ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತನ್ನ ವ್ಯಾಪ್ತಿಯಲ್ಲಿರುವ 6,119 ಕಿಲೋಮೀಟರ್ ಉದ್ದದ ಆಪ್ಟಿಕಲ್ ಗ್ರೌಂಡ್ ವೈರ್ (OPGW) ಫೈಬರ್ ಜಾಲದಲ್ಲಿನ ಹೆಚ್ಚುವರಿ ‘ಡಾರ್ಕ್ ಫೈಬರ್’ ಅನ್ನು ವಾಣಿಜ್ಯ ಬಳಕೆಗೆ ಮುಕ್ತಗೊಳಿಸುವ ಮೂಲಕ ಸಂಸ್ಥೆಗೆ ಹೆಚ್ಚುವರಿ ಆದಾಯ ಸೃಷ್ಟಿಸುವ ಹಾಗೂ ರಾಜ್ಯದ ಡಿಜಿಟಲ್ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ತುಂಬುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಯೋಜನೆಯಡಿ ಕೆಪಿಟಿಸಿಎಲ್ ತನ್ನ ವಿದ್ಯುತ್ ಪ್ರಸರಣ ಜಾಲದಲ್ಲಿರುವ 24 ಫೈಬರ್ ಜೋಡಿಗಳ ಪೈಕಿ 12 ಫೈಬರ್ ಜೋಡಿಗಳನ್ನು ತನ್ನ ಗ್ರಿಡ್ ಸಂವಹನ ವ್ಯವಸ್ಥೆಗಾಗಿ ಕಾಯ್ದಿರಿಸಿಕೊಂಡು, ಉಳಿದ 12 ಫೈಬರ್ ಜೋಡಿಗಳನ್ನು ಟೆಲಿಕಾಂ ಸೇವಾ ಸಂಸ್ಥೆಗಳು, ಡೇಟಾ ನೆಟ್‌ವರ್ಕ್ ಸಂಸ್ಥೆಗಳು ಹಾಗೂ ಇತರೆ ಪರವಾನಗಿ ಪಡೆದ ಸೇವಾ ಪೂರೈಕೆದಾರರಿಗೆ ಬಾಡಿಗೆ ಆಧಾರದ ಮೇಲೆ ಒದಗಿಸಲಿದೆ.

ಈ ಯೋಜನೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 15 ವರ್ಷಗಳ ಒಪ್ಪಂದದ ಅವಧಿಯಲ್ಲಿ ಕೆಪಿಟಿಸಿಎಲ್‌ಗೆ ಸುಮಾರು ₹130 ಕೋಟಿ ಸ್ಥಿರ ಆದಾಯ ದೊರೆಯುವ ನಿರೀಕ್ಷೆಯಿದೆ. ಇದರ ಜೊತೆಗೆ, ಡಾರ್ಕ್ ಫೈಬರ್ ಲೀಸ್‌ನಿಂದ ಲಭಿಸುವ ಆದಾಯದಲ್ಲಿ ಶೇ.40ರಷ್ಟು ಪಾಲು ಹಾಗೂ ಉಪಕೇಂದ್ರಗಳಲ್ಲಿ ಕೋ-ಲೊಕೇಶನ್ (Co-location) ಶುಲ್ಕದ ರೂಪದಲ್ಲಿಯೂ ಹೆಚ್ಚುವರಿ ಆದಾಯ ಲಭ್ಯವಾಗಲಿದೆ.

ಯೋಜನೆಯಡಿ ಆಯ್ಕೆಯಾಗುವ ಸಂಸ್ಥೆಯು ಡಾರ್ಕ್ ಫೈಬರ್‌ಗಳ ಮಾರುಕಟ್ಟೆಗೊಳಿಸುವಿಕೆ, ಗ್ರಾಹಕರಿಗೆ ಲೀಸ್ ನೀಡುವುದು, ಸಂಪೂರ್ಣ OPGW ಜಾಲದ ಕಾರ್ಯಾಚರಣೆ ಮತ್ತು ನಿರ್ವಹಣೆ, ಗ್ರಾಹಕರ ಸೇರ್ಪಡೆ, ಬಿಲ್ಲಿಂಗ್, ಆದಾಯ ಸಂಗ್ರಹಣೆ ಹಾಗೂ ಸೇವಾ ಗುಣಮಟ್ಟದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. 15 ವರ್ಷಗಳ (10 ವರ್ಷ + 5 ವರ್ಷ ವಿಸ್ತರಣೆ ಅವಕಾಶ) ಈ ಒಪ್ಪಂದದ ಮೂಲಕ ಕೆಪಿಟಿಸಿಎಲ್‌ಗೆ ವಾರ್ಷಿಕ ನಿಗದಿತ ಶುಲ್ಕದ ಜೊತೆಗೆ ಆದಾಯ ಹಂಚಿಕೆ ವ್ಯವಸ್ಥೆಯೂ ಜಾರಿಯಾಗಲಿದೆ. ಈ ಮೂಲಕ ಸಾರ್ವಜನಿಕ ಮೂಲಸೌಕರ್ಯವನ್ನು ಸಮರ್ಥವಾಗಿ ಬಳಸಿಕೊಂಡು ದೀರ್ಘಾವಧಿಯ ಆರ್ಥಿಕ ಲಾಭ ಗಳಿಸುವ ಹೊಸ ಮಾದರಿಯನ್ನು ಕೆಪಿಟಿಸಿಎಲ್ ಅನುಸರಿಸುತ್ತಿದೆ.

