ಮೋದಿ ಸರ್ಕಾರದ ಆದ್ಯತೆ ಬಯಲು ಮಾಡಿದ #ResignModi ವಿವಾದ!

[Sassy_Social_Share]

ರಾಜಕೀಯ ವಿರೋಧ, ಟೀಕೆ, ಟಿಪ್ಪಣಿಗಳನ್ನು ಬಗ್ಗುಬಡಿಯುವುದು, ಅದಕ್ಕಾಗಿ ಆಡಳಿತ ಪಕ್ಷವೊಂದು ಆಡಳಿತ ಯಂತ್ರವೂ ಸೇರಿದಂತೆ ತನ್ನೆಲ್ಲಾ ಅಸ್ತ್ರಗಳನ್ನು ಬಳಸುವುದು ಭಾರತದ ಮಟ್ಟಿಗೆ ಸಾಮಾನ್ಯ. ಆದರೆ, ಕರೋನಾದಂತಹ ಭೀಕರ ಸಾಂಕ್ರಾಮಿಕದ ಹೊತ್ತಲ್ಲಿ, ದೇಶದ ಆರೋಗ್ಯ ವ್ಯವಸ್ಥೆಯ ದುರವಸ್ಥೆಯ ಕಾರಣಕ್ಕೆ ಜನ ಹಾದಿಬೀದಿಯ ಶವವಾಗುತ್ತಿರುವ ಹೊತ್ತಲ್ಲಿ ತಾವೇ ಮತ ಹಾಕಿ ಗೆಲ್ಲಿಸಿದ ನಾಯಕರು ತಮ್ಮ ಜೀವ ಉಳಿಸುವ ಕನಿಷ್ಟ ಪ್ರಯತ್ನಗಳನ್ನೂ ಮಾಡುತ್ತಿಲ್ಲ ಎಂದು ಪ್ರಶ್ನಿಸುವುದನ್ನು ಕೂಡ ಕರಾಳ ಕಾನೂನು, ಅಧಿಕಾರದ ಪ್ರಭಾವ ಬಳಸಿ ಹತ್ತಿಕ್ಕುವುದು, ದಂಡಿಸುವುದು ಕರೋನಾ ಕಾಲದ ಹೊಸ ವರಸೆ.

ಕೋವಿಡ್ ಸೋಂಕಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ತನ್ನ ಅಜ್ಜನ ಜೀವ ಉಳಿಸಲು ಆಮ್ಲಜನಕ ಬೇಕಾಗಿದೆ. ಯಾರಾದರೂ ನೆರವು ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ ಯುವಕನೊಬ್ಬನ ವಿರುದ್ಧ ಉತ್ತರಪ್ರದೇಶದ ಬಿಜೆಪಿ ಸರ್ಕಾರ ದೇಶದ ಭದ್ರತೆಗೆ ಅಪಾಯವೊಡ್ಡಿದಂತಹ ಗಂಭೀರ ಪ್ರಕರಣವನ್ನು ದಾಖಲಿಸಿದೆ. ಜೊತೆಗೆ ಆಮ್ಲಜನಕ, ರೆಮಿಡಿಸಿವರ್, ಆಸ್ಪತ್ರೆಯ ಹಾಸಿಗೆ ಕೊರತೆ ಸೇರಿದಂತೆ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರ ಮೇಲೆ ದೇಶದ ವಿರುದ್ಧ ಪಿತೂರಿ ನಡೆಸಿದ ಆರೋಪ ಹೊರಿಸಿ, ಎನ್ ಎಸ್ ಎ(ರಾಷ್ಟ್ರೀಯ ಭದ್ರತಾ ಕಾಯ್ದೆ) ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ.

