ಬೆಂಗಳೂರು : ಕ್ಷಮಿಸಿ ಅಪ್ಪ-ಅಮ್ಮ.. ನಿಮ್ಮ ಮಗಳು ಚೆನ್ನಾಗಿ ಓದಿ, ಕಷ್ಟಪಟ್ಟು ದೊಡ್ಡ ವೈದ್ಯೆಯಾಗುತ್ತಾಳೆ ಎಂಬ ಅಪಾರ ನಂಬಿಕೆ ನಿಮ್ಮಲ್ಲಿ ಬಲವಾಗಿತ್ತು. ಆದರೆ, ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯ ನನಗಿಲ್ಲ. ನನ್ನ ಮೊದಲ ಪ್ರಯತ್ನದಲ್ಲಿಯೇ ನನಗೆ ಉತ್ತಮ ಅಂಕಗಳು ದಕ್ಕುತ್ತಿದ್ದವು. ಆದರೆ ಈಗ, ನಾನು ಮತ್ತೆ ಅದೇ ರೀತಿ ಉತ್ತಮ ಸಾಧನೆ ಮಾಡುತ್ತೇನೆ ಎಂಬುದಕ್ಕೆ ಗ್ಯಾರಂಟಿ ನೀಡಲು ಆಗುತ್ತಿಲ್ಲ. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ, ನಾನು ಎಲ್ಲವನ್ನೂ ಹಾಳು ಮಾಡಿದೆ ಹೀಗಂತಾ ಕಲ್ಲು ಹೃದಯಗಳು ಕರಗುವಂತೆ ಡೆತ್ ನೋಟ್ ಬರೆದಿಟ್ಟು ನೀಟ್ ಪರೀಕ್ಷೆ ಬರೆದ ಸಂತಸದಲ್ಲಿದ್ದ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿದ್ದಾಳೆ.
ಈ ಮೂಲಕ ಕಡು ಬಡತನದ ಬೇಗೆಯಿಂದ ಕುಟುಂಬವನ್ನು ಮೇಲೆತ್ತಬೇಕು ಎಂಬ ಕನಸು ಹೊತ್ತಿದ್ದ ಆಕಾಂಕ್ಷಾ ಚತುರ್ವೇದಿ ಎಂಬ 18 ವರ್ಷದ ನೀಟ್ ಆಕಾಂಕ್ಷಿಯ ಜೀವನ ಘೋರ ಅಂತ್ಯ ಕಂಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ಬಗ್ಗೆ ತಲೆಕೆಡಿಸಿಕೊಂಡು ತೀವ್ರ ಖಿನ್ನತೆಗೆ ಒಳಗಾಗಿದ್ದ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಈ ವಿದ್ಯಾರ್ಥಿನಿ ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿ ಜೀವನಯಾನವನ್ನೇ ಮುಗಿಸಿದ್ದಾಳೆ.
ದೇಶಾದ್ಯಂತ ನೀಟ್ ಪಶ್ನೆ ಪತ್ರಿಕೆ ಸೋರಿಕೆಯಾಗಿ ಈಗಾಗಲೇ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳು ಮುಂದುವರೆದಿವೆ. ಈ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪ್ರತಿಭಟನೆ, ಒತಾಯಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದೆ.
ಇನ್ನೂ ವಿದ್ಯಾರ್ಥಿನಿ ಆಕಾಂಕ್ಷಾ ಆತ್ಯಹತ್ಯೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕಾಂಕ್ಷಾ ವೈದ್ಯೆಯಾಗುವ ಮೂಲಕ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸಿದ್ದರು. ಆಕಾಂಕ್ಷಾಳ ತಂದೆ ರೈತ. ಮಗಳ ವೈದ್ಯೆಯಾಗುವ ಕನಸನ್ನು ನನಸಾಗಿಸಲು, ಅವರು ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ 3 ಲಕ್ಷ ಸಾಲ ಪಡೆದಿದ್ದರು. ಮಗಳು ಕೋಚಿಂಗ್ ತರಗತಿಗಳಿಗೆ ಹಾಜರಾಗಲು ನಾಗ್ಪುರದಲ್ಲಿ ಅಡುಗೆಯವರ ಕೆಲಸವನ್ನೂ ಮಾಡಿದ್ದಳು ಆದರೆ ಒಬ್ಬ ತಂದೆ ತನ್ನ ಕೈಲಾದಷ್ಟು ಮಾಡಿದರು. ನಂತರ ನೀಟ್ ಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆ ರದ್ದಾಯಿತು. ಆ ಅನಿಶ್ಚಿತತೆಯಲ್ಲಿ, ಆಕಾಂಕ್ಷಾ ನಮ್ಮನ್ನು ಬಿಟ್ಟು ಹೋದರು ಎಂದು ರಾಹುಲ್ ಗಾಂಧಿ ಭಾವುಕರಾಗಿದ್ದಾರೆ.
ಆಕಾಂಕ್ಷಾಳ ಸಾವು ಆತ್ಮಹತ್ಯೆಯಲ್ಲ – ಇದು ಮೋದಿಜಿಯ ಭ್ರಷ್ಟ, ವ್ಯವಸ್ಥೆಯ ಪರಿಣಾಮ. ಅಲ್ಲದೆ ಧರ್ಮೇಂದ್ರ ಪ್ರಧಾನ್? ಅವರು ಇನ್ನೂ ಅಧಿಕಾರದಲ್ಲಿದ್ದಾರೆ. ಅದೇ ಸಮಿತಿ. ಅದೇ ವರ್ಗಾವಣೆಗಳು. ಅದೇ ತನಿಖೆಗಳು. ಯಾವುದೇ ಸುಧಾರಣೆಗಳಿಲ್ಲ, ನ್ಯಾಯವಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮೋದಿ ನಿಮಗೆ ಹುದ್ದೆಗಳು ಶಾಶ್ವತವಲ್ಲ – ಅವು ಬರುತ್ತವೆ, ಹೋಗುತ್ತವೆ. ಆದರೆ ನೀವು 12 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಹಾಳು ಮಾಡಿದ್ದೀರಿ ಎಂಬುದಕ್ಕೆ ಭಾರತದ ಇಡೀ ಯುವ ಪೀಳಿಗೆ ಬೆಲೆ ತೆರುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.






