ಬೆಂಗಳೂರು : ಕನ್ನಡದ ಬೇಡಿಕೆಯ ನಟಿ ರುಕ್ಮಿಣಿ ವಸಂತ್ ಅವರೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ವಸಂತ್, ಹಿಂದಿ ಸಿನಿಮಾದಲ್ಲಿ ನಟಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದರು. ಹಿಂದೆ ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್, ಜೂ ಎನ್ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಹೌದು, ರುಕ್ಮಿಣಿ ವಸಂತ್ ಇದೀಗ ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್ ಅವರನ್ನು ಸಿನಿಮಾದ ನಾಯಕಿಯಾಗಿ ಖುದ್ದು ನಾನಿ ಅವರೇ ಆಯ್ಕೆ ಮಾಡಿದ್ದಾರೆ. ರುಕ್ಮಿಣಿ ಅವರಿಗೂ ಕತೆ ಇಷ್ಟವಾಗಿದ್ದು, ಈ ಅವಕಾಶದ ಬಗ್ಗೆ ಉತ್ಸುಕರಾಗಿದ್ದಾರೆ. ಸದ್ಯ ರುಕ್ಮಿಣಿ ವಸಂತ್ ಸೌತ್ ಫಿಲಂ ಇಂಡಸ್ಟ್ರಿ ಮಂದಿಯ ಫೇವರೇಟ್ ನಟಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ
ಅಂದಹಾಗೆ, ಈ ಸಿನಿಮಾದಲ್ಲಿ ನಾನಿ ನಾಯಕರಲ್ಲ. ಸಿನಿಮಾದಲ್ಲಿ ಬೇರೊಬ್ಬ ನಾಯಕರು ಇರಲಿದ್ದಾರೆ. ಅವರ ಹುಡುಕಾಟ ಶುರುವಾಗಿದೆ. ಈ ಹಿಂದೆ ‘ದಂಡೋರ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದ ಮುರಳಿಕಾಂತ್ ದೇವಸೋತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ತಂಡ ಚಿತ್ರಕಥೆ ಮತ್ತು ಇತರ ಪ್ರೀ ಪ್ರೊಡಕ್ಷನ್ನಲ್ಲಿ ತೊಡಗಿಕೊಂಡಿದ್ದು, ಮುರಳಿಕಾಂತ್ ಅವರು ಚಿತ್ರಕತೆಗೆ ಅಂತಿಮ ರೂಪ ನೀಡುತ್ತಿದ್ದಾರೆ ಎನ್ನಲಾಗಿದೆ. ರುಕ್ಮಿಣಿ ವಸಂತ್ ಅವರ ಈ ಸಿನಿಮಾದ ಚಿತ್ರೀಕರಣ ಆಗಸ್ಟ್ ನಲ್ಲಿ ಶುರುವಾಗುವ ಸಾಧ್ಯತೆಯಿದೆ.