ಅಂದರೆ; ನಿತ್ಯ 35 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ, 300ಕ್ಕೂ ಹೆಚ್ಚು ಸಾವು ಸಂಭವಿಸುತ್ತಿರುವ ಮತ್ತು ಈಗಾಗಲೇ 12400 ಮಂದಿ ಕರೋನಾಕ್ಕೆ ಬಲಿಯಾಗಿರುವ ರಾಜ್ಯದಲ್ಲಿನ ವೈದ್ಯಕೀಯ ವ್ಯವಸ್ಥೆಯಲ್ಲಿನ ಲೋಪಗಳಲ್ಲದೆ ಬೇರಾವ ಕಾರಣಗಳಿಂದಾಗಿ ಇಷ್ಟು ದೊಡ್ಡ ಮಟ್ಟದ ಸಾವುಗಳು ಸಂಭವಿಸುತ್ತವೆ? ಇರುವ ಲೋಪಗಳನ್ನು ಜನ ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವುದೇ ದೇಶದ ಭದ್ರತೆಗೆ ಅಪಾಯ ತಂದ ಮಟ್ಟಿನ ಗಂಭೀರ ಅಪರಾಧವೆಂದಾದರೆ, ಆಡಳಿತದ ಚುಕ್ಕಾಣಿ ಹಿಡಿದವರು ಕೆಲಸ ಮಾಡುತ್ತಿರುವುದು ಜನರಿಗಾಗಿಯೋ ಅಥವಾ ಒಬ್ಬ ವ್ಯಕ್ತಿ, ಒಂದು ಪಕ್ಷದ ಪ್ರತಿಷ್ಠೆಗಾಗಿಯೋ? ಎಂಬ ಪ್ರಶ್ನೆ ಮೂಡದೇ ಇರದು. ಹಾಗೇ ಜನ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸುವುದಾದರೆ, ಆ ಆಡಳಿತವನ್ನು ಪ್ರಜಾಪ್ರಭುತ್ವವೆನ್ನುವುದು ಹೇಗೆ? ಎಂಬ ಪ್ರಶ್ನೆಯನ್ನು ಇದೀಗ ವಿದೇಶಿ ಮಾಧ್ಯಮಗಳು ಎತ್ತುತ್ತಿವೆ(ಏಕೆಂದರೆ, ಬಹುತೇಕ ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳು ಅಂತಹ ಪ್ರಶ್ನೆ ಎತ್ತುವ ಛಾತಿ ಕಳೆದುಕೊಂಡು ಬಹಳ ದಿನಗಳಾಗಿವೆ!).

ಇದು ಉತ್ತರಪ್ರದೇಶದ ಕಥೆ. ಭಾರತದ ಭವಿಷ್ಯದ ಮಾದರಿ ಎಂದು ಬಿಜೆಪಿ ಬಿಂಬಿಸುತ್ತಿರುವ ಯೋಗಿ ಆದಿತ್ಯನಾಥ ಆಡಳಿತದ ವೈಖರಿ.

ಉತ್ತರಪ್ರದೇಶದ ಮಾದರಿಯ ಪ್ರಯೋಗವಾಗಿ ಎರಡೇ ದಿನದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಕೂಡ ಅಂತಹದ್ದೇ ವರಸೆ ಪ್ರದರ್ಶಿಸಿದೆ. ಭಾರತದಲ್ಲಿ ಕೋವಿಡ್ ಅನಾಹುತಕ್ಕೆ ಪ್ರಧಾನಿ ಮೋದಿಯವರ ವಿವೇಚನಾರಹಿತ ಕ್ರಮಗಳೇ ಕಾರಣ ಎಂದು ಅವರ ವಿರುದ್ಧ #ResignModi ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಟ್ವಿಟರ್ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಪೋಸ್ಟಗಳನ್ನು ಬ್ಲಾಕ್ ಮಾಡಲಾಗಿತ್ತು. ಜಾಲತಾಣಗಳ ಅಂತಹ ಜನಾಭಿಪ್ರಾಯ ವಿರೋಧಿ ನಡೆಯ ಹಿಂದೆ ಪ್ರಧಾನಿ ಮೋದಿಯವರ ಹುಕುಂ ಕೆಲಸ ಮಾಡಿದೆ. ತಮ್ಮ ಅಧಿಕಾರ ಮತ್ತು ಪ್ರಭಾವ ಬಳಸಿ ಮೋದಿ, ಜಾಲತಾಣ ಸಂಸ್ಥೆಗಳ ಮೇಲೆ ಒತ್ತಡ ಹೇರಿ ತಮ್ಮ ವಿರುದ್ದದ ಆನ್ ಲೈನ್ ಆಕ್ರೋಶವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

