ನಮ್ಮ ಬೆಂಗಳೂರಲ್ಲಿ ಮಳೆ ಬಂದ್ರೆ ತಂಪಾಗಿರುತ್ತೆ ಅಂತ ಜನ ಖುಷಿಪಡೋ ಕಾಲ ಅದ್ಯಾವಾಗ್ಲೋ ಕಳೆದುಹೋಗಿದೆ. ಸ್ವಲ್ಪ ಮಳೆ ಬಂದ್ರೂ ಸಾಕು ಮನೆಯಲ್ಲಿರೋರಿಂದ ಹಿಡಿದು ಬೀದಿಯಲ್ಲಿರೋರಿಗೂ ಚಿಂತೆ ಶುರುವಾಗುತ್ತೆ. ಮನೆಯಲ್ಲಿರೋರಿಗೆ ರಾಜಕಾಲುವೆ ಉಕ್ಕಿ ಹರಿದು ಮನೆಗೆ ನೀರು ಬರೋ ಟೆನ್ಷನ್ ಆದ್ರೆ ರಸ್ತೆಯಲ್ಲಿರೋರಿಗೆ ಗುಂಡಿಗಳ ಮಧ್ಯೆ ಗಾಡಿ ಹೇಗೆ ಓಡಿಸೋದು ಅಂತ ಟೆನ್ಷನ್ ಶುರವಾಗುತ್ತೆ. ಇಷ್ಟು ಸಾಲದು ಅಂತ ಮಳೆಯಿಂದ ರಕ್ಷಣೆ ತಗೊಳೋಣ ಅಂತ ಯಾವ್ದಾದ್ರೂ ಮರವೋ ಬಸ್ ಸ್ಟಾಂಡ್‌ನಲ್ಲಿ ನಿಂತ್ರೆ, ಅವುಗಳು ಯಾವಾಗ ಬೀಳುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಇವೆಲ್ಲವನ್ನೂ ಮೀರಿಸುತ್ತಿರೋದು ಮಳೆಗಾಲದಲ್ಲಿ ನೆಲಕ್ಕುರುಳುತ್ತಿರೋ ಬಿಲ್ಡಿಂಗ್‌ಗಳು.
ಶಿಥಿಲಾವಸ್ಥೆ ಬಿಲ್ಡಿಂಗ್‌ಗಳ ಸರ್ವೇ ನಡೆಸಿ ಸುಮ್ಮನಾದ ಬಿಬಿಎಂಪಿ
ಕಳೆದ ವರ್ಷದ ಮಳೆಗಾಲದಲ್ಲಿ ನಗರದಲ್ಲಿ ಏನಿಲ್ಲಾ ಅಂದ್ರೂ 3ರಿಂದ 4 ಕಟ್ಟಡಗಳು ನೆಲಕ್ಕೆ ಉರುಳಿತ್ತು. ಆಗ ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಬಿಬಿಎಂಪಿ ಸರ್ವೇ ಮಾಡ್ತೀವಿ, ಶಿಥಿಲವಾದ ಕಟ್ಟಡಗಳನ್ನು ತೆರವು ಮಾಡಿ ಅಂತ ಎಡವಟ್ಟಿಗೆ ತೇಪೆ ಹಚ್ಚಿತ್ತು. ಸರ್ವೇ ಆದ ನಂತರ ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡಲಾಗುತ್ತೆ. ಇದ್ರಿಂದ ಶಿಥಿಲಾವಸ್ಥೆಯ ವಾಸವಿರೋ ಜನರ ಜೀವ ಹಾಗು ಅಕ್ಕಪಕ್ಕಡ ಮನೆಯವರಿಗೂ ಸಮಾಧಾನವಾಗುತ್ತೆ ಎಂದಿತ್ತು. ಆದರೆ, ಆ ಹೇಳಿಕೆ ಕ್ಯಾಮರಾ ಮುಂದೆ ಮಾತ್ರ ಸೀಮಿತವಾಗಿತ್ತು ಅಂತ ಬಿಬಿಎಂಪಿ ಕ್ರಮೇಣವಾಗಿ ತನ್ನ ಕಾರ್ಯದಿಂದ ತೋರಿಸಿಕೊಟ್ಟಿದೆ. ಇನ್ನು, ನಗರದಲ್ಲಿ 2018ರಲ್ಲಿ ಹಾಗು ಕಳೆದ ವರ್ಷ ನಡೆಸಿದ ಸರ್ವೇ ಪ್ರಕಾರ ಎಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ ಎಂಬುವುದರ ಮಾಹಿತಿ ಹೀಗಿವೆ,
