2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಚುರುಕು ಮುಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭಿನ್ನಮತ ಸ್ಪೋಟಗೊಳ್ಳದಂತೆ ಎಲ್ಲಾ ಪ್ರಯತ್ನ ನಡೆಯುತ್ತಿದೆ.
ಈ ನಡುವೆ ಕಾಂಗ್ರೆಸ್ ರಾಜ್ಯ ನಾಯಕರು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸುತ್ತಿದ್ದಾರೆ. ಈಗಾಗಲೇ ಹಾಲಿ ಏಳು ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಈ ನಡುವೆ ಕೋಲಾರದಿಂದಲೇ ಸ್ಪರ್ಧಿಸುತ್ತಾರೆ ಎಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ.
ಕೋಲಾರದಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆ ಇದ್ದು, ವರ್ತೂರು ಪ್ರಕಾಶ್ ಪರವಾಗಿ ಅಲೆ ಇದೆ, ಹಾಗಾಗಿ, ಕೋಲಾರದಲ್ಲಿ ಸ್ಪರ್ಧೆಗೆ ನಿಲ್ಲುವುದರ ಬಗ್ಗೆ ಮತ್ತೊಂದು ಬಾರಿ ಯೋಚಿಸಿ ನಿರ್ಧರಿಸಿ ಎಂದು ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಹೇಳಿದ್ದಾರೆಂದು ವರದಿಯಾಗಿದೆ. ಅದಾಗ್ಯೂ, ಕಾಂಗ್ರೆಸ್ ಅಧಿಕೃತ ಮೂಲಗಳು ಈ ಸುದ್ದಿಯನ್ನು ಖಚಿತ ಪಡಿಸಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರ ಎದುರು ಸೋತು, ಬಾದಾಮಿಯಲ್ಲಿ ರಾಮುಲು ಎದುರು ಕಡಿಮೆ ಅಂತರದಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಈ ಬಾರಿ ಮತ್ತೆ ಬಾದಾಮಿಯಿಂದ ಕಣಕ್ಕೆ ಇಳಿಯುವುದು ಸಂದೇಹವಿದೆ. ನೇರವಾಗಿ ಆರ್‌ಎಸ್‌ಎಸ್ ಜೊತೆಗೆ ಸೈದ್ಧಾಂತಿಕವಾಗಿ ತಿಣುಕಾಡುವ ಸಿದ್ದರಾಮಯ್ಯರನ್ನು ಹೇಗಾದರೂ ಸೋಲಿಸಲು ಸಂಘಪರಿವಾರವೇ ಮುತುವರ್ಜಿ ವಹಿಸಿರುವುದರಿಂದ ಸಿದ್ದುಗೆ ಎಲ್ಲಿ ಸ್ಪರ್ಧಿಸಿದರೂ ಚುನಾವಣೆ ಕಠಿಣವಾಗುವ ಸಾಧ್ಯತೆ ಇದೆ.
ಸದ್ಯ, ವರುಣಾ ಕ್ಷೇತ್ರದ ಕಡೆಗೆ ಸಿದ್ದರಾಮಯ್ಯ ದೃಷ್ಟಿ ನೆಡಲಿದ್ದಾರ ಎನ್ನುವ ಚರ್ಚೆ ಆರಂಭವಾಗಿದೆ. ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಗಾಗಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿರುವುದರಿಂದ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗೆಳಯಲು ಸಾಧ್ಯವಿಲ್ಲ.
ಅಲ್ಲದೆ, ಪ್ರಿಯಾಂಕಾ ಗಾಂಧಿ ಛೇಂಬರಿನಲ್ಲಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರುವ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾತನಾಡಿರುವ ಸಿದ್ದರಾಮಯ್ಯ, “ಹೈಕಮಾಂಡ್ ಸೂಚನೆಯಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದಾರೆ.