ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿಕೆ ಶಿವಕುಮಾರ್ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಪ್ರಬಲ ಖಾತೆಗಳಲ್ಲಿ ಒಂದಾಗಿರುವ ಬೆಂಗಳೂರು ನಗರಾಭಿವೃದ್ದಿ ಮೇಲೆ ಇಬ್ಬರು ಸಚಿವರ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ.

ಹೀಗಾಗಿ ಈ ವಿಚಾರ ಇದೀಗ ಡಿಕೆ ಶಿವಕುಮಾರ್ ಅವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಹೊಸ ಕಗ್ಗಂಟು ಎದುರಾಗಿದೆ. ಹಿರಿಯ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ದಿ ಖಾತೆಯ ಮೇಲೆ ಹೆಚ್ಚಿನ ಒಲವು ಇದ್ದರೂ ಸಹ ಅದು ಅವರಿಗೆ ದಕ್ಕುವ ಸಾಧ್ಯತೆಗಳಿಲ್ಲ. ಸದ್ಯ ಮಾಜಿ ಸಚಿವ ಕೃಷ್ಣಭೈರೇಗೌಡ, ಕೆ.ಜೆ. ಜಾರ್ಜ್ ಹಾಗೂ ರಾಮಲಿಂಗಾ ರೆಡ್ಡಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಇನ್ನೂ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಇದೇ ಖಾತೆಯ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಆಗಲೂ ಅಸಮಾಧಾನ ಹೊರಹಾಕಿದ್ದರು. ಆದರೆ ಖುದ್ದು ಅಂದಿನ ಡಿಸಿಎಂ ಡಿಕೆ ಶಿವಕುಮಾರ್ ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಮನವೊಲಿಸಿದ್ದರು. ಅಲ್ಲದೆ ಮುಂದಿನ ಬಾರಿ ನಿಮಗೆ ಈ ಖಾತೆಯನ್ನು ಬಿಟ್ಟುಕೊಡುವುದಾಗಿ ಮಾತು ಕೊಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಸಚಿವ ಎಂ ಬಿ ಪಾಟೀಲ್ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ : ಕೈ ಹಿರಿಯ ನಾಯಕನಿಗೆ ಆಶೀರ್ವಾದ..!
ಈ ಕಾರಣಕ್ಕಾಗಿಯೇ ಇದೀಗ ರಾಮಲಿಂಗಾರೆಡ್ಡಿ ಕೊಟ್ಟ ಮಾತನ್ನು ನೆನಪಿಸಿಕೊಂಡು ಬೆಂಗಳೂರು ನಗರಾಭಿವೃದ್ದಿ ಖಾತೆಗಾಗಿ ಹಠ ಹಿಡಿದಿದ್ದಾರೆ. ಇನ್ನೂ ಈ ಬಗ್ಗೆ ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಖಾತೆ ಹಂಚಿಕೆ ವಿಚಾರದ ಚರ್ಚೆಯಾಗಿದ್ದು, ಇದರಲ್ಲಿ ಬೇಸರಗೊಂಡು ಸಭೆಯಿಂದ ಅರ್ಧಕ್ಕೆ ರಾಮಲಿಂಗಾರೆಡ್ಡಿ ಎದ್ದು ಹೊರನಡೆದಿದ್ದಾರೆ.
ನನಗೆ ಕೊಡುವುದಾದರೆ ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನು ನೀಡಬೇಕು. ಈ ಬಗ್ಗೆ ಮೂರು ವರ್ಷಗಳ ಹಿಂದೆಯೇ ಹೇಳಿದ್ದರು ಎಂದು ರಾಮಲಿಂಗಾರೆಡ್ಡಿ ಬೇಸರ ಹೊರಹಾಕಿದ್ದಾರೆ. ಅಲ್ಲದೆ ಬೇಕಾದ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆಯ ನೀಡುವ ಮಾತುಗಳನ್ನಾಡಿದ್ದಾರೆ.
ಆದರೆ ಪ್ರಮಾಣ ವಚನ ಸ್ವೀಕರಿಸಿದ ಒಂದೇ ದಿನದಲ್ಲಿ ಒಬ್ಬ ಹಿರಿಯ ನಾಯಕರಾಗಿ ರಾಮಲಿಂಗಾರೆಡ್ಡಿಯವರು ರಾಜೀನಾಮೆಯ ಬಗ್ಗೆ ಮಾತನಾಡುತ್ತಿರುವುದು ಎಷ್ಟು ಸರಿ? ಯಾವುದೇ ಖಾತೆಯಾದರೂ ಸಹ ಅದಕ್ಕೆ ತನ್ನದೆ ಆದ ಒಂದು ಗೌರವ ಇದ್ದೇ ಇರುತ್ತದೆ. ಆದರೆ ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಹಗ್ಗ – ಜಗ್ಗಾಟ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.