ವಲಯ – 2018ರ ಸರ್ವೆ – ಹೊಸ ಸರ್ವೆ
ದಕ್ಷಿಣ ವಲಯ – 33 -103
ಪಶ್ಚಿಮ ವಲಯ – 34 – 95
ಪೂರ್ವ ವಲಯ – 46 – 67
ಮಹದೇವಪುರ ವಲಯ – 3 – 24
ರಾಜ ರಾಜೇಶ್ವರಿ ನಗರ ವಲಯ – 1 – 11
ಬೊಮ್ಮನಹಳ್ಳಿ ವಲಯ – 0 – 9
ಯಲಹಂಕ ವಲಯ – 60 – 84
ದಾಸರಹಳ್ಳಿ ವಲಯ – 8 – 4
ಒಟ್ಟು ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳು – 185 – 404

ಸರ್ವೇ ನಡೆಸಿ ತಿಂಗಳುಗಳಾದ್ರೂ ಯಾವುದೇ ಕ್ರಮ ತೆಗೆದುಕೊಳ್ಳದ ಪಾಲಿಕೆ
ಆದ್ರೀಗ ದಾಖಲೆಯಲ್ಲಿರೋ ಸಂಖ್ಯೆಯನ್ನೂ ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳು ಓವರ್‌ಟೇಕ್ ಮಾಡಿ 423ಕ್ಕೆ ಏರಿಕೆಯಾಗಿದೆ. ಕಟ್ಟಡಗಳ ಅವಸ್ಥೆ ಕುರಿತು ಈ ವರ್ಷವೂ ಸರ್ವೇ ಕಾರ್ಯ ಮುಂದುವರೆದಿದೆ. ಜೂನ್ 4, 2022ರ ರಿಪೋರ್ಟ್ ಪ್ರಕಾರ ನಗರದಲ್ಲಿ ಒಟ್ಟೂ 629 ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳು ಇದೆ. ಅವುಗಳ ಪೈಕಿ 423 ಕಟ್ಟಡಗಳ ಮಾಲೀಕರಿಗೆ ಬಿಲ್ಡಿಂಗ್ ತೆರವುಗೊಳಿಸುವಂತೆ ಬಿಬಿಎಂಪಿಯಿಂದ ನೋಟೀಸ್ ನೀಡಲಾಗಿದೆ. ಜೊತೆಗೆ ಬಿಬಿಎಂಪಿ 423 ಕಟ್ಟಡಗಳ ಪೈಕಿ ಕೇವಲ 67 ಕಟ್ಟಡಗಳನ್ನು ತೆರವು ಮಾಡಿದ್ದು, ಉಳಿದದ್ದನ್ನು ತೆರವುಗೊಳಿಸಬೇಕಿದೆ. ಆದ್ರೆ ಪರಿಸ್ಥಿತಿ ಬಿಗಡಾಯಿಸುತ್ತಿದೆ ಅಂತ ಗೊತ್ತಿದ್ರೂ ತಡವಾಗ್ತಿರೋದು ಯಾವ ಕಾರಣಕ್ಕೆ ಅಂದರೆ ಬಿಬಿಎಂಪಿ ಬಳಿ ಯಾವುದೇ ಉತ್ತರವಿಲ್ಲ.
