ಕೆಲವು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಲೋಪಗಳ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಈ ಬಾರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪದೇ ಪದೇ ಪ್ರಧಾನಿ ಮೋದಿಯನ್ನು ಬಹಿರಂಗವಾಗಿ ಟೀಕಿಸಿರುವ ಸ್ವಾಮಿ, ಈ ಬಾರಿ ಎಚ್ಚರಿಕೆಯನ್ನು ನೀಡಿದ್ದು, ಅಜಿತ್ ದೋವಲ್ ರನ್ನು ಎನ್ಎಸ್ಎ ಹುದ್ದೆಯಿಂದ ತೆರವುಗೊಳಿಸದಿದ್ದರೆ ಪ್ರಧಾನಿ ಮೋದಿ ರಾಜಿನಾಮೆ ಕೊಡಬೇಕಾದೀತು ಎಂದು ಎಚ್ಚರಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅಜಿತ್ ದೋವಲ್ ವಿರುದ್ಧ ಗಂಭೀರ ಆರೋಪ ಮಾಡಿರುವ ಸ್ವಾಮಿ, ʼಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಹಗರಣ ಸೇರಿದಂತೆ ಹಲವು ಬಾರಿ ಎಡವಟ್ಟು ಮಾಡಿದ್ದಾರೆʼ ಎಂದು ಹೇಳಿದ್ದಾರೆ.
ಅಲ್ಲದೆ, ಅಜಿತ್ ದೋವಲ್ ಮಾಡಿರುವ ಗಂಭೀರ ಯಡವಟ್ಟು ಶೀಘ್ರದಲ್ಲೇ ವಾಶಿಂಗ್ಟನ್ ಡಿಸಿಯಿಂದ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
“ಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಒಳಗೊಂಡಂತೆ ಹಲವಾರು ಬಾರಿ ಎಡವಟ್ಟು ಮಾಡಿದ್ದಾರೆ. ಮೋದಿ ಅವರು ಎನ್ಎಸ್ಎ ಹುದ್ದೆಯಿಂದ ದೋವಲ್ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ 2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು” ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.

ಸ್ವಾಮಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರಬ್ಬೊರು, ಇಂತಹ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಯವರೊಂದಿಗೆ ಚರ್ಚಿಸದೆ ಸಾಮಾಜಿಕ ಮಾಧ್ಯಮದಲ್ಲಿ ಏಕೆ ಚರ್ಚಿಸುತ್ತೀರ ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿರುವ ಸ್ವಾಮಿ, ನಾನು 2018 ರವರೆಗೆ ಪ್ರಯತ್ನಿಸಿದ್ದೇನೆ. ನನ್ನ ಪ್ರಸ್ತಾಪಕ್ಕೆ ಯಸ್ or ನೊ ಉತ್ತರ ಸಿಕ್ಕಿಲ್ಲ. ಆದರೆ ಪ್ರಧಾನಿ ಕಛೇರಿಯು ಜಲನಿರೋಧಕದಂತೆ ಜ್ಞಾನ-ನಿರೋಧಕವಾಗಿದೆ. ಹಾಗಿರುವಾಗ ಸಮಯ ವ್ಯರ್ಥ ಮಾಡುವುದು ಏಕೆ? ಎಂದು ಉತ್ತರಿಸಿದ್ದಾರೆ.