 ಕಳೆದ ನವೆಂಬರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ತಜ್ಞರು ಭಾರತದಲ್ಲಿ ಫೆಬ್ರವರಿಯ ಹೊತ್ತಿಗೆ ಕರೋನಾ ರೂಪಾಂತರಿ ವೈರಾಣುವಿನ ದಾಳಿ ಆರಂಭವಾಗಲಿದೆ. ಈ ಎರಡನೇ ಅಲೆ ಜನರ ಜೀವ ಮತ್ತು ದುಡಿಮೆಯನ್ನು ಕಿತ್ತುಕೊಳ್ಳಲಿದೆ. ಹಾಗಾಗಿ ದೇಶದ ಆಡಳಿತ ದೊಡ್ಡ ಮಟ್ಟದ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಆದರೆ, ಪ್ರಧಾನಿ ಮೋದಿ ಅಂತಹ ಸಲಹೆಗಳನ್ನು ಧಿಕ್ಕರಿಸಿ ಜನವರಿಯಲ್ಲಿ ದಾವೋಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಭಾರತ ಕರೋನಾ ವಿರುದ್ಧ ದಿಗ್ವಿಜಯ ಸಾಧಿಸಿದೆ. ಜಗತ್ತಿನ ಕರೋನಾ ಕೇಂದ್ರವಾಗಲಿದೆ ಭಾರತ, ಕರೋನಾ ಭಾರತವನ್ನು ಸರ್ವನಾಶ ಮಾಡಲಿದೆ ಎಂದು ದೊಡ್ಡದೊಡ್ಡವರು ಹೇಳಿದ್ದ ಭವಿಷ್ಯಗಳನ್ನೆಲ್ಲಾ ಭಾರತ ತನ್ನ ಬಲಿಷ್ಠ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆ ಹಾಗೂ ದೃಢ ಕ್ರಮಗಳ ಮೂಲಕ ತಲೆಕೆಳಗು ಮಾಡಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು! ಆದರೆ, ಮೋದಿಯವರ ಆ ಹೆಚ್ಚುಗಾರಿಕೆಯನ್ನು ಈಗ ದೇಶದ ಕೋವಿಡ್ ಸ್ಮಶಾನಸದೃಶ ಸ್ಥಿತಿ ಮಣ್ಣುಗೂಡಿಸಿದೆ.

‘ವಿಶ್ವನಾಯಕ’ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಮೋದಿಯವರು ವಿವಿಧ ದೇಶಗಳಿಗೆ ಆಮ್ಲಜನಕ, ರೆಮಿಡಿಸಿವರ್, ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ ಕೆಲವೇ ದಿನಗಳಲ್ಲಿ ದೇಶದ ನಾಗರಿಕರು ಆ ಎಲ್ಲಾ ಜೀವರಕ್ಷಕಗಳಿಗಾಗಿ ಹಾದಿಬೀದಿಯಲ್ಲಿ ಅಂಗಾಲಾಚುವಂತಾಗಿದೆ. ಸಕಾಲದಲ್ಲಿ ಆಸ್ಪತ್ರೆ ಹಾಸಿಗೆ ಸಿಗದೆ, ಆಮ್ಲಜನಕ ಸಿಗದೆ, ರೆಮಿಡಿಸಿವರ್ ಔಷಧಿ ಸಿಗದೆ ನಿತ್ಯ ಸಾವಿರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ದೇಶಗಳು ಭಾರತಕ್ಕೆ ಆಮ್ಲಜನಕ, ರೆಮಿಡಿಸಿವರ್ ಔಷಧ ಸರಬರಾಜು ಮತ್ತು ಆಸ್ಪತ್ರೆ ನಿರ್ಮಾಣದಂತಹ ಕಾರ್ಯಕ್ಕೆ ಹಣಕಾಸು ನೆರವು ಘೋಷಿಸಿವೆ. ವಿಶ್ವಸಂಸ್ಥೆ ಕೂಡ ನೆರವು ಘೋಷಿಸಿದೆ.

