಾತ್ಮಕ ಶಕ್ತಿಯನ್ನು ಬಳಸಬಹುದಿತ್ತು. ಇದು ಚರ್ಚೆಗೀಡಾಗಬೇಕಾದ ವಿಚಾರ.
ಮಣಿಪುರ – ವಿಶಿಷ್ಟ ಸನ್ನಿವೇಶ
(ಗೌತಮ್ ಮುಖೋಪಾಧ್ಯಾಯ ದ ಹಿಂದೂ)
ಬಹುಸಂಖ್ಯಾತ ಮೈತಿ ಸಮುದಾಯ ಜನಸಂಖ್ಯೆ ಶೇಕಡಾ 54 ಇಂಫಾಲ್ದ ದಟ್ಟ ಕಣಿವೆಯಲ್ಲಿ ನೆಲೆಸಿದೆ, ಕುಕಿ-ಝೋ ಸಮುದಾಯ ಶೇಕಡಾ 15 ಬೆಟ್ಟಗುಡ್ಡಗಳ ಪ್ರದೇಶದ ಸುತ್ತ ನೆಲೆಸಿದ್ದಾರೆ ಮತ್ತು ಇತ್ತೀಚೆಗೆ ಹೆಚ್ಚಾಗುತ್ತಿರುವ ನಾಗಾ ಸಮುದಾಯ ಶೇಕಡಾ 26 ಪ್ರಧಾನವಾಗಿ ಮಣಿಪುರದ ಉತ್ತರ ಭಾಗದಲ್ಲಿ ನೆಲೆಸಿದ್ದಾರೆ. ಈ ಮೂರೂ ಸಮುದಾಯಗಳು ಪ್ರಧಾನವಾಗಿ ಮಣಿಪುರದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಈ ಜನಾಂಗಗಳ ನಡುವಿನ ಸಂಘರ್ಷದಲ್ಲಿ ಸಂಭವಿಸಿರುವ ದಾಳಿಗಳಲ್ಲಿ ಮತ್ತು ವ್ಯವಸ್ಥಿತ ಹತ್ಯಾಕಾಂಡಗಳಲ್ಲಿ, ಪ್ರತೀಕಾರದ ದಾಳಿಗಳಲ್ಲಿ ಈವರೆಗೂ 260 ಜನರು ಮೃತಪಟ್ಟಿದ್ದು 60 ಸಾವಿರ ಜನರು ಮಣಿಪುರದ ಒಳಗೆ ಮತ್ತು ಹೊರಗೆ ಸ್ಥಳಾಂತರಗೊಂಡಿದ್ದಾರೆ.

ಎರಡನೆಯದಾಗಿ, ದೇಶದ ಉಳಿದ ಭಾಗಗಳಿಗಿಂತಲೂ ಭಿನ್ನವಾಗಿ ಮಣಿಪುರದಲ್ಲಿ ಎಸ್ಐಆರ್ ಜಾರಿಯಾಗುತ್ತಿದೆ. ಇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮುಖಾಂತರ ಹಾಗೂ ಆಡಳಿತಾರೂಢ ಪಕ್ಷದ ಬೆಂಬಲದೊಂದಿಗೆ ಎಸ್ಐಆರ್ ಜಾರಿಗೊಳಿಸುತ್ತಿದೆ. ಮಣಿಪುರದಲ್ಲಿ ಕೇಳಿಬರುತ್ತಿರುವ, ರಾಜ್ಯವನ್ನು ಅಕ್ರಮ ವಲಸಿಗರಿಂದ (ಬಹುಪಾಲು ಕುಕಿಗಳು) ಮುಕ್ತಗೊಳಿಸುವ ಅಥವಾ ಸ್ವಚ್ಛಗೊಳಿಸುವ ಬೇಡಿಕೆಯು ರಾಜಕೀಯವಾಗಿ ತೀವ್ರಗಾಮಿಗಳಾಗಿ ಗುರುತಿಸಿಕೊಂಡಿರುವ ಮೈತಿಗಳು ಮತ್ತು ಮಣಿಪುರ ನಾಗಾ ಸಮುದಾಯಗಳ ಆಗ್ರಹಕ್ಕೆ ಪೂರಕವಾಗಿದೆ. ಈ ಎರಡೂ ಸಮುದಾಯಗಳ ಜನಸಂಖ್ಯೆ ಶೇಕಡಾ 80ರಷ್ಟಿದೆ. ಆದರೆ ಈ ಆರೋಪಗಳಿಗೆ ಒಂದು ಶತಮಾನದ ಜನಗಣತಿಯ ದಾಖಲೆಗಳಲ್ಲೂ ಪುರಾವೆ ದೊರೆಯುವುದಿಲ್ಲ.
