2023ರ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election20023) ಇದೇ ಮೇ 10ರಂದು ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಕೂಡ ಅಖಾಡಕ್ಕಿಳಿದು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ(BJP) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾರರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಿತ್ತು. ಇದೀಗ ಕಾಂಗ್ರೆಸ್(congress) ಪಕ್ಷದಿಂದಲೂ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು ಇಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ರು. ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಮಾತನಾಡಿದ ಅವರು, ʻಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನವಲ್ಲ, ಅದು ರಾಜ್ಯದ ವಿಕಾಸಕ್ಕಾಗಿ, ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರಲು ಇರುವ ಸಾಧನ. ನಾವು ಒಮ್ಮೆ ಭರವಸೆಗಳನ್ನು ಕೊಟ್ಟ ಮೇಲೆ 5 ವರ್ಷಗಳ ಅವಧಿಯಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2013ರಲ್ಲಿ ನಾವು ಪಕ್ಷದ ಪ್ರಣಾಳಿಕೆಯ ಮೂಲಕ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಯಾವ ಭರವಸೆ ನೀಡಿದ್ದೆವು ಮತ್ತು ಏನು ಮಾಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಆದರೆ ಬಿಜೆಪಿಯವರು 2018ರಲ್ಲಿ ಪ್ರಣಾಳಿಕೆಯ ಮೂಲಕ ನೀಡಿದ್ದ 600 ಭರವಸೆಗಳಲ್ಲಿ 3 ವರ್ಷ 10 ತಿಂಗಳ ಅವಧಿಯಲ್ಲಿ ಈಡೇರಿಸಿದ್ದು ಕೇವಲ 55 ಭರವಸೆಗಳು ಮಾತ್ರ. 10% ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ, ನಿನ್ನೆ ಅವರು ನೀಡಿರುವ ಭರವಸೆಗಳನ್ನು ಕೂಡ ಈಡೇರಿಸುವ ಉದ್ದೇಶದಿಂದ ನೀಡಿರುವುದಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಇದೇ ರೀತಿ ಮಾಡಿದೆ. ರೈತರಿಗೆ ಬಿಜೆಪಿ ಪಕ್ಷ(BJP party) ಅನೇಕ ಭರವಸೆಗಳನ್ನು ನೀಡಿತ್ತು, ಅದರಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ, ಬಿಜೆಪಿಗೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂಬ ಪ್ರಾಮಾಣಿಕತೆ ಇಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬದ್ಧತೆಯಿಂದ ನಡೆದುಕೊಂಡಿದೆ ಎಂದು ಸಿದ್ದರಾಮಯ್ಯ(siddaramaiah) ಹೇಳಿದ್ರು.
ʻಹಿಂದೆ ನಾವು ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಗಳ – ವರ್ಗದ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತ ವರ್ಗಗಳ ಜನರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟಿದ್ದೆವು. ಉದಾಹರಣೆಗೆ ಎಸ್,ಸಿ,ಪಿ/ಟಿ,ಎಸ್,ಪಿ ಕಾಯ್ದೆ, ಬಹುಶಃ ತೆಲಂಗಾಣ ರಾಜ್ಯವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿ ಇಂಥದ್ದೊಂದು ಕಾಯ್ದೆ ಇರಲಿಲ್ಲ. ದಲಿತರ ಬಗ್ಗೆ ಬಹಳ ಮಾತನಾಡುವ ಮೋದಿ ಅವರು ಸಬ್ ಕ ಸಾಥ್, ಸಬ್ ಕ ವಿಕಾಸ್ ಎನ್ನುತ್ತಾರೆ ಆದರೆ ಇಂಥ ಕಾಯ್ದೆಯನ್ನು ಯಾಕೆ ಅವರು ಕೇಂದ್ರದಲ್ಲಿ ಜಾರಿಗೆ ತಂದಿಲ್ಲ. ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುವ ಕೆಲಸವನ್ನು ಯಾಕೆ ಮಾಡಿಲ್ಲ. 2013ರಲ್ಲಿ ನಮ್ಮ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿತು. ಅಲ್ಲಿಯವರೆಗೆ ಈ ಯೋಜನೆಗಳಿಗೆ ಖರ್ಚಾಗಿದ್ದ ಹಣ 22,000 ಕೋಟಿ ರೂಪಾಯಿ. ಕಾಯ್ದೆ ಜಾರಿಯಾದ ನಂತರ 88,000 ಕೋಟಿ ರೂಪಾಯಿ ಈ ಯೋಜನೆಗೆ ಖರ್ಚಾಯಿತು. ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ಮೀಸಲಾಗಿಟ್ಟಿದ್ದ ಹಣ 30,000 ಕೋಟಿ, ಆಗ ನಮ್ಮ ಬಜೆಟ್ ಗಾತ್ರ ಇದ್ದದ್ದು 2.02 ಲಕ್ಷ ಕೋಟಿ ರೂಪಾಯಿ. ಈ ಸಾಲಿನ ಬಜೆಟ್ ಗಾತ್ರ 3.10 ಲಕ್ಷ ಕೋಟಿ ರೂಪಾಯಿ ಇದೆ ಆದರೆ ಈ ಯೋಜನೆಗೆ ಇಟ್ಟಿರುವ ಹಣ 28,000 ಕೋಟಿ ರೂಪಾಯಿ. ಒಂದು ಕಡೆ ಬಜೆಟ್ ಗಾತ್ರ ಹೆಚ್ಚಾಗಿದೆ, ಆದರೆ ಈ ಯೋಜನೆಗೆ ಖರ್ಚು ಮಾಡುವ ಹಣ ಕಡಿಮೆಯಾಗಿದೆ. ಅಂದರೆ ಬಿಜೆಪಿಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಪ್ರಗತಿ ಆಗಬೇಕು ಎಂಬುದರಲ್ಲಿ ಆಸಕ್ತಿ ಇಲ್ಲ. ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಪರ ಇಲ್ಲ. ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದವರು, ಸಂವಿಧಾನದ 73 ಹಾಗು 74ನೇ ತಿದ್ದುಪಡಿ ಮಸೂದೆಗೆ ವಿರೋಧ ಮಾಡಿದ್ದು, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗ ವಿರೋಧ ಮಾಡಿದವರು ಬಿಜೆಪಿಯವರು. ಈಗ ಸಾಮಾಜಿಕ ನ್ಯಾಯದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಶೋಷಿತ ಜನರ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿಗೆ ಇದೆ? ಅಂತ ಸಿದ್ದರಾಮಯ್ಯ ಬಿಜೆಪಿ(BJP) ವಿರುದ್ಧ ಕಿಡಿಕಾರಿದರು.