ತಜ್ಞರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಕೋವಿಡ್ ಎರಡನೇ ಅಲೆ ಎದುರಿಸಲು ಸಜ್ಜುಗೊಳಿಸುವ ಬದಲು ಪ್ರಧಾನಮಂತ್ರಿಗಳು ಪಶ್ಚಿಮಬಂಗಾಳ ಮತ್ತಿತರ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದರು. ದೇಶದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವಾಗಲೂ ಕೋವಿಡ್ ಮಾರ್ಗಸೂಚಿಗಳನ್ನು ಸ್ವತಃ ತಾವೇ ಗಾಳಿಗೆ ತೂರಿ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಚುನಾವಣಾ ರ್ಯಾಲಿಗಳನ್ನು ಮಾಡಿ ಸಂಭ್ರಮಿಸುತ್ತಿದ್ದರು. ಕುಂಭ ಮೇಳ, ಕ್ರಿಕೆಟ್ ಪಂದ್ಯಾವಳಿಗಳಿಗೆ ಹಸಿರು ನಿಶಾನೆ ತೋರಿ ಮೈಮರೆತಿದ್ದರು. ಈ ಹೊಣೆಗೇಡಿತನವನ್ನು ಪ್ರಶ್ನಿಸಿ, ಜನಸಾಮಾನ್ಯರು ಈ ದೇಶದ ಪ್ರಧಾನಿಯಾಗಿ ಜನರ ಪ್ರಾಣ ಮತ್ತು ಬದುಕು(ದುಡಿಮೆ) ರಕ್ಷಿಸಲಾಗದ ನೀವು ಪ್ರಧಾನಿಯಾಗಿ ಮುಂದುವರಿಯಲು ಲಾಯಕ್ಕಿಲ್ಲ. ಹಾಗಾಗಿ ಕೂಡಲೇ ರಾಜೀನಾಮೆ ನೀಡಿ ಎಂಬ ಘೋಷಣೆ ಮೊಳಗಿಸಿದ್ದಾರೆ.

ಜನರ ಈ ಆಕ್ರೋಶದ ಹಿಂದಿನ ಅಸಲೀ ಕಾರಣ ತಿಳಿದು, ವ್ಯವಸ್ಥೆಯ ಲೋಪಗಳನ್ನು ಅರಿತು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಯತ್ನ ಮಾಡಬೇಕಾದ ಪ್ರಧಾನಿ ಮೋದಿ, ಅದಕ್ಕೆ ಬದಲಾಗಿ ಜಾಲತಾಣಗಳ ಮೂಲಕ ತಮ್ಮ ವಿರೋಧಿ ಕೂಗನ್ನೇ ದಮನ ಮಾಡುವ ಹೇಯ ಕೃತ್ಯಕ್ಕೆ ಕೈಹಾಕಿರುವುದು ತೀರಾ ಸರ್ವಾಧಿಕಾರಿ ಧೋರಣೆ ಎಂಬ ಟೀಕೆಗಳೂ ಕೇಳಿಬಂದಿವೆ. ಆದರೆ, ಜಾಲತಾಣಗಳು #ResignModi ಪೋಸ್ಟಗಳನ್ನು ತೆಗೆದುಹಾಕಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸರ್ಕಾರ ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಮೋದಿ ಸರ್ಕಾರ ಹೇಳಿದೆ.

ಅದೇ ಹೊತ್ತಿಗೆ, ಫೇಸ್ ಬುಕ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ, ಮೋದಿ ರಾಜೀನಾಮೆ ಆಗ್ರಹಕ್ಕೆ ಸಂಬಂಧಿಸಿದ ಪೋಸ್ಟುಗಳನ್ನು ತಾನು ಬ್ಲಾಕ್ ಮಾಡಿರುವುದು ತನ್ನ ಆಂತರಿಕ ವಿಚಾರ. ಯಾವುದೇ ಪೋಸ್ಟ್ ಗಳ ವಿರುದ್ಧ ಹೆಚ್ಚು ಆಕ್ಷೇಪ, ದೂರುಗಳು ಬಂದಾಗ ನಮ್ಮ ಆಂತರಿಕ ತಂಡಗಳು ಪರಿಶೀಲಿಸಿ ಅಂತಹ ಪೋಸ್ಟುಗಳನ್ನು ಬ್ಲಾಕ್ ಮಾಡುವುದು ಮಾಮೂಲಿ ಪ್ರಕ್ರಿಯೆ. ಆದರೆ ಈ ವಿಷಯದಲ್ಲಿ ಕಣ್ತಪ್ಪಿನಿಂದ ತಪ್ಪಾಗಿ ಕ್ರಮಕೈಗೊಳ್ಳಲಾಗಿದೆ. ಆ ಬಗ್ಗೆ ಪರಿಶೀಲಿಸಲಾಗುವುದು ಎಂದಿದೆ. ಫೇಸ್ ಬುಕ್ ನಂತಹ ಜಾಲತಾಣ ದೈತ್ಯ ಸಂಸ್ಥೆಯಲ್ಲಿ ಹೀಗೆ ಏನೋ ತಪ್ಪಾಗಿ ಇಂತಹದ್ದೊಂದು ಗಂಭೀರ ವಿಷಯದಲ್ಲಿ ತಪ್ಪು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಹಾಸ್ಯಾಸ್ಪದ. ಯಾರೂ ಇಂತಹ ತಿಪ್ಪೆಸಾರಿಸುವ ಸ್ಪಷ್ಟನೆಯನ್ನು ನಂಬಲಾರರು.