ಮೂರನೆಯದಾಗಿ, ಕುಕಿಗಳಿಗೇ ವಿಶಿಷ್ಟವಾದಂತಹ ಕೆಲವು ಲಕ್ಷಣಗಳಿದ್ದು ಇದು ಸಮುದಾಯವನ್ನು ಎಸ್ಐಆರ್ ಪ್ರಕ್ರಿಯೆಯ ಬಲಿಪಶುಗಳನ್ನಾಗಿ ಮಾಡುತ್ತದೆ. 50 ಸಾವಿರಕ್ಕೂ ಹೆಚ್ಚು ಕುಕಿಗಳು ಸ್ಥಳಾಂತರಗೊಂಡಿದ್ದು ಮಣಿಪುರ ಮತ್ತು ಹೊರ ರಾಜ್ಯಗಳಲ್ಲಿ ಚದುರಿಹೋಗಿದ್ದಾರೆ. ಅವರ ನ್ಯಾಯಯುತ ಎಣಿಕೆಗೆ (fair enumeration) ಯಾವುದೇ ರೀತಿಯ ಅವಕಾಶಗಳು ಇದ್ದಂತಿಲ್ಲ. ಎರಡನೆಯ ಕಾರಣ ಎಂದರೆ ಅವರ ಸ್ಥಳಾಂತರದೊಂದಿಗೇ ಅನೇಕರು ತಮ್ಮ ಗುರುತನ್ನು, ವಸತಿಯನ್ನು, ಚುನಾವಣಾ ದಾಖಲೆಯನ್ನು, ಶೈಕ್ಷಣಿಕ ದಾಖಲೆಯನ್ನು ಮತ್ತಿತರ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಈ ದಾಖಲೆಗಳು ಮತದಾರರಾಗಿ ಅವರ ಅರ್ಹತೆಯನ್ನು ರುಜವಾತು ಮಾಡಲು ನೆರವಾಗುತ್ತಿದ್ದವು. 2023ರ ಮೇ ತಿಂಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ನಂತರ ಇಂಫಾಲ್ನಲ್ಲಿ ಕುಕಿ-ಝೋ ಸಮುದಾಯದ ಜನರ ಶೈಕ್ಷಣಿಕ ಪ್ರಮಾಣಪತ್ರಗಳನ್ನು, ಆಧಾರ್ ಕಾರ್ಡ್ಗಳನ್ನು, ಚಾಲಕ ಪರವಾನಗಿಗಳನ್ನು ಸುಟ್ಟುಹಾಕಿರುವ ದೃಶ್ಯಗಳು ಸಾಕಷ್ಟು ದಾಖಲಾಗಿವೆ.
