ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ ನಿವಾಸಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಗುರುವಾರ ಆಗಮಿಸಿ, ಸಚಿವರ ಕುಟುಂಬ ಪರಿವಾರಕ್ಕೆ ಆಶೀರ್ವಚನ ಮಾಡಿ, ಹರಸಿದ್ದಾರೆ.

ಬೆಳಿಗ್ಗೆಯಿಂದಲೇ ಶಾಸಕರು, ಕಾರ್ಯಕರ್ತರು, ಅಧಿಕಾರಿಗಳ ಆಗಮನ ಮತ್ತು ಅಭಿಮಾನಿಗಳ ಕಲರವದಿಂದ ತುಂಬಿದ್ದ ಸಚಿವರ ಸ್ವಂತ ನಿವಾಸಕ್ಕೆ ಆಗಮಿಸಿದ ಶ್ರೀಗಳನ್ನು ಸಚಿವರ ಕುಟುಂಬ ಪರಿವಾರ ಗೌರವದಿಂದ ಬರಮಾಡಿಕೊಂಡಿತು.
ನಂತರ ಎಂ ಬಿ ಪಾಟೀಲ್ ಪತ್ನಿ ಆಶಾ ಪಾಟೀಲ, ಮಕ್ಕಳಾದ ಬಸಂತ್ ಮತ್ತು ಧ್ರುವ ಪಾಟೀಲ ಎಲ್ಲರೂ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಅವರೆಲ್ಲರ ಭಕ್ತಿಯನ್ನು ಸ್ವೀಕರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೆಲ ಹೊತ್ತು ಲೋಕಾಭಿರಾಮವಾಗಿ ಮಾತನಾಡಿ, ಬಳಿಕ ಆಶೀರ್ವಚನಗೈದು, ಒಳಿತನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಎಂ .ಬಿ. ಪಾಟೀಲ್ ಕೂಡ ತಮ್ಮ ಇದುವರೆಗಿನ ಸಾಧನೆಗಳ ನೆನಪಿನೊಂದಿಗೆ, ಇನ್ನು ಮುಂದೆಯೂ ಶ್ರೀಗಳ ಸಲಹೆ, ಮಾರ್ಗದರ್ಶನ ತಮಗೆ ಇರಬೇಕೆಂದು ಕೋರಿದರು.
ಇದನ್ನೂ ಓದಿ : ಬತ್ತಿ ಹೋಯ್ತು ಡಾಕ್ಟರ್ ಆಗುವ ಕನಸು : NEET ವಿದ್ಯಾರ್ಥಿನಿ ಆಕಾಂಕ್ಷಾ ಆತ್ಮಹತ್ಯೆಗೆ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ರಾಜ್ಯದ ಸ್ಥಿತಿಗತಿ, ಮಳೆ-ಬೆಳೆ ಇತ್ಯಾದಿಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡ ಶ್ರೀಗಳು, ತಾವು ಸಕುಟುಂಬ ಪರಿವಾರ ಸಮೇತರಾಗಿ ಸಿದ್ಧಗಂಗೆಯ ಶ್ರೀಮಠಕ್ಕೆ ಆಗಮಿಸಬೇಕೆಂದು ಆಹ್ವಾನ ನೀಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಚಿವರ ಪುತ್ರರಾದ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ತೆಗೆದಿರುವ ವನ್ಯ ಜೀವಿ ಪ್ರಾಣಿಗಳ ಛಾಯಾಚಿತ್ರಗಳನ್ಜು ನೋಡಿ ಮೆಚ್ವುಗೆ ವ್ಯಕ್ತಪಡಿಸಿದರು. ಅವರ ಪರಿಸರ ಕಾಳಜಿ ಕೇಳಿಯೂ ಹರ್ಷ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಎಂ ಬಿ ಪಾಟೀಲ್ ಮೊದಲಿನಿಂದಲೂ ಶ್ರೀಮಠದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಬಂದಿದ್ದಾರೆ. ವಿಶೇಷವಾಗಿ ಮಠದ ಕಾಯಕ ಪರಂಪರೆ, ಶಿಕ್ಷಣ ಪ್ರಸಾರ ಮತ್ತು ಅನ್ನ ದಾಸೋಹಗಳನ್ನು ಸಚಿವರು ಮೆಚ್ಚಿಕೊಂಡಿರುವುದನ್ನು ಇಲ್ಲಿ ನೆನೆಯಬಹುದು.
ಏತನ್ಮಧ್ಯೆ ಸಚಿವರ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ಲಗ್ಗೆ ಇಟ್ಟಿದ್ದರು. ಅದರಲ್ಲೂ ಸಚಿವರು ತವರು ಜಿಲ್ಲೆ ವಿಜಯಪುರದಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿಗೆ ಬಂದಿಳಿದ್ದಿದ್ದು ಎದ್ದು ಕಾಣುತ್ತಿತ್ತು. ಸಚಿವರು ತಮ್ಮ ತವರಿನ ಜನರ ಜತೆ ಲವಲವಿಕೆಯಿಂದ ಓಡಾಡುತ್ತ, ಕೈ ಕುಲುಕುತ್ತ, ಅವರಿಗೆ ಆತಿಥ್ಯ ನೀಡುತ್ತ ಚಟವಟಿಕೆಯಿಂದಿದ್ದರು.
ಹರಿಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಸಚಿವ ಎಂ.ಬಿ.ಪಾಟೀಲ್ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ್ ಇದ್ದರು.






