ದಶಕಗಳಿಂದ ಉಗ್ರಗಾಮಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಪಶ್ಚಿಮ ನ್ಯೂಯಾರ್ಕ್‌ನಲ್ಲಿ 15 ರಿಂದ 20 ಬಾರಿ ಚೂರಿಯಿಂದ ಇರಿಯಲಾಗಿದೆ. ನಿಗದಿಯಾಗಿದ್ದ ಉಪನ್ಯಾಸದ ವೇದಿಕೆ ಮೇಲೆಯೇ ಚಾಕು ಇರಿತಕ್ಕೊಳಗಾಗಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೇಖಕ ಸಲ್ಮಾನ್ ರಶ್ದಿ ಆರೋಗ್ಯ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಸಲ್ಮಾನ್ ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿದ್ದು, ಅವರ ಯಕೃತ್ತಿಗೆ ಹಾನಿಯಾಗಿದೆ. ಕಣ್ಣುಗಳಿಗೆ ಗಂಭೀರ ಹಾನಿಯಾಗಿದ್ದು, ಕಣ್ಣುಗಳು ಶಾಶ್ವತವಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂಬ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಮೆರಿಕದ ಲೇಖಕ ಆಂಡ್ರ್ಯೂ ವೈಲಿ ಮಾಹಿತಿ ಹಂಚಿಕೊಂಡಿದ್ದು, ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಅವರ ತೋಳಿನ ನರಗಳು ತುಂಡಾಗಿದೆ. ಚಾಕು ಇರಿತದಿಂದಾಗಿ ಗಂಭೀರವಾಗಿ ಹಾನಿಯಾಗಿದೆ ಎಂದಿದ್ದಾರೆ.
ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆಯ ಮೇಲೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿ ರಶ್ದಿ ಅವರಿಗೆ ಚಾಕುವಿನಿಂದ ಇರಿದನು. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದರು. ಹಲ್ಲೆಕೋರನನ್ನು ಬಂಧಿಸಲಾಗಿದೆ.

ಸಲ್ಮಾನ್ ರಶ್ದಿ ಅವರು ಬರೆದಿರುವ ‘ದ ಸಟಾನಿಕ್ ವರ್ಸೆಸ್’ ಕೃತಿಯು 1988ರಲ್ಲಿ ಇರಾನ್‌ನಲ್ಲಿ ನಿಷೇಧಕ್ಕೊಳಗಾಗಿದೆ. ಹಲವು ಮುಸ್ಲಿಮರು ಈ ಕೃತಿಯಲ್ಲಿ ಧರ್ಮನಿಂದನೆಯ ಅಂಶಗಳಿವೆ ಎಂದು ಆರೋಪಿಸಿದ್ದರು. ರಶ್ದಿ ಅವರ ಹತ್ಯೆಗೆ ಆಗ ಫತ್ವಾ ಹೊರಡಿಸಲಾಗಿತ್ತು.