ಮೂರನೆಯ ಕಾರಣ ಎಂದರೆ, ಸಾಂಪ್ರದಾಯಿಕ ಹೆಸರುಗಳನ್ನಿಡುವ ಪದ್ಧತಿಗಳು ಸಾಕಷ್ಟು ತಾರ್ಕಿಕ ವ್ಯತ್ಯಾಸಗಳಿಗೆ (Logical Discripancies) ಕಾರಣವಾಗುತ್ತವೆ ಮಣಿಪುರದಲ್ಲಿ ಹೆಸರುಗಳನ್ನು ಬಹಳ ಸಂಕೀರ್ಣವಾದ ಪೋಷಕರ ಹೆಸರಿನ ಕೊನೆಯ ಅಕ್ಷರದಿಂದ ಆರಂಭಿಸಲಾಗುತ್ತದೆ, ಸಾಮಾನ್ಯವಾಗಿ ಅಡ್ಡ ಹೆಸರುಗಳು ಮೂಲ ಹೆಸರುಗಳ ಸ್ಥಾನದಲ್ಲಿ ಬಳಕೆಯಾಗುತ್ತವೆ, ಬುಡಕಟ್ಟು ಹೆಸರುಗಳನ್ನು ಆಂಗ್ಲಭಾಷೆಯ ಅಕ್ಷರ ಸಂಯೋಜನೆಯ (Orthography) ಅನುಸಾರ ಪರಿವರ್ತನೆ ಮಾಡಲಾಗುತ್ತದೆ. ಈ ವ್ಯತ್ಯಯಗಳೇ ಪಶ್ಚಿಮ ಬಂಗಾಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತಾರ್ಕಿಕ ವ್ಯತ್ಯಾಸಗಳಿಗೆ (Logical Discripancies) ಅವಕಾಶ ಕಲ್ಪಿಸಿ ಮತದಾರ ಪಟ್ಟಿಯಿಂದ ಹೊರಗುಳಿಯುವಂತೆ ಮಾಡುತ್ತವೆ. ಶೇಕಡಾ 90ರಷ್ಟು ಕುಕಿ-ಝೋ ಸಮುದಾಯದ ಜನರು ತಮ್ಮದೇ ಹೆಸರುಗಳನ್ನು ಒಂದೇ ಶೈಲಿಯ ಕಾಗುಣಿತವನ್ನು ಬಳಸಿ ಉಚ್ಛರಿಸಲು ಸಾಧ್ಯವಾಗದಿರಬಹುದು. ಇದು ಪೀಳಿಗೆಗಳ ಅಂತರದಲ್ಲಿ ಅಸಾಧ್ಯವೆಂದೇ ತೊರುತ್ತದೆ.

ಅಂತಿಮವಾಗಿ, ಕುಕಿ-ಝೋ ನಾಯಕತ್ವವು, ಯಾವುದೋ ಕಾರಣಗಳಿಂದ, ಎಸ್ಐಆರ್ ಪ್ರಕ್ರಿಯೆಯ ಲಕ್ಷಣ, ಉದ್ದೇಶ, ಪ್ರೇರಣೆ ಮತ್ತು ಪರಿಣಾಮಗಳನ್ನು ಗ್ರಹಿಸಲು ವಿಫಲವಾಗಿದೆ. ತಮ್ಮ ಜೀವಮಾನವಿಡೀ ಇಲ್ಲಿಯೇ ಭಾರತೀಯ ಪ್ರಜೆಗಳಾಗಿ ಬದುಕಿ ಬಾಳಿರುವುದರಿಂದ , ಚುನಾವಣಾ ಗುರುತಿನ ಚೀಟಿ (Voter ID) ಹೊಂದಿರುವುದರಿಂದ ತಾವೇನೂ ಭೀತಿಗೊಳಗಾಗಬೇಕಿಲ್ಲ, ಎಸ್ಐಆರ್ ವಿರೋಧಿಸುವುದರಿಂದ ತಾವು ತಪ್ಪೊಪ್ಪಿಕೊಂಡಂತಾಗುತ್ತದೆ ಎಂದು ಮುಗ್ಧತೆಯಿಂದ ಭಾವಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಆರಂಭಿಕ ಎಣಿಕೆಯ ಹಂತದಲ್ಲೇ (Enumeration stage ) ಲಭ್ಯವಾಗಿರುವ ಮಾಹಿತಿಗಳ ಅನುಸಾರ ಪರಿಶಿಷ್ಟ ಪಂಗಡಗಳ (ಎಸ್ಟಿ) ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರ ಹೆಸರುಗಳು ಅಳಿಸಿಹೋಗಿವೆ.