ಈ ಉಪಕ್ರಮವು ರಾಜ್ಯದ ವಿದ್ಯುತ್ ಪ್ರಸರಣ ಮೂಲಸೌಕರ್ಯವನ್ನು ಡಿಜಿಟಲ್ ಆರ್ಥಿಕತೆಯೊಂದಿಗೆ ಸಂಪರ್ಕಿಸುವ ಮಹತ್ವದ ಹೆಜ್ಜೆಯಾಗಿದ್ದು, ಟೆಲಿಕಾಂ, ಡೇಟಾ ಸೆಂಟರ್‌ಗಳು, 5G ಜಾಲ, ಕ್ಲೌಡ್ ಸೇವೆಗಳು, ಭವಿಷ್ಯದ ಡಿಜಿಟಲ್ ಸಂಪರ್ಕ ವ್ಯವಸ್ಥೆಗಳು ಹಾಗೂ ಸರ್ಕಾರಿ-ಖಾಸಗಿ ಡಿಜಿಟಲ್ ಮೂಲಸೌಕರ್ಯಗಳ ವಿಸ್ತರಣೆಗೆ ವಿಶ್ವಾಸಾರ್ಹ ಮತ್ತು ವೇಗದ ಫೈಬರ್ ಸಂಪರ್ಕ ಒದಗಿಸಲು ನೆರವಾಗಲಿದೆ.

ಈ ಬಗ್ಗೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದು, “ಕೆಪಿಟಿಸಿಎಲ್ ಕೇವಲ ವಿದ್ಯುತ್ ಪ್ರಸರಣ ಸಂಸ್ಥೆಯಾಗಿರದೆ, ರಾಜ್ಯದ ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರವಹಿಸುತ್ತಿದೆ. ಬಳಕೆಯಾಗದೆ ಉಳಿದಿದ್ದ ಡಾರ್ಕ್ ಫೈಬರ್ ಅನ್ನು ವಾಣಿಜ್ಯ ಬಳಕೆಗೆ ತರಲಾಗುತ್ತಿರುವುದು ಸಾರ್ವಜನಿಕ ಸ್ವತ್ತಿನ ಸಮರ್ಥ ಬಳಕೆಗೆ ಉತ್ತಮ ಉದಾಹರಣೆಯಾಗಿದೆ. ಇದರಿಂದ ಕೆಪಿಟಿಸಿಎಲ್‌ಗೆ ದೀರ್ಘಾವಧಿಯ ಆದಾಯ ದೊರೆಯುವುದರ ಜೊತೆಗೆ, ಕರ್ನಾಟಕದಲ್ಲಿ ವೇಗವಾದ ಡಿಜಿಟಲ್ ಸಂಪರ್ಕ ವ್ಯವಸ್ಥೆ ಹಾಗೂ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೂ ಹೊಸ ಉತ್ತೇಜನ ಸಿಗಲಿದೆ.” ಎಂದರು.

ಇನ್ನು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕೆಪಿಟಿಸಿಎಲ್ ನಿರ್ಮಿಸಿರುವ OPGW ಜಾಲವು ನಮ್ಮ ವಿದ್ಯುತ್ ಪ್ರಸರಣ ವ್ಯವಸ್ಥೆಯ ಪ್ರಮುಖ ಡಿಜಿಟಲ್ ಆಧಾರವಾಗಿದೆ. ಗ್ರಿಡ್ ಸಂವಹನಕ್ಕೆ ಅಗತ್ಯವಿರುವ ಸಾಮರ್ಥ್ಯವನ್ನು ಕಾಯ್ದಿರಿಸಿಕೊಂಡು, ಹೆಚ್ಚುವರಿ ಡಾರ್ಕ್ ಫೈಬರ್ ಅನ್ನು ವಾಣಿಜ್ಯ ಬಳಕೆಗೆ ಮುಕ್ತಗೊಳಿಸುವ ಮೂಲಕ ಸಾರ್ವಜನಿಕ ಮೂಲಸೌಕರ್ಯದ ಮೌಲ್ಯವನ್ನು ಹೆಚ್ಚಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಈ ಯೋಜನೆಯಿಂದ ಸಂಸ್ಥೆಗೆ ಸ್ಥಿರ ಆದಾಯ ಸೃಷ್ಟಿಯಾಗುವುದರ ಜೊತೆಗೆ, ರಾಜ್ಯದ ಟೆಲಿಕಾಂ, ಡೇಟಾ ಸೆಂಟರ್ ಹಾಗೂ ಭವಿಷ್ಯದ ಡಿಜಿಟಲ್ ಸಂಪರ್ಕ ವ್ಯವಸ್ಥೆಗಳಿಗೆ ವಿಶ್ವಾಸಾರ್ಹ ಫೈಬರ್ ಜಾಲ ಲಭ್ಯವಾಗಲಿದೆ” ಎಂದು ತಿಳಿಸಿದರು.







