ಬೆಂಗಳೂರು : ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ನಮ್ಮ ಸರ್ಕಾರದಲ್ಲಿ ಅನಿವಾಸಿ ಭಾರತೀಯರ (ಎನ್ಆರ್ ಐ) ಸಚಿವಾಲಯ ತೆರೆಯಲು ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಎನ್ಆರ್ ಐಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಸಚಿವಾಲಯ ಸಹಾಯವಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಖಾತೆಗಾಗಿ ಪಟ್ಟು ಹಿಡಿದ “ಕೈ” ಹಿರಿಯ ಸಚಿವ : ಆರಂಭದಲ್ಲೇ ಸಿಎಂ ಡಿಕೆಶಿಗೆ ಹೊಸಟೆನ್ಷನ್..!
ಸಾರ್ವಜನಿಕರ ಕುಂದುಕೊರತೆಯ ಸಚಿವಾಲಯ ಆರಂಭಿಸಿ, ಜನರ ಅರ್ಜಿ, ವಿಚಾರಧಾರೆ, ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರ ನೇಮಕ ಮಾಡಲಾಗುವುದು. ಪ್ರತಿ ನಿತ್ಯ ವಿವಿಧ ತಂಡಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ವಿಚಾರ ಆಲಿಸಿ, ಸ್ಪಂದಿಸಲು ಸರ್ಕಾರ ಮುಂದಾಗಿದೆ ಎಂದು ಭರವಸೆ ನೀಡಿದ್ದಾರೆ.
ಒತ್ತಡಕ್ಕೆ ಮಣಿಯದೇ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ….
ರಾಜ್ಯದ ಅಧಿಕಾರಿಗಳನ್ನು ಕರೆಸಿ ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಿದೆ ಎಂದು ಸಂದೇಶ ನೀಡಿದ್ದೇವೆ. ಮೊದಲ ದಿನ ನಾವು ಅವರಿಂದ ಏನು ನಿರೀಕ್ಷೆ ಮಾಡಿದ್ದೇವೆ, ನಮ್ಮಿಂದ ಅವರ ನಿರೀಕ್ಷೆಗಳೇನು ಎಂದು ಚರ್ಚೆ ಮಾಡಲಾಗಿದೆ. ನಮ್ಮ ಸರ್ಕಾರ ಜಾತಿ, ಧರ್ಮ, ಪ್ರಭಾವಕ್ಕೆ ಮಣಿಯುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.
ಯಾವ ಅಧಿಕಾರಿಗಳು ಇದಕ್ಕೆ ಮಣಿಯಬಾರದು. ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದೇವೆ. ಪಾರದರ್ಶಕತೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಜನರ ಭಾವನೆಗೆ ತಕ್ಕಂತೆ, ಜನರ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. 15 ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿನ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದ್ದಾರೆ.
ಕೆಲಸದ ವಿಚಾರದಲ್ಲಿ ಎಲ್ಲರೂ ಹೊಣೆಗಾರರಾಗಿರಬೇಕು. ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ನಮ್ಮಲ್ಲಿ ಸಾಮಾನ್ಯ ಪ್ರಜ್ಞೆ ಇರಬೇಕು. ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರ ಇರುತ್ತದೆ, ಸಕಾರಾತ್ಮಕ ಮನೋಭಾವ ಇರಬೇಕು ಎಂದು ಅಧಿಕಾರಿಗಳಿಗೆ ಜವಾಬ್ದಾರಿಯ ಪಾಠ ಮಾಡಿದ್ದಾರೆ.
ನಿನ್ನೆ ನಾವು ಕೈಗೊಂಡಿರುವ ಆರು ತೀರ್ಮಾನಗಳ ಬಗ್ಗೆ ವರದಿ ಕೇಳಿದ್ದು, ಈ ತೀರ್ಮಾನಗಳನ್ನು ಜಾರಿಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಯಾವ ಸಂಸ್ಥೆ ಯಾವ ಉದ್ದೇಶಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಸಿಎಸ್ ಆರ್ ನಿಧಿ ಬಳಕೆಯಾಗುತ್ತಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಾವು ಈಗಾಗಲೇ ಸಿಎಸ್ಆರ್ ನಿಧಿಯಲ್ಲಿ ಪ್ರತಿ ಮೂರು ಗ್ರಾಮ ಪಂಚಾಯ್ತಿಗೆ ಒಂದರಂತೆ ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಕೂಡ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಕ್ಷೇತ್ರಕ್ಕೆ ನಿಮ್ಮ ಸಿಎಸ್ಆರ್ ನಿಧಿ ಬಳಸಿ ಎಂದು ಮನವಿ ಮಾಡಿ ಪತ್ರ ಬರೆಯಲಾಗುವುದು. ಮುಂದಿನ ಐದಾರು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡಲಾಗುವುದು. ಪ್ರಾಥಮಿಕ ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಈ ನಿಧಿ ಬಳಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಿಸಿದ್ದಾರೆ.
ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸೂಚನೆ..
ಪೊಲೀಸರು ಪ್ರತಿ ತಾಲ್ಲೂಕಿನಲ್ಲಿ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ರಚಿಸಬೇಕು. ಇವರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಹಳೇ ರೌಡಿಗಳು ಹಾಗೂ ಹೊಸದಾಗಿ ಹುಟ್ಟಿಕೊಳ್ಳುವ ರೌಡಿಗಳ ಮೇಲೆ ನಿಗಾ ಇಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಸಕಾಲ ವಿಚಾರದಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಕರ್ನಾಟಕ ಭವನ ಕಾರ್ಯಾಚರಣೆಯಲ್ಲಿ ನನಗೆ ತೃಪ್ತಿಯಿಲ್ಲ. ಹೀಗಾಗಿ ನಾನು ದೆಹಲಿಗೆ ಹೋಗಿ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆ ಮಾಡಿ ಕೆಲವು ವಿಭಾಗಗಳನ್ನು ರಚಿಸಲಾಗುವುದು. ದೆಹಲಿಯಲ್ಲಿರುವ ನಮ್ಮ ರಾಜ್ಯದ ಅಧಿಕಾರಿಗಳು, ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಹದಿನೈದು ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. 56 ಸಾವಿರ ಹುದ್ದೆಗಳ ಭರ್ತಿಗೆ ಸಮಯ ನಿಗದಿ ಮಾಡಲಾಗುವುದು. ಜೊತೆಗೆ ದಿನಾಂಕವನ್ನು ತಿಳಿಸಲಾಗುವುದು. ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ಸ್ಥಾಪಿಸಲಾಗುವುದು. ಎಲ್ಲಾ ಖಾಸಗಿ, ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ, ಯುವಕರಿಗೆ ಕೆಲಸ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಅಭಯ ನೀಡಿದ್ದಾರೆ.