ಜುಲೈ 5 ರಂದು ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ 19 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ಒದಗಿಸಲಾಗಿದ್ದು , ಈ ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕುಕಿ-ಝೋ ಮತ್ತು ನಾಗಾ ಸಮುದಾಯಗಳೇ ನೆಲೆಸಿವೆ. ಅಳಿಸಿಹೋಗಿರುವ ಒಟ್ಟು 1.59 ಲಕ್ಷ ಹೆಸರುಗಳ ಪೈಕಿ 20.93 ಲಕ್ಷ ಮತದಾರರು ಅಂದರೆ ಶೇಕಡಾ 64.9ರಷ್ಟು ಕುಕಿ-ಝೋ ಮತ್ತು ನಾಗಾ ಬುಡಕಟ್ಟು ಜನರೇ ಇದ್ದಾರೆ. ಈ ಕ್ಷೇತ್ರಗಳಲ್ಲಿ ಇವರ ಜನಸಂಖ್ಯೆಯ ಪ್ರಮಾಣ ಶೇಕಡಾ 37.8ರಷ್ಟಿದೆ. ಅಂದರೆ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕಿಂತಲೂ ಹೆಚ್ಚಿನ ಅನುಪಾತದಲ್ಲಿ ಮತದಾರರ ಹೆಸರುಗಳು ಅಳಿಸಿಹೋಗಿವೆ. ಮಣಿಪುರದ ಒಟ್ಟು ಮತದಾರರಲ್ಲಿ ಎಸ್ಟಿ ಸಮುದಾಯಗಳ ಸಂಖ್ಯೆ ಶೇಕಡಾ 2.1ರಷ್ಟು ಕುಸಿದಿರುವುದನ್ನು ಈ ದತ್ತಾಂಶಗಳು ನಿರೂಪಿಸುತ್ತವೆ.
ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಅಳಿಸುವಿಕೆಯ ಕಾರಣಗಳಲ್ಲಿ ಪ್ರಧಾನವಾಗಿ ಕಾಣುವುದು ʼಶಾಶ್ವತವಾಗಿ ಸ್ಥಳಾಂತರವಾಗಿರುವುದುʼ (Peramanently Shifted ) ಅಥವಾ ʼ ಗೈರು ಹಾಜರಿ/ಪತ್ತೆಹಚ್ಚಲಾಗದಿರುವುದು ʼ (Absent/Untraceable). ಈ ಕಾರಣಗಳಿಂದಲೇ ಶೇಕಡಾ 76.1ರಷ್ಟು ಮತದಾರರ ಹೆಸರು ಅಳಿಸಿಹೋಗಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ (General Constituency)ಇದು ಶೇಕಡಾ 53.9ರಷ್ಟಿದೆ. ʼ ಮರಣ ʼದ ಕಾರಣಕ್ಕಾಗಿ ಅಳಿಸಿಹೋಗಿರುವವರ ಪ್ರಮಾಣ ಶೇಕಡಾ 18.9ರಷ್ಟಿದೆ. ಸಾಮಾನ್ಯ ಕ್ಷೇತ್ರಗಳಲ್ಲಿ ಇದು ಶೇಕಡಾ 41.9ರಷ್ಟಿದೆ. ಲಿಂಗತ್ವದ ಆಧಾರದಲ್ಲಿ ನೋಡಿದಾಗ, ಅಳಿಸಿಹಾಕಲ್ಪಟ್ಟಿರುವ ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಶೇಕಡಾ 8ರಷ್ಟಿದೆ (ಪುರುಷರು ಶೇಕಡಾ 6ರಷ್ಟಿದ್ದಾರೆ). ಅಳಿಸಿಹಾಕಲ್ಪಟ್ಟ ಪ್ರತಿ 1000 ಪುರುಷರಿಗೆ 1271 ಮಹಿಳೆಯರನ್ನು ಗುರುತಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆಗೂ ಮುನ್ನ 1071 ಇದ್ದ ಲಿಂಗಾನುಪಾತ ಕರಡು ಮತದಾರರ ಪಟ್ಟಿಯಲ್ಲಿ 1057ಕ್ಕೆ ಕುಸಿದಿದೆ. 18 ವಿಧಾನಸಭಾ ಕ್ಷೇತ್ರಗಳಲ್ಲಿ ಅಳಿಸಿಹಾಕಿರುವವರ ಪೈಕಿ ಶೇಕಡಾ 60 ರಿಂದ 69ರಷ್ಟು ಮಹಿಳಾ ಮತದಾರರಿದ್ದಾರೆ.