ಫೇಸ್ ಬುಕ್ ನ ಇಂತಹ ನಗೆಪಾಟಲಿನ ಸ್ಪಷ್ಟನೆ ಮತ್ತು ಕೇಂದ್ರ ಸರ್ಕಾರದ ಕುಂಬಳಕಾಯಿ ಕಳ್ಳ ನಾನಲ್ಲ ಎಂದು ಹೆಗಲು ಮುಟ್ಟಿ ನೋಡಿಕೊಂಡ ವರಸೆಯೇ, ಮೋದಿ ರಾಜೀನಾಮೆಗೆ ಆಗ್ರಹಿಸಿದ ಆನ್ ಲೈನ್ ಅಭಿಯಾನವನ್ನು ಹತ್ತಿಕ್ಕುವ ಷಢ್ಯಂತ್ರವನ್ನು ಸಾರಿ ಹೇಳುತ್ತಿದೆ ಎಂಬುದು ಜಾಲತಾಣಿಗರ ವಾದ.

ಹಾಗಾಗಿ, ಸದ್ಯ ಭಾರತದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಅದರ ಸರ್ಕಾರಗಳಿಗೆ ದೇಶದಲ್ಲಿ ಮಾರಣಹೋಮ ಮಾಡುತ್ತಿರುವ ಕೋವಿಡ್ ವಿರುದ್ಧದ ಸಮರೋಪಾದಿಯ ಕ್ರಮಗಳಿಗಿಂತ, ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತಿತರ ನಾಯಕರು ಹಾಗೂ ಪಕ್ಷದ ವರ್ಚಸ್ಸು ಉಳಿಸಿಕೊಳ್ಳುವುದೇ ಆದ್ಯತೆಯಾಗಿದೆ. ಅದಕ್ಕಾಗಿ ಸರ್ಕಾರಗಳು ಟೊಂಕ ಕಟ್ಟಿ ನಿಂತಿವೆ. ಜಾಲತಾಣ ದೈತ್ಯ ಸಂಸ್ಥೆಗಳಿಂದ ಹಿಡಿದು, ಎನ್ ಎಸ್ ಎದಂತಹ ಅಪಾಯಕಾರಿ ಕಾನೂನುಗಳವರೆಗೆ ಯಾವುದನ್ನು ಬೇಕಾದರೂ ಬಳಸಿ ತಮ್ಮ ವೈಫಲ್ಯಗಳನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರಗಳು ಸಜ್ಜಾಗಿವೆ.  ಆದರೆ, ಕರೋನಾದ ಸಾವಿನ ಮನೆಯಲ್ಲಿ ಒದ್ಡಾಡುತ್ತಿರುವ ಜನರನ್ನು ಅಂತಹ ಬೆದರಿಕೆಗಳ ಮೂಲಕ ಬಗ್ಗುಬಡಿಯಲಾಗದು ಎಂಬುದಕ್ಕೆ  ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೆಂಟ್ ಆಗುತ್ತಿರುವ #ResignModi ಹ್ಯಾಷ್ ಟ್ಯಾಗೇ ಉದಾಹರಣೆ!

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...