ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಇರಾನ್ ಹೊಸ ಬಹುಪದರ ಶಾಂತಿ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಕುರಿತು ಬೆಳವಣಿಗೆಗಳಿಗೆ ಪರಿಚಿತರಾದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಹೊಸ ಪ್ರಸ್ತಾವನೆಯು ತಕ್ಷಣದ ಸಂಘರ್ಷ ನಿವಾರಣೆಗೆ ಒತ್ತು ನೀಡುತ್ತಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮದಂತಹ ಸಂಕೀರ್ಣ ವಿಷಯಗಳನ್ನು ಹಂತ ಹಂತವಾಗಿ ಮುಂದಿನ ಚರ್ಚೆಗೆ ಒಳಪಡಿಸುವ ರೂಪರೇಖೆಯನ್ನು ಹೊಂದಿದೆ. ಪ್ರಸ್ತುತ ಉದ್ವಿಗ್ನತೆಯನ್ನು ಶಮನಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಅಮೆರಿಕಾ ತನ್ನ ಸೈನಿಕ ಒತ್ತಡವನ್ನು ಕಡಿಮೆ ಮಾಡಿ, ಇರಾನ್‌ನ ತೈಲ ರಫ್ತಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿದರೆ ಹಾರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆಯನ್ನು ತಗ್ಗಿಸಲು ಸಿದ್ಧವಿರುವುದಾಗಿ ಇರಾನ್ ಸೂಚಿಸಿದೆ. ಜೊತೆಗೆ, ನೇರ ಮಾತುಕತೆಗೆ ಮುನ್ನ ಪರಸ್ಪರ ವಿಶ್ವಾಸ ನಿರ್ಮಾಣ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದೆ.ಇರಾನ್ ತನ್ನ ಶಾಂತಿಯುತ ಪರಮಾಣು ಶಕ್ತಿ ಹಕ್ಕನ್ನು ಪುನರುಚ್ಚರಿಸಿ, ಯುರೇನಿಯಂ ಸಂವರ್ಧನೆ ಮಿತಿ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗಳ ಬಗ್ಗೆ ಚರ್ಚೆಗೆ ಸಿದ್ಧತೆ ವ್ಯಕ್ತಪಡಿಸಿದೆ. ಆದರೆ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು ಎಂಬುದರಲ್ಲಿ ಅದು ಪಟ್ಟು ಹಿಡಿದಿದೆ.

ಯಾವುದೇ ಒಪ್ಪಂದ ದೀರ್ಘಕಾಲಿಕವಾಗಿರಬೇಕು ಹಾಗೂ ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳಲು ಅವಕಾಶ ಇರಬಾರದು ಎಂದು ಇರಾನ್ ಒತ್ತಾಯಿಸಿದೆ. ಜೊತೆಗೆ ತನ್ನ ಪರಮಾಣು ಹಕ್ಕುಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ಮತ್ತು ಭದ್ರತಾ ಭರವಸೆ ನೀಡಬೇಕು ಎಂದು ಕೂಡ ಬೇಡಿಕೆ ಇಟ್ಟಿದೆ.ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕಾ ಅಧ್ಯಕ್ಷ Donald Trump, ಇರಾನ್ ನೀಡಿರುವ ಹೊಸ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರೂ, ಅದು ಅಂತಿಮ ಒಪ್ಪಂದಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.
ಇರಾನ್ 14 ಅಂಶಗಳ ಪ್ರಸ್ತಾಪವನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದ್ದು, ಇದು ಅಮೆರಿಕದ 9 ಅಂಶಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ವರದಿಯಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಹೊಸ ಯೋಜನೆಗಳನ್ನೂ ಪರಿಗಣಿಸಲಾಗುತ್ತಿದೆ.ಇದನ್ನೊಟ್ಟಿಗೆ, ಮಾತುಕತೆ ಪ್ರಕ್ರಿಯೆಯನ್ನು ಬಲಪಡಿಸಲು ರಾಜತಾಂತ್ರಿಕ ತಂಡಕ್ಕೆ ನಿಕ್ ಸ್ಟಿವರ್ಟ್ ಅವರನ್ನು ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಅವರು ಇರಾನ್ ಸಂಬಂಧಿತ ವಿಚಾರಗಳಲ್ಲಿ ಅನುಭವ ಹೊಂದಿರುವ ನೀತಿ ತಜ್ಞರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.