ಸಾಮಾಜಿಕ ಪರಿಣಾಮಗಳು
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಯಾವುದೇ ರೀತಿಯ ಹಕ್ಕು/ಅವಕಾಶ ವಂಚಿತ ಸಮುದಾಯಗಳು, ವಿಶಾಲ ಸಮಾಜದ ಅವಕೃಪೆಗೊಳಗಾಗುತ್ತವೆ. ಅಪರಾಧಿಕ ಹಿನ್ನೆಲೆಯಲ್ಲಿ ನೋಡಿದಾಗ ನಮಗೆ ಇದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಪ್ರಭುತ್ವದ ನೀತಿಗಳಿಂದ ಅಥವಾ ಪ್ರಭುತ್ವದ ಬೆಂಬಲ ಇರುವ ಸಂಸ್ಥೆಗಳ ಅಪಪ್ರಚಾರಕ್ಕೊಳಗಾಗಿ ಸಮಾಜದಲ್ಲಿ ಅಲಕ್ಷಿತರಾಗಿ ಕಾಣಲ್ಪಡುವ ಅನೇಕ ಸಮುದಾಯಗಳು ಹೀಗೆ ಪ್ರತ್ಯೇಕತಾ ಭಾವನೆಯನ್ನು ಅನುಭವಿಸುತ್ತಿರುವುದನ್ನು ಕಾಣುತ್ತೇವೆ. ʼ ಶಂಕಿತ ʼ (Suspected) ಎಂಬ ಪದವೇ ಕಳಂಕಪ್ರಾಯವಾಗಿಬಿಡುತ್ತದೆ. ಇದನ್ನೇ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೊರಗಿಡಲ್ಪಟ್ಟಿರುವ ಕೋಟ್ಯಂತರ ಜನರಿಗೆ ಅನ್ವಯಿಸಿದಾಗ ಅವರ ಪೌರತ್ವ ಅನುಮಾನಸ್ಪದವಾಗುವ ಸಂಭವವಿದೆ. ಸುಪ್ರೀಂಕೋರ್ಟ್ ಮತದಾರರ ಪಟ್ಟಿ ಪೌರತ್ವ ನಿರ್ಧರಿಸುವುದಿಲ್ಲ ಎಂದು ಹೇಳಿದ್ದರೂ ಸಹ, ತಳಮಟ್ಟದಲ್ಲಿ ಸಾಮಾನ್ಯ ಜನರನ್ನು ಹೆಚ್ಚು ಪ್ರಭಾವಿಸುವುದು, ಅಲ್ಲಿ ಸೃಷ್ಟಿಯಾಗುವ ನಿರೂಪಣೆ (Narrative) ಮತ್ತು ವ್ಯಾಖ್ಯಾನಗಳೇ (Interpretations) ಹೊರತು, ಶಾಸನಾತ್ಮಕ ನೀತಿಗಳಲ್ಲ.
