ಬಲಪಂಥೀಯ ಹಿಂದು ಸಂಘಟನೆಯ ಸದಸ್ಯರು ದೆಹಲಿಯ ಪ್ರಸಿದ್ದ ಪ್ರವಾಸಿ ಸ್ಥಳ ಕುತುಬ್ ಮಿನಾರ್ ಹೊರಗಡೆ ಹನುಮಾನ್ ಚಾಲೀಸ್ ಪಠಿಸಿದರು ಮತ್ತು ಸ್ಥಳವನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಘಟನೆಯ ಸದಸ್ಯರನ್ನು ವಶಕ್ಕೆ ಪಡೆದ್ದಾರೆ. ನಂತರ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದುವರೆದು, ರಸ್ತೆಯ ಮಧ್ಯೆ ದಿಢೀರ್ ಎಂದು ಪ್ರತಿಭಟನೆ ನಡೆಸಿದ ಕಾರಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತ್ತು ಆದ ಕಾರಣ ಬಂಧಿಸಲಾಯಿತ್ತು ಎಂದು ಹೇಳಿದ್ದಾರೆ.
ಯುನೈಟೆಡ್ ಹಿಂದೂ ಫ್ರಂಟ್ (UNI)ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್ ಗೋಯೆಲ್ ಮಾತನಾಡಿ, ಕುತುಬ್ ಮಿನಾರ್ ಅನ್ನು ವಿಕ್ರಮಾದಿತ್ಯ ಮಹಾರಾಜ ನಿರ್ಮಿಸಿರುವುದರಿಂದ ಸ್ಥಳಕ್ಕೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂದುವರೆದು, ಇತಿಹಾಸವನ್ನು ತಿರುಚಿ ಬರೆಯಲಾಗಿದೆ ಕುತುಬ್ ಮಿನಾರ್ ಇದ್ದ ಜಾಗದಲ್ಲಿ 27 ಹಿಂದು ದೇವಸ್ಥಾನಗಳಿದ್ದವು ಆದರೆ, ದುಷ್ಟ ಮುಸ್ಲಿಂ ದೊರೆ ಕುತುಬುದ್ದಿನ ಐಬಕ್ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಕುತುಬ್ ಮಿನಾರ್ ನಿರ್ಮಿಸಿದ್ದಾನೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಒಳಗೆ ಕಾಣ ಸಿಗುವ ಹಿಂದೂ ದೇವರ ವಿಗ್ರಹಗಳು ಎಂದು ಹೇಳಿದ್ದಾರೆ.
ಈಗಾಗಲೇ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿಗೆ ಮನವಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.