ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ ಅವರು, ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು? ಎಂದು ತಿರುಗೇಟು ನೀಡಿದ್ದಾರೆ.
“ಸುಳ್ಳಿನ ಶೂರ, ಸಿದ್ದಕಲೆಯ ನಿಷ್ಣಾತ ಸಿದ್ದರಾಮಯ್ಯನವರಿಗೆ ರಾಜಕೀಯ ಶಕ್ತಿ ತುಂಬಿದವರು ಯಾರು? ನಾನು ಎಲ್ಲಿದ್ದೆ? ಎಲ್ಲಿಂದಾ ಬಂದೆ ಎಂದು ಸ್ವತಃ ಅವರೇ ಜನತೆಗೆ ಹೇಳಿದರೆ ಚೆನ್ನಾಗಿರುತ್ತದೆ. ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನೆಡೆಗೆ ಮುಖ ಮಾಡಿ ನಿಲ್ಲುವ ʼಸಿದ್ದಹಸ್ತರಿಗೆʼ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆವ ಗುಣ ಯಾರದ್ದು ಎಂಬುದನ್ನು ಜನ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ.ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದು, ಈಗ ಕಾಂಗ್ರೆಸ್ʼನ್ನೇ ನುಂಗುತ್ತಾ, ಆ ಪಕ್ಷದ ದಿಗ್ಗಜರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ” ಎಂದಿದ್ದಾರೆ.
“ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು? ನನ್ನನ್ನು ಮುಖ್ಯಮಂತ್ರಿ ಮಾಡಿ ಕೊನೆಗೆ ಕೈಕೊಟ್ಟು ಆ ಸರಕಾರದ ಪತನಕ್ಕೆ ʼಕಾರಣಪುರುಷರುʼ ಯಾರು? ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ” ಎಂದಿದ್ದಾರೆ.
“ದೇವೇಗೌಡರನ್ನು ಪ್ರಧಾನಿ ಮಾಡಿ, ಅವರಿಗೂ ಕೈಕೊಟ್ಟವರು ಯಾರು ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರೇ ಸುಮ್ಮನೆ ನಮ್ಮನ್ನು ಕೆಣಕಬೇಡಿ. ಜೆಡಿಎಸ್ ಚಿಕ್ಕ ಪಕ್ಷವಿರಬಹುದು, ಅದರ ಶಕ್ತಿಯನ್ನು ಕಡೆಗಣಿಸಬೇಡಿ. ಕರ್ನಾಟಕದ ರಾಜಕಾರಣದಲ್ಲಿ ಪರಾವಲಂಬಿ ಸಸ್ಯ ನೀವು. ಪಕ್ಷಗಳನ್ನು ಒಡೆಯುವ ನಿಮ್ಮ ʼಸಿದ್ದಕಲೆʼ ರಾಜ್ಯಕ್ಕೆ ಹೊಸತೇನಲ್ಲ” ಎಂದು ವ್ಯಂಗ್ಯವಾಡಿದ್ದಾರೆ.