ಕೋಲಾರ:ಮಾ.18: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ಸೇಫ್ ಅಲ್ಲ ಅನ್ನೋ ಮಾಹಿತಿ ರವಾನೆ ಆಗಿದೆ. ಕೋಲಾರ ಜೆಡಿಎಸ್ ಭದ್ರಕೋಟೆ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಈಗಾಗಲೇ ದಲಿತ ನಾಯಕ ಕೆ.ಹೆಚ್ ಮುನಿಯಪ್ಪ ಅವರ ಸೋಲಿಸುವ ಸಂಚಿನ ರೂವಾರಿ, ತನ್ನ ಆಪ್ತ ರಮೇಶ್ ಕುಮಾರ್ ಹಾಗು ನಂಜೇಗೌಡರನ್ನು ಬಳಸಿಕೊಂಡು ಕೆ.ಹೆಚ್ ಮುನಿಯಪ್ಪ ಅವರನ್ನು ಸೋಲಿಸಿದ್ರು ಅನ್ನೋದನ್ನು ಮನವರಿಕೆ ಮಾಡಿಕೊಡಲಾಗ್ತಿದೆ. ಅದೂ ಅಲ್ಲದೆ ಸ್ಥಳೀಯ ವ್ಯಕ್ತಿ ಸಿಎಂಆರ್ ಶ್ರೀನಾಥ್, ಪರ ಕೋಲಾರದಲ್ಲಿ ಅಲೆ ಇದ್ದು, ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಸೇರಿದ್ದು ಜನರಲ್ಲಿ ಅಸಹನೆ ಮೂಡುವಂತೆ ಮಾಡಿದೆ. ಈಗಾಗಲೇ ಆಕ್ರೋಶದಿಂದ ಕುದಿಯುತ್ತಿರುವ ಜೆಡಿಎಸ್ ಕಾರ್ಯಕರ್ತರು ಹಾಲಿ ಶಾಸಕರನ್ನೇ ಆಪರೇಷನ್ ಮಾಡಿದ ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಅನ್ನೋ ಉದ್ದೇಶ ಹೊಂದಿದ್ದಾರೆ. ಇದೀಗ ಸಿದ್ದರಾಮಯ್ಯ ಅನಿವಾರ್ಯವಾಗಿ ಜೆಡಿಎಸ್ ಬಲೆಯಲ್ಲಿ ಸಿಲುಕಿ ಸೋಲುವ ಭೀತಿ ಸೃಷ್ಟಿಯಾಗಿದೆ.
ರಾಹುಲ್ ಗಾಂಧಿ ಸ್ಪಷ್ಟ ಸಂದೇಶ, ಸಿದ್ದರಾಮಯ್ಯ ಮೌನ..

ಶುಕ್ರವಾರ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸಂದೇಶ ನೀಡಿದ್ದಾರೆ. ವಿರೋಧಿಗಳು ನಿಮ್ಮನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಕೋಲಾರದಲ್ಲಿ ಹೆಚ್ಚು ಯಶಸ್ಸು ಸಿಗುವ ಅವಕಾಶಗಳಿವೆ. ವಿರೋಧಿಗಳಿಗೆ ಅವಕಾಶ ಕೊಡದಂತೆ ನೀವು ವಿಧಾನಸಭೆ ಪ್ರವೇಶ ಮಾಡಬೇಕು. ಇದಕ್ಕಾಗಿ ಹೆಚ್ಚು ಸೂಕ್ತ ಎನಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನೀವು ಕೋಲಾರದಿಂದಲೇ ಗೆದ್ದು ಬರುತ್ತೇನೆ ಎನ್ನುವ ಇಚ್ಛೆ ವ್ಯಕ್ತಪಡಿಸಿದರೆ ಕೋಲಾರದಿಂದಲೇ ಸ್ಪರ್ಧೆ ಮಾಡಿ. ಇನ್ನು ಒಂದು ಬಾರಿ ಈ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ ಎಂದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಕೋಲಾರ ಹಾಗು ಮೈಸೂರು ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗ್ತಿದೆ. ಇದರ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಡಾ ಯತೀಂದ್ರ, ಅಪ್ಪ ವರುಣಾಗೆ ಬರುವುದಾದರೆ ಕ್ಷೇತ್ರ ಬಿಟ್ಟು ಕೊಡಲು ನಾನು ಸಿದ್ಧವಿದ್ದೇನೆ ಎಂದಿದ್ದಾರೆ. ಅಂದರೆ ಕಾಂಗ್ರೆಸ್ ಹೈಕಮಾಂಡ್ ಸಂದೇಶ ಸತ್ಯ ಎನ್ನುವುದು ಈ ಮಾತಿನಿಂದ ತಿಳಿದು ಬರ್ತಿದೆ.
ಕೋಲಾರ ಇಲ್ಲ ಎನ್ನುವ ಸುಳಿವು ಕೊಟ್ಟ ಸಿದ್ದರಾಮಯ್ಯ..!