ಕಳೆದ ಮೂರೂವರೆ ದಶಕಗಳಲ್ಲಿ ಕೋಮುವಾದ ಇಂತಹ ಸಾಮಾಜಿಕ ವಿಭಜನೆ ಸೃಷ್ಟಿಸಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ʼ ಅವನು ಬಾಂಗ್ಲಾ ಮಾತಾಡುತ್ತಾನೆ ಹಾಗಾಗಿ ಬಾಂಗ್ಲಾದೇಶಿ ʼ ಎಂಬ ಅಭಿಪ್ರಾಯ ವಿದ್ಯಾವಂತರಲ್ಲೂ ಗಟ್ಟಿಯಾಗಿದೆ. (ಬಂಗಾಲದಲ್ಲಿ ಇರುವ ಭಾಷಾ ವೈವಿಧ್ಯತೆ ಮತ್ತು Coloquials ಅಂದರೆ ಸ್ಥಳೀಯ ಆಡುನುಡಿಗಳ ಪರಿವೆ ಎಲ್ಲರಿಗೂ ಇರುವುದಿಲ್ಲ.) ಬಿಜೆಪಿ ಮತ್ತು ಆರೆಸ್ಸೆಸ್ ಇದನ್ನೇ ಬಳಸಿಕೊಂಡು, ಈ ಇಡೀ ಸಮುದಾಯವನ್ನು ಶಂಕಿತರನ್ನಾಗಿ, ಅನುಮಾನಿತರನ್ನಾಗಿ ಮಾಡಿಬಿಡುತ್ತದೆ. ಯಾವುದೋ ಕಾರಣಕ್ಕೆ ಇಂತಹ ಜನರು ಮತದಾರರ ಪಟ್ಟಿಯಿಂದ ಹೊರತಾದಾಗ ʼ ಮತವಂಚಿತರʼ ಒಂದು ಹೊಸ ವರ್ಗ ಸೃಷ್ಟಿಯಾಗುತ್ತದೆ. ಭಾಷಾ ಭಿನ್ನತೆಯಿಂದಲೇ ಜನರು ದಾಳಿಗೊಳಗಾಗುವ ನಮ್ಮ ದೇಶದಲ್ಲಿ ಈ ಸಾಂವಿಧಾನಿಕ ಭಿನ್ನತೆ ಮತ್ತಷ್ಟು ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.

ಕೇವಲ ಮುಸ್ಲಿಮರಷ್ಟೇ ಅಲ್ಲದೆ ಆದಿವಾಸಿಗಳು, ಅಲೆಮಾರಿಗಳು, ವಲಸಿಗರು ಈ ರೀತಿಯಲ್ಲಿ ಅನುಮಾನಿತ ಜನಸಮುದಾಯಗಳಾಗಿ ಸಮಾಜವನ್ನು ಎದುರಿಸಬೇಕಾಗುತ್ತದೆ. ಮತದಾರರ ಪಟ್ಟಿಗೂ ಸಾಂವಿಧಾನಿಕ ಸವಲತ್ತುಗಳಿಗೂ ಸಂಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದ್ದರೂ, ಭಾರತ ಸಾಗುತ್ತಿರುವ ವೇಗ ಮತ್ತು ಮಾರ್ಗವನ್ನು ನೋಡಿದರೆ, ಭವಿಷ್ಯದಲ್ಲಿ (ಹತ್ತಿಪ್ಪತ್ತು ವರ್ಷಗಳು ಕಳೆದು) ನ್ಯಾಯಾಂಗ ತನ್ನ ಸಾಂವಿಧಾನಿಕ ಅಸ್ತಿತ್ವವನ್ನು ಈಗಿರುವಂತೆಯೇ ಉಳಿಸಿಕೊಂಡಿರುತ್ತದೆಯೇ ಅಥವಾ ಹಾಗಿದ್ದರೂ ಪ್ರಭುತ್ವದ ಪ್ರಭಾವಕ್ಕೊಳಗಾಗದೆ ಇರಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡಲೇಬೇಕಲ್ಲವೇ ? ಕಳೆದ ಹನ್ನೆರಡು ವರ್ಷಗಳಲ್ಲಿ ಈ ಆತಂಕ ಸೃಷ್ಟಿಯಾದ ಹಲವು ಪ್ರಸಂಗಗಳನ್ನು ಕಂಡಿದ್ದೇವೆ. ಪ್ರಜಾತಂತ್ರದ ಆಡಳಿತದ ಮೇಲೆ ಅಂಕುಶ ಸಾಧಿಸುವ ಸಾಂವಿಧಾನಿಕ ಹಕ್ಕು ಇದ್ದರೂ ಸಹ , ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಇದು ಯೋಚನೆಗೀಡುಮಾಡುವ ವಿಷಯವಾಗುತ್ತದೆ.
