
ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು ಸಭೆಯಲ್ಲಿ ಪಕ್ಷದ ಆಂತರಿಕ ಕಲಹ ಸರಿಪಡಿಸಲು ಕೆಲವು ಶಾಸಕರು ಒತ್ತಾಯ ಮಾಡಿದ್ದಾರೆ. ದಿನಾ ಬೆಳಗಾದರೇ ಇವರದ್ದೇ ಕಿತ್ತಾಟ, ಬಹಿರಂಗ ಹೇಳಿಕೆ ನೋಡಬೇಕು ನಾವು. ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ, ನಮಗೂ ಕ್ಷೇತ್ರದಲ್ಲಿ ಮುಜುಗರ ಆಗ್ತಿದೆ. ಕಾಂಗ್ರೆಸ್ ಅವರೂ ಕಾಲೆಳೀತಿದ್ದಾರೆ. ನಿಮ್ಮನೆ ಕತೆ ಇಷ್ಟೇ ಅಂತ ಲೇವಡಿ ಮಾಡ್ತಾರೆ. ನಮಗೂ ಬಣ ಕಚ್ಚಾಟ ಸಾಕು ಸಾಕಾಗಿದೆ, ಮೊದಲು ಪರಿಸ್ಥಿತಿ ಸರಿಪಡಿಸಿ ಅಂತ ಶಾಸಕರು ಒತ್ತಾಯ ಮಾಡಿದ್ದಾರೆ.
ಅಧ್ಯಕ್ಷರ ಆಯ್ಕೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಆದ್ರೆ ಬಹಿರಂಗ ಕಿತ್ತಾಟ, ಗುಂಪುಗಾರಿಕೆಯಿಂದ ಪಕ್ಷ ಸೊರಗ್ತಿದೆ. ಮೊದಲು ಭಿನ್ನಮತ ನಿಲ್ಲಬೇಕು, ಇದನ್ನು ಆದ್ಯತೆಯಾಗಿ ನೋಡಿ ಎಂದು ಒತ್ತಾಯಿಸಿದ ಕೆಲವು ಶಾಸಕರು ಆ ಬಳಿಕ ಮಾಧ್ಯಮಗಳ ಎದುರು ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ರೆಬೆಲ್ ಗುಂಪಿನ ಶಾಸಕ ಬಿ.ಪಿ ಹರೀಶ್, ರೇಣುಕಚಾರ್ಯ ಹೆಸರು ಹೇಳೋದಕ್ಕೂ ನನಗೆ ಅಸಹ್ಯ ಆಗುತ್ತೆ. ದಾವಣಗೆರೆ ಜಿಲ್ಲೆಯ ಮಂತ್ರಿ ಜೊತೆ ಸೇರಿಕೊಂಡು, ದಾವಣಗೆರೆ ಬಿಜೆಪಿ ಅಭ್ಯರ್ಥಿ ಸೋಲಿಸಿದವನು ಆತ. ಮೂವರು ಮಾಜಿ ಶಾಸಕರುಗಳು ಸೇರಿಕೊಂಡು ಸೋಲಿಸಿದ್ದಾರೆ. ಯಡಿಯೂರಪ್ಪ, ರಾಜ್ಯಾಧ್ಯಕ್ಷರ ಪರ ಎಂದು ಹೇಳಿಕೊಳ್ತಿರೋ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದೇನೆ ಎಂದಿದ್ದಾರೆ.

ಯಾರು ಪಕ್ಷ ವಿರೋಧಿ ಗಳು ಎಂದು ಇಂಟಲಿಜೆನ್ಸಿ ಮಾಹಿತಿ ಇರುತ್ತದೆ. ಆ ವರದಿಯನ್ನು ಪರಿಶೀಲಿಸಿ ಕ್ರಮ ಆಗಲೇಬೇಕು. ಈ ಬಗ್ಗೆ ರಾಧಾ ಮೋಹನ್ ದಾಸ್ ಅಗರ್ ವಾಲರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಪಕ್ಷದಲ್ಲಿ ಆಗುತ್ತಿರುವ ಗೊಂದಲ ಸರಿಪಡಿಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಕ್ರಮ ಆಗಬೇಕೆಂದು ಒತ್ತಾಯ ಮಾಡಿದ್ದಾರೆ.
ಇನ್ನೂ ಶಾಸಕರುಗಳು ಏನಾದರೂ ಹೇಳೋದು ಇದ್ದರೆ ಪ್ರತ್ಯೇಕವಾಗಿ ಬಂದು ಭೇಟಿ ಮಾಡಿ ಎಂದು ರಾಧಾ ಮೋಹನ್ ದಾಸ್ ಅಗರ್ ವಾಲ ಹೇಳಿದ್ದಾರೆ ಅಂತಾನು ತಿಳಿಸಿದ್ದಾರೆ. ಒಟ್ಟಾರೆ ಬಿಜೆಪಿ ಬಂಡಾಯ ರಾಜಕೀಯ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಸೃಷ್ಟಿಸಿದೆ.