ಇವತ್ತು ಮಾಡ್ತೀವಿ, ನಾಳೆ ಮಾಡ್ತೀವಿ ಅನ್ನೋ ಛಾಳಿ ಬಿಡ್ತಿಲ್ಲ ಬಿಬಿಎಂಪಿ
ಇನ್ನು ಕಟ್ಟಡಗಳು ತೆರವಾಗದೇ ಇರೋದಕ್ಕೆ ಕಾರಣ ಸಿಬ್ಬಂದಿ ಕೊರತೆ ಅಲ್ಲ ಅಂತಾರೆ ವಿಶೇಷ ಆಯುಕ್ತರು. ಮೊದಲು ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳನ್ನು ಗುರುತಿಸಬೇಕು. ನಂತರ ತೆರವು ಮಾಡಲು ಏಜೆನ್ಸಿಗೆ ಕೆಲಸ ವಹಿಸಬೇಕು. ಆ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇವೆಲ್ಲವನ್ನೂ ಮಾಡೋದಕ್ಕೆ ವಲಯವಾರು ಸಿಇ ಹಾಗು ಇಇಗಳಿಗೆ ಸೂಚನೆ ನೀಡಿದ್ದು, ಕಟ್ಟಡ ತೆರವು ವಿಚಾರವಾಗಿ ಟೆಂಡರ್ ಆಗೋದು ಬಾಕಿಯಿದೆ. 3 ಅಂತಸ್ಥಿನ ಕಟ್ಟದ ತೆರವು ಮಾಡಬೇಕಿದ್ರೆ, ಕನಿಷ್ಟ 1.5 ಇಂದ 2 ಲಕ್ಷ ರೂಪಾಯಿ ಖರ್ಚಾಗ್ತಿದೆ. ಇಷ್ಟಲ್ಲದೆ, ಕಟ್ಟಡಗಳ ತೆರವು ಕೆಲಸ ತುರ್ತು ಕೆಲಸ ಆಗಿರೋದ್ರಿಂದ 8 ರಿಂದ 10 ದಿನಗಳಲ್ಲಿ ಮಾಡಲಾಗುತ್ತೆ. ತೆರವು ಮಾಡಲು ಏಜೆನ್ಸಿ ಫಿಕ್ಸ್ ಆಗಿಲ್ಲವಾದ್ರೆ ಕೂಡಲೇ ಏಜೆನ್ಸಿ ಫಿಕ್ಸ್ ಮಾಡಿಕೊಳ್ಳಲಾಗುತ್ತೆ. ಒಂದು ವೇಳೆ ತುರ್ತು ಪರಿಸ್ಥಿತಿತ ಸಂದರ್ಭ ಎದುರಾದ್ರೆ, ಎಸ್‌ಡಿಆರ್‌ಎಫ್ ಮಾದರಿಯಂತೆ ಬಿಬಿಎಂಪಿಯಿಂದಲೂ ತಂಡ ರಚನೆ ಮಾಡಲಾಗಿದೆ. ಅದೇನೇ ಇರಲಿ ಬಿಬಿಎಂಪಿ ಮಾಡ್ತಿರೋ ಕೆಲಸ ಅದ್ಯಾಕೋ ಜನಸಾಮಾನ್ಯರಿಗಂತೂ ತೃಪ್ತಿ ತರಿಸುತ್ತಿಲ್ಲ ಅನ್ನೋದು ಎಷ್ಟು ಸತ್ಯವೋ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅಂತ ಅವರಿಗೆ ಅರಿವಾಗಿರೋದು ಕೂಡ ಅಷ್ಟೇ ಸತ್ಯ. ಹೀಗೇ ಆದರೆ ಬೆಂಗಳೂರಲ್ಲಿ ಮಳೆಗಾಲದಲ್ಲಿ ಮಳೆಗಿಂತ ಮನೆ ಬೀಳುವುದೇ ಹೆಚ್ಚಾಗಲಿದೆ.