ಸಮಾಜಶಾಸ್ತ್ರಜ್ಞರು ಸಂಶೋಧನೆ ಮಾಡಬೇಕಾದ ವಿಷಯ ಎಂದರೆ, ಕೋಟ್ಯಂತರ ಸಂಖ್ಯೆಯ ʼಮತವಂಚಿತರು ʼ ತಮ್ಮ ಸಾಂವಿಧಾನಿಕ ಸವಲತ್ತುಗಳನ್ನು ಉಳಿಸಿಕೊಂಡರೂ, ತಳಮಟ್ಟದ ಸಾಮಾಜಿಕ ವಾತಾವರಣದಲ್ಲಿ ಯಾವ ರೀತಿಯ ತಾರತಮ್ಯ, ಕೀಳರಿಮೆ, ಪ್ರತ್ಯೇಕತೆ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಸನ್ನಿವೇಶವನ್ನು ಎದುರಿಸಬಹುದು ? ನಾನು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಮತದಾನದ ಹಕ್ಕು ಪ್ರಾಥಮಿಕವಾದ ಒಂದು ಗುರುತು. ಅದನ್ನೇ ಕಸಿದುಕೊಂಡಾಗ, ನಾಗರಿಕರ ನಡುವೆ ವರ್ಟಿಕಲ್ ವಿಭಜನೆ ಮಾಡಿದಂತಾಗುತ್ತದೆ. ಇದು ಸಾಮುದಾಯಿಕ ಲಕ್ಷಣಗಳನ್ನು ಪಡೆದುಕೊಂಡಾಗ, ಉದಾಹರಣೆಗೆ ವಲಸಿಗರು, ಮುಸ್ಲಿಮರು, ಅಲೆಮಾರಿಗಳು ಇತ್ಯಾದಿ, ಅದು ಸಾಮಾಜಿಕ ವಿಭಜನೆಗೂ ಕಾರಣವಾಗುತ್ತದೆ. ಒಮ್ಮೆ ಮತವಂಚಿತರಾದ ಕುಟುಂಬಗಳ ಸಂತತಿಯೂ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಒಂದು ದೇಶದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಜೆ, ನಿರೂಪಿತ ಅಕ್ರಮವಲಸಿಗರು ಅಲ್ಲದಿದ್ದಲ್ಲಿ, ಮತದಾನದ ಹಕ್ಕನ್ನು ಸ್ವಾಭಾವಿಕವಾಗಿ ಪಡೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ. ಎಸ್ಐಆರ್ ಮೂಲತಃ ಇದನ್ನು ಗಮನದಲ್ಲಿಟ್ಟುಕೊಂಡೇ ನಡೆಯಬೇಕಾಗುತ್ತದೆ. ಆದರೆ ಬಿಹಾರ,ಪಶ್ಚಿಮ ಬಂಗಾಲದ ಉದಾಹರಣೆಗಳನ್ನು ಗಮನಿಸಿದಾಗ, ಈಗ ನಡೆಯುತ್ತಿರುವ ಎಸ್ಐಆರ್ ಮತ್ತು ಸೂಚಿಸಲಾಗಿರುವ ನಿಬಂಧನೆಗಳು ಈ ಲಕ್ಷಣವನ್ನು ಮೀರಿ ಹೋಗುವ ಸಾಧ್ಯತೆಗಳು ನಿಚ್ಚಳವಾಗಿವೆ. ʼ ಮತವಂಚಿತ ʼ ಸಮುದಾಯಗಳು ಒಂದು ಪ್ರತ್ಯೇಕ ವರ್ಗವಾಗಿ ರೂಪುಗೊಂಡಾಗ, ಅವರನ್ನೇ ಅಸ್ತ್ರವನ್ನಾಗಿ ಬಳಸುವ, Weaponise ಮಾಡಿಕೊಳ್ಳುವ, ಶಕ್ತಿಗಳೂ ಸಮಾಜದ ಒಳಗಿನಿಂದಲೇ ಉಗಮಿಸಬಹುದು. ಏಕೆಂದರೆ ಅದು ಬದುಕು ಮತ್ತು ಘನತೆಯ ಪ್ರಶ್ನೆಯಾಗುತ್ತದೆ.

