ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರಕ್ಕೆ ಕ್ರೆಡಿಟ್ ವಾರ್ ನಡೆಯುತ್ತಿದೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಕಚೇರಿ ಇರುವ ಜಾಗ ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಹೆಸರಲ್ಲಿತ್ತು. ಬಿ. ಶಂಕರಾನಂದ ಮಕ್ಕಳ ಆ ಜಾಗವನ್ನು ಕಚೇರಿಗೆ ಬಿಟ್ಟು ಕೊಡಲು ಮನವೊಲಿಸಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಟ್ಟಡಕ್ಕೆ ಜಾಗ ಮಂಜೂರು ಮಾಡಿಸಲಾಯಿತು. ಆ ಜಾಗವನ್ನು ಫ್ರೀ ಆಗಿ ಕೊಡಬಹುದಿತ್ತು, ಆದ್ರೆ ಆ ಜಾಗಕ್ಕೆ 54 ಲಕ್ಷ ರೂಪಾಯಿ ನಿಗದಿ ಮಾಡಿದ್ರು. ಈ ಹಣ ಕಡಿಮೆ ಮಾಡಲು ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ ಎಂದಿದ್ದಾರೆ.
ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಆ ಹಣ ತುಂಬಲು ಮನವಿ ಮಾಡಿದ್ರು. ಒಂದೇ ಹಂತದಲ್ಲಿ ಕಾಂಗ್ರೆಸ್ ಕಚೇರಿಗೆ 54 ಲಕ್ಷ ರೂಪಾಯಿ ಕಟ್ಟಬೇಕಿತ್ತು. ಅದು ಬಹಳ ಆಗುತ್ತದೆ, ಎರಡು ಹಂತದಲ್ಲಿ ಹಣ ಪಾವತಿಗೆ ಮನವಿ ಮಾಡಿದೆ. ಎರಡು ಕಂತುಗಳಲ್ಲಿ ಹಣ ಪಾವತಿಗೆ ಮನವಿ ಮಾಡಿದೆ. ಬಳಿಕ ಮೊದಲ ಕಂತು 27 ಲಕ್ಷ ಹಣವನ್ನು ನಾನು ತುಂಬಿದೆ. ಜಾಗ ಖರೀದಿ ಆಯಿತು, ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಕೊಟ್ಟೆ. ಒಟ್ಟು ಒಂದು ಕೋಟಿ 27 ಲಕ್ಷ ರೂಪಾಯಿ ನಾನು ಸ್ವಂತ ಹಣದಲ್ಲಿ ಕೊಟ್ಟಿದ್ದೀನಿ. ಆದರೂ ಕಟ್ಟಡ ನಿರ್ಮಾಣದಲ್ಲಿ ಗೋಲ್ಮಾಲ್ ಆಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳ್ತೀನಿ ಎಂದಿದ್ದಾರೆ.
ಕಾಂಗ್ರೆಸ್ ಕಚೇರಿಯನ್ನು ನಾನೇ ನಿರ್ಮಾಣ ಮಾಡಿದ್ದು ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿರೋದು ತಪ್ಪು. ಆಗ ಇದ್ದಂತಹ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು 20 ರಿಂದ 25 ಲಕ್ಷ ಹಣ ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದಿದ್ದಾರೆ ರಮೇಶ್ ಜಾರಕಿಹೊಳಿ.
ಇನ್ನು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ ಶಿವಕುಮಾರ್ ಹಸ್ತಕ್ಷೇಪ ವಿಚಾರದ ಬಗ್ಗೆ ಮಾತನಾಡಿ, ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ, ಆ ಬಗ್ಗೆ ನನಗೆ ಸಂಬಂಧ ಇಲ್ಲ. ನಾನು ಬಿಜೆಪಿ ನಿಷ್ಠಾವಂತ ಶಾಸಕ, ಕಾರ್ಯಕರ್ತ ಆಗಿದ್ದೇನೆ. ಆ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ದೊಡ್ಡದಿತ್ತು ಎಂಬುದು ನಿಜ. ಇಂದು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣ ಆಗಲು ಜಾಗ ಕೊಡಿಸಲು ನಾನು ಓಡಾಡಿದ್ದೇನೆ.
ಬೆಳಗಾವಿ ರಾಜಕಾರಣದಿಂದ ಸರ್ಕಾರ ಪತನ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಆ ಕ್ಲೈಮ್ಯಾಕ್ಸ್ ಹಂತ ಬಂದಿದ್ದು ನಿಜ, ಈಗ ಸ್ಟಾರ್ಟ್ ಆಗಿದೆ. ಸಿಎಂ ಸಿದ್ದರಾಮಯ್ಯರನ್ನು ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಅನೇಕ ನಾಯಕರು ಬೆಳಗಾವಿಯಿಂದ ಸ್ಟಾರ್ಟ್ ಆಗಿದೆ ನೋಡಿ ಎಂದು ನಾಯಕರು ಹೇಳಿದ್ದಾರೆ. ಆಗಲೂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಲಿಲ್ಲ, ಹಾಗಾಗಿ ಆಗಿನ ಸರ್ಕಾರ ಬಿತ್ತು. ಈಗಲೂ ಎಚ್ಚರಿಕೆ ವಹಿಸದಿದ್ದರೇ ಸರ್ಕಾರ ಪತನಕ್ಕೆ ಸಿಎಂ ಕಾರಣರಾಗಲಿದ್ದಾರೆ. ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿರಬಾರದು. ಸತೀಶ್ ಉಗ್ರವಾದರೆ ಸರ್ಕಾರಕ್ಕೆ ಉಳಿಗಾಲವಿದೆ, ಇಲ್ಲವಾದ್ರೆ ಅವರನ್ನು ಅಲ್ಲಿ ಮುಗಿಸುತ್ತಾರೆ.