ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮಗ ಇಶಾನ್ ತರೂರ್ ಈಗ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್! ರಾಜಕಾರಣಿಯ ಮಗನಿಗೆ ಏನು ಸಮಸ್ಯೆ ಎಂದು ಮೂಗು ಮುರಿಯುವವರ ಎದುರು ಇಶಾನ್ ತರೂರ್ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಏನದು ಸಮಸ್ಯೆ?

ಎಲ್ಲೆಡೆ ಜನರನ್ನು ಸಂಸ್ಥೆಗಳು ಕೆಲಸದಿಂದ ವಜಾಗೊಳಿಸುತ್ತಿವೆ. ಇದಕ್ಕೆ ರಾಜಕಾರಣಿಯ ಮಗ ಕೂಡ ಹೊರತಾಗಿಲ್ಲ.ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನನ್ನ ಹೃದಯ ಒಡೆದುಹೋಗಿದೆ” ಎಂದು ಭಾವುಕರಾಗಿ ಸಾಮಾಜಿಕ ಮಾದ್ಯಮದಲ್ಲಿ ಇಶಾನ್ ತರೂರ್ ಹೇಳಿದ್ದಾರೆ.

ನಾನು ಜನವರಿ 2017ರಲ್ಲಿ ವರ್ಲ್ಡ್‌ವ್ಯೂ ಅಂಕಣವನ್ನು ಪ್ರಾರಂಭಿಸಿದೆ. ವಾರಕ್ಕೆ ಹಲವಾರು ಬಾರಿ ಈ ಅಂಕಣವನ್ನು ಪತ್ರಿಕೆಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ಓದುತ್ತಿದ್ದ ನನ್ನ ಅರ್ಧ ಮಿಲಿಯನ್ ನಿಷ್ಠಾವಂತ ಚಂದಾದಾರರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಇಶಾನ್ ತರೂರ್ ಹೇಳಿದ್ದಾರೆ.

ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂದೆ ಶಶಿ ತರೂರ್‌ಗೆ ಇಶಾನ್ ತರೂರ್ ಪ್ರಶ್ನೆ ಕೇಳಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈಗ ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.
ಜೊತೆಗೆ ಹೆಚ್ಚಿನ ಅಂತಾರಾಷ್ಟ್ರೀಯ ಸಿಬ್ಬಂದಿ ಮತ್ತು ಇತರ ಅನೇಕ ಸಹೋದ್ಯೋಗಿಗಳು ಕೂಡ ಕೆಲಸ ಕಳೆದುಕೊಂಡಿದ್ದಾರೆ