ಈ ಆತಂಕಗಳೆಲ್ಲವೂ ಕೆಲವೊಮ್ಮೆ ಅತಿರೇಕ ಎನಿಸಬಹುದು, ಆದರೆ ಫ್ಯಾಸಿಸಂ ಒಮ್ಮೆ ನೆಲೆಯೂರಿದರೆ, ಎಲ್ಲವೂ ಸಾಧ್ಯ ಎಂಬ ಎಚ್ಚರಿಕೆಯೂ ನಮಗಿರಬೇಕು. ಈಗಾಗಲೇ Othering ಪ್ರಕ್ರಿಯೆ ತೀಕ್ಷ್ಣವಾಗುತ್ತಿರುವುದರಿಂದ, ಮತದಾನದ ಹಕ್ಕು ಈ ಪ್ರಕ್ರಿಯೆಗೆ ಒಳಗಾಗುವ ಸಮುದಾಯಗಳನ್ನು ಸಾಂವಿಧಾನಿಕವಾಗಿ ರಕ್ಷಿಸುತ್ತದೆ. ಈ ಹಕ್ಕು ಅವರಿಗೆ ರಕ್ಷಾ ಕವಚವಾಗುತ್ತದೆ. ಒಂದೊಮ್ಮೆ ಈ ಸಮುದಾಯಗಳ ಒಳಗೆ ʼ ಮತವಂಚಿತರ ʼ ವರ್ಗೀಕರಣವಾದಾಗ ಅದು ಸಾಮಾಜಿಕ ಕ್ಷೋಭೆಗೆ ಕಾರಣವಾಗುತ್ತದೆ. ಅಸ್ಸಾಂ ಎನ್ಆರ್ಸಿ ಪ್ರಕ್ರಿಯೆಯಲ್ಲಿ ನಿರಾಶ್ರಿತರಾಗಿ ಶಿಬಿರಗಳಲ್ಲಿರುವ ಲಕ್ಷಾಂತರ ಜನರು ಈ ವರ್ಗೀಕರಣಕ್ಕೊಳಗಾಗಿದ್ದಾರೆ. ಇದೇ ಅಪಾಯವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಎಸ್ಐಆರ್ ಸಹ ಸಾಧ್ಯವಾಗಿಸಬಹುದು. ಈ ಎಚ್ಚರದೊಂದಿಗೆ ನಾವು ಎಸ್ಐಆರ್ ಪ್ರಕ್ರಿಯೆಯನ್ನು ಮರುವಿಮರ್ಶೆಗೊಳಪಡಿಸಬೇಕಿದೆ.
( ಈ ಲೇಖನದ ಉಲ್ಲೇಖ, ಮಾಹಿತಿ ದತ್ತಾಂಶಗಳನ್ನು
SIR in Manipur is a pathway to exclusion ದ ಹಿಂದೂ ಪತ್ರಿಕೆ 10 ಜುಲೈ 2026
ದ ಹಿಂದೂ ಪತ್ರಿಕೆಯ ; A troubling Judgment end Endorsement of the SIR -9 ಜೂನ್ 2026
ಮತ್ತಿತರ ಅಂತರ್ಜಾಲ ಮೂಲಗಳಿಂದ ಪಡೆದುಕೊಳ್ಳಲಾಗಿದೆ.)
-೦-೦-೦-೦-






