ನೆಲಮಂಗಲ: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ 31 ವರ್ಷದ ಅದ್ವೈತ್ ಉಪಾಧ್ಯಾಯ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಘಟನೆ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಅದ್ವೈತ್ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಶಿವಗಂಗೆಗೆ ಆಗಮಿಸಿ, ಬೆಟ್ಟದ ಕೆಳಭಾಗದಲ್ಲಿ ವಾಹನ ನಿಲ್ಲಿಸಿ ಟ್ರೆಕ್ಕಿಂಗ್ ಆರಂಭಿಸಿದ್ದರು. ಬೆಟ್ಟ ಏರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಅವರು ಮರಳಿ ಕೆಳಗೆ ಬಂದಿರುವ ಯಾವುದೇ ಸುಳಿವು ಇದುವರೆಗೆ ಸಿಕ್ಕಿಲ್ಲ. ಇದರಿಂದ ಶಾಂತಲಾ ಡ್ರಾಪ್ ಸಮೀಪ ಏನಾದರೂ ಅವಘಡ ಸಂಭವಿಸಿರಬಹುದೆಂಬ ಅನುಮಾನ ಮೂಡಿದೆ. ನೆಲಮಂಗಲ ಮತ್ತು ದಾಬಸ್‌ಪೇಟೆ ಪೊಲೀಸರು ಜಂಟಿಯಾಗಿ ಡ್ರೋನ್‌ಗಳ ಸಹಾಯದಿಂದ ಬೆಟ್ಟದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇತ್ತ, ಪತಿಯೊಂದಿಗೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಅದ್ವೈತ್ ಅವರ ಪತ್ನಿ ಪ್ರಾಪ್ತಿ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಪೊಲೀಸರು ಮೊಬೈಲ್ ಲೋಕೇಶನ್, ಸಿಸಿಟಿವಿ ದೃಶ್ಯಗಳು ಹಾಗೂ ಇತರ ಮಾಹಿತಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.