ದೆಹಲಿಯಿಂದ ವಾಪಸ್ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಇಲ್ಲ ಅನ್ನೋ ಸುಳಿವು ನೀಡಿದ್ದಾರೆ. ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ನಾನು ಯಾವುದೇ ಕ್ಷೇತ್ರದಿಂದ ಟಿಕೆಟ್ ಬಯಸಿ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿಲ್ಲ. ಕೋಲಾರದಲ್ಲಿ ನಾನಿನ್ನೂ ಮನೆ ಮಾಡಿಲ್ಲ. ನಾನು ಬೆಳಗಾವಿಗೆ ಹೋಗಬೇಕಿದೆ. ಹೀಗಾಗಿ ನಾನು ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ಬಾದಾಮಿ, ವರುಣಾ, ಕೋಲಾರ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದರೂ ನಾನು ಸ್ಪರ್ಧೆಗೆ ಸಿದ್ಧವಿದ್ದೇನೆ. ಮಾರ್ಚ್ 22 ರಂದು ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಎಲ್ಲಾ ಶಾಸಕರ ಕ್ಷೇತ್ರದ ಬಗ್ಗೆಯೂ ಚರ್ಚೆ ಮಾಡಿಲ್ಲ, ಒಂದೊಂದೇ ಆಕಾಂಕ್ಷಿಗಳು ಇರುವ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ, ವರುಣಾದಲ್ಲಿ ಡಾ ಯತೀಂದ್ರ ಹೆಸರು ಒಂದೇ ಇರೋದು, ಅಂದ್ರೆ ಕ್ಲಿಯರ್ ಆಗಬೇಕು ಅಲ್ವಾ ಅನ್ನೋ ಮೂಲಕ ಯತೀಂದ್ರ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಅನ್ನೋ ಮಾತನ್ನು ಹೇಳಿದ್ದಾರೆ. ಕೋಲಾರ ಪ್ರವಾಸ ರದ್ದು ಮೂಲಕ ಕೋಲಾರ ಕ್ಷೇತ್ರದಿಂದ ವಾಪಸ್, ಇನ್ನು ಯತೀಂದ್ರ ವರುಣಾದಲ್ಲಿ ಸ್ಪರ್ಧೆ ಅನ್ನೋ ಮೂಲಕ ವರುಣಾದಿಂದಲೂ ವಾಪಸ್ ಉಳಿದಿದ್ದು ಕೇವಲ ಬಾದಾಮಿ ಎನ್ನುವಂತಾಗಿದೆ.
ಕೋಲಾರದಲ್ಲಿ ಸಿದ್ದರಾಮಯ್ಯಗೆ ಬಲೆ ಹೆಣೆದಿದ್ದು ಯಾರು..?

ಕೋಲಾರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಎನ್ನಲಾಗುತ್ತಿರುವ ವರ್ತೂರು ಪ್ರಕಾಶ್ ಈ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಮೈಸೂರು ಹುಲಿ, ನಾನು ಕೋಲಾರದ ಹುಲಿ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸೋಲುವುದು ಕಟ್ಟಿಟ್ಟ ಬುತ್ತಿ. ಸ್ವತಃ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ರಮೇಶ್ ಕುಮಾರ್ ಸಂಚು ರೂಪಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ರಮೇಶ್ ಕುಮಾರ್ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಕೆ.ಹೆಚ್ ಮುನಿಯಪ್ಪ ಕೂಡ ಸಿದ್ದರಾಮಯ್ಯ ಬಂದು ಸ್ಪರ್ಧೆ ಮಾಡಲಿ ಎನ್ನುತ್ತಿರುವುದು ಕೂಡ ಈ ಹಿಂದಿನ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಹೊರತು ಮತ್ತೇನೆ ಇಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಸಿದ್ದರಾಮಯ್ಯನನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೋಲಾರ ಮುಖಂಡರ ಸಭೆ ನಡೆಸುತ್ತಿದ್ದು, ಮೊದಲ ಪಟ್ಟಿ ಬಿಡುಗಡೆ ಆಗುವ ಮೊದಲೇ ಸಿದ್ದರಾಮಯ್ಯ ಕ್ಷೇತ್ರವನ್ನು ಫೈನಲ್ ಮಾಡಲಿದ್ದಾರೆ. ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಹೆಸರು ಅಂತಿಮ ಆಗಲಿದೆ ಎನ್ನುವ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಕೃಷ್ಣಮಣಿ